ಈಶ್ವರಪ್ಪ ಆಪ್ತ ವಿನಯ್ ಅಪಹರಣ ಯತ್ನ ಪ್ರಕರಣ: ಸಂತೋಷ್ ವಿರುದ್ಧ ನೋಟೀಸ್ ಜಾರಿ ಮಾಡಿದ ಪೊಲೀಸರು, ಇದು ರಾಜಕೀಯ ಕುತಂತ್ರ ಅಂದ್ರು ಯಡಿಯೂರಪ್ಪ

ಡಿಜಿಟಲ್ ಕನ್ನಡ ಟೀಮ್:

ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅವರ ಅಪಹರಣ ಯತ್ನ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ಈ ಅಪರಹಣ ಯತ್ನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿ ಸಂತೋಷ್ ಕೈವಾಡವಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಪೊಲೀಸರ ಕೈಗೆ ಸಿಗದ ಸಂತೋಷ್ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ತುಮಕೂರಿನ ಸಂತೋಷ್ ಅವರ ಮನೆಗೆ ಭೇಟಿ ನೀಡಿ ಹುಡುಕಾಟ ನಡೆಸಿದ ಮಹಾಲಕ್ಷ್ಮಿ ಲೇಔಟಿನ ಪೊಲೀಸರು, ಸಂತೋಷ್ ತಂದೆ ಅವರಿಗೆ ನೋಟೀಸ್ ನೀಡಿದ್ದಾರೆ. ಇದರ ಜತೆಗೆ ಇತ್ತೀಚೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸದಲ್ಲೂ ಸಂತೋಷ್ ಗಾಗಿ ಹುಡುಕಾಟ ನಡೆಸಿರುವುದನ್ನು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಖಂಡಿಸಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್, ‘ಯಡಿಯೂರಪ್ಪ ಅವರು ಜವಾಬ್ದಾರಿಯುತ ಸ್ಥಾನದಲ್ಲಿರುವವರು. ಸಂತೋಷ್ ಹುಡುಕಾಟದ ಹೆಸರಿನಲ್ಲಿ ಅವರ ಮನೆ ತಲಾಶ್ ಮಾಡಿರುವುದು ಸರಿಯಲ್ಲ. ಬೇಕಿದ್ದರೆ ಈ ಕುರಿತಾಗಿ ಯಡಿಯೂರಪ್ಪ ಅವರನ್ನೇ ಕೇಳಬಹುದಿತ್ತು. ಇಲ್ಲವಾದರೆ ಹಗಲಿನಲ್ಲಿ ಮನೆಗೆ ಹೋಗಬೇಕಿತ್ತು. ಅದನ್ನು ಬಿಟ್ಟು ಮದ್ಯರಾತ್ರಿ ಹೋಗಿ ತಪಾಸಣೆ ನಡೆಸಿರುವುದು ಸೂಕ್ತವಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದಿದ್ದಾರೆ.

ಇನ್ನು ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ನಡೆಸಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ವಿನಯ್ ಅಪಹರಣ ಯತ್ನ ಪ್ರಕರಣದಲ್ಲಿ ಸಂತೋಷ್ ಅವರನ್ನು ಕುತಂತ್ರದಿಂದ ಸಿಲುಕಿಸಲಾಗುತ್ತಿದೆ ಎಂದಿದ್ದಾರೆ. ‘ನನ್ನ ಆಪ್ತ ಕಾರ್ಯದರ್ಶಿ ಸಂತೋಷ್ ತಲೆಮರೆಸಿಕೊಂಡಿಲ್ಲ. ಕುತಂತ್ರದಿಂದ ಪ್ರಕರಣದಲ್ಲಿ ಅವರನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಸಂತೋಷ್ ಅವರು ನಿರೀಕ್ಷಣಾ ಜಾಮೀನು ಪಡೆಯುವ ಪ್ರಯತ್ನದಲ್ಲಿದ್ದಾರೆ. ಇಷ್ಟು ದಿನಗಳ ಕಾಲ ಈ ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ಯಾವುದೋ ವ್ಯಕ್ತಿಯಿಂದ ಬಲವಂತವಾಗಿ ಸಂತೋಷ್ ಅವರ ಹೆಸರನ್ನು ಹೇಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ಸಂತೋಷ್ ಆತಂಕಗೊಂಡು ಪೊಲೀಸರಿಗೆ ಸಿಗದೆ ನಿರೀಕ್ಷಣಾ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ. ಇದು ರಾಜಕೀಯ ಕುತಂತ್ರವಾಗಿದ್ದು, ನನ್ನ ಗಮನ ಬೇರೆಡೆಗೆ ಸೆಳೆಯಲು ಈ ಪ್ರಯತ್ನ ಮಾಡಲಾಗುತ್ತಿದೆ’ ಎಂದಿದ್ದಾರೆ.

Leave a Reply