ಹಳದಿ- ಕೆಂಪು ಬಾವುಟವನ್ನು ನಾಡಧ್ವಜವೆಂದು ಕನ್ನಡಿಗರು ಒಪ್ಪಿಕೊಂಡಿರುವಾಗ ಬೇಕಿತ್ತೇ ಈ ವಿವಾದ? ಇದರ ಹಿಂದಿರುವುದು ರಾಜಕೀಯ ತಂತ್ರವೇ?

ಡಿಜಿಟಲ್ ಕನ್ನಡ ಟೀಮ್:

ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಕರ್ನಾಟಕ ನಾಡಧ್ವಜ ವಿಚಾರವಾಗಿ ದೊಡ್ಡ ವಿವಾದ ಸೃಷ್ಟಿಯಾಗಿದೆ. ನಾಡಧ್ವಜಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಕೇಂದ್ರದ ವಾದವಾದರೆ, ಅಧಿಕೃತ ನಾಡಧ್ವಜ ಹೊಂದಲು ಸಂವಿಧಾನದಲ್ಲಿ ಯಾವುದೇ ವಿರೋಧವಿಲ್ಲ ಎಂಬುದು ರಾಜ್ಯ ಸರ್ಕಾರದ ಪ್ರತಿವಾದ.

ಜೂನ್ 6ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಡಧ್ವಜ ಹೊಂದುವ ಬೇಡಿಕೆಗೆ ಸಂಬಂಧಿಸಿದಂತೆ ಕಾನೂನಿನ ವಿಷಯಗಳನ್ನು ಹಾಗೂ ಪರಿಸ್ಥಿತಿಯನ್ನು ಪರಿಶೀಲಿಸಲು 9 ಸದಸ್ಯರ ತಜ್ಞರ ಸಮಿತಿಯನ್ನು ರಚಿಸುವುದಾಗಿ ಸೂಚನೆ ಹೊರಡಿಸಿತ್ತು. ಆಗ ಹೆಚ್ಚು ಚರ್ಚೆಯಾಗದ ವಿಷಯ, ಧಿಡೀರನೆ ನಿನ್ನೆಯಿಂದ ವಿವಾದದ ರೂಪ ಪಡೆದುಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೇಂದ್ರದ ಅಧಿಕಾರದಲ್ಲಿರುವ ಬಿಜೆಪಿ ವರ್ಸಸ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನಡುವಣ ಗುದ್ದಾಟದಂತೆ ಬಿಂಬಿತವಾಗುತ್ತಿದೆ. ರಾಜ್ಯ ಸರ್ಕಾರದ ಈ ನಡೆ ರಾಷ್ಟ್ರಧ್ವಜವನ್ನು ಮೂಲೆಗುಂಪು ಮಾಡುವ ಪ್ರಯತ್ನವಾಗಿದ್ದು, ಕಾನೂನಿನಲ್ಲಿ ಜಮ್ಮು ಕಾಶ್ಮೀರಕ್ಕೆ ಮಾತ್ರ ಪ್ರತ್ಯೇಕ ನಾಡಧ್ವಜ ಹೊಂದಲು ಅವಕಾಶ ಮಾಡಿಕೊಡಲಾಗಿದೆ ಎಂಬ ವಾದ ಕೇಳಿ ಬರುತ್ತಿದೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಎಂದರೆ, ನಾಡಧ್ವಜ ಹೊಂದುವ ಕುರಿತಾದ ಬೇಡಿಕೆಯನ್ನು ಹಿರಿಯ ಪತ್ರಕರ್ತ ಹಾಗೂ ಕನ್ನಡ ಚಳುವಳಿಗಾರರಾದ ಪಾಟೀಲ ಪುಟ್ಟಪ್ಪನವರು 2014ರಲ್ಲಿ ರಾಜ್ಯ ಸರ್ಕಾರದ ಮುಂದಿಟ್ಟಿದ್ದರು. ರಾಜ್ಯ ಸರ್ಕಾರಕ್ಕೆ ನಾಡಧ್ವಜ ಬೇಕು ಎಂಬುದು ಮನವರಿಕೆಯಾಗಲು ರಾಜ್ಯ ಸರ್ಕಾರಕ್ಕೆ ಮೂರು ವರ್ಷಗಳು ಬೇಕಾಯಿತೆ ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ ಇತ್ತೀಚೆಗೆ ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಹೇರಿಕೆ ವಿಚಾರವಾಗಿ ಕರ್ನಾಟಕ ಜನತೆ ಕೇಂದ್ರದ ವಿರುದ್ಧ ತಿರುಗಿ ಬಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಫಲಕಗಳನ್ನು ತೆಗೆದುಹಾಕುವಂತೆ ಮಾಡಲಾಯಿತು. ಈ ವಿಚಾರದಲ್ಲಿ ಜನರು ಕೇಂದ್ರದ ವಿರುದ್ಧ ನಿಂತಿದ್ದನ್ನು ಕಂಡ ರಾಜ್ಯ ಸರ್ಕಾರ, ಈಗ ನಾಡಧ್ವಜದ ಅಸ್ತ್ರವನ್ನು ಬಳಸುತ್ತಿದೆಯೇ? ಅದೂ ಚುನಾವಣೆಯ ವರ್ಷದ ಅವಧಿಯಲ್ಲಿ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ.

