ಟೀಂ ಇಂಡಿಯಾ ಮಾರ್ಗದರ್ಶಕರಾಗಬೇಕಂತೆ ಸಚಿನ್ ತೆಂಡೂಲ್ಕರ್, ಈಗ ಬಿಸಿಸಿಐನಲ್ಲೇನಿದ್ದರೂ ರವಿಶಾಸ್ತ್ರಿಯದ್ದೇ ಹವಾ!

ಡಿಜಿಟಲ್ ಕನ್ನಡ ಟೀಮ್:

ಸದ್ಯ ಟೀಂ ಇಂಡಿಯಾಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಬಿಸಿಸಿಐ ಅಧಿಕಾರಿಗಳ ನಿರ್ಧಾರಕ್ಕಿಂತ ತಂಡದ ಕೋಚ್ ಆಯ್ಕೆಯಾಗಿರುವ ರವಿಶಾಸ್ತ್ರಿ ಅವರ ನಿರ್ಧಾರಕ್ಕೆ ತೂಕ ಹೆಚ್ಚಾದಂತೆ ಕಾಣುತ್ತಿದೆ. ಟೀಂ ಇಂಡಿಯಾಗೆ ಅರ್ಜಿ ಸಲ್ಲಿಸುವಂತೆ ಯಾವಾಗ ಬಿಸಿಸಿಐ ಅಧಿಕಾರಿಗಳು ರವಿಶಾಸ್ತ್ರಿ ಅವರನ್ನು ಕೇಳಿಕೊಂಡರೋ ಅಲ್ಲಿಂದ ಆರಂಭವಾಯ್ತು ಬಿಸಿಸಿಐನಲ್ಲಿ ರವಿಶಾಸ್ತ್ರಿ ಹವಾ.

ತನಗೆ ಕೋಚ್ ಹುದ್ದೆ ನೀಡುವುದು ಖಚಿತ ಎಂದರೆ ಮಾತ್ರ ಅರ್ಜಿ ಹಾಕುತ್ತೇನೆ ಎಂಬ ಷರತ್ತಿನಿಂದ ಆರಂಭವಾದ ರವಿಶಾಸ್ತ್ರಿಯ ಬಿಗಿ ಹಿಡಿತ, ನಂತರ ಬಿಸಿಸಿಐ ಸಲಹಾ ಸಮಿತಿಯ ಶಿಫಾರಸ್ಸು ವಿರೋಧಿಸಿ, ದ್ರಾವಿಡ್ ಹಾಗೂ ಜಹೀರ್ ಅವರನ್ನು ಕಡೆಗಣಿಸಿ ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್ ಹಾಗೂ ಭರತ್ ಅರುಣ್ ಆಯ್ಕೆ ಮಾಡಿಕೊಳ್ಳಲಾಯಿತು. ಇನ್ನು ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ಅವರಿಗೆ ನೀಡಲಾಗುತ್ತಿದ್ದ ವೇತನಕ್ಕಿಂತ 1.5 ಕೋಟಿ ಹೆಚ್ಚುವರಿ ಸಂಭಾವನೆ ಬೇಕು ಎಂಬ ಬೇಡಿಕೆಗೂ ಬಿಸಿಸಿಐ ಅಸ್ತು ಎನ್ನುವವರೆಗೂ ರವಿಶಾಸ್ತ್ರಿ ಹೇಳಿದಂತೆಯೇ ಬಿಸಿಸಿಐ ನಡೆದಿದೆ. ಈಗ ಅದರ ಮುಂದುವರಿದ ಭಾಗವಾಗಿ ಮುಂದಿನ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ಬ್ಯಾಟಿಂಗ್ ಮಾರ್ಗದರ್ಶಕರಾಗಬೇಕು ಎಂಬ ಹೊಸ ದಾಳ ಉರುಳಿಸಿದ್ದಾರೆ.

ನಿನ್ನೆಯಷ್ಟೇ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ದ್ರಾವಿಡ್ ಹಾಗೂ ಜಹೀರ್ ಅವರನ್ನು ಟೀಂ ಇಂಡಿಯಾ ವಿದೇಶಿ ಪ್ರವಾಸದ ವೇಳೆ ಮಾರ್ಗದರ್ಶಕರನ್ನಾಗಿ ಬಳಸಿಕೊಳ್ಳುವ ನಿರ್ಧಾರ ಸ್ವಾಗತಿಸುವುದಾಗಿ ತಿಳಿಸಿದ್ದ ರವಿಶಾಸ್ತ್ರಿ ಈಗ ಸಚಿನ್ ಅವರನ್ನು ತರುವ ಆಲೋಚನೆಯಲ್ಲಿದ್ದಾರೆ. ದ್ರಾವಿಡ್ ಬದಲು ಸಚಿನ್ ಮಾರ್ಗದರ್ಶಕರಾದರೆ ಅದೂ ಒಳ್ಳೆಯದೇ. ಸಚಿನ್ ಅನುಭವ ಹಾಗೂ ಮಾರ್ಗದರ್ಶನ ಕೂಡ ಟೀಂ ಇಂಡಿಯಾ ಪಾಲಿಗೆ ಅಮೂಲ್ಯವಾದದ್ದೇ. ಹೀಗಾಗಿ ಈ ನಿರ್ಧಾರದಲ್ಲಿ ತಪ್ಪಿಲ್ಲ. ಆದರೆ, ಸಲಹಾ ಸಮಿತಿಯ ಶಿಫಾರಸನ್ನು ರವಿಶಾಸ್ತ್ರಿ ಹೇಗೆ ಹಂತ ಹಂತವಾಗಿ ಕಸದಬುಟ್ಟಿಗೆ ಎಸೆದು ಟೀಂ ಇಂಡಿಯಾ ವಿಷಯದಲ್ಲಿ ತನ್ನ ಹಿಡಿತ ಸಾಧಿಸುತ್ತಿದ್ದಾರೆ ಎಂಬುದು ಗಮನಿಸಬೇಕಾದ ಅಂಶ.

ಸೌರವ್ ಗಂಗೂಲಿ ವಿರುದ್ಧ ಅಸಮಾಧಾನ ಹೊಂದಿರುವ ರವಿಶಾಸ್ತ್ರಿ ಈ ಹಿಂದಿನಿಂದಲೂ ಸಲಹಾ ಸಮಿತಿ ವಿರುದ್ಧ ಮಾತನಾಡಿದ್ದೇ ಹೆಚ್ಚು. ಕಳೆದ ವರ್ಷ ಟೀಂ ಇಂಡಿಯಾ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ತಾನು ಕೋಚ್ ಆಗಿ ಆಯ್ಕೆಯಾದರೆ, ಸಲಹಾ ಸಮಿತಿ ನನ್ನ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಷರತ್ತನ್ನು ಹಾಕಿದ್ದರು. ಈಗ ಸಚಿನ್ ಅವರನ್ನು ಸಲಹಾ ಸಮಿತಿಯಿಂದ ಹೊರ ತಂದು ಮಾರ್ಗದರ್ಶಕ ಸ್ಥಾನದಲ್ಲಿ ಕೂರಿಸಿ ನಂತರ ಸಲಹಾ ಸಮಿತಿ ವಿರುದ್ಧ ಮತ್ತಷ್ಟು ಮೂಲೆಗುಂಪು ಮಾಡುವ ಲೆಕ್ಕಾಚಾರ ರವಿಶಾಸ್ತ್ರಿಯವರದ್ದಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ.

Leave a Reply