ಪೊಲೀಸ್ ಇಲಾಖೆ ಸುಡುತ್ತಿರುವ ಕೊಳ್ಳಿ ಈ ಕೆಂಪಯ್ಯ!

ಒಂದು ಸರಕಾರದ ಸಾಮರ್ಥ್ಯ ಪೊಲೀಸ್ ಇಲಾಖೆ ಕಾರ್ಯಕ್ಷಮತೆಯಲ್ಲಿ ಪ್ರತಿಫಲಿಸುತ್ತದೆ. ಒಂದು ರಾಜ್ಯದ ಕಾನೂನು ಹಾಗೂ ಸುವ್ಯವಸ್ಥೆ ಸರಕಾರದ ತಾಕತ್ತಿಗೆ ಕೈಗನ್ನಡಿ. ಒಂದು ಅಗುಳನ್ನು ಹಿಚುಕಿ ನೋಡಿದರೆ ಅನ್ನ ಬೆಂದಿದೆಯೋ ಇಲ್ಲವೋ ಎಂಬುದು ಗೊತ್ತಾಗುವಂತೆ ಒಂದು ಸರಕಾರ ಅದೆಷ್ಟು ಸದೃಢ, ಸಬಲ ಎಂಬುದನ್ನು ಗೃಹ ಇಲಾಖೆ ಕಾರ್ಯವೈಖರಿ ನೋಡಿ ಪರಾಮರ್ಶಿಸಬಹುದು. ಹೀಗಾಗಿ ಸಚಿವ ಸಂಪುಟದಲ್ಲಿ ಬೇರೆಲ್ಲ ಖಾತೆಗಳಿಗಿಂಥ ಗೃಹ ಖಾತೆಯದೇ ಒಂದು ಗತ್ತು ಗೈರತ್ತು. ಮುಖ್ಯಮಂತ್ರಿ ನಂತರದ ಪವರ್‌ಫುಲ್ ಸ್ಥಾನ ಗೃಹ ಸಚಿವರದ್ದು. ಯಾವುದೇ ಒಂದು ಸರಕಾರ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿ ಸ್ಥಾನದ ನಂತರ ಎಲ್ಲರ ಕಣ್ಣು ಗೃಹ ಸಚಿವರು ಯಾರು ಎಂಬುದನ್ನು ಅರಸುತ್ತದೆ.

ಹಿಂದೆ ಎಷ್ಟೋ ಸರಕಾರಗಳು ಹಳಿ ತಪ್ಪಿದ ಕಾನೂನು ಹಾಗೂ ಸುವ್ಯವಸ್ಥೆಯಿಂದಾಗಿಯೇ ಉರುಳಿ ಹೋಗಿವೆ. ಅನೇಕರು ಅಧಿಕಾರ ಕಳೆದುಕೊಂಡಿದ್ದಾರೆ. ಅನೇಕ ಪಕ್ಷಗಳು ಅಧಿಕಾರ ಕಳೆದುಕೊಂಡು ಪ್ಯಾಕಪ್ ಆಗಿವೆ. ಒಂದು ಸರಕಾರದ ಒಳಗೆ ಮತ್ತು ಹೊರಗೆ ರಾಜಕೀಯ ಕುತಂತ್ರಗಳು ಇದರ ಸುತ್ತಲೇ ಮೈದಳೆದಿವೆ. ಅನೇಕ ಅಧಿಕಾರಸ್ಥರನ್ನು ಆಪೋಶನ ತೆಗೆದುಕೊಂಡಿವೆ. ತಮಗಾಗದವರನ್ನು ಬಲಿ ಹಾಕಲು ಸುಲಭವಾಗಿ ಬಳಕೆ ಆಗುವ ಅಸ್ತ್ರ ಎಂದರೆ ಕಾನೂನು ಮತ್ತು ಸುವ್ಯವಸ್ಥೆ. 1989ರಲ್ಲಿ ಆರೋಗ್ಯ ತಪ್ಪಿದ್ದ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಪಲ್ಲಟ ಮಾಡಲು ಬಳಕೆ ಮಾಡಿದ್ದು ಇದೇ ಅಸ್ತ್ರವನ್ನೇ. ಅವರ ನಂತರ ಅಧಿಕಾರಕ್ಕೆ ಬಂದ ಬಂಗಾರಪ್ಪನವರೂ ಮನೆಗೆ ಹೋಗಿದ್ದು ಮತ್ತದೇ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದರಿಂದಲೇ. ಅವರ ನಂತರ ಮುಖ್ಯಮಂತ್ರಿ ಆದ ವೀರಪ್ಪ ಮೊಯ್ಲಿ ಅವರ ಅಧಿಕಾರ ಅವಧಿ ಮುಗಿಯುತ್ತಿದ್ದಂತೆ ಚುನಾವಣೆಯಲ್ಲಿ ಇಡೀ ಕಾಂಗ್ರೆಸ್ ಹೋಲ್‌ಸೇಲ್ ಆಗಿ ಮೂಟೆ ಕಟ್ಟಿದ್ದು ಕೂಡ ರಾಜ್ಯದಲ್ಲಿ ತಾಂಡವಾಡಿದ್ದ ಹಿಂಸಾಚಾರದ ಗಂಟಿನಿಂದಲೇ!

