ಸಂಸತ್ತಿನಲ್ಲೂ ಹೊರಗಡೆಯಲ್ಲೂ ಹಿಂದುಗಳ ಭಾವನೆಗಳು ಮಾತ್ರವೇ ಪ್ರತಿಪಕ್ಷ ಪಾಳೆಯಕ್ಕೆ ಹಗುರವಾಗುತ್ತಿರುವುದೇಕೆ?

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಮುಂಗಾರು ಅಧಿವೇಶನದಲ್ಲಿ ಇತ್ತೀಚಿನ ಥಳಿತ ಪ್ರಕರಣಗಳ ಮೇಲೆ ಚರ್ಚೆಯಾಗುತ್ತಿತ್ತು. ಈ ವಿದ್ಯಮಾನಗಳಲ್ಲಿ ಸರ್ಕಾರ ಕ್ರಮವನ್ನೇ ಕೈಗೊಂಡಿಲ್ಲ ಎಂದು ಆರೋಪಿಸುವುದು ಸರಿಯಲ್ಲ ಎಂದು ಸರ್ಕಾರದ ಪರವಾಗಿ ಮುಖ್ತಾರ್ ಅಬ್ಬಾಸ್ ನಖ್ವಿ ಸಮಜಾಯಿಷಿ. ಈ ಚರ್ಚಾಹಂತದಲ್ಲಿ ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್ವಾಲ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು ತಾವು ‘ಧರ್ಮಶಾಲಾ’ ಎಂಬ ಪುಸ್ತಕದಲ್ಲಿ ಓದಿದ್ದೆ ಎನ್ನಲಾದ ಕೆಲವು ಸಾಲುಗಳನ್ನು ವಿವರಿಸಿದರು. ಅದರಲ್ಲಿ ಹಿಂದೂ ದೇವತೆಗಳು ಹಾಗೂ ಸರಾಯಿಯನ್ನು ಸಮೀಕರಿಸಲಾಗಿತ್ತು. ಇದರಿಂದ ಹಿಂದೂ ಧರ್ಮಕ್ಕೆ ಅಪಮಾನ ಎಸಗಲಾಗಿದೆ. ಇದು ಹಿಂದೂ ಧರ್ಮದ ಭಾವನೆಗೆ ಧಕ್ಕೆಯಾಗಿದೆ ಎಂದು ಬಿಜೆಪಿ ಸೇರಿದಂತೆ ಇತರೆ ನಾಯಕರು ಲೋಕಸಭೆಯಲ್ಲಿ ಪ್ರತಿಭಟನೆ ಆರಂಭಿಸಿದರು.

ಸದನದಲ್ಲಿ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಸಭಾಪತಿಗಳು, ನರೇಶ್ ಅಗರ್ವಾಲ್ ಅವರಿಗೆ ತಾವು ಯಾವುದೇ ಒಂದು ಧರ್ಮದ ವಿರುದ್ಧವಾಗಿ ಅಥವಾ ಭಾವನೆಗೆ ಧಕ್ಕೆ ತರುವಂತೆ ಮಾತನಾಡಿದ್ದರೆ ತಮ್ಮ ಮಾತನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟರು. ಆದರೆ ಈ ಕುರಿತ ತೀರ್ಮಾನವನ್ನು ಸಭಾಪತಿಗೆ ಬಿಡುವುದಾಗಿ ನರೇಶ್ ಅಗರ್ವಾಲ್ ತಿಳಿಸಿದರು.

ಈ ಕುರಿತು ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಗರ್ವಾಲ್ ಅವರು ಇದೇ ಹೇಳಿಕೆಯನ್ನು ಸದನದ ಹೊರಗೆ ಆಡಿದ್ದರೆ, ಕಾನೂನು ವಿಚಾರಣೆಗೆ ಒಳಪಡಬೇಕಾಗಿತ್ತು. ಅವರ ಹೇಳಿಕೆಯ ಹಿಂದಿರುವ ಗಂಭೀರತೆಯನ್ನು ಸಭಾಪತಿಗಳು ಅರಿಯಬೇಕು. ಹೀಗಾಗಿ ಆ ಹೇಳಿಕೆಯನ್ನು ದಾಖಲೆಗಳಿಂದ ತೆಗೆದುಹಾಕಬೇಕು ಹಾಗೂ ಅಗರ್ವಾಲ್ ಅವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಈ ವೇಳೆ ಗಲಾಟೆ ಹೆಚ್ಚಿದ ಪರಿಣಾಮ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. ಆದರೂ ಸದನದಲ್ಲಿ ಗಲಾಟೆ ಮುಂದುವರಿಯುತ್ತಲೇ ಸಾಗಿತು.

