2014ರ ನಂತರ ಭಾರತ ಹಿಂಸೆಯ ದೇಶವಾಗಿಬಿಟ್ಟಿತಾ? ರಾಜ್ಯಸಭೆಯಲ್ಲಿ ಸ್ವಪನ್ ದಾಸ್ ಗುಪ್ತಾ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಗೋಹತ್ಯೆ ವಿಚಾರ ಭಾರತದಲ್ಲಿ ಅತ್ಯಂತ ಸೂಕ್ಷ್ಮ ವಿಷಯ ಎಂದು ವಾದಿಸಿರುವ ರಾಜ್ಯಸಭಾ ನಾಮನಿರ್ದೇಶಿತ ಸದಸ್ಯ ಸ್ವಪನ್ ದಾಸ್ ಗುಪ್ತಾ, ‘ಈ ವಿಚಾರವಾಗಿ ಎದ್ದಿರುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು’ ಎಂದು ಹೇಳಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ಮಾತನಾಡಿರುವ ಸ್ವಪನ್ ದಾಸ್ ಅವರು ತಮ್ಮ ಭಾಷಣದ ವೇಳೆ ಸ್ವಾತಂತ್ಯ ಸಂಗ್ರಾಮದ ವೇಳೆ ಉತ್ತರ ಪ್ರದೇಶದ ಚೌರಿಚೌರಾದ ಘಟನೆಯನ್ನು ಉದಾಹರಿಸಿ ಗೋಹತ್ಯೆ ಕುರಿತಾಗಿ ಆಗುತ್ತಿರುವ ಹಿಂಸಾಚಾರದ ಸೂಕ್ಷ್ಮತೆಯನ್ನು ವಿವರಿಸಿದರು. ರಾಜ್ಯಸಭೆಯಲ್ಲಿ ಸ್ವಪನ್ ಅವರ ಭಾಷಣದ ಪ್ರಮುಖ ಅಂಶ ಹೀಗಿದೆ…

‘ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದ ನಂತರ ಸಂಸತ್ತಿನ ಎಲ್ಲಾ ಪಕ್ಷದ ನಾಯಕರು ಕೆಲವೊಂದು ವಿಚಾರಗಳನ್ನು ಒಪ್ಪಿಕೊಳ್ಳಲೇಬೇಕಿದೆ. ಅವುಗಳೆಂದರೆ, ಕಾನೂನು ಸುವ್ಯವಸ್ಥೆ ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕು. ಯಾವುದೇ ವ್ಯಕ್ತಿಯು ಅಥವಾ ಸಮುದಾಯದ ಗುಂಪು ಕಾನೂನನ್ನು ಕೈಗೆ ತೆಗೆದುಕೊಂಡು ಮತ್ತೊಬ್ಬರನ್ನು ಹತ್ಯೆ ಮಾಡುವುದಕ್ಕೆ ಭಾರತದ ಕಾನೂನಿನಲ್ಲಿ ಅವಕಾಶವಿಲ್ಲ ಎಂದು. ದೇಶದಲ್ಲಿ ಹಿಂಸಾಚಾರವನ್ನು ಇಷ್ಟಪಡದ ಜನರ ಸಮೂಹ ದೊಡ್ಡದಿದೆ. ಹೀಗಿದ್ದರೂ ಕಳೆದ ಕೆಲವು ವರ್ಷಗಳಿಂದ ಹಿಂಸಾಚಾರದ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಈ ಬೆಳವಣಿಗಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಈ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕರು, ಈ ಎಲ್ಲಾ ಘಟನೆಗಳು ಕೆಲವು ವ್ಯಕ್ತಿಗಳಿಂದ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಿದರು. ನಂತರ ಈ ಘಟನೆಗಳಿಗೆ ಸರ್ಕಾರವನ್ನು ಹೊಣೆ ಮಾಡಿತು. ಅದರಲ್ಲೂ ಸಿತಾರಾಮ್ ಯಚೂರಿಯವರಂತೂ ಭಾರತದಲ್ಲಿ ಹಿಟ್ಲರ್ ಆಡಳಿತ ಇರುವಂತೆ ಆರೋಪ ಮಾಡಿ ಈ ಕುರಿತ ಚರ್ಚೆಯನ್ನು ರಾಜಕೀಯಗೊಳಿಸಿದರು.