ಈಗ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ವರ್ಷ ಕೂಡ ಬಾಕಿ ಉಳಿದಿಲ್ಲ. ಈಗಾಗಲೇ ಚುನಾವಣೆ ಪರಿಸರ ಬಣ್ಣಗಟ್ಟುತ್ತಿದೆ. ಎಲ್ಲ ಪಕ್ಷಗಳೂ ಪರೋಕ್ಷ ಪ್ರಚಾರ ಶುರುವಿಟ್ಟುಕೊಂಡಿವೆ. ಕಾಕತಾಳಿಯವೋ ಏನೋ ಎಂಬಂತೆ ಕರಾವಳಿಯನ್ನು ಹುರಿದು ಮುಕ್ಕುತ್ತಿರುವ ಕೋಮು ಸಂಘರ್ಷ ಈ ಪ್ರಚಾರಕ್ಕೊಂದು ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. ಅದೇ ಕಾಲಕ್ಕೆ ಪೊಲೀಸ್ ಇಲಾಖೆಯಲ್ಲೇ ಅಧಿಕಾರಿಗಳ ನಡುವೆ ನಡೆಯುತ್ತಿರುವ ಪ್ರತಿಷ್ಠೆ ಸಮರ ಸರಕಾರದ ಕಾರ್ಯ ಕ್ಷಮತೆಯನ್ನೇ ಅಣಕಿಸುತ್ತಿದೆ. ಪ್ರತಿಪಕ್ಷಗಳ ಕೈಗೆ ಪ್ರಬಲ ಟೀಕಾಸ್ತ್ರವನ್ನೂ ಒದಗಿಸಿದೆ. ಚುನಾವಣೆ ಪ್ರಚಾರಕ್ಕೆ ಸುಲಭ ಆಹಾರ ಆಗಬಹುದಾದ ಕಾನೂನು ಮತ್ತು ಸುವ್ಯವಸ್ಥೆ ಸವಾಲು ಜತೆಜತೆಗೆ ಪೊಲೀಸ್ ಇಲಾಖೆ ಆಂತರ್ಯುದ್ಧ ಪ್ರತಿಪಕ್ಷಗಳ ಪಾಲಿಗೆ ರೊಟ್ಟಿ ಜಾರಿ ತುಪ್ಪದ ಬಾಂಡಲೆಗೆ ಬಿದ್ದಂತಾಗಿದೆ.

ನಿಜ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಮಡಕೇರಿ, ಮೈಸೂರು, ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಅಲ್ಲಲ್ಲಿ ಒಂದಷ್ಟು ಕೋಮು ಸಂಘರ್ಷಗಳು ಏರ್ಪಟ್ಟಿವೆ. ಇದಕ್ಕೆ ಹಲವರು ಬಲಿ ಆಗಿದ್ದಾರೆ. ಮತ್ತಷ್ಟು ಮಂದಿ ಗಾಯಗೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಸರಕಾರ ತೆಗೆದುಕೊಂಡ ನಿಲುವು ಮತ್ತು ಕ್ರಮಗಳು ತಾರತಮ್ಯದ ಲೇಪದೊಂದಿಗೆ ಜನರ ಮನಸ್ಸಲ್ಲಿ ಮಾಗದ ಗಾಯ ಮಾಡಿಟ್ಟಿದೆ. ಅದೇ ಕಾಲಕ್ಕೆ ಇಲಾಖೆ ಮಟ್ಟದಲ್ಲಿ ಸರಕಾರ ತೆಗೆದುಕೊಂಡಿರುವ ಕೆಲವು ಆಡಳಿತಾತ್ಮಕ ನಿರ್ಣಯಗಳು ಕಾನೂನು ಮತ್ತು ಸುವ್ಯವಸ್ಥೆ ರಕ್ಷಿಸಬೇಕಾದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ. ಅಧಿಕಾರಿಗಳನ್ನು ಅಧೀರರನ್ನಾಗಿಸಿದೆ. ಅವರ ಕೈಗಳನ್ನು ಕಟ್ಟಿಹಾಕಿದೆ. ಅವಮಾನದಿಂದ ಕುದ್ದಿ ಹೋಗುವಂತೆ ಮಾಡಿದೆ. ಈ ಎಲ್ಲ ಬೆಳವಣಿಗೆಯ ಒಟ್ಟಾರೆ ಪರಿಣಾಮ ಮತ್ತದೇ ಕುಸಿಯುತ್ತಿರುವ ಕಾನೂನು, ಸುವ್ಯವಸ್ಥೆಯಲ್ಲಿ ಪ್ರತಿಫಲಿಸುತ್ತಿದೆ.

