6 ಕಾಂಗ್ರೆಸ್ ಸಂಸದರ ಅಮಾನತು, ನಾಣ್ಯಗಳ ಚಲಾವಣೆಗೆ ತೊಂದರೆ ಸೇರಿದಂತೆ ಇತರೆ ಸಮಸ್ಯೆ ಕುರಿತು ಚರ್ಚೆ… ಸಂಸತ್ ಅಧಿವೇಶನದ ಪ್ರಮುಖ ಹೈಲೈಟ್ಸ್

ಡಿಜಿಟಲ್ ಕನ್ನಡ ಟೀಮ್:

ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಇಂದು ಹಲವಾರು ಬೆಳವಣಿಗೆಗಳು ನಡೆದಿವೆ. ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ, ನಂತರ 6 ಕಾಂಗ್ರೆಸ್ ಸಂಸದರ ಅಮಾನತು ನಂತರ ಅಧಿವೇಶನ ನಾಳೆಗೆ ಮುಂದೂಡಿಕೆಯಾದರೆ, ಇತ್ತ ರಾಜ್ಯ ಸಭೆಯಲ್ಲಿ ಸಾಮಾನ್ಯ ಜನರು ನಾಣ್ಯಗಳ ಚಲಾವಣೆ ಮಾಡಲು ಎದುರಿಸುತ್ತಿರುವ ಸಮಸ್ಯೆ, ದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ಚರ್ಚೆಯಾಯಿತು. ಇದರ ಜತೆಗೆ ಪಾದರಕ್ಷೆ ವಿನ್ಯಾಸ ಮತ್ತು ಅಭಿವೃದ್ಧಿ ಮಸೂದೆ 2017 ಅನ್ನು ಮಂಡಿಸಲಾಯಿತು.

ಲೋಕಸಭೆಯಲ್ಲಿ ಇಂದು ನಡೆದ ವಿದ್ಯಮಾನಗಳು ಸಂಸತ್ತಿಗೆ ಅಪಮಾನವಾಗುವಂತಿತ್ತು. ಬೋಫೋರ್ಸ್ ಹಗರಣ ಚರ್ಚೆ ನಡೆಯಬೇಕು ಎಂಬಂತೆ ಸರ್ಕಾರದ ಪರವಾದ ಸಂಸದರು ಆಗ್ರಹಿಸಿದರೆ, ವಿರೋಧ ಪಕ್ಷಗಳ ಸಂಸದರು ಇತ್ತೀಚೆಗೆ ಗೋಹತ್ಯೆ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆ ಹಾಗೂ ಥಳಿತ ಪ್ರಕರಣಗಳ ಬಗ್ಗೆ ನಿಳುವಳಿ ಸೂಚನೆ ನೀಡಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಸಭಾಧ್ಯಕ್ಷರಾದ ಸುಮಿತ್ರಾ ಮಹಾಜನ್ ನಿಲುವಳಿ ಸೂಚನೆಯ ಅರ್ಜಿಯನ್ನು ತಿರಸ್ಕರಿಸಿದರು. ಆಗ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದರು. ಅಲ್ಲದೆ ಕಾಗದಗಳನ್ನು ಸ್ಪೀಕರ್ ಕಡೆಗೆ ಎಸೆದರು. ಈ ವೇಳೆ ಸದನ ನಡೆಯಲು ಸಹಕರಿಸುವಂತೆ ಸ್ಪೀಕರ್ ಕೋರಿದರೂ ಪ್ರತಿಭಟನೆ ನಿಲ್ಲಲಿಲ್ಲ. ಈ ವೇಳೆ ತಾಳ್ಮೆ ಕಳೆದುಕೊಂಡ ಸುಮಿತ್ರಾ ಮಹಾಜನ್, ‘ನಿಮ್ಮ ಅಸಭ್ಯ ವರ್ತನೆ ಎಲ್ಲಿಯವರೆಗೂ ಹೋಗುತ್ತದೆ ಎಂಬುದನ್ನು ನಾನು ನೋಡಿಯೇಬಿಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸದನಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸ್ಪೀಕರ್ ಅವರು 6 ಕಾಂಗ್ರೆಸ್ ಸಂಸದರಾದ ಜಿ.ಗೊಗೊಯ್, ಕೆ.ಸುರೇಶ್, ಅಧಿರಂಜನ್ ಚೌಧರಿ, ರಂಜಿತ್ ರಂಜನ್, ಸುಷ್ಮಿತಾ ದೇವ್, ಹಾಗೂ ಎಂ.ಕೆ ರಾಘವನ್ ಅವರನ್ನು 5 ದಿನಗಳ ಕಾಲ ಸಂಸತ್ ಅಧಿವೇಶನದಲ್ಲಿ ಭಾಗಿಯಾಗದಂತೆ ಅಮಾನತುಗೊಳಿಸಿದರು. ನಂತರ ಕಲಾಪವನ್ನು ನಾಳೆಗೆ ಮುಂದೂಡಿದರು.

