ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಐಟಿ ಉದ್ಯೋಗಿಗಳು, ಆತ್ಮಹತ್ಯೆ ಯೋಚನೆಗೆ ದಾರಿಯಾಗುತ್ತಿದೆ ಮಾನಸಿಕ ಒತ್ತಡ

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನಗಳ ಕಾಲ ಭಾರತೀಯರಿಗೆ ಹೆಚ್ಚೆಚ್ಚು ಉದ್ಯೋಗ ನೀಡುತ್ತಿದ್ದ ಐಟಿ ಕ್ಷೇತ್ರ ಈಗ ನಿಜಕ್ಕೂ ಹಳ್ಳ ಹಿಡಿಯುತ್ತಿದೆ. ದಿನೇ ದಿನೇ ಉದ್ಯೋಗಾವಕಾಶಗಳ ಸಂಖ್ಯೆ ಕಡಿಮೆಯಾಗುತ್ತಿರೋದು ಈಗ ಐಟಿ ಉದ್ಯೋಗಿಗಳಲ್ಲಿ ಕೆಲಸ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿಸಿದೆ. ಈ ಮಾನಸಿಕ ಒತ್ತಡದಿಂದಾಗಿ ಈ ಐಟಿ ಉದ್ಯೋಗಿಗಳು ಆತ್ಮಹತ್ಯೆ ಬಗ್ಗೆ ಹೆಚ್ಚು ಯೋಚಿಸುವಂತೆ ಮಾಡುತ್ತಿದೆ ಎಂಬ ವರದಿಗಳು ಬಂದಿವೆ.

ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಆ ದೇಶದ ಐಟಿ ಕಂಪನಿಗಳು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂಬ ನಿಯಮ ಜಾರಿಗೊಳಿಸಿರುವುದು ಒಂದೆಡೆಯಾದರೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಂತಹ ಆಧುನಿಕ ತಂತ್ರಜ್ಞಾನಗಳು ಐಟಿ ಕ್ಷೇತ್ರದಲ್ಲಿನ ಉದ್ಯೋಗವನ್ನು ನುಂಗು ಹಾಕುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ಇಷ್ಟು ದಿನಗಳ ಕಾಲ ಅತ್ಯುತ್ತಮ ವೇತನದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ ಐಟಿ ಉದ್ಯೋಗಿಗಳು ಈಗ ಕೆಲಸ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ.

ಕಳೆದ ವಾರವಷ್ಟೇ ಪುಣೆಯಲ್ಲಿನ ಟೆಕ್ ಮಹೀಂದ್ರ ಕಂಪನಿಯ ಐಟಿ ಉದ್ಯೋಗಿ ಕೆಲಸ ಕಳೆದುಕೊಂಡ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆಗೆ ಶರಣಾಗಿದ್ದ. ಈತನನ್ನು 24 ಗಂಟೆಗಳ ಮುಂಚಿತವಾಗಿ ನೋಟೀಸ್ ನೀಡಿ ಕೆಲಸದಿಂದ ತೆಗೆಯಲಾಗಿತ್ತು.

ಆನ್ ಲೈನ್ ಕೌನ್ಸಲಿಂಗ್ ವೇದಿಕೆಯಾಗಿರುವ ಯುವರ್ಡೊಸ್ಟ್ ಈ ಬಗ್ಗೆ ವರದಿಯೊಂದನ್ನು ನೀಡಿದ್ದು, ಆ ವರದಿಯ ಮಾಹಿತಿ ಪ್ರಕಾರ, ಕಳೆದ ಕೆಲವು ತಿಂಗಳಿಂದ ಐಟಿ ಉದ್ಯೋಗಿಗಳು ಖಿನ್ನತೆ ಹಾಗೂ ಮಾನಸಿಕ ಒತ್ತಡದ ಸಮಸ್ಯೆಗೆ ಸಿಲುಕುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕಾಗಿ ಕಂಪನಿ ಜೂನ್ ತಿಂಗಳಿನಿಂದ ‘ಫೈರ್ಡ್ ಟು ಫೈರ್ಡ್ ಅಪ್’ ಎಂಬ ಕೌನ್ಸೆಲಿಂಗ್ ಕಾರ್ಯಕ್ರಮದ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ 260ಕ್ಕೂ ಹೆಚ್ಚು ಕರೆಗಳು ಹಾಗೂ 800 ಚಾಟ್ ಗಳು ಬಂದಿವೆ. ಆ ಪೈಕಿ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬ, ‘ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿ ಆತನ ಮೃತದೇಹದ ಬಳಿ ಕೂತು ಕ್ಷಮೆ ಕೇಳಿದರೆ, ಅದರಿಂದ ಪ್ರಯೋಜನವಾದರು ಏನು?’ ಎಂಬ ಪ್ರಶ್ನೆಯನ್ನು ಕೇಳಿದ್ದ ಎಂದು ಯುವರ್ಡೊಸ್ಟ್ ತಿಳಿಸಿದೆ.

ಇವು ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭಿತಿಯಿಂದ ಮಾನಸಿಕ ಸಮಸ್ಯೆಗೆ ಸಿಲುಕುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಕಂಪನಿಗೆ ಬಂದಿರುವ ಕರೆಗಳ ಪೈಕಿ ಬೆಂಗಳೂರಿನ ಐಟಿ ಉದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಾಗಿದ್ದರು. ಉಳಿದಂತೆ ಮಹಾರಾಷ್ಟ್ರ, ದೆಹಲಿ, ಒಡಿಶಾ ಮತ್ತು ಹಿಮಾಚಲ ಪ್ರದೇಶದಿಂದಲೂ ಅನೇಕ ಐಟಿ ಉದ್ಯೋಗಿಗಳು ಮಾನಸಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರೆ ಮಾಡಿದ್ದಾರೆ. ಹೀಗೆ ಐಟಿ ಉದ್ಯೋಗಿಗಳು ಮಾನಸಿಕವಾಗಿ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಐಟಿ ಕಂಪನಿಗಳು ಕೌನ್ಸಲಿಂಗ್ ವ್ಯವಸ್ಥೆ ಕಲ್ಪಿಸಿವೆ.

Leave a Reply