ರಾಜ್ಯ ಸರಕಾರ ತೆಗೆದುಕೊಂಡಿರುವ ತಪ್ಪು ನಿರ್ಣಯಗಳಲ್ಲಿ ಅತ್ಯಂತ ಪ್ರಮುಖವಾದದ್ದು ಗೃಹ ಇಲಾಖೆಗೆ ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿರುವುದು. ತಮ್ಮ ಮೇಲಿದ್ದ ಆಪಾದನೆಗಳಿಗೆ ಬೆದರಿ ಸ್ವಯಂ ನಿವೃತ್ತಿ ಪಡೆದಿದ್ದ ಕೆಂಪಯ್ಯ ಅವರನ್ನು ಈ ಹುದ್ದೆಗೆ ತರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದಿನ ಗೃಹ ಸಚಿವರಾದ ಕೆ. ಜೆ. ಜಾರ್ಜ್ ಹಾಗೂ ಡಾ. ಜಿ. ಪರಮೇಶ್ವರ ಅವರಿಗೆ ಒಂದು ಚೆಕ್ ಇಡುವುದರ ಜತೆಗೆ ಇಲಾಖೆ ಮೇಲೆ ಪರೋಕ್ಷ ಹಿಡಿತ ಸಾಧಿಸುವ ಇಂಗಿತವಿತ್ತು. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು ಕೊನೆಗೆ ಮಂತ್ರಿ ಪದವಿ ಸಿಗುವಷ್ಟರಲ್ಲಿ ಸಾಕಷ್ಟು ಕೆರೆ ನೀರು ಕುಡಿದು ಹೈರಾಣಾಗಿ ಹೋಗಿದ್ದ ಪರಮೇಶ್ವರ ಅವರು ಮಂತ್ರಿ ಆಗುವ ತವಕದಲ್ಲಿ ಕೆಂಪಯ್ಯ ಹೇರಿಕೆಯನ್ನು ಸಹಿಸಿಕೊಂಡರು. ಆದರೆ ಅವರು ಸಹಿಸಿಕೊಂಡಷ್ಟು ಸುಲಭವಾಗಿ ಕೆಂಪಯ್ಯ ಅವರ ಜತೆ ಕೆಲಸ ಮಾಡಿದ್ದ ಹಿರಿಯ, ದಕ್ಷ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಇದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಕೆಂಪಯ್ಯ ಅವರು ಬರೀ ಸಲಹೆಗಾರರಾಗಿದ್ದರೆ ಪೊಲೀಸ್ ಅಧಿಕಾರಿಗಳಿಂದ ಗೌರವ ರಕ್ಷೆ (ಗಾರ್ಡ್ ಆಫ್ ಹಾನರ್) ಸಿಗುತ್ತಿರಲಿಲ್ಲ. ಹೀಗಾಗಿ ಅವರು ಸಲಹೆಗಾರ ಹುದ್ದೆ ಮುಂದೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಮಾನ ಸೇರ್ಪಡೆ ಆಗುವಂತೆ ನೋಡಿಕೊಂಡರು. ಹಿಂದೆ ತಮ್ಮ ಕೈಕೆಳಗೆ ಕೆಲಸ ಮಾಡಿದ್ದ ಕೆಂಪಯ್ಯ ಅವರಿಗೆ ಮನಸ್ಸಿಲ್ಲದಿದ್ದರೂ ಸೆಲ್ಯೂಟ್ ಹೊಡೆಯುವ ‘ಅನಿವಾರ್ಯ ಕರ್ಮ’ ಪೊಲೀಸ್ ಅಧಿಕಾರಿಗಳದ್ದಾಯಿತು. ಪೊಲೀಸ್ ಇಲಾಖೆ ನೈತಿಕ ಸ್ಥೆರ್ಯ ಕುಸಿತ ಆರಂಭವಾದದ್ದೇ ಇಲ್ಲಿಂದ!

