ಪದ್ಮಾವತಿ ಚಿತ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಂಡಿದ್ದ ಕಾಂಗ್ರೆಸಿಗರು ಈಗ ‘ಇಂದು ಸರ್ಕಾರ್’ ಚಿತ್ರವನ್ನು ವಿರೋಧಿಸುತ್ತಿರೋದು ಏಕೆ?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತ ಅವಧಿಯಲ್ಲಿನ ತುರ್ತು ಪರಿಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ ‘ಇಂದು ಸರ್ಕಾರ್’ ಚಿತ್ರದ ವಿರುದ್ಧ ವಿರುದ್ಧ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಕ್ಷೇಪಿಸುವುದು ಅಭಿವ್ಯಕ್ತಿಯ ಹಕ್ಕಾದರೂ ಚಿತ್ರದ ಪ್ರಚಾರಕ್ಕೆ ಅಡ್ಡಿಯುಂಟು ಮಾಡುತ್ತಿರುವುದು ಕಾಂಗ್ರೆಸಿಗರ ಗೂಂಡಾಗಿರಿಗೊಂದು ಉದಾಹರಣೆ. ಚಿತ್ರದ ನಿರ್ದೇಶಕ ಮಧುರ್ ಭಂಡಾರ್ಕರ್ ವಿರುದ್ಧ ಯಾವ ಪರಿ ಮುಗಿಬಿದ್ದಿದ್ದಾರೆ ಎಂದರೆ, ಮುನ್ನೆಚ್ಚರಿಕೆ ಕ್ರಮವಾಗಿ ಮಧುರ್ ಅವರಿಗೆ ಪೊಲೀಸ್ ಭದ್ರತೆ ಒದಗಿಸುವ ಮಟ್ಟಿಗೆ.

ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲಿನ ಹಲ್ಲೆ ಖಂಡಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪತಾಕೆ ಹಿಡಿದಿತ್ತು. ಆದರೆ ಈಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಮರೆತಂತಿದೆ.

ಇಂದು ಸರ್ಕಾರ್ ಚಿತ್ರದಲ್ಲಿ ಇಂದಿರಾ ಗಾಂಧಿ ಹಾಗೂ ಸಂಜಯ್ ಗಾಂಧಿ ಅವರನ್ನು ಋಣಾತ್ಮಕವಾಗಿ ಬಿಂಬಿಸಲಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಜ್ಯೋತಿರಾದಿತ್ಯ ಶಿಂಧೆ ಆರೋಪಿಸಿದ್ದರು. ಅಲ್ಲದೆ ಅಲ್ಲದೆ ‘ಈ ಚಿತ್ರ ಬಿಡುಗಡೆಗೂ ಮುನ್ನ ಒಮ್ಮೆ ನಮಗೆ ವಿಶೇಷ ಪ್ರದರ್ಶನ ಏರ್ಪಡಿಸಬೇಕು’ ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಧುರ್, ‘ಕಾಂಗ್ರೆಸಿಗರು ಈ ಚಿತ್ರವನ್ನು ನೋಡದೇ ಈ ನಿರ್ಧಾರಕ್ಕೆ ಬರಲು ಹೇಗೆ ಸಾಧ್ಯ? ಈ ಚಿತ್ರ ತುರ್ತು ಪರಿಸ್ಥಿತಿಯ ಸ್ಫೂರ್ತಿಯಿಂದ ನಿರ್ಮಾಣವಾಗಿದ್ದರೂ ಶೇ.70 ರಷ್ಟು ಕಲ್ಪನೆಯಾಧಾರಿತ ಕಥೆಯನ್ನು ಹೊಂದಿದೆ. ನಾನು ಯಾವುದೇ ರಾಜಕೀಯ ನಾಯಕರಿಗೂ ಚಿತ್ರವನ್ನು ತೋರಿಸುವುದಿಲ್ಲ. ಸೆನ್ಸಾರ್ ಮಂಡಳಿಯ ಸೂಚನೆಯಂತೆ 12 ದೃಶ್ಯಗಳಿಗೆ ಕತ್ತರಿ ಹಾಕುವುದರ ಜತೆಗೆ ಚಿತ್ರ ಆರಂಭಕ್ಕೂ ಮುನ್ನ ಚಿತ್ರದ ಪಾತ್ರಗಳು ಕೇವಲ ಕಾಲ್ಪನಿಕ ಎಂಬ ಸೂಚನೆಯನ್ನು ಪ್ರಕಟಿಸುತ್ತೇನೆ’ ಎಂದಿದ್ದರು.