ರೈಲಿನಲ್ಲಿ ಒಬ್ಬ ಹುಡುಗನ ಮೇಲೆ ದಾಳಿ ನಡೆಯುತ್ತಿರುವಾಗ ಇತರರು ಮೂಕ ಪ್ರೇಕ್ಷಕರಾಗಿದದ್ದು ದೇಶವೇ ತಲೆತಗ್ಗಿಸುವಂತಹ ಬೆಳವಣಿಗೆಯಾಗಿದ್ದು, ಅಮೆರಿಕದಲ್ಲಿ ಇಂತಹ ಪ್ರಕರಣಗಳು ನಡೆದರೆ ಅವರು ಬೇರೆಯದೇ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ವಿರೋಧ ಪಕ್ಷದ ನಾಯಕರು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಯೊಂದನ್ನು ಓದುತ್ತಾ ಹೇಳಿದರು. ಅವರ ಈ ಹೇಳಿಕೆಯಿಂದ 2014ರ ಮೇ ತಿಂಗಳ ನಂತರ ಭಾರತವು ಮೂಲಭೂತವಾಗಿ ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಇದರಿಂದಾಗಿ ವಿದೇಶಿ ಮಾಧ್ಯಮಗಳು ಭಾರತ ಮಾನವೀಯತೆಯನ್ನು ಕಳೆದುಕೊಳ್ಳುತ್ತಿರುವ ದೇಶವಾಗುತ್ತಿದೆ, ಭಾರತದಲ್ಲಿ ಮಾನವೀಯತೆ ಕಡಿಮೆಯಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಆ ಮೂಲಕ ಭಾರತೀಯರಿಗೆ ಸ್ವಾತಂತ್ರ್ಯದ ಅವಶ್ಯಕತೆಯೇ ಇಲ್ಲ ಎಂಬ ಕೆಟ್ಟ ಸಂದೇಶ ರವಾನೆಯಾಗುವಂತೆ ಮಾಡಲಾಗುತ್ತಿದೆ. ಇದಕ್ಕೆ ನಾವು ಅವಕಾಶ ಮಾಡಿಕೊಡಬೇಕೆ?

ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿ ಚೌರಿಚೌರ ಎಂಬ ಪೊಲೀಸ್ ಠಾಣೆ ಇದೆ. ಒಂದು ಘಟನೆಯಿಂದಾಗಿ ಈ ಚೌರಿಚೌರ ಸಾಕಷ್ಟು ಸುದ್ದಿಯಾಗಿತ್ತು. 1922ರಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವಾಗ ಇಂಡಿಯನ್ ನ್ಯಾಷನಲಿಸ್ಟ್ ಸದಸ್ಯರ ಗುಂಪೊಂದು ಕಾಂಗ್ರೆಸ್ ಬಾವುಟವನ್ನು ಹಿಡಿದು, ಮಹಾತ್ಮ ಗಾಂಧಿಗೆ ಜೈ ಎಂದು ಕೂಗುತ್ತಾ ಆ ಪೊಲೀಸ್ ಠಾಣೆಯಲ್ಲಿದ್ದ 24 ಪೊಲೀಸರನ್ನು ಸಜೀವವಾಗಿ ದಹನ ಮಾಡಲಾಗಿತ್ತು. ಈ ಘಟನೆಯ ನಂತರ ಮಹಾತ್ಮ ಗಾಂಧಿ ಅವರು ಪ್ರತಿಭಟನೆಯನ್ನು ರದ್ದುಗೊಳಿಸಿದ್ದರು. ಈ ಒಂದು ಘಟನೆಯಿಂದಾಗಿ ಇಡೀ ಚಳುವಳಿಯನ್ನು ದೂಷಿಸಲಾಗುತ್ತದೆಯೇ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

1857ರಲ್ಲೂ ನಾವು ಸಾಕಷ್ಟು ಹಿಂಸಾಚಾರವನ್ನು ನೋಡಿದ್ದೇವೆ. ಹಿಂಸಾಚಾರ ಎಂಬುದು ಭಾರತೀಯ ಇತಿಹಾಸದ ಪುಟಗಳಲ್ಲಿ ಸಾಕಷ್ಟು ಬಾರಿ ಕಂಡುಬಂದಿರುವುದು ದುರಾದೃಷ್ಟಕರ. ಹಾಗೆಂದ ಮಾತ್ರಕ್ಕೆ ನಮ್ಮನ್ನು ಮಾನವೀಯತೆ ಇಲ್ಲದವರು ಎಂದು ಬಿಂಬಿಸುವುದು ಸರಿಯೇ? ಹೀಗಾಗಿ ಹಿಂಸಾಚಾರದ ಪ್ರಕರಣಗಳಿಂದ ತಲೆ ತಗ್ಗಿಸುವಂತಾಗಿದೆ ಎಂದು ಕೇವಲ ಹೇಳಿಕೆಗಳನ್ನು ನೀಡುವ ಮೂಲಕ ನ್ಯೂಯಾರ್ಕ್ ಟೈಮ್ಸ್ ನಂತಹ ವಿದೇಶಿ ಮಾಧ್ಯಮಗಳು ಭಾರತದ ಬಗ್ಗೆ ಕೆಟ್ಟ ಚಿತ್ರಣವನ್ನು ಬಿಂಬಿಸಲು ಅವಕಾಶ ನೀಡಬಾರದು.