ಇದಾದ ನಂತರ ಕೆಂಪಯ್ಯ ಮಾಡಿದ ಮತ್ತೊಂದು ಘನಂದಾರಿ ಕೆಲಸ ಇನ್ಸ್ ಸ್‌ಪೆಕ್ಟರ್, ಸಬ್ ಇನ್ಸ್ ಸ್‌ಪೆಕ್ಟ ಒಂದು ಠಾಣೆಯಲ್ಲಿ ಕನಿಷ್ಟ ಎರಡು ವರ್ಷ ಸೇವೆ ಸಲ್ಲಿಸಬೇಕೆಂಬ ನಿಯಮವನ್ನು (ಭ್ರಷ್ಟಾಚಾರ, ಸ್ವಜನಪಕ್ಷಪಾತ, ದೇಶದ್ರೋಹದಂಥ ಬಲವಾದ ಕಾರಣಗಳನ್ನು ಹೊರತುಪಡಿಸಿ) ಪೊಲೀಸ್ ಕಾಯಿದೆಗೆ ತಿದ್ದುಪಡಿ ಮಾಡಿಸುವ ಮೂಲಕ ಒಂದು ವರ್ಷಕ್ಕೆ ಇಳಿಸಿದ್ದು. ಅದೂ ಸುಪ್ರೀಂ ಕೋರ್ಟ್ ಆದೇಶವನ್ನೂ ಪಕ್ಕಕ್ಕೆ ಸರಿಸಿ. ಇದಕ್ಕಾಗಿಯೇ ಕಾಯಿದೆಗೆ ತಿದ್ದುಪಡಿ ತರಲಾಯಿತು. ಇದರಿಂದ ಆದ ಅನಾಹುತವೆಂದರೆ ನಿರ್ದಿಷ್ಟ ಜಾಗಕ್ಕೆ ನಿಯೋಜಿತರಾದ ಅಧಿಕಾರಿ ಆ ಜಾಗಕ್ಕೆ ಹೊಂದಿಕೊಳ್ಳಲು ಆರು ತಿಂಗಳು, ಅದಾದ ನಂತರ ಹೊಸ ಜಾಗ ಹುಡುಕಿಕೊಳ್ಳಲು ಇನ್ನಾರು ತಿಂಗಳು ವಿನಿಯೋಗಿಸುವಂತಾಯಿತು. ಪಾಪ, ಅವರಿಗೂ ಹೆಂಡತಿ, ಮಕ್ಕಳು, ಅವರ ಶಿಕ್ಷಣ, ಆರೋಗ್ಯ, ಬದುಕು ಎಲ್ಲ ಇರುತ್ತದಲ್ಲ. ಅವರೂ ತಮ್ಮ ಹಿತರಕ್ಷಣೆ ಮಾಡಿಕೊಳ್ಳಬೇಕಲ್ಲ. ಹೀಗಾಗಿ ಈ ಕನಿಷ್ಟ ಒಂದು ವರ್ಷ ಹೀಗೆ ದುರ್ವಿನಿಯೋಗವಾಗಿ ಇಲಾಖೆಗೆ ಅವರ ದಕ್ಷ ಸೇವೆ ದುರ್ಲಭವಾಯಿತು. ಅಡ್ಡಾಡುವುದರಲ್ಲೇ ಅಧಿಕಾರಿಗಳ ಕಾಲಹರಣವಾದರೆ ಇಲಾಖೆ ಉದ್ಧಾರ ಆಗುವುದಾದರೂ ಹೇಗೆ? ಜನರಿಗೆ ಅವರ ಸೇವೆ ಸಿಗುವುದಾದರೂ ಹೇಗೆ?

