ಮೈಕ್ ನಲ್ಲಿ ದಾಖಲಾಯ್ತು ಇಸ್ರೇಲ್ ಪ್ರಧಾನಿ ಹಾಗೂ ಯುರೋಪ್ ನಾಯಕರ ಮಾತುಕತೆ! ಈ ವೇಳೆ ಮೋದಿ ಬಗ್ಗೆ ಆದ ಪ್ರಸ್ತಾಪವೇನು?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೇಂದ್ರ ಯೂರೋಪಿಯನ್ ರಾಷ್ಟ್ರಗಳ ನಾಯಕರೊಂದಿಗೆ ಸಭೆ ನಡೆಸುವಾಗ ಮೈಕ್ ಒಂದು ಆನ್ ಆಗಿದ್ದು, ಸಭೆಯ ವೇಳೆ ಚರ್ಚಿಸಲಾದ ವಿಷಯಗಳ ಮಾಹಿತಿ ಸಮೀಪದಲ್ಲೇ ಇದ್ದ ಪತ್ರಕರ್ತರ ಕೊಠಡಿಗೆ ರವಾನೆಯಾಗಿತ್ತು. ಕೆಲವು ದಿನಗಳ ಬಳಿಕ ಈ ಮಾಹಿತಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿಷಯವೂ ಪ್ರಸ್ತಾಪವಾಗಿದೆ.

ಇಸ್ರೇಲ್ ಜತೆಗೆ ಯೂರೋಪಿಯನ್ ರಾಷ್ಟ್ರಗಳು ನಡೆದುಕೊಳ್ಳುತ್ತಿರುವ ರೀತಿಯನ್ನು ಕಟುವಾಗಿ ಟೀಕಿಸಿದ್ದ ಬೆಂಜಮಿನ್, ಇತ್ತೀಚೆಗೆ ಮೋದಿ ಅವರು ಇಸ್ರೇಲಿಗೆ ಆಗಮಿಸಿದಾಗ ಅವರೊಂದಿಗೆ ಯಾವ ವಿಷಯವನ್ನು ಚರ್ಚಿಸಲಾಗಿತ್ತು ಎಂಬುದನ್ನು ವಿವರಿಸುತ್ತಿದ್ದರು. ಈ ಒಂದು ಚರ್ಚೆ ಸ್ವಾರಸ್ಯ ಹುಟ್ಟಿಸಿದ್ದೇಕೆ ಎಂದರೆ, ಯೂರೋಪಿಯನ್ ಅಧಿಕಾರಿಗಳ ಜತೆಗಿನ ಸಂದರ್ಭದಲ್ಲಿ ಅವರನ್ನೇ ಟೀಕಿಸುತ್ತಾ, ಚೀನಾ ಹಾಗೂ ಭಾರತದ ನಾಯಕರ ಬಗ್ಗೆ ಬೆಂಜಮಿನ್ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಈ ಚರ್ಚೆಯ ವೇಳೆ ಸೋರಿಕೆಯಾದ ಮಾಹಿತಿ ಹೀಗಿದೆ…

ಈ ಸಭೆಯಲ್ಲಿ ಗಾಜಾ, ಪ್ಯಾಲೆಸ್ತೀನ್ ವಿಚಾರದಲ್ಲಿ ಯೂರೋಪ್ ಒಕ್ಕೂಟ ರಾಷ್ಟ್ರಗಳು ಇಸ್ರೇಲ್ ಜತೆಗೆ ಸರಿಯಾದ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂದು ಇಸ್ರೇಲ್ ಪ್ರಧಾನಿ ಅಸಮಾಧಾನ ಹೊರಹಾಕಿದರು. ಜತೆಗೆ ಭಾರತ ಹಾಗೂ ಚೀನಾ ದೇಶವನ್ನು ಬೆಂಜಮಿನ್ ಉದಾಹರಿಸಿ ಹೇಗೆ ಈ ರಾಷ್ಟ್ರಗಳ ನಾಯಕರು ತಮ್ಮನ್ನು ಭೇಟಿಯಾದಾಗ ರಾಜಕೀಯವನ್ನು ಬೆರೆಸದೇ ತಮ್ಮ ರಾಷ್ಟ್ರಗಳ ಹಿತಾಸಕ್ತಿಯ ಬಗ್ಗೆ ಚಿಂತಿಸುತ್ತಾರೆ ಎಂದು ವಿವರಿಸಿದರು.

ಭಾರತ ಮತ್ತು ಚೀನಾ ನಾಯಕರು ನಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಎರಡು ದೇಶಗಳ ಅಭಿವೃದ್ಧಿಗೆ ಏನೆಲ್ಲಾ ಮಾಡಬೇಕು, ಯಾವ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಮಾತ್ರ ಚರ್ಚಿಸುತ್ತಾರೆ.

ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿದ್ದೆ. ಆಗ ಮೋದಿ ಅವರು ತಮ್ಮ ದೇಶದ ಹಿತಾಸಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದರು. ಆ ವೇಳೆ ಮೋದಿ ಅವರು ‘ನಮ್ಮ ದೇಶಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ. ಅದನ್ನು ಎಲ್ಲಿಂದ ತರುವುದು’ ಎಂಬೆಲ್ಲಾ ವಿಚಾರವಾಗಿ ನನ್ನ ಬಳಿ ಮಾತನಾಡಿದರು ಎಂದು ಬೆಂಜಮಿನ್ ಯೂರೋಪಿಯನ್ ನಾಯಕರಿಗೆ ವಿವರಿಸಿದರು.

ಭಾರತ ಮತ್ತು ಚೀನಾ ನಾಯಕರು ನಮ್ಮನ್ನು ರಾಜಕೀಯ ದೃಷ್ಟಿಯಿಂದ ನೋಡುವುದಿಲ್ಲ. ಆದರೆ ನೀವು ಮಾತ್ರ ನಮ್ಮನ್ನು ಬೆಂಬಲಿಸುವ ರೀತಿಯಲ್ಲಿ ಬೇರೆ ರಾಷ್ಟ್ರಗಳಿಗೆ ರಾಜಕೀಯ ಸಂದೇಶ ರವಾನಿಸುವ ಬಗ್ಗೆ ಮಾತ್ರ ಗಮನಹರಿಸುತ್ತೀರಿ ಎಂದು ಬೆಂಜಮಿನ್ ಖಾರವಾಗಿ ಮಾತನಾಡಿದ್ದಾರೆ.

ಹೀಗೆ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಮೈಕ್ ಆನ್ ಆಗಿರುವುದನ್ನು ಗಮನಿಸಿದ ಅಧಿಕಾರಿಗಳು ತಕ್ಷಣವೇ ಅದನ್ನು ಬಂದ್ ಮಾಡಿದರು.

Leave a Reply