‘ಕ್ವೆಸ್ಟ್ ಫಾರ್ ಈಕ್ವಿಟಿ’ಯಲ್ಲಿ ಅಂಬೇಡ್ಕರ್ ವಿಚಾರಧಾರೆ ಸ್ಮರಿಸುತ್ತಲೇ ದಲಿತರ ಮೇಲಿನ ಹಲ್ಲೆ ಖಂಡನೆ

ಡಿಜಿಟಲ್ ಕನ್ನಡ ಟೀಮ್:

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕುರಿತ ಬೆಂಗಳೂರಿನ ಜಿಕೆವಿಕೆಯಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದ್ದು, ಸಾಮಾಜಿಕ ನ್ಯಾಯ, ಸಮಾನತೆ ಸೇರಿದಂತೆ ಅಂಬೇಡ್ಕರ್ ವಿಚಾರಧಾರೆಗಳ ಚರ್ಚೆಯ ಜತೆಗೆ ದೇಶದಲ್ಲಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ.

ಸಮ್ಮೇಳನದ ಎರಡನೇ ದಿನವಾದ ಇಂದು ಸಹ ವಿಶ್ವದ ಪ್ರಮುಖ ವಿಚಾರವಾದಿಗಳು ಭಾಗವಹಿಸಿ, ದಲಿತರ ಪ್ರಗತಿ, ಖಾಸಗೀಕರಣದಿಂದ ಆಗಲಿರುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದರು. ಸಮ್ಮೆಳನದಲ್ಲಿ ಭಾಗವಹಿಸಿ ಮಾತನಾಡಿದ ಪ್ರೊ.ಸುಖದೇವ್ ಥೋರಟ್, ‘ಸದ್ಯ ದೇಶದಲ್ಲಾಗುತ್ತಿರುವ ಖಾಸಗೀಕರಣದಿಂದ ದಲಿತರು ಮತ್ತು ಅಲ್ಪಸಂಖ್ಯಾತರನ್ನು ಕೊಳ್ಳೆ ಹೊಡೆಯಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು. ಇನ್ನು ಅಮೆರಿಕದ ಸಾಮಾಜಿಕ ನ್ಯಾಯ ಹಾಗೂ ಮಾನವ ಸಂಬಂಧದ ಪ್ರೊಫೆಸರ್ ಸ್ಯಾಮುಯೆಲ್ ಎಲ್ ಮೇಯರ್, ‘ಭಾರತದಲ್ಲಿನ ದಲಿತರ ಮೇಲಿನ ದೌರ್ಜನ್ಯ ಹಾಗೂ ಅಮೆರಿಕದಲ್ಲಿ ಕರಿಯರ ಮೇಲಿನ ದೌರ್ಜನ್ಯದಲ್ಲಿ ಸಾಮ್ಯತೆ ಇವೆ. ಈ ಎರಡೂ ದೇಶಗಳಲ್ಲಿ ಈ ವರ್ಗದ ಜನರ ಸಮಸ್ಯೆ ಒಂದೇ ರೀತಿಯಲ್ಲಿದೆ’ ಎಂದರು.

ಇನ್ನು ಸಮ್ಮೇಳನದ ಮೊದಲ ದಿನವಾದ ಶುಕ್ರವಾರ ಮೂರನೇ ಮಾರ್ಟೀನ್ ಲೂಥರ್ ಅವರು ಭಾರತ ಹಾಗೂ ಅಮೆರಿಕದಲ್ಲಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಆಯಾ ದೇಶಗಳ ನಾಯಕರೇ ಕಾರಣ ಎಂದು ಟೀಕಿಸಿದರು. ಇವರ ಜತೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದ್ಯ ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆಯನ್ನು ಖಂಡಿಸಿದರು.

ನಿನ್ನೆ ಈ ನಾಯಕರು ಸಮ್ಮೇಳನದಲ್ಲಿ ಹೇಳಿದಿಷ್ಟು…

3ನೇ ಮಾರ್ಟೀನ್ ಲೂಥರ್: ‘ನಾನು ಬೇರೆ ದೇಶಗಳಿಗೆ ಪ್ರವಾಸಿಯಾಗಿ ಹೋಗುತ್ತೇನೆ. ಆದರೆ ಭಾರತಕ್ಕೆ ಮಾತ್ರ ಯಾತ್ರಿಕನಾಗಿ ಆಗಮಿಸುತ್ತೇನೆ. ಸದ್ಯ ಅಮೆರಿಕ ಹಾಗೂ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಮೋದಿ ಆಡಳಿತದಲ್ಲಿನ ಭಾರತ ಹಾಗೂ ಟ್ರಂಪ್ ಆಡಳಿತದಲ್ಲಿನ ಅಮೆರಿಕದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಈ ಎರಡೂ ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಆಯಾ ದೇಶಗಳ ನಾಯಕತ್ವವೇ ಕಾರಣ.’

ರಾಹುಲ್ ಗಾಂಧಿ: ‘ದಲಿತರ ವಿಷಯವಾಗಿ ಸರ್ಕಾರ ಬೆತ್ತಲಾಗಿದ್ದರೂ ಸಹ ಯಾರೋಬ್ಬರೂ ಸರ್ಕಾರವನ್ನು ಪ್ರಶ್ನಿಸುವ ಧೈರ್ಯ ತೋರುತ್ತಿಲ್ಲ. ರೋಹಿತ್ ವೆಮುಲಾ, ಮೊಹಮದ್ ಅಕ್ಲಾಖ್ ಅವರ ಆತ್ಮಹತ್ಯೆಯ ಜತೆಗೆ ರೈತರ ಸರಣಿ ಆತ್ಮಹತ್ಯೆ, ಭವಿಷ್ಯದಲ್ಲಿ ಭಾರತಕ್ಕೆ ಎದುರಾಗಲಿರುವ ಅಪಾಯದ ಮುನ್ಸೂಚನೆಯಾಗಿವೆ.’

ಸಿದ್ದರಾಮಯ್ಯ: ‘ಗುಜರಾತಿನಲ್ಲಿ ಸತ್ತಿರುವ ದನದ ದೇಹದಿಂದ ಚರ್ಮವನ್ನು ತೆಗೆದರೂ ದಲಿತರ ಮೇಲೆ ಹಲ್ಲೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ನಾವು ಹೋರಾಟ ಮಾಡಲೇಬೇಕು. ಕರ್ನಾಟಕದಲ್ಲಿ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ವಿಚಾರವನ್ನು ಸಾಕಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗಿದೆ. ಅಂಬೇಡ್ಕರ್ ಅವರು ಈ ಹಿಂದೆಯೇ ಎಚ್ಚರಿಸಿದಂತೆ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಸಾಧಿಸುವವರೆಗೂ ರಾಜಕೀಯ ಸಮಾನತೆ ಸಾಧಿಸಲು ಸಾಧ್ಯವಿಲ್ಲ.’

Leave a Reply