ಇದಾದ ನಂತರ ಇನ್ನೂ ಒಂದು ತಿದ್ದುಪಡಿ ಬಂತು. ಕಾಸ್ಮೋಪಾಲಿಟನ್ ಬೆಂಗಳೂರು ನಗರದಲ್ಲಿ ಐದು ವರ್ಷ ಸೇವೆ ಸಲ್ಲಿಸಿದವರು ಕಡ್ಡಾಯವಾಗಿ ಹೊರಗೆ ಹೋಗಬೇಕು. ಕೆಂಗೇರಿ, ಜಾಲಹಳ್ಳಿ, ಕೆ.ಜಿ. ಹಳ್ಳಿ, ಯಲಹಂಕ, ಶಂಕರಪುರದಲ್ಲಿ ತಲಾ ಒಂದು ವರ್ಷ ‘ಸೇವೆ’ ಕಳೆದ ಅಧಿಕಾರಿ ಅದ್ಯಾವ ಪರಿಣಿತಿಯೊಂದಿಗೆ ಹೊರಗೋಗಿ ಕೆಲಸ ಮಾಡಲಾದೀತು. ಬೇಕಾದ ಜಾಗ ಅನ್ವೇಷಣೆಗೆ ಮಿನಿಸ್ಟರ್, ಎಂಎಲ್‌ಎ, ಎಂಎಲ್‌ಸಿ ಮನೆ ಬಾಗಿಲಿಗೆ ಹುಚ್ಚನ ರೀತಿ ಅಲೆಯುವುದರಲ್ಲೇ ಕಾಲಕಳೆವ ಅಧಿಕಾರಿಗೆ ಪರಿಣಿತಿ ಯಾವ ರೀತಿಯಲ್ಲಿ ಬಂದೀತು? ವರ್ಷಕ್ಕೊಂದು ವರ್ಗಾವಣೆ ದಂಧೆಯಲ್ಲಿ ದುಡ್ಡು ಮಾಡಲೋಸುಗ ತಂದ ಅದ್ದೂರಿ ತಿದ್ದುಪಡಿ ಅಲ್ಲದೇ ಮತ್ಯಾವ ಘನಂದಾರಿ ಉದ್ದೇಶ ಇದರ ಹಿಂದೆ ಇದ್ದೀತು?

ಹಿಂದೆ ಯಾವುದೇ ಸರಕಾರದ ಅವಧಿಯಲ್ಲಿ ಪೊಲೀಸರು ಸಾಮೂಹಿಕ ರಜೆ ಮೂಲಕ ಪ್ರತಿಭಟನೆ ದಾಖಲಿಸಿದ ಇತಿಹಾಸ ಇರಲಿಲ್ಲ. ಈ ಸರಕಾರದ ಅವಧಿಯಲ್ಲಿ ಅದೂ ಆಗಿಹೋಯಿತು. ಆ ಸಂದರ್ಭದಲ್ಲಿ ಗೃಹ ಇಲಾಖೆ ಸಲಹೆಗಾರರಾಗಿ ಸರಕಾರದ ನೆರವಿಗೆ ಬಂದವರು ಮತ್ತಿದೇ ಕೆಂಪಯ್ಯ. ಒಂದಷ್ಟು ಜನ ಅಮಾನತಾದರು. ಇನ್ನೊಂದಷ್ಟು ಜನ ವರ್ಗಾವಣೆ ಕಂಡರು. ವಾರಕ್ಕೊಂದು ರಜೆ, ಆರ್ಡರ್ಲಿ ವ್ಯವಸ್ಥೆ ರದ್ದು, ಮತ್ತಿತರ ಸೌಕರ್ಯಗಳ ಭರವಸೆ ಇವತ್ತಿಗೂ ಭರವಸೆಯಾಗಿಯೇ ಉಳಿದಿದೆ. ಪರಿಸ್ಥಿತಿ ಹೀಗಿರುವಾಗ ಪೊಲೀಸರ ನೈತಿಕ ಸ್ಥೆರ್ಯ ಉಕ್ಕಿ ಹರಿಯುವುದಾದರೂ ಹೇಗೆ?