ಈ ಎಲ್ಲದರ ನಡುವೆ ಈ ವಿಚಾರವಾಗಿ ಆಡಳಿತರೂಢ ಕಾಂಗ್ರೆಸ್ ನಾಯಕರು ನಾಡಧ್ವಜ ಬೇಕು ಎಂದು ಪಟ್ಟು ಹಿಡಿದರೆ, ಬಿಜೆಪಿ ಹಾಗೂ ಜೆಡಿಎಸ್ ಈ ನಿರ್ಧಾರವನ್ನು ಪ್ರಶ್ನಿಸುತ್ತಿವೆ. ಈ ಕುರಿತಾಗಿ ರಾಜಕೀಯ ನಾಯಕರ ಹೇಳಿಕೆಗಳು ಹೀಗಿವೆ…

ನಾಡಧ್ವಜ ಹೊಂದುವ ವಿಚಾರವಾಗಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಾಡಧ್ವಜ ಹೊಂದುವ ವಿಚಾರ ಕುರಿತಾಗಿ ತಜ್ಞರ ಸಮಿತಿ ನೇಮಕ ಮಾಡಲಾಗಿದೆ. ಈ ಸಮಿತಿಯ ಶಿಫಾರಸ್ಸಿನ ಮೇಲೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಈಗಾಗಲೇ ನಾವು ನಾಡಗೀತೆಯನ್ನು ಹೊಂದಿದ್ದೇವೆ. ಅದೇರೀತಿ ನಾಡಧ್ವಜ ಹೊಂದುವುದರಲ್ಲಿ ಯಾವುದೇ ತಪ್ಪಿಲ್ಲ. ನಾಡಧ್ವಜ ಹೊಂದುವುದರಿಂದ ರಾಷ್ಟ್ರಧ್ವಜಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಕಾನೂನಿನಂತೆ ನಾಡಧ್ವಜವು ರಾಷ್ಟ್ರಧ್ವಜಕ್ಕಿಂತ ಕೆಳ ಮಟ್ಟದಲ್ಲಿ ಹಾರಿಸಲಾಗುವುದು. ಎಲ್ಲದಕ್ಕಿಂತ ಮುಖ್ಯವಾಗಿ ಸಂವಿಧಾನದಲ್ಲಿ ಈ ರೀತಿಯ ಧ್ವಜ ಹೊಂದಲು ಯಾವುದೇ ನಿಷೇಧ ಹೇರಿಲ್ಲ’ ಎಂದಿದ್ದಾರೆ.

ಇತ್ತ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ‘ರಾಜ್ಯ ಸರ್ಕಾರ ನಾಡಧ್ವಜಕ್ಕಾಗಿ ತಜ್ಞರ ಸಮಿತಿ ರಚನೆ ಮಾಡುವ ಮೂಲಕ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾದ ಹೆಜ್ಜೆ ಇಡುತ್ತಿದೆ. ಮುಂದಿನ ವರ್ಷ ಚುನಾವಣೆ ಇರುವ ಹಿನ್ನೆಲೆಯಲ್ಲಿ ಕನ್ನಡದ ಸ್ವಾಭಿಮಾನವನ್ನು ತಮ್ಮ ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ‘ಇತ್ತೀಚಿನ ದಿನಗಳಲ್ಲಿ ಸರ್ಕಾರದ ಮುಖಭಂಗಕ್ಕೆ ಕಾರಣವಾಗಿದ್ದ ವಿವಾದಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಪ್ರಯತ್ನ ನಡೆಸುತ್ತಿದೆ’ ಎಂದಿದ್ದಾರೆ.

ನಾಡಧ್ವಜ ವಿವಾದದ ಮೂಲದಲ್ಲಿರೋದು ಬಿಜೆಪಿ…

ಕನ್ನಡಿಗರಿಂದ ಭಾವನಾತ್ಮಕವಾಗಿ ಒಪ್ಪಿಕೊಳ್ಳಲಾಗಿರುವ ನಾಡಧ್ವಜಕ್ಕೆ ಮಾನ್ಯತೆ ಬೇಕು ಎಂಬ ವಿವಾದದ ಮೂಲ ಎಲ್ಲಿಂದ ಹುಟ್ಟುಕೊಂಡಿತು ಎಂಬುದನ್ನು ನೋಡುವುದಾದರೆ, ಈ ವಿವಾದದ ಮೂಲದಲ್ಲಿರೋದು ಬಿಜೆಪಿ.

