ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾದರೆ ರಾಜ್ಯಸಭಾ ಟಿವಿ ಮೇಲೆ ಎಡಪಂಥಿಯರ ಹಿಡಿತ ತಪ್ಪಲಿದೆಯೇ?

ಡಿಜಿಟಲ್ ಕನ್ನಡ ಟೀಮ್:

ರಾಷ್ಟ್ರಪತಿ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಈಗ ಉಪರಾಷ್ಟ್ರಪತಿಯ ಚುನಾವಣೆ ರಂಗು ಹೆಚ್ಚುತ್ತಿದೆ. ಪ್ರತಿಪಕ್ಷ ಯುಪಿಎ ಅಭ್ಯರ್ಥಿಯಾಗಿರುವ ಗೋಪಾಲಕೃಷ್ಣ ಗಾಂಧಿ ಹಾಗೂ ಆಡಳಿತರೂಧ ಎನ್ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಇಂದು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯಲ್ಲೂ ನಮ್ಮ ಬಳಿ ಹೆಚ್ಚಿನ ಸಂಖ್ಯಾಬಲವಿದ್ದು ವೆಂಕಯ್ಯ ನಾಯ್ಡು ಅವರೆ ಆಯ್ಕೆಯಾಗಲಿದ್ದಾರೆ ಎಂದು ಬಿಜೆಪಿ ವಿಶ್ವಾಸ ಹೊಂದಿದೆ. ಬಿಜೆಪಿ ಜತೆಗೆ ಎನ್ಡಿಎ ಮಿತ್ರಪಕ್ಷಗಳ ಬೆಂಬಲದಿಂದಾಗಿ ಸಂಖ್ಯಾಬಲ ಹೆಚ್ಚಾಗಿದೆ. ಇದರಿಂದ ಉಪರಾಷ್ಟ್ರಪತಿ ಸ್ಥಾನಕ್ಕೆ ವೆಂಕಯ್ಯ ನಾಯ್ಡು ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿ ಹುದ್ದೆ ಅಲಂಕರಿಸುವುದರ ಹಿಂದೆ ಬಿಜೆಪಿಗೆ ಅನೇಕ ಲಾಭದ ಲೆಕ್ಕಾಚಾರಗಳಿವೆ.

ಸದ್ಯ ಬಿಜೆಪಿ ಆಡಳಿತ ಸರ್ಕಾರಕ್ಕೆ ಸವಾಲು ಎದುರಾಗುತ್ತಿರುವುದು ರಾಜ್ಯಸಭೆಯಲ್ಲಿ. ಹೀಗಾಗಿ ಅತ್ಯುತ್ತಮ ಸಂಸದೀಯಪಟು ಹಾಗೂ ಹಿರಿಯ ನಾಯಕರಾಗಿರುವ ವೆಂಕಯ್ಯ ನಾಯ್ಡು ಅವರನ್ನು ಉಪರಾಷ್ಟ್ರಪತಿ ಹುದ್ದೆಯಲ್ಲಿ ಕೂರಿಸಿದರೆ ಬಿಜೆಪಿ ರಾಜ್ಯಸಭೆಯಲ್ಲಿ ಹಿಡಿತ ಸಾಧಿಸಲಿದೆ ಎಂಬುದು ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿರುವ ಲೆಕ್ಕಾಚಾರ. ಆದರೆ ಇದರ ಹೊರತಾಗಿಯೂ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವುದರಿಂದ ಬಿಜೆಪಿಗೆ ಹಲವು ಲಾಭ ಆಗಲಿದೆ. ಅವುಗಳ ಪೈಕಿ ಪ್ರಮುಖವಾದುದ್ದು ರಾಜ್ಯಸಭಾ ಟಿವಿ ವಾಹಿನಿಯ ಮೇಲಿನ ನಿಯಂತ್ರಣ ಹಾಗೂ ಅದರ ಚಿತ್ರಣ ಬದಲಿಸುವುದು.

ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವುದಕ್ಕೂ, ರಾಜ್ಯಸಭಾ ಟಿವಿ ಚಿತ್ರಣ ಬದಲಾಗುವುದಕ್ಕೂ ಹಾಗೂ ಅದರಿಂದ ಬಿಜೆಪಿಗೆ ಆಗುವ ಲಾಭಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಸಂಬಂಧ ಇದೆ. ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವವರು ಈ ರಾಜ್ಯಸಭಾ ವಾಹಿನಿಯ ಮುಖ್ಯಸ್ಥರಾಗಲಿದ್ದಾರೆ.