ಹೌದು, ಕ್ಯಾಬಿನೆಟ್ ದರ್ಜೆ ಸ್ಥಾನಮಾನದ ದೆಸೆಯಿಂದಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲೂ ಕೆಂಪಯ್ಯನವರ ಉಪಸ್ಥಿತಿ ಇರುತ್ತದೆ. ದಕ್ಷಿಣ ಕನ್ನಡ ಗಲಭೆ ಹಿನ್ನೆಲೆಯಲ್ಲಿ ಮೊನ್ನೆ ಬೆಂಗಳೂರಲ್ಲಿ ಕರೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಿದ್ದರಾಮಯ್ಯನವರು ಒಂದಷ್ಟು ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೆಂಪಯ್ಯನವರ ಸಮ್ಮುಖದಲ್ಲೇ. ಅಧಿಕಾರಿಗಳಿಗೆ ಎರಡೆರಡು ರೀತಿ ನಿಂದನೆ. ಒಂದು ಸಿಎಂ ಬೈದದ್ದು, ಇನ್ನೊಂದು ಒಂದು ಕಾಲದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ್ದ ವ್ಯಕ್ತಿ ಸಮ್ಮುಖದಲ್ಲಿ ಹೀಗೆ ಬಯ್ಯಿಸಿಕೊಂಡದ್ದಕ್ಕೆ ಆದ ನೋವಿನದು. ಅಷ್ಟೇ ಅಲ್ಲದೆ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡದಲ್ಲಿ ಪರಿಸ್ಥಿತಿ ನಿಯಂತ್ರಣ ಹೊಣೆಯನ್ನು ಇದೇ ಸಭೆಯಲ್ಲಿ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಕೆಂಪಯ್ಯನವರಿಗೆ ವಹಿಸಿದ್ದು. ಸಲಹೆಗಾರರೊಬ್ಬರಿಗೆ ಹೀಗೆ ಇಲಾಖೆ ಜವಾಬ್ದಾರಿ ಕೊಟ್ಟುಬಿಟ್ಟರೆ ಹಿರಿಯ ಪೊಲೀಸ್ ಅಧಿಕಾರಿಗಳ ಸ್ಥಿತಿ ಏನಾಗಬೇಡ? ಅವರ ನೈತಿಕ ಸ್ಥೈರ್ಯ ಕುಸಿಯದೇ ಮತ್ತೇನಾದೀತು? ಎಲ್ಲ ಜವಾಬ್ದಾರಿಯನ್ನು ಸಲಹೆಗಾರರೇ ನಿರ್ವಹಿಸುವುದಾದರೆ ಈ ರಾಜ್ಯಕ್ಕೆ ಪೊಲೀಸ್ ಮಹಾ ನಿರ್ದೇಶಕರೇಕೆ? ಡಿಐಜಿಗಳೇಕೆ? ಕಮಿಷನರುಗಳೇಕೆ?

ಕೆಂಪಯ್ಯನವರೂ ಸಿದ್ದರಾಮಯ್ಯನವರ ಸರಕಾರದ ‘ಅಹಿಂದ’ ನೀತಿಯನ್ನು ಮೈಮೇಲೆ ಆವಾಹನೆ ಮಾಡಿಕೊಂಡಿದ್ದಾರೆ. ಪರಮೇಶ್ವರ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಖಾತೆ ಮುಖ್ಯಮಂತ್ರಿಗಳ ಸುಪರ್ದಿಗೆ ಬಂದ ಮೇಲೆ ಇಲಾಖೆ ಮೇಲೆ ಕೆಂಪಯ್ಯನವರ ಹಿಡಿತ ಮತ್ತಷ್ಟು ಜೋರಾಗಿದೆ. ರಾಜ್ಯದ ಆಯಕಟ್ಟಿನ ಜಾಗಗಳು ಈ ವರ್ಗಕ್ಕೆ ಸಿಗುವುದರಲ್ಲಿ ಕೆಂಪಯ್ಯನವರ ಕೊಡುಗೆಯೂ ಅಪಾರ. ಅದರಲ್ಲೂ ತಮ್ಮ ಸಮುದಾಯವರು ಅಂದರೆ ಕೊಂಚ ಹೆಚ್ಚೇ ಮಮಕಾರ. ಇರಲಿ, ಇದೇನೂ ಹೊಸತಲ್ಲ. ಹಿಂದೆಯೂ ಬಹಳ ಜನ ಈ ಕೆಲಸ ಮಾಡಿದ್ದಾರೆ. ಇವರೂ ಮಾಡಿದ್ದಾರೆ. ಪ್ರಮಾಣ ಸ್ವಲ್ಪ ದೊಡ್ಡದಿರಬಹುದು ಅಷ್ಟೇ.