2012ರಲ್ಲಿ ಡಿ.ವಿ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಹಳದಿ ಕೆಂಪು ಬಾವುಟಕ್ಕೆ ಅಧಿಕೃತ ಒಪ್ಪಿಗೆ ನೀಡಿ ಈ ಧ್ವಜವನ್ನು ಎಲ್ಲ ಸರ್ಕಾರಿ ಕಟ್ಟಡಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಈ ನಾಡಧ್ವಜವನ್ನು ಕಡ್ಡಾಯವಾಗಿ ಹಾರಿಸಬೇಕು ಎಂದು ಸೂಚನೆ ಹೊರಡಿಸಿದರು. ನಂತರ ಇದು ಸರ್ಕಾರದಿಂದ ಅಧಿಕೃತವಾಗುತ್ತಿದ್ದಂತೆ ಕನ್ನಡ ರಕ್ಷಣಾ ವೇದಿಕೆ ಮುಖ್ಯಸ್ಥ ಟಿ.ಎ ನಾರಾಯಣ ಗೌಡ ಅವರು ನಾಡಧ್ವಜವನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಮಾಡಿ ಮತ್ತೊಬ್ಬ ಕನ್ನಡ ಪರ ಹೋರಾಟಗಾರರಾದ ಪ್ರವೀಣ್ ಶೆಟ್ಟಿ ಅವರು ಹೈಕೋರ್ಟ್ ಮೆಟ್ಟಿಲೇರಿದರು.

ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್, ಕೇವಲ ರಾಷ್ಟ್ರಧ್ವಜವನ್ನು ಮಾತ್ರ ಅಧಿಕೃತವಾಗಿ ಹಾರಾಟ ನಡೆಸಬೇಕು ಎಂದು ಕಾನೂನಿರುವಾಗ ನಾಡಧ್ವಜವನ್ನು ಹೊಂದಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ಆಗ ಪ್ರತಿಕ್ರಿಯೆ ನೀಡಿದ್ದ ರಾಜ್ಯಸರ್ಕಾರ ನಾಡಧ್ವಜ ಹಾರಾಟವನ್ನು ಕಡ್ಡಾಯಗೊಳಿಸುವುದಿಲ್ಲ ಎಂದು ಹೇಳಿ, ಅಕ್ಟೋಬರ್ 24 2012ರಂದು ತನ್ನ ಸೂಚನೆಯನ್ನು ವಾಪಸ್ ಪಡೆಯಲಾಯಿತು. ಆಗ ಹುಟ್ಟಿಕೊಂಡ ನಾಡಧ್ವಜ ಮಾನ್ಯತೆ ಬೇಡಿಕೆಗೆ ಈಗ ಕಾಂಗ್ರೆಸ್ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿ, ಇದರಿಂದ ರಾಜಕೀಯ ಲಾಭ ಪಡೆಯಲು ಮುಂದಾಗಿದೆ.

ಹಳದಿ ಕೆಂಪು ಬಾವುಟ ಬಳಕೆ ನಿನ್ನೆ ಮೊನ್ನೆಯಿಂದಲ್ಲ…

ಈ ಎಲ್ಲಾ ಬೆಳವಣಿಗೆಗಳ ನಡುವೆ ನಾವು ನಾಡಧ್ವಜದ ಇತಿಹಾಸವನ್ನು ನೋಡುವುದಾದರೆ, ಸದ್ಯ ಕರ್ನಾಟಕದ ಧ್ವಜ ಎಂದು ಪರಿಗಣಿಸಲಾಗುತ್ತಿರುವ ಹಳದಿ ಕೆಂಪು ಬಾವುಟವನ್ನು 1960ರಿಂದಲೇ ನಾಡಧ್ವಜವಾಗಿ ಬಳಸಲಾಗುತ್ತಿದೆ. ಬೇರೆ ಭಾಷೆಯ ಚಿತ್ರಗಳ ಹಾವಳಿ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕನ್ನಡ ಪರ ಚಳುವಳಿಗಾರರು ಈ ಬಾವುಟವನ್ನು ಮೊದಲು ಬಳಿಸಿದರು. ಅಲ್ಲಿಂದ ಇಲ್ಲಿಯವರೆಗೂ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ಇದು ನಾಡಧ್ವಜವಾಗಿ ಹಚ್ಚೆಯೊತ್ತಿದೆ. ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಆಚರಿಸುವ ಕನ್ನಡ ರಾಜ್ಯೋತ್ಸವದದಿಂದ ಹಿಡಿದು, ಕನ್ನಡ ಪರ ಪ್ರತಿಭಟನೆ ಹಾಗೂ ರಾಜ್ಯದ ಕುರಿತ ಯಾವುದೇ ಕಾರ್ಯಕ್ರಮವಿದ್ದರು ಕೆಂಪು ಹಳದಿ ಬಾವುಟವನ್ನೇ ನಾಡಧ್ವಜವನ್ನಾಗಿ ಬಳಸಲಾಗುತ್ತಿದೆ.

