ಚೀನಾದಲ್ಲಿ ತಯಾರಿಸಿದ ಫಿರಂಗಿ ಗನ್ ಗಳ ನಕಲಿ ಬಿಡಿ ಭಾಗಗಳನ್ನು ಜರ್ಮನಿಯದ್ದು ಎಂದು ಮಾರಾಟ ಮಾಡುತ್ತಿದ್ದ ಕಂಪನಿ ವಿರುದ್ಧ ಸಿಬಿಐ ಎಫ್ಐಆರ್

ಡಿಜಿಟಲ್ ಕನ್ನಡ ಟೀಮ್:

ಸ್ವದೇಶಿ ನಿರ್ಮಿತ ಫಿರಂಗಿ ಗನ್ ಗಳಿಗೆ ಸಂಬಂಧಿಸಿದ ಬಿಡಿ ಭಾಗಗಳ ನಕಲಿಯನ್ನು ಜರ್ಮನಿ ಕಂಪನಿಯ ಹೆಸರಿನಲ್ಲಿ ಮುದ್ರಿಸಿ ಮಾರಾಟ ಮಾಡುತ್ತಿದ್ದ ಕಂಪನಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.

ದೆಹಲಿ ಮೂಲದ ಸಿಂದ್ ಸೇಲ್ಸ್ ಸಿಂಡಿಕೇಟ್ ಎಂಬ ಸಂಸ್ಥೆ ಬೋಫೋರ್ಸ್ ಫಿರಂಗಿ ಗನ್ ಗಳ ಮಾದರಿಯಲ್ಲೇ ಸ್ವದೇಶಿ ನಿರ್ಮಿತ ‘ಧನುಷ್’ ಎಂಬ ಫಿರಂಗಿ ಗನ್ ಗಳಿಗೆ ಸಂಬಂಧಿಸಿದ ನಕಲಿ ಬಿಡಿ ಭಾಗಗಳನ್ನು ‘ಮೇಡ್ ಇನ್ ಜರ್ಮನಿ’ ಎಂದು ಮುದ್ರಿಸಿ ಮಾರಾಟ ಮಾಡುತ್ತಿತ್ತು ಎಂದು ಸಿಬಿಐ ತನ್ನ ಎಫ್ಐಆರ್ ನಲ್ಲಿ ಆರೋಪಿಸಿದೆ. ದೆಹಲಿ ಮೂಲದ ಸಿಂದ್ ಸೇಲ್ಸ್ ಸಿಂಡಿಕೇಟ್ ಮತ್ತು ಗನ್ಸ್ ಕ್ಯಾರೇಜ್ ಫ್ಯಾಕ್ಟರಿಯ ಕೆಲವು ಅಧಿಕಾರಿಗಳು ಈ ಗೋಲ್ ಮಾಲ್ ನಡೆಸಿದ್ದು, ಈವರೆಗೂ ₹ 50 ಲಕ್ಷ ಮೌಲ್ಯದ ಈ ಬಿಡಿ ಭಾಗಗಳನ್ನು ಖರೀದಿ ಮಾಡಲಾಗಿದೆ ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.

ಈ ಫಿರಂಗಿ ಗನ್ ಗಳ ನಾಲ್ಕು ಬಿಯರಿಂಗ್ಸ್ ಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ನಲ್ಲಿ ನಾಲ್ಕು ಕಂಪನಿಗಳು ಭಾಗವಹಿಸಿದ್ದವು. 2013ರಲ್ಲಿ ಈ ಟೆಂಡರ್ ಸಿಂಧ್ ಸೇಲ್ಸ್ ಸಿಂಡಿಕೇಟ್ ಪಾಲಾಗಿತ್ತು. ನಂತರ ಈ ಸಂಸ್ಥೆ ‘ಸಿಆರ್ ಬಿ- ಮೇಡ್ ಇನ್ ಜರ್ಮನಿ’ ಎಂದು ಮುದ್ರಿತವಾಗಿರುವ ‘ವೈರ್ ರೇಸ್ ರೋಲರ್ ಬೀಯರಿಂಗ್ಸ್’ ಗಳನ್ನು ಗನ್ಸ್ ಕ್ಯಾರೇಜ್ ಫ್ಯಾಕ್ಟರಿಗೆ ಮಾರಾಟ ಮಾಡಿತ್ತು. ಈ ಮಾರಾಟದಲ್ಲಿ ಗನ್ಸ್ ಕ್ಯಾರೇಜ್ ಫ್ಯಾಕ್ಟರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಎಫ್ಐಆರ್ ನಲ್ಲಿ ವಿವರಿಸಲಾಗಿದೆ.