ದೂರದರ್ಶನದ ವಾಹಿನಿಗಳಂತೆ ರಾಜ್ಯಸಭಾ ಟಿವಿ ಸಹ ದೇಶದ ಹೆಚ್ಚು ಭಾಗವನ್ನು ತಲುಪುತ್ತದೆ. ಅಮೀದ್ ಅನ್ಸಾರಿ ಅವರು ಮೊದಲ ಬಾರಿಗೆ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಅವಧಿಯಲ್ಲಿ ಅಂದರೆ, 2011ರಲ್ಲಿ ರಾಜ್ಯಸಭಾ ಟಿವಿ ಆರಂಭವಾಯಿತು. ಇಷ್ಟು ದಿನಗಳ ಕಾಲ ಈ ವಾಹಿನಿಯಲ್ಲಿ ಪ್ರಮುಖ ಜವಾಬ್ದಾರಿ ಹೊತ್ತವರು ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದವರ ಪೈಕಿ ಹೆಚ್ಚಿನ ಮಂದಿ ಎಡಪಂಥಿಯ ಸಿದ್ಧಾಂತವನ್ನು ಬೆಂಬಲಿಸುವವರೇ ಆಗಿದ್ದರು. ಅಲ್ಲದೆ ರಾಜ್ಯಸಭಾ ಟಿವಿಯಲ್ಲಿ ಬಲಪಂಥಿಯ ಹಾಗೂ ಬಿಜೆಪಿ ಮತ್ತು ಮೋದಿ ವಿರೋಧಿ ನಿಲುವುಗಳನ್ನೇ ಅನುಸರಿಸಲಾಗುತ್ತಿತ್ತು.

ಈಗ ಹಮೀದ್ ಅನ್ಸಾರಿ ಅವರ ಅಧಿಕಾರ ಅವಧಿ ಮುಕ್ತಾಯವಾಗುತ್ತಿದ್ದಂತೆ ಅತಿಥಿ ನಿರೂಪಕರಾದ ಎಂ.ಕೆ ವೇಣು (ಸಂಪಾದಕರು, ದ ವೈರ್), ಭರತ್ ಭೂಷಣ್ (ಸಂಪಾದಕರು, ಕ್ಯಾಚ್), ಗೋವಿಂದರಾಜ್ (ಮಾಜಿ ಸಂಪಾದಕರು ಬ್ಲೂಂಬರ್ಗ್ ಟಿವಿ ಇಂಡಿಯಾ ಹಾಗೂ ಇಂಡಿಯಾಸ್ಪೀಡ್ ಡಾಟ್ ಕಾಮ್) ಹಾಗೂ ಉರ್ಮಿಳೇಶ್ ಸಿಂಗ್ ಅವರನ್ನು ವಾಹಿನಿ ಕಾರ್ಯಕ್ರಮಗಳಿಂದ ದೂರ ಇಡಲಾಗಿದೆ. ಜೂನ್ 1ರಿಂದಲೇ ಕಾರ್ಯಕ್ರಮ ನೀಡುವುದು ಬೇಡ ಎಂದು ಇವರಿಗೆ ಸೂಚಿಸಲಾಗಿದೆ. ಇನ್ನು ನಿರೂಪಕರಾಗಿದ್ದ ಸಿದ್ಧಾರ್ಥ್ ವರದರಾಜನ್ ಅವರಿಗೂ ಏಪ್ರಿಲ್ ತಿಂಗಳಲ್ಲೇ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಈ ಎಲ್ಲರು ವಿದೇಶಾಂಗ ನೀತಿ, ರಾಷ್ಟ್ರೀಯ ಭದ್ರತೆ ಹಾಗೂ ಇತರೆ ವಿಷಯಕ್ಕೆ ಸಂಬಂಧಿಸಿದಂತೆ ವಾರದಲ್ಲಿ ಒಂದೊಂದು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.

ಎಡಪಂಥೀಯ ಸಿದ್ಧಾಂತವನ್ನು ಬೆಂಬಲಿಸುವವರು ವಾಹಿನಿಯಿಂದ ದೂರ ಉಳಿದಿದ್ದು, ರಾಜ್ಯಸಭಾ ಟಿವಿ ಪರಿವರ್ತನೆಯ ಹಂತದಲ್ಲಿದೆ. ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವವರು ಈ ವಾಹಿನಿಯ ಮುಂದಿನ ದಿನಗಳ ನಿಲುವನ್ನು ನಿರ್ಧರಿಸಲಿದ್ದಾರೆ. ಹೀಗಾಗಿ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾದರೆ ಈ ವಾಹಿನಿಯಲ್ಲಿ ಬಲಪಂಥಿಯ ಸಿದ್ಧಾಂತಕ್ಕೆ ಒತ್ತು ನೀಡುವ ಸಾಧ್ಯತೆ ಹೆಚ್ಚಾಗಿದೆ.

1 COMMENT

Leave a Reply