ಭಾರತ ಭ್ರಮೆಯಲ್ಲಿದೆ ಎಂದು ಹೇಳುತ್ತಲೇ, ಚೀನಾ ರವಾನಿಸಿರುವ ಎಚ್ಚರಿಕೆ ಸಂದೇಶವೇನು?

ಡಿಜಿಟಲ್ ಕನ್ನಡ ಟೀಮ್:

ದೋಕಲಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಭಾರತಕ್ಕೆ ಚೀನಾ ಎಚ್ಚರಿಕೆಯೊಂದನ್ನು ರವಾನಿಸಿದೆ. ‘ಚೀನಾ ಸೇನೆಯನ್ನು ಮಣಿಸುತ್ತೇವೆ ಎಂಬ ಭ್ರಮೆಯನ್ನು ಭಾರತ ಇಟ್ಟುಕೊಳ್ಳಬಾರದು. ಅದರ ಬದಲಿಗೆ ಗಡಿಯಲ್ಲಿ ತಮ್ಮಿಂದಾಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು’ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯಾನ್ ಎಚ್ಚರಿಕೆ ನೀಡಿದ್ದಾರೆ.

ಇದೇ ತಿಂಗಳು 27 ಮತ್ತು 28ರಂದು ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ ನಡೆಯುತ್ತಿದೆ. ಇದರಲ್ಲಿ ಭಾರತದ ರಾಷ್ಟ್ರೀಯ ಸಲಹೆಗಾರ ಅಜಿತ್ ದೊವಲ್ ಸಹ ಭಾಗವಹಿಸಿದ್ದಾರೆ. ಈ ಸಭೆ ಆರಂಭವಾಗುವ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ವು ಕಿಯಾನ್ ಹೇಳಿರುವುದಿಷ್ಟು…

‘ನೀವು ಹಿಮಾಲಯದಲ್ಲಿರುವ ಬೆಟ್ಟ ಗುಡ್ಡಗಳನ್ನು ಅಲ್ಲಾಡಿಸಬಹುದು. ಆದರೆ ಪೀಪಲ್ಸ್ ಲಿಬರೇಷನ್ ಆರ್ಮಿಯ ಸೈನಿಕರನ್ನು ಅಲ್ಲಾಡಿಸಲು ಸಾಧ್ಯವೇ ಇಲ್ಲ. ಚೀನಾ ತನ್ನ ನೆಲ ಹಾಗೂ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳುವ ಸಲುವಾಗಿ ತನ್ನ ರಕ್ಷಣಾ ಸಾಮರ್ಥ್ಯವನ್ನು ಸಾಕಷ್ಟು ಬಲಪಡಿಸಿಕೊಂಡಿದೆ. ಉಭಯ ದೇಶಗಳ ನಡುವೆ ಉದ್ಭವಿಸಿರುವ ಈ ಗಡಿ ಬಿಕ್ಕಟ್ಟು ಶಮನವಾಗಬೇಕಾದರೆ ಭಾರತ ಸಿಕ್ಕಿಂ ಗಡಿ ಪ್ರದೇಶದಲ್ಲಿ ನಿಯೋಜಿಸಿರುವ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಸದ್ಯದ ಸಮಸ್ಯೆಗೆ ಇದೇ ಪರಿಹಾರ. ಭಾರತ ದೇಶ ಚೀನಾ ಸೈನ್ಯವನ್ನು ಸುಲಭವಾಗಿ ಮಣಿಸಬಹುದು ಎಂಬ ಭ್ರಮೆಯಲ್ಲಿರುವುದನ್ನು ಬಿಟ್ಟು, ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಮೊದಲು ಭಾರತದಿಂದ ಇಂತಹ ಪ್ರಯತ್ನಗಳು ನಡೆಯಬೇಕು. ಆಗ ಚೀನಾ ಸಹ ಗಡಿಯ ಸಂರಕ್ಷಣೆ ಹಾಗೂ ಈ ಪ್ರದೇಶಗಳಲ್ಲಿ ಶಾಂತಿ ನೆಲೆಸುವಂತೆ ಮಾಡಲು ಚೀನಾ ಸಹ ಮುಂದಾಗಲಿದೆ.

ಕಳೆದ 90 ವರ್ಷಗಳಲ್ಲಿ ಚೀನಾವು ತನ್ನ ಗಡಿಯ ರಕ್ಷಣೆಯನ್ನು ಯಾವ ರೀತಿ ಮಾಡಿಕೊಳ್ಳುತ್ತದೆ. ಯಾವ ರೀತಿ ಚೀನಾದ ರಕ್ಷಣಾ ಸಾಮರ್ಥ್ಯ ಹೆಚ್ಚಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಹೀಗಾಗಿ ಭಾರತ ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳಬೇಕು’

Leave a Reply