ಹಿಂದೆ ಮಂಗಳೂರಲ್ಲಿ ಚಂದ್ರಶೇಖರ್ ಅಂತ ಕಮಿಷನರ್ ಇದ್ದರು. ಅವರೊಬ್ಬ ಉತ್ತಮ ಅಧಿಕಾರಿ ಎಂದೇ ಹೆಸರು ಮಾಡಿದ್ದರು. ಹಿಂದೂ-ಮುಸ್ಲಿಂ ಎಂಬ ಯಾವುದೇ ಭೇದವಿಲ್ಲದೆ ತಪ್ಪು ಮಾಡಿದವರನ್ನು ಮುಲಾಜಿಲ್ಲದೆ ಬಡಿದು ಊರನ್ನು ಶಾಂತವಾಗಿಟ್ಟಿದ್ದರು. ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಬಂದ ಅಲ್ಪಸಂಖ್ಯಾತ ಸಮುದಾಯದವರನ್ನು ನಾಯಿಗೆ ಬಡಿದಂತೆ ಬಡಿಸಿದ್ದರು. ಇದಕ್ಕೆ ಪ್ರತಿಯಾಗಿ ಸಬ್ ಇನ್‌ಸ್‌‌ಪೆಕ್ಟರ್ ಮೇಲೆ ಹಲ್ಲೆ ನಡೆದಿತ್ತು. ಹೀಗೆ ಹಲ್ಲೆ ಮಾಡಿದವರನ್ನು ಪತ್ತೆ ಹಚ್ಚಿ ಮತ್ತದೇ ಧರ್ಮದೇಟುಗಳನ್ನು ದಯಪಾಲಿಸಲಾಗಿತ್ತು. ಅಲ್ಲಿಂದಾಚೆಗೆ ಯಾರೂ ಬಾಲ ಬಿಚ್ಚಿರಲಿಲ್ಲ. ಅದೇ ರೀತಿ ಹಿಂದೂಗಳು ಬಾಲ ಬಿಚ್ಚಿದಾಗ ಅವರಿಗೂ ಕೊಡಬೇಕಾದ್ದನ್ನು ಯಾವುದೇ ತಾರತಮ್ಯ ಇಲ್ಲದೇ ಕೊಡಲಾಗಿತ್ತು. ಕೆಂಪಯ್ಯನವರು ಆ ಜಾಗಕ್ಕೆ ತಮ್ಮದೇ ಸಮುದಾಯದ ಸುರೇಶ್ ಎಂಬುವರನ್ನು ತಂದಿದ್ದಾರೆ. ಬದಲಾವಣೆ ಮಾಡಬಾರದು ಅಂತೇನೂ ಇಲ್ಲ. ಆದರೆ ಅದಕ್ಕೆ ಸಕಾರಣಗಳು ಇರಬೇಕಲ್ಲವೇ?

ಚಿಕ್ಕಮಗಳೂರು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಕಲ್ಲಪ್ಪ ಹಂದಿಬಾಗ್ ಆತ್ಮಹತ್ಯೆ ಮಾಡಿಕೊಂಡರು. ಇವರೂ ಕೆಂಪಯ್ಯನವರ ಸಮುದಾಯದವರು. ಇವರಿಗೂ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ನಂತರ ವರದಿ ಬಂತು. ಅವರ ಪತ್ನಿಗೆ ಸಬ್ ರಿಜಿಸ್ಟ್ರಾರ್ ಕೆಲಸವೂ ಸಿಕ್ಕಿತು. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಗಣಪತಿ ಅವರ ಪತ್ನಿಗಾಗಲಿ, ಕುಟುಂಬದ ಸದಸ್ಯರಿಗಾಗಲಿ ಯಾವುದೇ ಕೆಲಸ ಕೊಟ್ಟಿಲ್ಲ. ಅವರು ಅಹಿಂದ ವರ್ಗಕ್ಕೆ ಸೇರಿದವರಲ್ಲ!

ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದು, ಸಸ್ಪೆಂಡ್ ಆಗಿದ್ದ ತಮ್ಮ ಸಮುದಾಯದವರೇ ಆದ ಬೆಂಗಳೂರಿನ ಸರ್ಜಾಪುರ ಸಬ್ ಇನ್ಸಪೆಕ್ಟರ್ ರಾಘವೇಂದ್ರ ಅವರು ಕೆಂಪಯ್ಯನವರ ಕೃಪಾಕಟಾಕ್ಷದಿಂದ ಸೇವೆಗೆ ಮರುಸೇರ್ಪಡೆ ಆಗಿದ್ದರು. ಕೇಸು ಇನ್ನೂ ಇತ್ಯರ್ಥ ಆಗದಿದ್ದರೂ ಅವರನ್ನು ಮಾಲೂರು ಸರ್ಕಲ್ ಇನ್ಸಪೆಕ್ಟರ್ ಮಾಡಲಾಗಿತ್ತು. ಆದರೆ ಕೇಸು ಹಿನ್ನಡೆ ಆಗುವ ಸುಳಿವು ಸಿಕ್ಕಿ, ಮಾನಸಿಕ ಒತ್ತಡ ತಾಳಲಾರದೆ ರಾಘವೇಂದ್ರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಕೆಂಪಯ್ಯನವರು ಅವರ ಹಣೆಬರಹ ಬದಲಿಸಿದರೂ ವಿಧಿ ಮಾತ್ರ ಸಹಕರಿಸಲಿಲ್ಲ.

