ಪಾಕಿಸ್ತಾನಕ್ಕೆ ನೆರವು ನೀಡಲು ನಿಯಮ ಬಿಗಿಗೊಳಿಸಿದೆ ಅಮೆರಿಕ ಸಂಸತ್ತು

ಡಿಜಿಟಲ್ ಕನ್ನಡ ಟೀಮ್:

ಉಗ್ರರ ವಿರುದ್ಧ ಹೋರಾಡುವ ಪ್ರಯತ್ನ ನಡೆಸದೇ ಇರುವ ಪಾಕಿಸ್ತಾನದ ವಿರುದ್ಧ ಅಮೆರಿಕ ಕಠಿಣ ನಿಲುವು ತಾಳಿದೆ. ಇನ್ನು ಮುಂದೆ ಮಿಲಿಟರಿ ಹಾಗೂ ರಕ್ಷಣೆ ವಿಭಾಗದಲ್ಲಿ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡಲು ಕಠಿಣ ಷರತ್ತುಗಳನ್ನು ಅಮೆರಿಕ ಸಂಸತ್ತು ವಿಧಿಸಿದೆ.

ಶುಕ್ರವಾರ ಅಮೆರಿಕ ಸಂಸತ್ತಿನಲ್ಲಿ ನ್ಯಾಷನಲ್ ಡಿಫೆನ್ಸ್ ಅಥಾರಿಸೇಷನ್ ಆಕ್ಟ್ (ಎನ್ ಡಿಎಎ) ಕಾಯ್ದೆಗೆ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಗೆ ಅಮೆರಿಕದ ಸಂಸದರು ಬೆಂಬಲ ಸೂಚಿಸಿದ್ದು, ಪಾಕಿಸ್ತಾನ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ಆ ದೇಶಕ್ಕೆ ಮಿಲಿಟರಿಗೆ ಸಂಬಂಧಿಸಿದಂತೆ ಆರ್ಥಿಕ ನೆರವು ನೀಡಲು ತೀರ್ಮಾನಿಸಿದೆ. ಈ ತಿದ್ದುಪಡಿಯಲ್ಲಿ ಎಲ್ಲಾ ಷರತ್ತುಗಳು ಪಾಕಿಸ್ತಾನ ಭಯೋತ್ಪಾದಕರಿಗೆ ಹಾಗೂ ಉಗ್ರ ಸಂಘಟನೆಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಸಂಬಂಧಿಸಿದ್ದಾಗಿವೆ. ಹೀಗಾಗಿ ಪಾಕಿಸ್ತಾನ ಮಿಲಿಟರಿ ವಿಷಯದಲ್ಲಿ ಅಮೆರಿಕದ ನೆರವು ಪಡೆಯಬೇಕಾದರೆ ಅದು ಈ ಷರತ್ತುಗಳಿಗೆ ಬದ್ಧವಾಗಿ ಉಗ್ರರ ವಿರುದ್ಧ ಹೋರಾಟ ನಡೆಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಎನ್ ಡಿಎಎ-2018 ಪ್ರತಿ ಆರ್ಥಿಕ ವರ್ಷದ ರಕ್ಷಣಾ ವೆಚ್ಚವನ್ನು ಅಧಿಕೃತಗೊಳಿಸಲಿದ್ದು, ಈ ಕಾಯ್ದೆ 2017ರ ಅಕ್ಟೋಬರ್ 1ರಿಂದ ಆರಂಭವಾಗಲಿರುವ ನೂತನ ಆರ್ಥಿಕ ವರ್ಷದಲ್ಲಿ ಜಾರಿಯಾಗಲಿದೆ.

ಪಾಕಿಸ್ತಾನವು ಭಯೋತ್ಪಾದನ ನಿಗ್ರಹ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಹಾಗೂ ಕಾರ್ಯಾಚರಣೆಗಳಿಗೆ ಸಹಕಾರ ನೀಡುವುದು, ಗಡಿ ಪ್ರದೇಶದಲ್ಲಿ ಕದನವಿರಾಮ ಉಲ್ಲಂಘನೆ ಹಾಗೂ ಉಗ್ರರ ದಾಳಿಯನ್ನು ನಿಗ್ರಹಿಸುವುದು ಮತ್ತು ಸ್ಪೋಟಕ ವಸ್ತುಗಳನ್ನು ದಮನ ಮಾಡುವುದು ಪಾಕಿಸ್ತಾನದ ಮುಂದಿರುವ ಪ್ರಮುಖ ಷರತ್ತುಗಳಾಗಿವೆ. ಈ ಷರತ್ತುಗಳ ಜತೆಗೆ ಪಾಕಿಸ್ತಾನ ಉತ್ತರ ವಜಿರಿಸ್ತಾನ ಪ್ರದೇಶದಲ್ಲಿರು ಹಕ್ಕಾನಿ ಉಗ್ರ ಸಂಪರ್ಕದ ವಿರುದ್ಧ ಕಾರ್ಯಾಚರಣೆ ನಡೆಸಬೇಕು. ಈ ಎಲ್ಲ ವಿಷಯವಾಗಿ ಪಾಕಿಸ್ತಾನದ ಕ್ರಮಗಳ ತೃಪ್ತಿಯಾಗಿರುವ ಬಗ್ಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪ್ರಮಾಣೀಕರಿಸಿದರೆ ಮಾತ್ರ, ಪಾಕಿಸ್ತಾನಕ್ಕೆ ರಕ್ಷಣಾ ಸಾಮಾಗ್ರಿ, ಶಸ್ತ್ರಾಸ್ತ್ರ ಖರೀದಿ ವೇಳೆ ವಿನಾಯಿತಿ ನೀಡಲಾಗುವುದು. ಅಲ್ಲದೆ ಅಕ್ಟೋಬರ್ 1 2017ರಿಂದ ಡಿಸೆಂಬರ್ 31 2028ರ ವರೆಗೆ ಅಮೆರಿಕದಿಂದ ಪಾಕಿಸ್ತಾನಕ್ಕೆ 400 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ವೆಚ್ಚ ತುಂಬಿಕೊಡಬೇಕಾಗಿದ್ದು, ಪಾಕಿಸ್ತಾನ ಈ ಷರತ್ತುಗಳನ್ನು ಪೂರೈಸಿದರೆ ಮಾತ್ರ ಈ ಫಲವನ್ನು ಪಡೆಯಲಿದೆ ಎಂದು ಅಮೆರಿಕ ಸಂಸತ್ತು ಪ್ರಕಟಿಸಿದೆ.

Leave a Reply