ಡಿಜಿಟಲ್ ಕನ್ನಡ ಟೀಮ್:
ರಿಲಾಯನ್ಸ್ ಕಂಪನಿಯ ಪಯಣಕ್ಕೆ 40 ವರ್ಷ ತುಂಬಿದ್ದು, ಶುಕ್ರವಾರ ಕಂಪನಿಯ ವಾರ್ಷಿಕ ಮಹಾಸಭೆ ನಡೆಯಿತು. ಈ ಒಂದು ಸಂದರ್ಭದಲ್ಲಿ ರಿಲಾಯನ್ಸ್ ಕಂಪನಿಯ ಮಾಲೀಕ ಮುಖೇಶ್ ಅಂಬಾನಿ, ಜಿಯೋ ಕಂಪನಿಯ ಮೂಲಕ ‘ಇಂಡಿಯಾ ಕ ಸ್ಮಾರ್ಟ್ ಫೋನ್’ ಅನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಅದೂ ಉಚಿತವಾಗಿ! ಇದರೊಂದಿಗೆ ತಮ್ಮ ಗ್ರಾಹಕರಿಗೆ ಅಂಬಾನಿ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಈ ಫೋನ್ ಪಡೆಯಬೇಕಾದರೆ ನೀವು ಮೊದಲು ₹ 1500 ಅನ್ನು ಕಟ್ಟಬೇಕು. ಹಾಗಾದರೆ ಇದು ಉಚಿತ ಮೊಬೈಲ್ ಹೇಗೆ ಅಂತಾ ಯೋಚಿಸಿತಿದ್ದೀರಾ? ಈಗ ಹಣ ಠೇವಣಿ ಇಟ್ಟು ಮೊಬೈಲ್ ತೆಗೆದುಕೊಳ್ಳಬೇಕು, 3 ವರ್ಷಗಳ ನಂತರ ಈ ಹಣವನ್ನು ಮರುಪಾವತಿ ಮಾಡಲಾಗುವುದು.
ಈ ಮೊಬೈಲ್ ವಿಶೇಷತೆಗಳು…
ಜಿಯೋ ಕೇವಲ 4ಜಿ ಸಂಪರ್ಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಇದು ಕೇವಲ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಮಾತ್ರ ಸೀಮಿತವಾಗಲಿದೆ. ಈ ಫೋನಿನಲ್ಲಿ 4ಜಿ ವಿಒಎಲ್ಟಿಇ ತಂತ್ರಜ್ಞಾನಹೊಂದಿದ್ದು, ಈ ಮೊಬೈಲ್ ನಲ್ಲಿ ಜಿಯೋ ಸಿನಿಮಾ, ಜಿಯೋ ಟಿವಿಯಂತಹ ಆ್ಯಪ್ ಗಳನ್ನು ಹೊಂದಿರಲಿವೆ. 2.4 ಇಂಚುಗಳ ಪರದೆ, ಹೆಚ್ಚುವರಿಯಾಗಿ ಮೆಮೊರಿ ಕಾರ್ಡ್ ಬಳಕೆ, ಟಾರ್ಚ್ ಲೈಟ್, ₹ 153ಕ್ಕೆ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು, ಅನ್ ಲಿಮಿಟೆಡ್ ಡಾಟಾ, ಕರೆ ಹಾಗೂ ಎಸ್ಎಂಎಸ್ ಗಳು ಸಿಗಲಿವೆ. ಪ್ರತಿವಾರಕ್ಕೆ ₹ 54 ಹಾಗೂ ಎರಡು ದಿನಗಳ ಅವಧಿಗೆ ₹ 24 ಗಳ ರಿಚಾರ್ಜ್ ಆಫರ್ ಗಳನ್ನು ಬಿಡುಗಡೆ ಮಾಡಲಾಗಿದೆ.
