ದೇಶದ್ರೋಹದ ಕಾಯ್ದೆ ಬೇಕಿಲ್ಲ ಎಂಬ ಉದಾರವಾದಿಗಳ ಆಡಳಿತದಲ್ಲೇ ಅತಿ ಹೆಚ್ಚು ಬಳಕೆ!

ಡಿಜಿಟಲ್ ಕನ್ನಡ ಟೀಮ್:

ದೇಶದ್ರೋಹ ಕಾಯ್ದೆ ಬೇಕಿಲ್ಲ ಎಂದು ಉದಾರವಾದಿಗಳು ವಾದ ಮಂಡಿಸುತ್ತಿರುವ ಸಂದರ್ಭದಲ್ಲಿ ಕಳೆದ ಮೂರು ವರ್ಷದಲ್ಲಿ ದೇಶದಾದ್ಯಂತ ಒಟ್ಟು 105 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದು, ಒಟ್ಟು 165 ಮಂದಿಯನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಈ ಪ್ರಕರಣಗಳ ಪೈಕಿ ಜೆಡಿಯು, ಆರ್ ಜೆಡಿ ಹಾಗೂ ಕಾಂಗ್ರೆಸ್ ಮಹಾಮೈತ್ರಿ ಸರ್ಕಾರ ಅಸ್ಥಿತ್ವದಲ್ಲಿರುವ ಬಿಹಾರದಲ್ಲೇ 68 ಮಂದಿ ಬಂಧಿತರಾಗಿದ್ದು, ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ.

ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಹಂಸರಾಜ್ ಅಹಿರ್ ಬುಧವಾರ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊನ ವರದಿಯನ್ನು ನೀಡಿದರು. ಈ ದಾಖಲೆಗಳ ಪ್ರಕಾರ ಬಿಹಾರ (68), ಜಾರ್ಖಂಡ್ (18), ಹರ್ಯಾಣ (15) ಹಾಗೂ ಪಂಜಾಬ್ (10) ರಾಜ್ಯಗಳಲ್ಲಿ ಒಟ್ಟು 111 ಮಂದಿಯನ್ನು ಬಂಧಿಸಲಾಗಿದೆ. ಈ ರಾಜ್ಯಗಳ ಪೈಕಿ ಜಾರ್ಖಂಡ್ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಆಡಳಿತದಲ್ಲಿದೆ.

ಉದಾರವಾದ ಮಂತ್ರ ಪಠಿಸುವ ರಾಜಕೀಯ ಪಕ್ಷಗಳು ದೇಶದ್ರೋಹದ ಕಾಯ್ದೆ ಅಗತ್ಯವಿಲ್ಲ ಎಂದು ಹೇಳುತ್ತಿರುವುದು ಒಂದೆಡೆಯಾದರೆ, ಇದೇ ಉದಾರವಾದಿಗಳು ಆಡಳಿತದಲ್ಲಿರುವ ರಾಜ್ಯಗಳಲ್ಲೇ ಈ ಕಾಯ್ದೆಯಡಿ ಹೆಚ್ಚಿನ ಮಂದಿಯನ್ನು ಬಂಧಿಸಲಾಗಿದೆ. ಬಿಹಾರದಲ್ಲಿ 68 ಮಂದಿಯನ್ನು ಬಂಧಿಸಲಾಗಿದ್ದು, ಈ ಪೈಕಿ ಹೆಚ್ಚಿನವರನ್ನು 2014 ಮತ್ತು 2015ರಲ್ಲಿ ಬಂಧಿಸಲಾಗಿದೆ. ಈ ಎರಡು ವರ್ಷಗಳ ಅವಧಿಯಲ್ಲಿ 53 ಮಂದಿಯ ಈ ಪ್ರಕರಣದಲ್ಲಿ ಬಂಧಿತರಾಗಿದ್ದು, ಕೇವಲ 2 ಮಾತ್ರ ತಪ್ಪಿತಸ್ಥರಾಗಿದ್ದಾರೆ.

