ಪ್ಲೂಟೋ ಫ್ಲೈಬೈ – ಮೊದಲ ಬಾರಿಗೆ ಪ್ಲೂಟೋದ ವಿಸ್ಮಯಕಾರಿ ಚಿತ್ರಗಳು

ಪ್ಲೋಟೋದ್ದು ವಿಚಿತ್ರ ಸ್ಥಿತಿ. 1930ಕ್ಕೆ ಮೊದಲು ಖಗೋಳ ವಿಜ್ಞಾನಿಗಳು ಸೌರಮಂಡಲದಲ್ಲಿ ಗುರುತಿಸಿದ್ದು ಎಂಟೇ ಗ್ರಹಗಳನ್ನು. ಆ ವರ್ಷ ಕ್ಲೈಡ್ ಟಾಂಬೋ ಪ್ಲೂಟೋವನ್ನು ಗುರುತಿಸಿದಾಗ, ಅದರ ಜೊತೆಗೆ ಅದಕ್ಕೆ ಗ್ರಹ ಪಟ್ಟ ಸಿಕ್ಕಿತು. 2006ರವರೆಗೂ ಇದರ ಗ್ರಹಪಟ್ಟಕ್ಕೆ ಯಾವ ಬಾಧೆಯೂ ತಟ್ಟಲಿಲ್ಲ, ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಸಭೆ ಸೇರಿ ಪ್ಲೂಟೋವನ್ನು ಗ್ರಹದ ಸ್ಥಾನದಿಂದ ಕೆಳಕ್ಕಿಳಿಸಲೇಬೇಕೆಂದು ತೀರ್ಪುಕೊಟ್ಟಿತು. ಅಂದಿನಿಂದ ಪ್ಲೂಟೋ ಕುಬ್ಜ ಗ್ರಹವೆಂಬ ಹೆಸರು ಹೊತ್ತು ಹಿಂಬಡ್ತಿ ಪಡೆದಿದೆ. ಪ್ಲೂಟೋ ನೆಲೆಯಾಗಿರುವುದು ಕೈಪರ್ ಪಟ್ಟಿಯಲ್ಲಿ. ಈ ಪಟ್ಟಿ ನೆಪ್ಚ್ಯೂನ್ ಗ್ರಹದಿಂಗ 50 ಖಗೋಳಮಾನ ವಿಸ್ತರಿಸಿದೆ (ಒಂದು ಖಗೋಳಮಾನ ಅಂದರೆ ಭೂಮಿ ಸೂರ್ಯರ ನಡುವಿನ ದೂರ). ಇಲ್ಲಿನ ಕಾಯಗಳು ಹೆಚ್ಚಿನ ಪಾಲು ಮೀಥೇನ್, ಅಮೋನಿಯ ಮತ್ತು ನೀರಿನಿಂದಾಗಿದೆ. ಡಚ್ ಅಮೆರಿಕನ್ ಖಗೋಳ ವಿಜ್ಞಾನಿ ಗೆರಾಲ್ಡ್ ಕೈಪರ್ ಗೌರವಾರ್ಥ ಈ ಹೆಸರು ನೀಡಲಾಗಿದೆ. ಅದೇ ಪಟ್ಟಿಯಲ್ಲಿ ಏರಿಸ್ ಎಂಬ ಕಾಯವೂ ಇದೆ, ಪ್ಲೂಟೋಗಿಂತ ಇದರ ದ್ರವ್ಯರಾಶಿ ಶೇ. 27ರಷ್ಟು ಹೆಚ್ಚು. ಲಾಗಾಯ್ತಿನಿಂದ ನವಗ್ರಹಗಳು ಎಂಬುದು ಶಾಲಾ ಪಠ್ಯ ಪುಸ್ತಕಗಳಲ್ಲೂ ಸೇರಿತ್ತು. ಮತ್ತೆ ತಿದ್ದಿಕೊಳ್ಳಬೇಕಾಯಿತು. ಹಾಗೆ ನೋಡಿದರೆ ಪ್ಲೂಟೋಗೂ ಐದು ಚಂದ್ರಮರಿದ್ದಾರೆ. ಚರಾನ್-ಸ್ಟಿಕ್ಸ್-ನಿಕ್ಸ್-ಕರ್ಬರೋನ್ ಮತ್ತು ಹೈಡ್ರಾ. ಆದರೆ ಇದಾವುದೂ ಪ್ಲೂಟೋಗೆ ಗ್ರಹಸ್ಥಾನವನ್ನು ಕಲ್ಪಿಸಲು ನೆರವಾಗಿಲ್ಲ.

