‘ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಇಲ್ಲದಿದ್ರೆ ನಿಮ್ಮ ಬಲಗೈ ಕತ್ತರಿಸ್ತೇವೆ…’ ಕೇರಳದ ಲೇಖಕರಿಗೆ ಬೆದರಿಕೆ ಪತ್ರ

ಡಿಜಿಟಲ್ ಕನ್ನಡ ಟೀಮ್:

ಕೇರಳದ ಖ್ಯಾತ ಲೇಖಕ ಹಾಗೂ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಕೆ.ಪಿ ರಾಮನುನ್ನಿ ಅವರಿಗೆ ಇಸ್ಲಾಂ ತೀವ್ರವಾದಿಗಳು ಪತ್ರದ ಮೂಲಕ ಬೆದರಿಕೆ ಹಾಕಿದ್ದು, ‘ಆರು ತಿಂಗಳ ಒಳಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗದಿದ್ದರೆ ನಿಮ್ಮ ಬಲಗೈ ಹಾಗೂ ಎಡಗಾಲನ್ನು ಕತ್ತರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಪತ್ರದಲ್ಲಿ 2010ರಲ್ಲಿ ಎರ್ನಾಕುಲಂ ಜಿಲ್ಲೆಯ ನಿರ್ಮಲಾ ಕಾಲೇಜಿನ ಪ್ರಾಧ್ಯಪಕರಾದ ಟಿ.ಎ ಜೋಸೆಫ್ ಎಂಬುವವರ ಮೇಲೆ ದಾಳಿ ಮಾಡಿ ಅವರ ಕೈ ಕತ್ತರಿಸಿದ ಮಾದರಿಯಲ್ಲೇ ನಿಮ್ಮ ಮೇಲೂ ದಾಳಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಟಿ.ಎ ಜೋಸೆಫ್ ಎಂಬುವವರು ತಾವು ಸಿದ್ಧಪಡಿಸಿದ್ದ ಪ್ರಶ್ನೆ ಪತ್ರಿಕೆಯಲ್ಲಿ ಇಸ್ಲಾಂ ಧರ್ಮಕ್ಕೆ ಅಪಮಾನವಾಗಿದೆ ಎಂದು ಅವರ ಮೇಲೆ ದಾಳಿ ಮಾಡಿ ಬಲಗೈಯನ್ನು ಕತ್ತರಿಸಲಾಗಿತ್ತು. ‘ಟಿ.ಎ ಜೋಸೆಫ್ ಅವರ ಬಲಗೈ ಕತ್ತರಿಸಿದಂತೆ ನಿನ್ನ ಬಲಗೈ ಹಾಗೂ ಎಡಗಾಲನ್ನು ಕತ್ತರಿಸುತ್ತೇವೆ. ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ನಿಮಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ನೀವು ಇಸ್ಲಾಂಗೆ ಮತಾಂತರವಾಗದಿದ್ದರೆ, ಅಲ್ಲಾಹುವಿನ ಪರವಾಗಿ ನಾವು ನಿಮಗೆ ಶಿಕ್ಷೆ ನೀಡುತ್ತೇವೆ’ ಎಂದು ಬೆದರಿಕೆ ಪತ್ರದಲ್ಲಿ ಹೇಳಲಾಗಿದೆ.

ಈ ಬೆದರಿಕೆ ಕುರಿತಾಗಿ ರಾಮನುನ್ನಿ ಅವರು ಪೊಲೀಸರಿಗೆ ದೂರು ನೀಡಿದ್ದು, ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರಿಗೂ ಶುಕ್ರವಾರ ದೂರು ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳು ಈ ಬೆದರಿಕೆಯ ವಿಷಯವನ್ನು ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಭಾವಿಸುತ್ತೇನೆ. ಈ ಬೆದರಿಕೆ ಪತ್ರದ ಹಿಂದೆ ಯಾವ ಉದ್ದೇಶವಿದೆ ಎಂಬುದು ನನಗೆ ತಿಳಿದಿಲ್ಲ. ಈ ವಿಷಯದ ಕುರಿತಾಗಿ ಕೋಜಿಕೊಡೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ.’ ಎಂದಿದ್ದಾರೆ.

ಈ ವಿಚಾರದ ಬಗ್ಗೆ ಫೇಸ್ ಬುಕ್ ಮೂಲಕ ಪ್ರತಿಕ್ರಿಯೆ ನೀಡಿರುವ ಪಿಣರಾಯಿ ವಿಜಯನ್, ಹೇಳಿರುವುದಿಷ್ಟು… ‘ವಿಚಾರವಾದಿಗಳು, ಪ್ರಗತಿಪರರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಮಂಡಿಸುವುದನ್ನು ಹತ್ತಿಕ್ಕಲು ಇಂತಹ ದಾಳಿಯ ಬೆದರಿಕೆ ಹಾಕುತ್ತಿದ್ದು, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಬೆದರಿಕೆಗಳಿಂದ ಯಾವುದೇ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಹುದು ಎಂದು ಭಾವಿಸಿದ್ದರೆ ಅವರಂತಹ ಮೂರ್ಖರು ಬೇರೊಬ್ಬರಿಲ್ಲ.’

Leave a Reply