ಉಳಿದಂತೆ ಕೇಂದ್ರ ಬಿಜೆಪಿ ಸರ್ಕಾರದ ನಿಯಂತ್ರಣದಲ್ಲಿ ದೆಹಲಿ ಪೊಲೀಸರು 2016ರಲ್ಲಿ ನಾಲ್ವರನ್ನು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಿದರೆ, ಎಡಪಕ್ಷ ಅಧಿಕಾರದಲ್ಲಿರುವ ಕೇರಳದಲ್ಲಿ 6 ಮಂದಿ, ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಹಾಗೂ ತೆಲುಗು ದೇಶಂ ಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದಲ್ಲಿ ಒಬ್ಬೊಬ್ಬರನ್ನು ಬಂಧಿಸಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಜಾರ್ಖಂಡ್ ನಲ್ಲಿ 18 ಹಾಗೂ ಹರ್ಯಾಣದಲ್ಲಿ 15 ಮಂದಿಯನ್ನು ದೇಶದ್ರೋಹ ಆರೋಪದ ಮೇಲೆ ಬಂಧಿಸಲಾಗಿದೆ. ಅಚ್ಚರಿಯಸಂಗತಿ ಏನೆಂದರೆ, ಜಾರ್ಖಂಡ್ನಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗ 2015 ಮತ್ತು 2016ರಲ್ಲಿ ಯಾವುದೇ ಬಂಧನವಾಗಿಲ್ಲ. ಆದರೆ ಹರ್ಯಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 2015 ಮತ್ತು 2016ರಲ್ಲಿ ಒಟ್ಟು 15 ಮಂದಿಯನ್ನು ಈ ಕಾಯ್ದೆಯಡಿ ಬಂಧಿಸಲಾಗಿದೆ. ಮಿಲಿಟರಿ ಕಾರ್ಯಾಚರಣೆಗಳು ನಡೆಯುವ ರಾಜ್ಯವಾದ ಜಮ್ಮು ಕಾಶ್ಮೀರದಲ್ಲೇ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ತೀರಾ ಕಡಿಮೆ ಇದೆ. 2014 ಮತ್ತು 2015ರಲ್ಲಿ ಕಣಿವೆ ರಾಜ್ಯದಲ್ಲಿ ದೇಶದ್ರೋಹದ ಆರೋಪದಲ್ಲಿ ಯಾವುದೇ ವ್ಯಕ್ತಿಯ ಬಂಧನವಾಗಿಲ್ಲ. 2015ರಲ್ಲಿ ಮಾತ್ರ ಒಬ್ಬ ವ್ಯಕ್ತಿಯನ್ನು ದೇಶದ್ರೋಹ ಆರೋಪದಡಿ ಬಂಧಿಸಲಾಗಿತ್ತು.

‘2014 ರಲ್ಲಿ 47 ದೇಶದ್ರೋಹ ಪ್ರಕರಣಗಳು ದಾಖಲಾಗಿ ಒಟ್ಟು 58 ಮಂದಿ ಬಂಧಿತರಾಗಿದ್ದರು. 2015ರಲ್ಲಿ ಇದರ ಪ್ರಮಾಣ ಹೆಚ್ಚಳವಾಗಿ 30 ಪ್ರಕರಣಗಳಲ್ಲಿ 73 ಮಂದಿಯನ್ನು ಬಂಧಿಸಲಾಗಿತ್ತು. ಇನ್ನು 2016ರಲ್ಲಿ 28 ಪ್ರಕರಣಗಳಲ್ಲಿ 34 ಮಂದಿಯನ್ನು ದೇಶದ್ರೋಹ ಆರೋಪದಲ್ಲಿ ಐಪಿಸಿ ಸೆಕ್ಷನ್ 124ಎ ಕಾಯ್ದೆಯಡಿ ಬಂಧಿಸಲಾಗಿತ್ತು’ ಎಂಬುದು ಹಂಸರಾಜ್ ಅಹಿರ್ ರಾಜ್ಯಸಭೆಯಲ್ಲಿ ನೀಡಿದ ವಿವರಣೆ.

Leave a Reply