ಕನ್ನಡಿಗರು ಒಪ್ಪಿಕೊಂಡಿರುವ ಧ್ವಜಕ್ಕೆ ಮಾನ್ಯತೆಯ ಅಗತ್ಯ ಇದೆಯೇ?

ಇಷ್ಟು ದಿನಗಳ ಕಾಲ ಬಹುತೇಕರಿಗೆ ನಮ್ಮ ನಾಡಧ್ವಜ ಅಧಿಕೃತ ಮಾನ್ಯತೆ ಹೊಂದಿಲ್ಲ ಎಂಬ ಅಂಶ ಗೊತ್ತಿಲ್ಲದಿದ್ದರೂ ಅದನ್ನು ನಾಡಧ್ವಜವೆಂದು ಒಪ್ಪಿಕೊಳ್ಳಲಾಗಿದೆ. ಹೀಗಿರುವಾಗ ಚುನಾವಣೆಯ ವರ್ಷದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜಕೀಯ ಪಕ್ಷಗಳು ಮಾಡುತ್ತಿರುವ ಆರೋಪ ಪ್ರತ್ಯಾರೋಪಗಳು ಈ ಭಾವುಟದ ಘನತೆಯನ್ನು ಹೆಚ್ಚಿಸುವುದಿಲ್ಲ. ಬದಲಾಗಿ ಕುಗ್ಗಿಸುತ್ತದೆ ಎಂಬುದನ್ನು ಮರೆಯಬಾರದು. ಕಳೆದ ಕಳೆದ ಐದು ದಶಕಗಳಿಂದ ಈ ಬಾವುಟ ಬಳಕೆಗೆ ಯಾರ ವಿರೋಧವೂ ವ್ಯಕ್ತವಾಗಿಲ್ಲ, ಯಾರು ಪ್ರಶ್ನಿಸಿಲ್ಲ. ಹೀಗಾಗಿ ಮಾನ್ಯತೆ ನೀಡುತ್ತೇವೆ ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ ಪಟ್ಟು ಹಿಡಿದಿರುವುದಾದರೂ ಏಕೆ? ಮತ್ತೊಂದೆಡೆ ಇಷ್ಟು ವರ್ಷಗಳ ಕಾಲ ಈ ಧ್ವಜ ಬಳಕೆಯಾಗುತ್ತಿರುವಾಗ ರಾಷ್ಟ್ರಧ್ವಜಕ್ಕೆ ಆಗದ ಧಕ್ಕೆ, ನಾಡಧ್ವಜಕ್ಕೆ ಮಾನ್ಯತೆ ನೀಡುವುದರಿಂದ ಆಗುವುದಿಲ್ಲ. ಆದರೂ ಬಿಜೆಪಿ ಈ ವಿಚಾರವಾಗಿ ವಿರೋಧ ವ್ಯಕ್ತಪಡಿಸುತ್ತಿರುವುದಾದರೂ ಏಕೆ? ಎಂಬ ಪ್ರಶ್ನೆಗಳಿಗೆ ಸಿಗುವ ಉತ್ತರ ಅದೇ ರಾಜಕೀಯ ಲಾಭ. ನಾಡಧ್ವಜಕ್ಕೆ ಮಾನ್ಯತೆ ನೀಡುವುದರಿಂದಾಗಲಿ ಅಥವಾ ಬಿಡುವುದರಿಂದಾಗಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಕಾರಣ ಪ್ರತಿಯೊಬ್ಬ ಕನ್ನಡಿಗ ಹಳದಿ ಕೆಂಪು ಬಾವುಟವನ್ನು ನಾಡಧ್ವಜವನ್ನಾಗಿ ಒಪ್ಪಿಕೊಂಡಿದ್ದಾಗಿದೆ. ಕನ್ನಡ ಭಾಷೆ ಉಳಿಯಬೇಕೆಂದರೆ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಬೇಕು, ಹೆಚ್ಚಾಗಿ ಬಳಸಬೇಕು. ಅದನ್ನು ಬಿಟ್ಟು ಕನ್ನಡಿಗರ ಸ್ವಾಭಿಮಾನವನ್ನು ತಮ್ಮ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವುದರಿಂದ ಯಾವುದೇ ಲಾಭವಿಲ್ಲ.

Leave a Reply