ಗ್ರಹ ಎನ್ನಬೇಕಾದರೆ ಅದು ಸೂರ್ಯನನ್ನು ಪರಿಭ್ರಮಿಸುತ್ತಿರಬೇಕು. ತನ್ನ ಗುರುತ್ವ ಬಲದಿಂದಲೇ ಅದು ಗುಂಡಾಗಿರಬೇಕು. ಇವೆಲ್ಲಕ್ಕಿಂತ ಬಹು ಮುಖ್ಯವಾದ್ದು ಅಕ್ಕಪಕ್ಕದ ಗ್ರಹ ಕಕ್ಷೆಗೆ ಇನ್ನೊಂದು ಗ್ರಹದ ಕಕ್ಷೆ ಅಡ್ಡಬರಬಾರದು. ಈ ಕೊನೆಯ ಶರತ್ತಿನಿಂದಲೇ ಪ್ಲೂಟೋ ಫೇಲ್ ಆಗಿರುವುದು. ಪ್ಲೂಟೋ ಗ್ರಹ ಪಟ್ಟವನ್ನು ಕಳೆದುಕೊಂಡ ಮೇಲೂ ವಿಜ್ಞಾನಿಗಳಿಗೆ ಅದನ್ನು ಕುರಿತು ಕುತೂಹಲವೇನೂ ಕಡಿಮೆಯಾಗಿಲ್ಲ. ಪ್ಲೂಟೋ ಆಚೆಗೂ ಶೀತಲ ಸಾಮ್ರಾಜ್ಯದಲ್ಲಿ ಇನ್ನೂ ಏನೇನಿದೆ ಎಂದು ತಿಳಿಯಲು ನಾಸಾ ಸಂಸ್ಥೆ 2006ರಲ್ಲಿ `ನ್ಯೂ ಹೊರೈಸನ್ಸ್’ ಎಂಬ ಶೋಧ ನೌಕೆಯನ್ನು ಕಳಿಸಿತ್ತು. ಮೊದಲಬಾರಿಗೆ ನ್ಯೂ ಹೊರೈಸನ್ಸ್ ಪ್ಲೂಟೋ ಬಳಿ ಹಾದು ಭರ್ಜರಿ ಚಿತ್ರವನ್ನು ಕಳಿಸಿಕೊಟ್ಟಿದೆ. ಎರಡು ವರ್ಷಗಳ ಹಿಂದೆ ಇದೇ ದಿನದಂದು (ಜುಲೈ 14, 2015) ಪ್ಲೂಟೋವನ್ನು 12,500 ಕಿಲೋ ಮೀಟರ್ ದೂರದಿಂದ ವೀಕ್ಷಿಸಿ ಅಪೂರ್ವ ಚಿತ್ರಗಳನ್ನು ಕಳಿಸಿದೆ. ಈಗ ನಾಸಾ ನ್ಯೂ ಹೊರೈಸನ್ಸ್‍ನ ಎರಡನೇ ವರ್ಷಾಚರಣೆ ಮಾಡುತ್ತಿದೆ. ಪ್ಲೂಟೋ ಬಳಿ ಸಾಗುವ ಮೊದಲು ನ್ಯೂ ಹೊರೈಸನ್ಸ್ ಗುರುಗ್ರಹ ಮತ್ತು ಅದರ ನಾಲ್ಕು ಚಂದ್ರಮರ ಬಳಿ ಹಾಯ್ದು ಅವುಗಳ ಚಿತ್ರಗಳನ್ನೂ ರವಾನಿಸಿದೆ. ಇಂಥ ಅಪರೂಪದ ಚಿತ್ರಗಳು ಇಲ್ಲಿವೆ:

 

Leave a Reply