ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಸಿಗೋ ವಾರ್ಷಿಕ ಸಂಭಾವನೆ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ನೂತನ ಕೋಚ್ ಆಗಿರುವ ರವಿಶಾಸ್ತ್ರಿ ಅವರಿಗೆ ವಾರ್ಷಿಕವಾಗಿ ₹ 7 ರಿಂದ 7.5 ಕೋಟಿ ಸಂಭಾವನೆ ಸಿಗಲಿದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.

ಈ ಹಿಂದೆ ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರಿಗೆ ಬಿಸಿಸಿಐನಿಂದ ವಾರ್ಷಿಕವಾಗಿ ₹ 6.25 ಕೋಟಿ ಸಂಭಾವನೆ ಬರುತ್ತಿತ್ತು. ಇತ್ತೀಚೆಗೆ ಮೇ ಕಳೆದ ವಾರದಲ್ಲಿ ಬಿಸಿಸಿಐ ಅಧಿಕಾರಿಗಳನ್ನು ಭೇಟಿ ಮಾಡಿದ್ದ ಕುಂಬ್ಳೆ, ಆಟಗಾರರ ಸಂಭಾವನೆ ಹೆಚ್ಚಳ ಸೇರಿದಂತೆ ಕೋಚ್ ಆಗಿರುವ ತಮಗೂ ₹ 7.5 ಕೋಟಿ ಸಂಭಾವನೆ ನೀಡಬೇಕು ಎಂಬ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಈಗ ಆ ಪ್ರಸ್ತಾವಕ್ಕೆ ಬಿಸಿಸಿಐನಿಂದ ಒಪ್ಪಿಗೆ ಸಿಕ್ಕಿದ್ದು, ನೂತನ ಕೋಚ್ ರವಿಶಾಸ್ತ್ರಿ ಅದರ ಫಲಾನುಭವಿಗಳಾಗಿದ್ದಾರೆ. ಅಂದಹಾಗೆ ರವಿಶಾಸ್ತ್ರಿ ಅವರು ಟೀಂ ಇಂಡಿಯಾ ನಿರ್ದೇಶಕರಾಗಿದ್ದ ಸಂದರ್ಭದಲ್ಲೂ ಅವರಿಗೆ ₹ 7 ರಿಂದ ₹ 7.5 ಕೋಟಿ ಸಂಭಾವನೆ ನಿಗಧಿಯಾಗಿತ್ತು.

 ಈ ಕುರಿತು ಬಿಸಿಸಿಐ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಹೀಗಿದೆ…

‘ಬಿಸಿಸಿಐ ರವಿಶಾಸ್ತ್ರಿ ಅವರಿಗೆ ₹ 7 ಕೋಟಿಗೂ ಹೆಚ್ಚಿನ ಸಂಭಾವನೆ ನೀಡಲಿದೆ. ಕಳೆದ ಮೇ ತಿಂಗಳಲ್ಲಿ ಅನಿಲ್ ಕುಂಬ್ಳೆ ಅವರು ಈ ಪ್ರಸ್ತಾಪವನ್ನು ಬಿಸಿಸಿಐ ಮುಂದಿಟ್ಟಿದ್ದರು. ಆದರೆ ಈ ಸಂಭಾವನೆಯ ಮೊತ್ತ ₹ 7.5ಕ್ಕಿಂತ ಹೆಚ್ಚಾಗುವುದಿಲ್ಲ. ಇನ್ನು ತಂಡದ ಸಹಾಯಕ ಸಿಬ್ಬಂದಿಗಳ ವೇತನವೂ ₹ 2 ಕೋಟಿಗಿಂತ ಹೆಚ್ಚಾಗುವುದಿಲ್ಲ. ಈ ಕುರಿತ ಒಪ್ಪಂದದ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ.’

ಇದರಿಂದ ಸಂಜಯ್ ಬಂಗಾರ್ ಹಾಗೂ ಇತರೆ ಸಹಾಯಕ ಸಿಬ್ಬಂದಿಗಳಿಗೂ ವೇತನದ ಬಡ್ತಿ ಸಿಕ್ಕಂತಾಗಿದೆ. ಇನ್ನು ಭಾರತ ಕಿರಿಯರ ಹಾಗೂ ಎ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ತಮ್ಮ ಮೊದಲ ವರ್ಷದಲ್ಲಿ ₹ 4.5 ಕೋಟಿ ಹಾಗೂ ಎರಡನೇ ವರ್ಷದಲ್ಲಿ ₹ 5 ಕೋಟಿ ವಾರ್ಷಿಕ ವೇತನ ಪಡೆದಿದ್ದರು. ಒಂದು ವೇಳೆ ದ್ರಾವಿಡ್ ಟೀಂ ಇಂಡಿಯಾದ ವಿದೇಶಿ ಪ್ರವಾಸಗಳ ವೇಳೆ ಬ್ಯಾಟಿಂಗ್ ಮಾರ್ಗದರ್ಶಕರಾಗಿ ಆಯ್ಕೆಯಾದರೆ, ಈಗ ಪಡೆಯುತ್ತಿರುವ ವೇತನದ ಜತೆಗೆ ಹೆಚ್ಚುವರಿ ಸಂಭಾವನೆ ಪಡೆಯಲಿದ್ದಾರೆ.

Leave a Reply