ಇವಿಷ್ಟು ಲೋಕಸಭೆಯ ಬೆಳವಣಿಗೆಯಾದರೆ, ರಾಜ್ಯಸಭೆಯಲ್ಲಿನ ಪ್ರಮುಖ ಅಂಶಗಳು ಹೀಗಿವೆ…

  • ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಾದರಕ್ಷೆ ವಿನ್ಯಾಸ ಹಾಗೂ ಅಭಿವೃದ್ಧಿ ಸಂಸ್ಥೆಯ ಕಾಯ್ದೆ 2017 ಅನ್ನು ಮಂಡಿಸಿದರು. ನಂತರ ಮತದಾನದ ಮೂಲಕ ಈ ಮಸೂದೆಗೆ ಅನುಮೋದನೆ ದೋರೆಯಿತು. ಇದರ ಜತೆಗೆ ಮೊಟಾರ್ ವೆಹಿಕಲ್ (ಎ) ಮಸೂದೆ, ನಾಕಾ ಕಾರ್ಯಾಲಯ ಮಸೂದೆ, ಅಂಕಿ ಅಂಶಗಳ ಸಂಗ್ರಹಣ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
  • ಇನ್ನು ಸಾಮಾನ್ಯ ಜನರಿಂದ ಅಂಗಡಿಗಳ ಮಾಲೀಕರು ₹ 1, 2 ಮತ್ತು 10 ಮೌಲ್ಯದ ನಾಣ್ಯಗಳನ್ನು ಸ್ವೀಕರಿಸುತ್ತಿಲ್ಲ ಎಂಬ ವಿಷಯವನ್ನು ಜೆಡಿಯು ಸಂಸದ ಅಲಿ ಅನ್ವರ್ ಅನ್ಸಾರಿ ಪ್ರಸ್ತಾಪಿಸಿದರು. ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಇದರಿಂದ ಸಾಮಾನ್ಯ ಜನರಿಗೆ ಹಾಗೂ ಬಡವರಿಗೆ ದಿನನಿತ್ಯ ಸಮಸ್ಯೆ ಎದುರಾಗುತ್ತಿದೆ ಎಂದರು. ಕೇವಲ ಅಂಗಡಿಗಳು ಮಾತ್ರವಲ್ಲ, ಕೆಲವು ಬ್ಯಾಂಕುಗಳು ಈ ನಾಣ್ಯಗಳನ್ನು ನೀಡುತ್ತವೆಯಾದರೂ ಅವುಗಳನ್ನು ಜನರಿಂದ ಸ್ವೀಕರಿಸುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈಗ ಎರಡನೇ ಅಂತದ ಅಮಾನ್ಯೀಕರಣಕ್ಕೆ ಮುಂದಾಗಿ ಈ ನಾಣ್ಯಗಳನ್ನು ಹಿಂಪಡೆಯಬೇಕು ಎಂದು ಹೇಳುತ್ತಾ ನೋಟು ಅಮಾನ್ಯದ ನಿರ್ಧಾರವನ್ನು ಟೀಕಿಸಿದರು.
  • ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನಮಾಮಿ ಗಂಗಾ ದ ಪ್ರಗತಿಯ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಉಮಾ ಭಾರತಿ, 2018ರ ವೇಳೆಗೆ ನಮಾಮಿ ಗಂಗಾ ಯೋಜನೆಗೆ ಕೈಗೊಳ್ಳಲಾಗಿರುವ ಕ್ರಮಗಳ ಫಲಿತಾಂಶ ಗೊತ್ತಾಗಲಿದೆ ಎಂದರು.
  • ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ಥೋಮರ್, ‘ದೇಶದಲ್ಲಿರುವ ಎಲ್ಲಾ ಜಲ ಸಂಪನ್ಮೂಲವನ್ನು ಬಳಸಿಕೊಳ್ಳಲು ವಿವಿಧ ಮಾರ್ಗಗಳ ಬಗ್ಗೆ ಸರ್ಕಾರಚಿಂತನೆ ನಡೆಸುತ್ತಿದೆ’ ಎಂದರು.

Leave a Reply