ರವಿಶಾಸ್ತ್ರಿ ಇಚ್ಛೆಯಂತೇ ಟೀಂ ಇಂಡಿಯಾ ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್ ಹಾಗೂ ಭರತ್ ಅರುಣ್ ಆಯ್ಕೆ

ಡಿಜಿಟಲ್ ಕನ್ನಡ ಟೀಮ್:

ತಮ್ಮ ಇಚ್ಛೆಯಂತೆ ಟೀಂ ಇಂಡಿಯಾ ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್ ಹಾಗೂ ಭರತ್ ಅರುಣ್ ಅವರನ್ನು ರವಿಶಾಸ್ತ್ರಿ ಆಯ್ಕೆ ಮಾಡಿಕೊಂಡಿದ್ದಾರೆ.

ಕಳೆದವಾರವಷ್ಟೇ ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಿ ನೇಮಕವಾಗಿದ್ದರು. ಇವರ ಆಯ್ಕೆಯ ಜತೆಗೆ ರಾಹುಲ್ ದ್ರಾವಿಡ್ ಹಾಗೂ ಜಹೀರ್ ಖಾನ್ ಅವರನ್ನು ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾರ್ಗದರ್ಶಕರಾಗಿ ಆಯ್ಕೆ ಮಾಡಿಕೊಳ್ಳಲು ಸಲಹಾ ಸಮಿತಿ ನಿರ್ಧರಿಸಿತ್ತು. ಆದರೆ ಸಹಾಯಕ ಕೋಚ್ ಆಗಿ ತಮಗೆ ಸಂಜಯ್ ಬಂಗಾರ್ ಹಾಗೂ ಭರತ್ ಅರುಣ್ ಬೇಕು ಎಂದು ರವಿಶಾಸ್ತ್ರಿ ಪಟ್ಟು ಹಿಡಿದರು. ಇವರ ಪಟ್ಟಿಗೆ ಮಣಿದಿರುವ ಬಿಸಿಸಿಐ ಸಲಹಾ ಸಮಿತಿಯ ಶಿಫಾರಸ್ಸನ್ನು ಕಡೆಗಣಿಸಿ ಈ ಇಬ್ಬರ ನೇಮಕವನ್ನು ಮಾಡಿದೆ. ಇನ್ನು ಆರ್.ಶ್ರೀಧರ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಸಲಾಗಿದೆ.

ಈ ನೇಮಕದ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರವಿಶಾಸ್ತ್ರಿ, ದ್ರಾವಿಡ್ ಹಾಗೂ ಜಹೀರ್ ಖಾನ್ ಅವರನ್ನು ಅಗತ್ಯ ಸಂದರ್ಭಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾರ್ಗದರ್ಶಕರಾಗಿ ಬಳಸಿಕೊಳ್ಳುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಕುರಿತಾಗಿ ಅವರು ಹೇಳಿದಿಷ್ಟು…

‘ಸರಣಿಗಳ ಆಧಾರದ ಮೇಲೆ ಹಾಗೂ ಅಗತ್ಯ ಸಮಯದಲ್ಲಿ ರಾಹುಲ್ ದ್ರಾವಿಡ್ ಹಾಗೂ ಜಹೀರ್ ಖಾನ್ ಅವರ ಮಾರ್ಗದರ್ಶನವನ್ನು ಬಿಸಿಸಿಐ ಪಡೆಯಬಹುದಾಗಿದೆ. ಅವರ ಅನುಭವ ಅತ್ಯಮೂಲ್ಯವಾದುದು. ಆದರೆ ಪೂರ್ಣಪ್ರಮಾಣದ ಸಹಾಯಕ ಸಿಬ್ಬಂದಿ ವಿಷಯದಲ್ಲಿ ಮುಂದಿನ ಎರಡು ವರ್ಷಗಳ ಕಾಲ ಅಂದರೆ 2019ರವರೆಗೆ ನನ್ನೊಂದಿಗೆ ಯಾರು ಕೆಲಸ ಮಾಡಬೇಕು ಎಂಬುದನ್ನು ನಾನು ನಿರ್ಧರಿಸಬೇಕಾಗುತ್ತದೆ. ಕಾರಣ ಈ ಅವಧಿಯಲ್ಲಿ ನಾನು ಅವರೊಂದಿಗೆ ಕೆಲಸ ಮಾಡಬೇಕಾಗುತ್ತದೆ.’

ಇಷ್ಟು ದಿನಗಳ ಕಾಲ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಂಗಾರ್ ಈಗ ಸಹಾಯಕ ಕೋಚ್ ಆಗಿ ಬಡ್ತಿ ಪಡೆದಿದ್ದಾರೆ. ಇನ್ನು ರವಿಶಾಸ್ತ್ರಿ ಅವರು ಟೀಂ ಇಂಡಿಯಾ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಬೌಲಿಂಗ್ ಕೋಚ್ ಆಗಿದ್ದ ಭರತ್ ಅರುಣ್ ಅವರನ್ನು ಪಟ್ಟು ಹಿಡಿದು ಶಾಸ್ತ್ರಿ ತಂಡಕ್ಕೆ ವಾಪಸ್ ಕರೆತಂದಿದ್ದಾರೆ.

ರವಿಶಾಸ್ತ್ರಿ ದ್ರಾವಿಡ್ ಹಾಗೂ ಜಹೀರ್ ಅವರನ್ನು ಮಾರ್ಗದರ್ಶಕರನ್ನಾಗಿ ನೇಮಕ ಮಾಡಿಕೊಳ್ಳುವುದನ್ನು ಸ್ವಾಗತಿಸಿದ್ದರೂ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಮುಂದಿನ ಸರಣಿಗಳಲ್ಲಿ ಈ ಹಿಬ್ಬರು ಮಾಜಿ ಆಟಗಾರರ ಸೇವೆ ಪಡೆಯಲಾಗುತ್ತದೆಯೇ ಅಥವಾ ಕಡೆಗಣಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Leave a Reply