ಪಾಕ್ ಆಕ್ರಮಿತ ಕಾಶ್ಮೀರದ ವ್ಯಕ್ತಿಗೆ ವೈದ್ಯಕೀಯ ವಿಸಾ ನೀಡುವ ಮೂಲಕ ಪಾಕಿಸ್ತಾನಕ್ಕೆ ಸುಷ್ಮಾ ಸ್ವರಾಜ್ ನೀಡುತ್ತಿರುವ ಸಂದೇಶವೇನು?

ಡಿಜಿಟಲ್ ಕನ್ನಡ ಟೀಮ್:

ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ (ಪಿಓಕೆ)ದ ವಿಷಯವಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ. ಅದೇನೆಂದರೆ, ಪಾಕ್ ಆಕ್ರಮಿತ ಕಾಶ್ಮೀರದ ವ್ಯಕ್ತಿಗೆ ಅಗತ್ಯವಿರುವ ವೈದ್ಯಕೀಯ ವಿಸಾವನ್ನು ಭಾರತ ನೇರವಾಗಿ ನೀಡಲಿದೆ ಎಂದು ಸುಷ್ಮಾ ತಿಳಿಸಿದ್ದಾರೆ. ಆ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

24 ವರ್ಷದ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ಪ್ರಜೆ ಪಿತ್ತಜನಕಾಂಗದಲ್ಲಿ ಟ್ಯೂಮರ್ ಸಮಸ್ಯೆಯನ್ನು ಹೊಂದಿದ್ದು ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಬೇಕಿದೆ. ಹೀಗಾಗಿ ಆತ ವೈದ್ಯಕೀಯ ವಿಸಾದ ನಿರೀಕ್ಷೆಯಲ್ಲಿದ್ದಾನೆ. ಕಳೆದವಾರ ಕುಲಭೂಷಣ್ ಜಾಧವ್ ಅವರ ತಾಯಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಸಲುವಾಗಿ ಸಲ್ಲಿಸಲಾದ ಅರ್ಜಿಯನ್ನು ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವ ಸರ್ತಜ್ ಅಜೀಜ್ ಪರಿಗಣಿಸಿರಲಿಲ್ಲ. ಈ ಕುರಿತು ಸುಷ್ಮಾ ಸ್ವರಾಜ್ ಅವರು ಟ್ವಿಟರ್ ನಲ್ಲಿ ಖಂಡಿಸಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ಪ್ರಜೆಗೆ ಭಾರತ ವಿಸಾ ನೀಡುವುದೇ ಎಂಬ ಆತಂಕ ಎದುರಾಗಿತ್ತು.

ಸದ್ಯ ಭಾರತದ ವಿದೇಶಾಂಗ ಸಚಿವಾಲಯದ ಹೊಸ ನೀತಿಯ ಪ್ರಕಾರ, ಪಾಕಿಸ್ತಾನದ ಯಾವುದೇ ಒಬ್ಬ ವ್ಯಕ್ತಿ ಭಾರತಕ್ಕೆ ಆಗಮಿಸಿ ಚಿಕಿತ್ಸೆ ಪಡೆಯಲು ಅಗತ್ಯವಿರುವ ವೈದ್ಯಕೀಯ ವಿಸಾ ಪಡೆಯಬೇಕಾದರೆ, ಅವರು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಮುಖ್ಯಸ್ಥ ಸರ್ತಜ್ ಅಜೀಜ್ ಅವರಿಂದ ಪತ್ರವನ್ನು ಭಾರತಕ್ಕೆ ಕಳುಹಿಸಬೇಕು.

ಆದರೆ ಪಾಕ್ ಆಕ್ರಮಿತ ಕಾಶ್ಮೀರದ ವ್ಯಕ್ತಿಗೆ ಈ ಕಾನೂನು ಅನ್ವಯಿಸುವುದಿಲ್ಲ. ಅಜೀಜ್ ಅವರ ಪತ್ರದ ಇಲ್ಲದಿದ್ದರೂ ಆ ವ್ಯಕ್ತಿಗೆ ಭಾರತ ವಿಸಾ ನೀಡಲಿದೆ ಎಂದು ತಿಳಿಸಿರುವ ಸುಷ್ಮಾ ಸ್ವರಾಜ್, ಆ ಮೂಲಕ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಭಾಗ ಭಾರತಕ್ಕೆ ಸೇರಿದ್ದು ಎಂಬುದನ್ನು ಸಾರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ‘ಪಾಕಿಸ್ತಾನದ ಪ್ರಜೆಗಳಿಗೆ ಅನ್ವಯಿಸುವ ಕಾನೂನು ಪಾಕ್ ಆಕ್ರಮಿತ ಕಾಶ್ಮೀರದ ಪ್ರಜೆಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ, ಭಾಗವೂ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನ ಕೇವಲ ಆ ಪ್ರದೇಶದ ಮೇಲೆ ಕಾನೂನುಬಾಹೀರವಾಗಿ ನಿಯಂತ್ರಣ ಸಾಧಿಸಿದೆ ಅಷ್ಟೇ. ಹೀಗಾಗಿ ಯಾವುದೇ ಪತ್ರವಿಲ್ಲದಿದ್ದರೂ ಭಾರತ ಆ ವ್ಯಕ್ತಿಗೆ ವೈದ್ಯಕೀಯ ವಿಸಾ ನಿಡಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಪ್ರಜೆಗಳಿಗೆ ಭಾರತದಿಂದ ವೈದ್ಯಕೀಯ ವಿಸಾ ಸಿಗದಿದ್ದರೆ ಅದಕ್ಕೆ ಅಜೀಜ್ ಅವರೇ ಕಾರಣ. ಭಾರತ ಪಾಕಿಸ್ತಾನ ಪ್ರಜೆಗಳಿಗೆ ವಿಸಾ ನೀಡಲು ಸಿದ್ಧ ಆದರೆ ಅವರು ಅಜೀಜ್ ಅವರಿಂದ ಪತ್ರವನ್ನು ನೀಡಬೇಕಿದೆ. ಈ ಪತ್ರವನ್ನು ನೀಡಿದರೆ ಭಾರತ ಪಾಕಿಸ್ತಾನಿಗಳಿಗೆ ವಿಸಾ ನೀಡಲಿದೆ ಎಂಬ ಭರವಸೆಯನ್ನು ನೀಡಿದ್ದಾರೆ.

Leave a Reply