ಕಾನೂನನ್ನು ಕೈಗೆತ್ತಿಕೊಂಡು ನಡೆಸಲಾಗುತ್ತಿರುವ ಹಲ್ಲೆಗಳನ್ನು ತೀವ್ರವಾಗಿ ಖಂಡಿಸಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅದರ ಜೊತೆಗೆ ಗೋಹತ್ಯೆ ಎಂಬುದು ಭಾರತದಲ್ಲಿ ಅತ್ಯಂತ ಸೂಕ್ಷ್ಮ ವಿಚಾರ ಎಂಬುದನ್ನು ನಾವೆಲ್ಲರು ಒಪ್ಪಿಕೊಳ್ಳಬೇಕು. ಇದೇ ಕಾರಣಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಗೋಹತ್ಯೆಗೆ ಸಂಬಂಧಿಸಿದಂತೆ ಹಲವು ಶಾಸನಗಳನ್ನು ಮಾಡಲಾಗಿದೆ. ಈ ಶಾಸನಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮಾಡಿವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಈ ಸೂಕ್ಷ್ಮತೆಯನ್ನು ನಿಭಾಯಿಸುವುದರ ಜತೆಗೆ ಗೋಹತ್ಯೆ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳನ್ನು ನಿರ್ಮೂಲನೆ ಮಾಡಬೇಕಿದೆ. ಇದು ನಮ್ಮ ಮುಂದಿರುವ ನಿಜವಾದ ಸವಾಲು. ಹಾಗಾದರೆ ಈ ಸೂಕ್ಷ್ಮತೆಯನ್ನು ನಾವು ನಿಭಾಯಿಸುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಈ ವಿಚಾರದಲ್ಲಿ ಸಂಸತ್ತು ಇಬ್ಭಾಗಾವಾಗಿ ನೀನು- ನಾನು ಎಂದು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಗಲಾಟೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಆದರೂ ಅನೇಕ ಜನರು ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ನಿಲುವುಗಳು ಬದಲಾಗಿ ಸರ್ಕಾರ ಹಾಗೂ ವಿರೋಧ ಪಕ್ಷಗಳು ಒಟ್ಟಿಗೆ ಕೂತು ಈ ಸಮಸ್ಯೆಯನ್ನು ನಿಭಾಯಿಸುವುದು ಹೇಗೆ ಎಂಬುದರ ಕುರಿತು ಚಿಂತನೆ ನಡೆಸಬೇಕು. ಇದು ನಾವೆಲ್ಲರೂ ಸದ್ಯ ಮಾಡಲೇಬೇಕಿರುವ ಜವಾಬ್ದಾರಿ.

ಪಕ್ಷಗಳ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಸಹಜ ಹಾಗೂ ಅಗತ್ಯವೂ ಹೌದು. ಹಾಗೆಂದ ಮಾತ್ರಕ್ಕೆ ಎಲ್ಲಾ ವಿಷಯಗಳಲ್ಲೂ ನಾವು ಭಿನ್ನಾಭಿಪ್ರಾಯವನ್ನು ಹೊಂದುತ್ತೇವೆ ಎಂದು ಎಲ್ಲವನ್ನು ವಿರೋಧಿಸುತ್ತಾ ಹೋದರೆ ಪರಿಹಾರ ಸಿಗುವುದಿಲ್ಲ. ಈ ಗೋಹತ್ಯೆ ಕುರಿತ ವಿಷಯ ಇತರೆ ಸಮಸ್ಯೆಗಳಿಗಿಂತ ಬೇರೆಯಾಗಿದ್ದು, ಎಲ್ಲ ಪಕ್ಷಗಳು ತಮ್ಮ ರಾಜಕೀಯ ಭಿನ್ನಾಭಿಪ್ರಾಯವನ್ನು ಮರೆತು ಒಂದಾಗಿ ಸಮಸ್ಯೆಗೆ ಪರಿಹಾರ ಹುಡುಕಬೇಕು. ಇಲ್ಲವಾದರೆ ನಾವೆಲ್ಲರೂ ಸೇರಿ ದೇಶದ ಮಾನವನ್ನು ಇದೇ ರೀತಿ ಹರಾಜು ಹಾಕುತ್ತಲೇ ಇರುತ್ತೇವೆ.’

Leave a Reply