ಆರಂಭದಲ್ಲಿ ಕೇವಲ ಹೇಳಿಕೆಗಳ ಮೂಲಕ ವ್ಯಕ್ತವಾಗುತ್ತಿದ್ದ ವಿರೋಧ ನಂತರ, ಪ್ರತಿಭಟನೆ ಹಾಗೂ ದಾಳಿಯ ಸ್ವರೂಪ ಪಡೆದುಕೊಂಡಿತು. ಮೊನ್ನೆಯಷ್ಟೇ ಚಿತ್ರದ ಕೆಲಸದ ನಿಮಿತ್ತ ಮಧುರ್ ಪುಣೆಗೆ ತೆರಳಿದ್ದರು. ಆಗ ಅವರು ತಂಗಿದ್ದ ಹೊಟೇಲ್ ಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪುಣೆಯ ನಂತರ ಈಗ ನಾಗ್ಪುರದಲ್ಲೂ ಕಾಂಗ್ರೆಸ್ ಬೆಂಬಲಿಗರಿಂದ ಪ್ರತಿಭಟನೆ ವ್ಯಕ್ತವಾಗಿದ್ದು, ಚಿತ್ರದ ಪ್ರಚಾರಕ್ಕಾಗಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತ ಮಧುರ್ ಭಂಡಾರ್ಕರ್, ಕಾರ್ಯಕರ್ತರ ದಾಳಿಯ ಕುರಿತಾಗಿ ಟ್ವಿಟರ್ ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದರು. ‘ಆತ್ಮೀಯ ರಾಹುಲ್ ಗಾಂಧಿ ಅವರೆ, ಪುಣೆಯ ನಂತರ ಈಗ ನಾಗ್ಪುರದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ನನ್ನ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಣಾಮವಾಗಿ ಇಂದು ನಡೆಯಬೇಕಿದ್ದ ಪತ್ರಿಕಾಗೋಷ್ಠಿ ರದ್ದಾಗಿದೆ. ನಿಮ್ಮ ಕಾರ್ಯಕರ್ತರು ಈ ರೀತಿ ಗೂಂಡಾಗಿರಿ ನಡೆಸಲು ನಿಮ್ಮ ಅನುಮತಿ ಇದೆಯಾ? ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸಲು ನೀವು ಅವಕಾಶ ಮಾಡಿಕೊಡುತ್ತೀರಾ?’ ಎಂದು ಟ್ವೀಟ್ ಮಾಡಿದ್ದಾರೆ.

ಇಂದು ಸರ್ಕಾರ್ ಚಿತ್ರದ ವಿರುದ್ಧ ಕಾಂಗ್ರೆಸ್ ನಾಯಕರು ಇಷ್ಟು ದೊಡ್ಡಮಟ್ಟದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದು ಕಾಂಗ್ರೆಸ್ ನ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಲುವು ಏನು ಎಂಬ ಪ್ರಶ್ನೆ ಉದ್ಭವವಾಗಿದೆ. ಕಾರಣ, ‘ಪದ್ಮಾವತಿ’ ಚಿತ್ರದ ವಿವಾದದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕಾರಣ ಕೊಟ್ಟು ಆ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಬೆಂಬಲಿಸಿದ್ದ ಕಾಂಗ್ರೆಸ್ ನಾಯಕರು, ‘ಇಂದು ಸರ್ಕಾರ್’ ಚಿತ್ರವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ದೃಷ್ಟಿಯಲ್ಲಿ ಯಾಕೆ ನೋಡುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.

Leave a Reply