ಈ ಮೊಬೈಲ್ ಫೋನ್ ಆಗಸ್ಟ್ 15ರಿಂದ ಈ ಮೊಬೈಲ್ ಫೋನ್ ಪರೀಕ್ಷೆಗೆ ಲಭ್ಯವಾಗಲಿದ್ದು, ಆಗಸ್ಟ್ 24ರಿಂದ ಮುಂಗಡ ಬುಕ್ಕಿಂಗ್ ಮಾಡಬಹುದು. ಮುಂಗಡ ಬುಕ್ಕಿಂಗ್ ಮಾಡಿದವರಿಗೆ ಸೆಪ್ಟೆಂಬರ್ ತಿಂಗಳಿನಿಂದ ಈ ಮೊಬೈಲ್ ಸಿಗಲಿದೆ.
ಇದೇ ವೇಳೆ ಮುಖೇಶ್ ಅಂಬಾನಿ ರಿಲಾಯನ್ಸ್ ಕಂಪನಿಯ 40 ವರ್ಷಗಳಲ್ಲಿ ಬೆಳೆದ ರೀತಿಯನ್ನು ಪಟ್ಟಿ ಮಾಡಿದ್ದು ಅವು ಹೀಗಿವೆ….
- ರಿಲಾಯನ್ಸ್ ಕಂಪನಿ ಕಳೆದ 40 ವರ್ಷಗಳಲ್ಲಿ 4700 ಪಟ್ಟು ವಹಿವಾಟನ್ನು ಹೆಚ್ಚಿಸಿಕೊಂಡಿದೆ.
- ನಿವ್ವಳ ಲಾಭ ₹ 3 ಕೋಟಿಯಿಂದ ಇಂದು ₹ 30 ಸಾವಿರ ಕೋಟಿ ಹೆಚ್ಚಿದ್ದು, ಇದು ಇದು 10 ಸಾವಿರ ಪಟ್ಟು ಏರಿಕೆಯಾಗಿದೆ.
- 1977ರಲ್ಲಿ ₹32 ಕೋಟಿಯಷ್ಟಿದ್ದ ರಿಲಾಯನ್ಸ್ ಕಂಪನಿಯ ಆಸ್ತಿಯ ಮೌಲ್ಯ, ಇಂದು ₹ 7,00,000ಯಷ್ಟಿದೆ. ಇದು 20 ಸಾವಿರ ಪಟ್ಟು ಹೆಚ್ಚಾಗಿದೆ.
- ಕಂಪನಿಯ ಮಾರುಕಟ್ಟೆ ಬಂಡವಾಳ ₹ 10 ಕೋಟಿಯಿಂದ ₹ 5 ಲಕ್ಷ ಕೋಟಿಗೆ ಹೆಚ್ಚಿದ್ದು, ಒಟ್ಟು 50 ಸಾವಿರ ಪಟ್ಟು ಏರಿಕೆಯಾಗಿದೆ.
- ₹ 1 ಸಾವಿರದಷ್ಟಿದ್ದ ಕಂಪನಿಯ ಷೇರುಗಳು ಇಂದು ₹ 16.5 ಲಕ್ಷದಷ್ಟಾಗಿದೆ. ಅಂದರೆ ಬಂಡವಾಳ ಹೂಡಿಕೆದಾರರ ಹಣ ಎರಡೂವರೆ ವರ್ಷಕ್ಕೊಮ್ಮೆ ದುಪ್ಪಟ್ಟಾಗಿದೆ.
- 1977ರಲ್ಲಿ 3500 ನೌಕರರನ್ನು ಹೊಂದಿದ್ದ ಕಂಪನಿ ಇಂದು ವಿಶ್ವದಾದ್ಯಂತ 2,50,000 ನೌಕರರನ್ನು ಹೊಂದಿದೆ.
- 4 ದಶಕಗಳ ಅವಧಿಯಲ್ಲಿ ರಿಲಾಯನ್ಸ್ ಕಂಪನಿ ಒಂದು ಸ್ಟಾರ್ಟ್ ಅಪ್ ಕಂಪನಿಯಿಂದ ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿ ಬೆಳೆದು ನಿಂತಿದೆ ಎಂದಿದ್ದಾರೆ ಮುಖೇಶ್ ಅಂಬಾನಿ.