ಈ ಬಗ್ಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿನ ಆನಂದ ಶರ್ಮಾ ಅವರ ಮಾತುಗಳು ನಾಜೂಕಿನದಾಗಿದ್ದವು., ‘ಈ ಹಿಂದೆ ಜೆಎನ್ಯು ವಿಚಾರದಲ್ಲಿ ಸಂಸದರೊಬ್ಬರು ಸದನದಲ್ಲಿ ಆಡಿದ ಮಾತಿಗೆ ಕ್ಷಮೆ ಕೇಳುವಂತೆ ಹೇಳಿದ್ದೆವು. ಅದನ್ನೇನೂ ಅವರು ಮನ್ನಿಸಿರಲಿಲ್ಲ. ಹೀಗಾಗಿ ಕ್ಷಮೆ ಸುತ್ತಲೇ ವಿಷಯ ಬೆಳೆಸುವುದು ಸರಿಯಲ್ಲ. ಇದನ್ನು ಎಲ್ಲರೂ ಕೂತು ಪರಿಹರಿಸಿಕೊಳ್ಳೋಣ. ಆಡಳಿತದಲ್ಲಿರುವವರು ಮಾತ್ರ ಧರ್ಮ ರಕ್ಷಕರು ಹಾಗೂ ನಾವೆಲ್ಲ ಧರ್ಮ ವಿರೋಧಿಗಳು ಎಂಬಂತೆ ಮಾತನಾಡುವುದು ಸರಿಯಲ್ಲ’ ಎಂದಿದ್ದಾರೆ.

ಹೀಗೆ ಪ್ರತಿಬಾರಿಯೂ ಹಿಂದೂ ಧರ್ಮದ ಕುರಿತಾಗಿ ಅವಹೇಳನಕಾರಿ ಹೇಳಿಕೆಗಳು ಬಂದು ಅದನ್ನು ವಿರೋಧಿಸುವ ಸಮಯದಲ್ಲಿ ಸಹಜವಾಗಿಯೇ ಬುದ್ದಿಜೀವಿ ಎಂದು ಗುರುತಿಸಿಕೊಂಡವರು, ‘ಕೇವಲ ಇಂತಹ ಹೇಳಿಕೆಗಳಿಂದ ಹಿಂದೂ ಧರ್ಮಕ್ಕೆ ಧಕ್ಕೆಯಾಗುತ್ತದೆಯೇ. ಹಿಂದೂ ಧರ್ಮ ಅಷ್ಟು ದುರ್ಬಲವೇ? ಇಂತಹ ಹೇಳಿಕೆಗಳನ್ನು ನಿರ್ಲಕ್ಷಿಸಬೇಕು’ ಎಂಬ ಉಪದೇಶಗಳನ್ನು ನೀಡುತ್ತಾರೆ. ಆದರೆ, ಇತ್ತೀಚೆಗೆ ಪಶ್ಚಿಮ ಬಂಗಾಳದ ಯುವಕನೊಬ್ಬ ಮುಸ್ಲಿಂ ಧರ್ಮದ ವಿರುದ್ಧವಾಗಿ ಫೇಸ್ ಬುಕ್ ಬರಹ ಪ್ರಕಟಿಸಿದ ಎಂಬ ಕಾರಣಕ್ಕೆ ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಬೇರೆ ಧರ್ಮದ ವಿರುದ್ಧದ ಹೇಳಿಕೆಗಳ ಪ್ರಕರಣಗಳಲ್ಲಿ ಬುದ್ಧಿಜೀವಿಗಳು ಏಕೆ ಈ ಸಲಹೆ ನೀಡುವುದಿಲ್ಲ. ನ್ಯಾಯ ಎಂಬುದು ಎಲ್ಲರಿಗೂ ಒಂದೇ ಆಗಿರಬೇಕಲ್ಲವೇ?

ಒಂದು ಕಾಮೆಂಟಿನಿಂದ ಇಸ್ಲಾಂ ಶಿಥಿಲವಾಗುತ್ತದೆಯೇ ಎಂದು ಪ್ರಶ್ನಿಸುವ ಧೈರ್ಯ ರಾಜಕಾರಣಿಗಳಿಗೆ ಹಾಗೂ ಬುದ್ಧಿಜೀವಿಗಳಿಗೆ ಎಲ್ಲಿಯವರೆಗೆ ಬರುವುದಿಲ್ಲವೋ, ಅಲ್ಲಿಯವರೆಗೆ ಅವರ್ಯಾರಿಗೂ ಹಿಂದುಗಳಿಗೆ ‘ಸಹಿಷ್ಣುತೆ’ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಪಾಠ ಹೇಳುವ ಯೋಗ್ಯತೆ ಬರುವುದಿಲ್ಲ.

Leave a Reply