ಕ್ಲಿಂಟನ್ ಫೌಂಡೆಷನ್ ಅಕ್ರಮ ಬಯಲು ಮಾಡ್ತೇನೆ ಎಂದಿದ್ದ ಹಯ್ಟಿ ದೇಶದ ಅಧಿಕಾರಿ ನಿಗೂಢ ಸಾವು

ಡಿಜಿಟಲ್ ಕನ್ನಡ ಟೀಮ್:

ಕ್ಲಿಂಟನ್ ಫೌಂಡೇಷನ್ ನಡೆಸಿರುವ ಭ್ರಷ್ಟಾಚಾರ ಹಾಗೂ ಅಕ್ರಮವನ್ನು ಮುಂದಿನ ವಾರ ಬಯಲಿಗೆಳೆಯುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಕೆರಿಬಿಯನ್ ದ್ವೀಪಗಳಲ್ಲಿ ಒಂದಾದ ಹಯ್ಟಿಯ ಮಾಜಿ ಸರ್ಕಾರಿ ಅಧಿಕಾರಿ ಕ್ಲೌಸ್ ಎಬರ್ವಿನ್ ಮಿಯಾಮಿಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.

ಇತ್ತೀಚೆಗೆ ಹಯ್ಟಿಯಲ್ಲಿ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಪರಿಹಾರಕ್ಕಾಗಿ ಕ್ಲಿಂಟನ್ ಫೌಂಡೇಷನ್ ವಿದೇಶಿ ದಾನಿಗಳಿಂದ ಹಣ ಪಡೆದು ಅವುಗಳನ್ನು ನುಂಗಿಹಾಕಿರುವ ಬಗ್ಗೆ ದಾಖಲೆಗಳನ್ನು ಮುಂದಿನ ವಾರ ಬಿಡುಗಡೆ ಮಾಡುವುದಾಗಿ ಎಬೆರ್ವಿನ್ ತಿಳಿಸಿದ್ದರು. ಇವರು ಮಂಗಳವಾರ ಹಯ್ಟಿ ಸೆನೆಟ್ ಎಥಿಕ್ಸ್ ಮತ್ತು ಆ್ಯಂಟಿ ಕರಪ್ಷನ್ ಕಮಿಷನ್ ಮುಂದೆ ಹಾಜರಾಗಿ ತಮ್ಮ ಬಳಿ ಇರುವ ದಾಖಲೆಗಳನ್ನು ನೀಡಬೇಕಿತ್ತು. ಆದರೆ ಈಗ ಎಬೆರ್ವಿನ್ ಅವರು ನಿಗೂಢ ರೀತಿಯಲ್ಲಿ ಸತ್ತಿದ್ದಾರೆ.

ಎಬೆರ್ವಿನ್ ಸಾವಿನ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿಕೊಳ್ಳಲಾಗಿದ್ದರೂ ಮಿಯಾಮಿಯ ವೈದ್ಯಕೀಯ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ ‘ಎಬೆರ್ವಿನ್ ಅವರ ತಲೆಗೆ ಗುಂಡೇಟು ಬಿದ್ದಿದೆ’. ಕೆರಿಬಿಯನ್ ದ್ವೀಪದಲ್ಲಿ ಸರ್ಕಾರದ ಆರ್ಥಿಕ ಅಭಿವೃದ್ಧಿ ಸಂಸ್ಥೆಯ ಪ್ರಧಾನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಎಬೆರ್ವಿನ್, ಸಾಕಷ್ಟು ದಿನಗಳಿಂದಲೂ ಕ್ಲಿಂಟನ್ ಫೌಂಡೇಷನಿನ ಅಕ್ರಮದ ಬಗ್ಗೆ ಟೀಕೆ ಮಾಡುತ್ತಲೇ ಬಂದಿದ್ದರು.

‘ಎಬೆರ್ವಿನ್ ಅವರ ಪ್ರಕಾರ ಭೂಕಂಪದ ಸಂದರ್ಭದಲ್ಲಿ ವಿದೇಶಿ ದಾನಿಗಳಿಂದ ಸಂಗ್ರಹಿಸಿದ ದೇಣಿಗೆಯಲ್ಲಿ ಶೇ.0.6 ರಷ್ಟು ಮಾತ್ರ ಹಯ್ಟಿಯ ಸಂಘಟನೆಗಳಿಗೆ ತಲುಪಿತು. ಉಳಿದಂತೆ ಶೇ.9.6 ರಷ್ಟು ಹಣ ಹಯ್ಟಿ ಸರ್ಕಾರಕ್ಕೆ, ಉಳಿದ ಶೇ. 89.8 ರಷ್ಟು ಹಣವನ್ನು ಅಕ್ರಮವಾಗಿ ಹಯ್ಟಿ ದೇಶದ ಹೊರತಾದ ಸಂಸ್ಥೆಗಳ ಪಾಲಾಯಿತು. ಕ್ಲಿಂಟನ್ ಫೌಂಡೇಷನ್ ಒಂದು ಮೋಸದ ಸಂಸ್ಥೆ. ಅಲ್ಲಿರುವವರು ಕ್ರಿಮಿನಲ್ ಗಳು ಹಾಗೂ ಕಳ್ಳರು’ ಎಂದು ಎಬೆರ್ವಿನ್ ಈ ಹಿಂದೆ ಆರೋಪಿಸಿದ್ದರು.

Leave a Reply