2013ರಲ್ಲಿ ಈ ಟೆಂಡರ್ ಅನ್ನು ಸಿಂದ್ ಸೇಲ್ಸ್ ಸಿಂಡಿಕೇಟ್ ಕಂಪನಿಗೆ ₹ 35.38 ಲಕ್ಷ ಮೊತ್ತಕ್ಕೆ ನೀಡಲಾಗಿತ್ತು. ನಂತರ ಬಿಯರಿಂಗ್ಸ್ ಖರೀದಿ ಸಂಖ್ಯೆಯನ್ನು 2014ರ ಆಗಸ್ಟ್ ವೇಳೆಗೆ ಆರಕ್ಕೆ ಹೆಚ್ಚಿಸಿದ ಪರಿಣಾಮ ಇವುಗಳ ಮೊತ್ತ ₹ 53.07ಕ್ಕೆ ಏರಿತು. ಸಿಂಧ್ ಸೇಲ್ಸ್ ಸಿಂಡಿಕೇಟ್ 2014ರ ಏಪ್ರಿಲ್ 7ರಿಂದ ಆಗಸ್ಟ್ 12ರವರೆಗೆ ಮೂರು ಬಾರಿ ಎರಡೆರಡು ಬಿಯರಿಂಗ್ಸ್ ಗಳನ್ನು ನೀಡಲಾಯಿತು. ಈ ಬಿಯರಿಂಗ್ಸ್ ಗಳು ಜರ್ಮನಿಯ ಸಿಆರ್ ಬಿ ಆಂಯಂಟ್ರಿಬ್ ಸ್ಟೇಕ್ನಿಕ್ ಕಂಪನಿಯ ಉತ್ಪನ್ನಗಳು ಎಂಬ ಪ್ರಮಾಣ ಪತ್ರವನ್ನು ನೀಡಲಾಗಿತ್ತು. ಜತೆಗೆ ಈ ಬಿಯರಿಂಗ್ಸ್ ಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಉಚಿತವಾಗಿ ಇವುಗಳನ್ನು ಬದಲಾವಣೆ ಮಾಡಿಕೊಡಲಾಗುವುದು ಎಂದು ಕಂಪನಿ ತಿಳಿಸಿತ್ತು.

ಆದರೆ ಈ ಬಿಯರಿಂಗ್ಸ್ ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಇವುಗಳ ಗಾತ್ರದಲ್ಲಿ ವ್ಯತ್ಯಾಸ ಕಂಡುಬಂದು, ಇವುಗಳು ಬಳಕೆಗೆ ಯೋಗ್ಯವಲ್ಲ ಎಂಬುದು ಖಚಿತವಾಯಿತು. ಇವುಗಳ ಬದಲಾವಣೆಗಾಗಿ ಜರ್ಮನ್ ಕಂಪನಿಯನ್ನು ಸಂಪರ್ಕಿಸಿದಾಗ, ಜರ್ಮನ್ ಕಂಪನಿ ಈ ಬಿಡಿ ಭಾಗಗಳನ್ನು ತಯಾರಿಸುವುದೇ ಇಲ್ಲ ಎಂಬುದು ತಿಳಿಯಿತು. ಆನಂತರ ಸಿಂಧ್ ಸೇಲ್ಸ್ ಸಿಂಡಿಕೇಟ್ ಕಂಪನಿ ಚೀನಾದಲ್ಲಿ ತಯಾರಾದ ನಕಲಿ ಬಿಡಿಭಾಗಗಳನ್ನು ಮೇಡ್ ಇನ್ ಜರ್ಮನಿ ಎಂದು ಮುದ್ರಿಸಿ ಮಾರಾಟ ಮಾಡಿದೆ ಎಂಬ ಅಂಶ ಬೆಳಕಿಗೆ ಬಂದಿತು ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.

Leave a Reply