ಅದು ಪಕ್ಕಕ್ಕಿರಲಿ, ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ಎರಡು ಹತ್ಯೆಗಳಾದವು. ಒಬ್ಬ ಅರ್ಶದ್, ಮತ್ತೊಬ್ಬ ಆರೆಸ್ಸಸ್ ಕಾರ್ಯಕರ್ತ ಶರತ್ ಮಡಿವಾಳರ. ಅರ್ಶದ್ ಕೊಲೆ ಆರೋಪಿಗಳನ್ನು ಎರಡು ದಿನದೊಳಗೆ ಬಂಧಿಸಲಾಗಿದೆ. ಶರತ್ ಕೊಲೆ ಆರೋಪಿಗಳನ್ನು ಹಿಡಿಯುವುದಿರಲಿ, ಇನ್ನು ಗುರುತಿಸಲೇ ಆಗಿಲ್ಲ. ಸಿದ್ದರಾಮಯ್ಯನವರು ಕೆಂಪಯ್ಯನವರಿಗೆ ಇಲ್ಲಿನ ಪರಿಸ್ಥಿತಿ ನಿಯಂತ್ರಣ ಜವಾಬ್ದಾರಿ ವಹಿಸಿದ್ದಾರೆ. ಡಿಐಜಿ ಹರಿಶೇಖರನ್ ವರ್ಗಾವಣೆಗೆ ಚಿಂತನೆ ನಡೆದಿದೆ. ಇಲ್ಲಿಗೆ ಯಾರನ್ನು ತರುತ್ತಾರೋ ನೋಡಬೇಕು!

ಅಧಿಕಾರದ ಚುಕ್ಕಾಣಿ ಹಿಡಿದವರಿಗೆ ಪೊಲೀಸ್ ಇಲಾಖೆ ಮೇಲೆ ಹಿಡಿತ ಇರಬೇಕು ಎಂಬುದು ಸರಿ. ಆದರೆ ಸರ್ವಾಧಿಕಾರಿ ಧೋರಣೆ ಇರಬಾರದು. ಇಲಾಖೆಯನ್ನು ನಿರ್ವಹಿಸಬೇಕೆ ಹೊರತು ನಿಯಂತ್ರಣ ಮಾಡಬಾರದು. ನಿರ್ವಹಣೆ ಮತ್ತು ನಿಯಂತ್ರಣದ ನಡುವೆ ವ್ಯತ್ಯಾಸ ಇರಬೇಕು. ಗೆರೆ ಇರಬೇಕು. ಆಡಳಿತರೂಢರ ಧೋರಣೆ ವ್ಯವಸ್ಥೆ ಸುಗಮವಾಗಿ ಸಾಗಲು ಪೂರಕವಾಗಿರಬೇಕೆ ಹೊರತು ಹಳ್ಳ ಹಿಡಿಸುವಂತಿರಬಾರದು. ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಸ್ವಜನಪಕ್ಷಪಾತ ಮೆರೆಯಲು ಇಲಾಖೆಯನ್ನೇ ಒಲೆ ಮಾಡಿಕೊಳ್ಳಬಾರದು. ಆದರೆ ದುರದೃಷ್ಟವಶಾತ್ ಇಲಾಖೆ ಒಲೆಯಾಗಿದೆ. ದಕ್ಷ ಹಾಗೂ ನಿಷ್ಠಾವಂತ ಅಧಿಕಾರಿಗಳು ಅಲ್ಲಿ ಕೊಳ್ಳಿಯಾಗಿ ಉರಿದು ಹೋಗುತ್ತಿದ್ದಾರೆ.

ಲಗೋರಿ: ಅನ್ಯರನ್ನು ಸುಡುವ ಕೊಳ್ಳಿಯೂ ಕೊನೆಗೆ ತಾನೂ ಬೂದಿ ಆಗುತ್ತದೆ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply