ಸಿದ್ರಾಮಯ್ಯ ಮತ್ತೆ ಸಿಎಂ ಕನಸಿಗೆ ಪರಮೇಶ್ವರ ಟಾಂಗ್!

‘ಸಿದ್ದರಾಮಯ್ಯ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆಗೆ ಹೋಗುತ್ತೇವೆ. ಅವರೇ ಸಿಎಂ ಆಗಲಿ ಎಂದು ಹೈಕೈಮಾಂಡ್ ಹೇಳಿದರೆ ಎಲ್ಲರೂ ಒಪ್ಪಿಕೊಳ್ಳಬೇಕು. ಆದರೆ ಈ ಬಾರಿ ಬೇರೆಯವರು ಸಿಎಂ ಆಗಲಿ ಎಂದರೆ ಸಿದ್ದರಾಮಯ್ಯ ಕೂಡ ಒಪ್ಪಿಕೊಳ್ಳಬೇಕು…’

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಹೇಳಿರುವ ಈ ಸ್ಪಷ್ಟ ಮಾತು ಚುನಾವಣೆಗೂ ಮೊದಲೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪದವಿ ಸುತ್ತ ಹೆಪ್ಪುಗಟ್ಟುತ್ತಿರುವ ಬಯಕೆಗಳು ಪಕ್ಷದ ಆಂತರಿಕ ರಾಜಕೀಯವನ್ನು ಎತ್ತ ಸೆಳೆದೊಯ್ಯುತ್ತಿದೆ ಎಂಬುದರ ದ್ಯೋತಕ.

ರಾಜ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ಈಚೆಗೆ ಮುಖ್ಯಮಂತ್ರಿಯಾಗಿ ಏಕಕಾಲಕ್ಕೆ ಐದು ವರ್ಷಗಳ ಅವಧಿಯನ್ನು ಯಾವೊಬ್ಬ ಮುಖ್ಯಮಂತ್ರಿಯೂ ಪೂರೈಸಿಲ್ಲ. 1972ರಿಂದ 1977ರವರೆಗೆ ದೇವರಾಜ ಅರಸು ಅವರು ಆಳ್ವಿಕೆ ನಡೆಸಿದ್ದು ಬಿಟ್ಟರೆ ಅವರ ನಂತರ ಆಳ್ವಿಿಕೆ ನಡೆಸಿದ ಯಾರೊಬ್ಬರಿಗೂ ಮುಖ್ಯಮಂತ್ರಿ ಐದು ವರ್ಷ ಪೂರೈಸಲು ಸಾಧ್ಯವಾಗಿರಲಿಲ್ಲ. ಅವರ ನಂತರ ಬಂದ ಎಸ್. ಆರ್. ಬೊಮ್ಮಾಯಿ, ಗುಂಡೂರಾವ್, ರಾಮಕೃಷ್ಣ ಹೆಗಡೆ (ಹೆಗಡೆ 1983ರಿಂದ ’85 ಹಾಗೂ 1985 ರಿಂದ ’88ರವರೆಗೆ ಎರಡು ಅವಧಿಯಲ್ಲಿ ಸಿಎಂ ಆಗಿದ್ದರು), ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೊಯ್ಲಿ, ದೇವೇಗೌಡ, ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಈ ಎಲ್ಲರೂ ‘ಅಪೂರ್ಣಾವಧಿ ತೃಪ್ತರೇ’. ಒಂದಲ್ಲ ಒಂದು ಕಾರಣಕ್ಕೆ ಅಧಿಕಾರ ಪೂರೈಸಲಾಗದೇ ಅವಧಿಗೆ ಮೊದಲೇ ಎದ್ದು ಹೋದವರು. ಆದರೆ ಇವರೆಲ್ಲರ ನಂತರ ಸಿಎಂ ಆಗಿರುವ ಸಿದ್ದರಾಮಯ್ಯನವರು ಐದು ವರ್ಷ ಪದವಿಯನ್ನು ಮುಗಿಸುವ ಹಾದಿಯಲ್ಲಿದ್ದಾರೆ. ಈಗಿರುವ ಪರಿಸ್ಥಿತಿಯಲ್ಲಿ ಅವರ ಉಳಿದ ಅವಧಿ ನಿರಾಂತಕ ಹಾಗೂ ನಿರ್ಬಾಧಿತ. ಹೀಗಾಗಿ ಐದು ವರ್ಷ ಪೂರೈಸಿದ ಹೆಗ್ಗಳಿಕೆ ಅವರದಾಗುವ ಎಲ್ಲ ಲಕ್ಷಣಗಳು ಇವೆ. ಈ ವಿಶ್ವಾಸವೇ ಅವರಲ್ಲಿ ಮತ್ತೆ ಸಿಎಂ ಆಗುವ ಬಯಕೆಯನ್ನು ಪುಟಿದೇಳಿಸಿದ್ದರೆ, ಅವರ ಬಯಕೆ ಉಳಿದವರಲ್ಲೂ ಪೈಪೋಟಿಯ ಬೀಜ ಬಿತ್ತಿದೆ. ಪರಮೇಶ್ವರ ಹೇಳಿಕೆ ಇದಕ್ಕೊಂದು ಸ್ಯಾಂಪಲ್ ಅಷ್ಟೇ.

ಸಿದ್ದರಾಮಯ್ಯನವರು ಕಳೆದ ಬಾರಿ ವಿಧಾನಸಭೆ ಚುನಾವಣೆಗೆ ಸಂದರ್ಭದಲ್ಲಿ ಮುನ್ನ ಇದೇ ನನ್ನ ಕೊನೇ ಚುನಾವಣೆ ಎಂದಿದ್ದರು. ಒಂದೆಡೆ 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಅಧಿಕಾರಕ್ಕೆ ಬಂದಾಗ ದೇವೇಗೌಡರು ತಮಗೆ ಸಿಎಂ ಅವಕಾಶ ತಪ್ಪಿಸಿದರೆಂಬ ಆಕ್ರೋಶ, ಇನ್ನಂದೆಡೆ ಜೆಡಿಎಸ್‌ನಿಂದ ಹೊರಹಾಕಿಸಿಕೊಂಡು ಕಾಂಗ್ರೆಸ್ಸಿ ಬಂದು ಮೂಲೆಗುಂಪಾಗಿದ್ದ ಸಿದ್ದರಾಮಯ್ಯನವ ರನ್ನು ಕೈಹಿಡಿದದ್ದು ಅವರು ಪ್ರತಿಪಾದಿಸಿಕೊಂಡು ಬಂದಿದ್ದ ಅಹಿಂದ ಹೋರಾಟ. ಅಹಿಂದ ವರ್ಗದಲ್ಲಿ ಅವರು ತುಂಬಿದ್ದ ಭರವಸೆ ಚುನಾವಣೆಯಲ್ಲಿ ಮತಗಳಾಗಿ ಮಾರ್ಪಟ್ಟು ಅವರನ್ನು ಮುಖ್ಯಮಂತ್ರಿ ಪದವಿಗೆ ತಂದು ನಿಲ್ಲಿಸಿತು. ಜತೆಗೆ ಹೈಕಮಾಂಡ್ ಜತೆಗಿದ್ದ ನೇರ ಸಂಪರ್ಕ ಸಿಎಂ ಗಾದಿಗೆ ಉಳಿದವರ ಪೈಪೋಟಿ ಯನ್ನು ಸವರಿ ಬಿಸಾಡಿತ್ತು. ಮುಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಧೂಳೀಪಟವಾಗಿದ್ದ ಕಾಂಗ್ರೆಸ್ ಮರ್ಯಾದೆಯನ್ನು ಕರ್ನಾಟಕ ಉಳಿಸಿದ್ದು, ಸಿದ್ದರಾಮಯ್ಯನವರ ಕುರ್ಚಿಯನ್ನು ಮತ್ತಷ್ಟು ಭದ್ರಪಡಿಸಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸೋತು ಬಸವಳಿದಿದ್ದ ಪರಮೇಶ್ವರ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಪಟ್ಟಕ್ಕೆ ಬಡ್ತಿ ಪಡೆದಿದ್ದ ಮಲ್ಲಿಕಾರ್ಜುನ ಖರ್ಗೆ ಮನದಲ್ಲಿ ‘ದಲಿತ ಸಿಎಂ’ ಕೂಗಿನ ನೆಪದಲ್ಲಿ ಆಗಾಗ್ಗೆ ಬಯಕೆ ಸುಳಿದರೂ ಅಷ್ಟೊತ್ತಿಗಾಗಲೇ ಕಾಂಗ್ರೆಸ್ ಒಳರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ ಸಿದ್ದರಾಮಯ್ಯನವರ ಕಲೆ ಮುಂದೆ ಅವೆಲ್ಲ ಕರಗಿ ನೀರಾಗಿ ಹೋದವು. ಚುನಾವಣೆಗೆ ಇನ್ನೊಂಬತ್ತು ತಿಂಗಳು ಬಾಕಿ ಉಳಿದಿದೆ. ಆದರೆ ಸಿದ್ದರಾಮಯ್ಯನವರು ಪಟ್ಟ ಬಿಟ್ಟು ಕದಲುವ ಸೂಚನೆಯಾಗಲಿ, ಅವರನ್ನು ಆ ಗಾದಿಯಿಂದ ಅಲ್ಲಾಡಿಸುವ ಯಾವುದೇ ಗಟ್ಟಿಪಿಂಡವಾಗಲಿ ಕಾಂಗ್ರೆಸ್ಸಿನಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಅವರು ಐದು ವರ್ಷ ಪೂರೈಸುವುದು ಬಹುತೇಕ ಖಚಿತ.

ನಿಜ, ಇತ್ತೀಚೆಗೆ ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭೆ ಮರುಚುನಾವಣೆ ಗೆಲುವಿನ ನಂತರ ಸಿದ್ದರಾಮಯ್ಯನವರ ನ ಆತ್ಮವಿಶ್ವಾಸಕ್ಕೆ ಪಾರವೇ ಇಲ್ಲ. ಉತ್ತರ ಪ್ರದೇಶ ಸೇರಿ ಪಂಚರಾಜ್ಯ ಚುನಾವಣೆಗಳಲ್ಲಿ ಮೋದಿ ಅಲೆ ಆಧಾರಿತ ಬಿಜೆಪಿ ಜಯಭೇರಿ ಬಾರಿಸಿದ್ದ ಸಂದರ್ಭದಲ್ಲಿ ಈ ಎರಡೂ ಸ್ಥಾನಗಳು ಕಾಂಗ್ರೆಸ್ ಬುಟ್ಟಿಗೆ ಬಿದ್ದದ್ದು ಸಿದ್ದರಾಮಯ್ಯವರನ್ನು ಯಾರೂ ಹಿಡಿಯುವವರೇ ಇಲ್ಲದಂತೆ ಮಾಡಿದೆ. ಹೀಗಾಗಿಯೇ ಈ ಚುನಾವಣೆ ಬೆನ್ನಲ್ಲೇ ಅವರು ಮುಂದಿನ ಚುನಾವಣೆಯೂ ತಮ್ಮ ನೇತೃತ್ವದಲ್ಲೇ, ಮತ್ತೊಮ್ಮೆ ತಾವೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಅಡ್ಡಾಡಲು ಶುರುಮಾಡಿದ್ದರು. ಎರಡು ಮೂರು ಕಡೆ ಸಿದ್ದರಾಮಯ್ಯನವರು ಈ ಹೇಳಿಕೆ ಕೊಟ್ಟಿದ್ದೇ ತಡ ಹಲವು ದಶಕಗಳಿಂದ ಕಾಂಗ್ರೆಸ್ ಬಾಗಿಲು ತೊಳೆದುಕೊಂಡು, ಈ ಪದವಿ ಮೇಲೆ ಕಣ್ಣಿಟ್ಟಿರುವ ನಿಷ್ಠ ನಾಯಕರ ಕರುಳಲ್ಲಿ ಕಳ್ಳಿ ಹಾಲು ಸುರುವಿದಂತಾಯಿತು. ಆದರೆ ಏನೂ ಮಾಡುವಂತಿಲ್ಲ. ಸಿದ್ದರಾಮಯ್ಯ ಇನ್ನೊಮ್ಮೆ ಸಿಎಂ ಆಗುವಂತಿಲ್ಲ, ಆ ಸ್ಥಾನಕ್ಕೆ ತಾವು ಆಕಾಂಕ್ಷಿಗಳು ಎಂದು ಹೇಳಿಕೊಳ್ಳುವಂತಿಲ್ಲ. ಹೇಳದೆ ಇರುವಂತೆಯೂ ಇಲ್ಲ. ಹೀಗಾಗಿ ಖರ್ಗೆ, ಪರಮೇಶ್ವರ್, ಡಿ.ಕೆ. ಶಿವಕುಮಾರ್, ಕೆ.ಎಚ್. ಮುನಿಯಪ್ಪ ಅವರಂಥವರು ಮುಂದಿನ ಸಿಎಂ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. ಇಷ್ಟಕ್ಕೇ ಸಮಾಧಾನವಾಗದ ಇನ್ನೂ ಕೆಲವರು ಕರ್ನಾಟಕದಲ್ಲಿ ಹೊಸದಾಗಿ ಪಕ್ಷದ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಅವರಿಗೆ ‘ಬತ್ತಿ’ ಇಟ್ಟರು. ಇವರು ಮುಂದಿನ ಬಾರಿಯೂ ತಾವೇ ಸಿಎಂ ಎಂದು ಹೇಳಿಕೊಂಡು ತಿರುಗಿದರೆ ಉಳಿದ ನಾಯಕರು ಮುನಿಸಿಕೊಳ್ಳುತ್ತಾರೆ, ಇದು ಪಕ್ಷ ರಾಜಕೀಯವಷ್ಟೇ ಅಲ್ಲ ಚುನಾವಣೆ ರಾಜಕೀಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಅವರ ಹೇಳಿಕೆಗೆ ಕಡಿವಾಣ ಹಾಕಿ ಎಂದರು. ಸೋನಿಯಾ ಗಾಂಧಿ ಹೇಳಿದರೋ, ರಾಹುಲ್ ಗಾಂಧಿ ಹೇಳಿದರೋ ಅಥವಾ ವೇಣುಗೋಪಾಲ್ ಸೂಚನೆ ಕೊಟ್ಟರೋ ಅಂತೂ ಸಿದ್ದರಾಮಯ್ಯನವರು ಆ ಹೇಳಿಕೆ ಪುನರುಚ್ಚರಿಸುವುದನ್ನು ನಿಲ್ಲಿಸಿದ್ದಾರೆ. ಯಾರಾದರೂ ಮಾತಿಗೆ ಕಡಿವಾಣ ಹಾಕಬಹುದು, ಆದರೆ ಮನದ ಬಯಕೆಗೆ ಹಾಕಲಾದೀತೇ? ಅಲ್ಲದೇ ಒಂದು ಬಾರಿ ಹೊರಹಾಕಿದ ಮಾತನ್ನು ವಾಪಸ್ಸು ಪಡೆಯಲಾದೀತೇ? ಹೀಗಾಗಿ ಸಿದ್ದರಾಮಯ್ಯನವರ ಮನಸ್ಸಿನಲ್ಲಿ ಏನಿದೆ? ಅಧಿಕಾರದ ಚುಕ್ಕಾಣಿ ಹಿಡಿದಿರುವ ಅವರು ಅದಕ್ಕಾಗಿ ಏನೆಲ್ಲ ತಂತ್ರಗಳನ್ನು ಮಾಡುತ್ತಿರಬಹುದು ಎಂಬುದರ ಕಲ್ಪನೆ ಅನ್ಯ ನಾಯಕರಿಗೆ ಇಲ್ಲದೇ ಏನಿಲ್ಲ. ಅವೆಲ್ಲದರ ಸಮೀಕರಣ ಸ್ವರೂಪದಲ್ಲಿ ಪರಮೇಶ್ವರ್ ಹೇಳಿಕೆ ಹೊರಬಿದ್ದಿದೆ. ಕಾಂಗ್ರೆಸ್ ಸುಪ್ತ ಮನಸುಗಳ ಬಯಕೆ ಏನೆಂಬುದನ್ನೂ ಹೊರಹಾಕಿದೆ.

ರಾಜ್ಯದಲ್ಲಿ ನಿಧಾನವಾಗಿ ಚುನಾವಣೆ ಕಾವು ಪಡೆದುಕೊಳ್ಳುತ್ತಿದೆ. ಎಲ್ಲ ಪಕ್ಷಗಳು ಈಗಾಗಲೇ ಪರೋಕ್ಷ ಪ್ರಚಾರ ಪ್ರವೃತ್ತವಾಗಿವೆ. ಸಿದ್ದರಾಮಯ್ಯನವರು ಇರಬಹುದು, ಬಿಜೆಪಿಯ ಯಡಿಯೂರಪ್ಪನವರಿರಬಹುದು, ಜೆಡಿಎಸ್‌ನ ಕುಮಾರಸ್ವಾಮಿ ಇರಬಹುದು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಲು ಶುರುವಿಟ್ಟುಕೂಂಡಿದ್ದಾರೆ. ರಾಜ್ಯದಲ್ಲಿ ಮಳೆ ಸರಿಯಾಗಿ ಆಗದಿದ್ದರೂ ನಾನಾ ರಾಜಕೀಯ ಪಕ್ಷಗಳ ಮುಖಂಡರ ಆರೋಪ, ಪ್ರತ್ಯಾರೋಪ ಸುರಿಮಳೆಗೇನೂ ಕಡಿಮೆ ಇಲ್ಲ. ಅವರು ಹೋದಲ್ಲಿ, ಬಂದಲ್ಲೆಲ್ಲ ಧೋ ಎಂದು ಸುರಿಯುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಆಡಳಿತ ಪಕ್ಷವನ್ನು ಬಯ್ಯಬಹುದು, ಅದರ ಲೋಪದೋಷಗಳನ್ನು ಎತ್ತಿ ತೋರಿಸಬಹುದು. ಆದರೆ ಆಡಳಿತ ಪಕ್ಷಕ್ಕೆ ಮತ್ತೊಂದು ಹೆಚ್ಚುವರಿ ಲಾಭಕರ ಅವಕಾಶವಿದೆ. ಅದು ಪ್ರತಿಪಕ್ಷಗಳನ್ನು ಟೀಕಿಸುವುದಷ್ಟೇ ಅಲ್ಲ ಅಧಿಕಾರ ಬಲದಿಂದ ಜನರಿಗೆ ಒಂದಷ್ಟು ಆಶ್ವಾಸನೆಗಳ, ಯೋಜನೆಗಳ ಘೋಷಣೆ ಸುರಿಮಳೆಗೈಯಬಹುದು. ಅದು ಈಗಾಗಲೇ ಆರಂಭವಾಗಿದೆ. ಇದು ಪಕ್ಷಗಳ ಪರಸ್ಪರ ಕಾಲು ಕೆರೆದು ಜಗಳವಾಡುವ, ಅದನ್ನು ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವ ತಂತ್ರದ ಮಾತಾಯಿತು. ಆದರೆ ಪಕ್ಷದ ಆಂತರಿಕ ತಂತ್ರ, ಪ್ರತಿತಂತ್ರ, ಕುತಂತ್ರಗಳ ವಿಚಾರವೇ ಬೇರೆ. ಇದನ್ನು ವಿಂಗಡಿಸಿ ನೋಡುವಾಗ ಎಲ್ಲ ಪಕ್ಷಗಳು ಒಳಜಗಳ, ಒಳತಂತ್ರ ನಿರತವಾಗಿವೆ. ಮತ್ತದು ಅಧಿಕಾರದ ಸುತ್ತಲೇ ಸುತ್ತುತ್ತಿದೆ. ಅದರ ಒಂದು ಭಾಗವೇ ಪರಮೇಶ್ವರ ಅವರ ಈ ಹೇಳಿಕೆ.

ಕಳೆದ ಚುನಾವಣೆ ಸಂದರ್ಭದಲ್ಲಿ ಏನೆಲ್ಲ ಕನಸು ಕಟ್ಟಿಕೊಂಡು ಮತ ರಾಜಕೀಯದಲ್ಲಿ ಮಕಾಡೆ ಮಲಗಿದ ಪರಮೇಶ್ವರ ಅವರಿಗೆ ಎರಡು ಅವಧಿಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಿದ ನಿಮಿತ್ತಕ್ಕಾದರೂ ಒಮ್ಮೆ ಸಿಎಂ ಆಗಬೇಕೆಂಬ ಆಸೆ ಕೊನರಿದೆ. ಈ ಆಸೆಯ ಹಿಂದಿರುವುದು ‘ಸಹಜ ಕೋರಿಕೆ.’ ಅದಕ್ಕಿರುವ ಇತಿಮಿತಿಗಳು ಈ ಕೋರಿಯನ್ನು ಬೇಡಿಕೆ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಆದರೆ ಸಿಎಂ ವಿಚಾರ ಮಾತ್ರ ಬಾಕಿ ಯೋಜನೆ. ಅದೇನಿದ್ದರೂ ಚುನಾವಣೆ ಮುಗಿದ ನಂತರ. ಹೈಕಮಾಂಡ್ ಹೇಳಿದವರನ್ನು ಬೇರೆಯವರು ಒಪ್ಪಬೇಕು. ಅದೇ ಕಾಲಕ್ಕೆ ಸಿದ್ದರಾಮಯ್ಯ ಕೂಡ ಒಪ್ಪಬೇಕೆಂದು ಹೇಳುವ ಮೂಲಕ ತಮ್ಮ ಬಯಕೆಗೆ ತಾವೇ ನೀರೆರೆದುಕೊಂಡಿದ್ದಾರೆ. ಏಕೆಂದರೆ ರಾಜ್ಯದಲ್ಲಿ ಸಿಎಂ ಗಾದಿ ಆಕಾಂಕ್ಷಿ ನಿಷ್ಠ ಕಾಂಗ್ರೆಸ್ಸಿಗರು ಅನೇಕರಿರುವಾಗ ಹೈಕಮಾಂಡ್ ಯಾವುದೇ ಕಾರಣಕ್ಕೂ ಎರಡನೇ ಅವಧಿಗೆ ಒಬ್ಬರನ್ನೇ ಮುಂದುವರಿಯಲು ಬಿಡುವುದಿಲ್ಲ. ಸಿದ್ದರಾಮಯ್ಯ ಕೂಡ ‘ಸಹಜ ಕೃತಜ್ಞತೆ’ಗೆ ಒಳಗಾಗಿ ಹೈಕಮಾಂಡ್‌ಗೆ ಎದುರಾಡುವುದಿಲ್ಲ. ಸಿಎಂ ಗಾದಿ ಬಿಟ್ಟುಕೊಡುತ್ತಾರೆ. ಅಂಥ ಬದಲಾವಣೆಗೆ ತಾವೇ ಯೋಗ್ಯ ಎಂಬುದು ಪರಮೇಶ್ವರ ಮಾತಿನ ಹಿಂದಿರುವ ಪರೋಕ್ಷ ಇಂಗಿತ.

ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಯನ್ನು ಯಾರೂ ವಿರೋಧಿಸುವಂತಿಲ್ಲ. ವಿರೋಧಿಸಲು ಆಗುವುದಿಲ್ಲ. ಚುನಾವಣೆ ನಾಯಕತ್ವಕ್ಕೆ ಪೈಪೋಟಿ ಶುರುವಾದರೆ, ಒಳಜಗಳ ಆರಂಭವಾದರೆ ಪಕ್ಷ ಅಧಿಕಾರಕ್ಕೆ ಬರುವುದಾದರೂ ಹೇಗೆ. ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ಸಿದ್ದರಾಮಯ್ಯ ನೇತೃತ್ವ ಒಪ್ಪಿಕೊಳ್ಳಬೇಕು. ಕಾಂಗ್ರೆಸ್ಸಿನಲ್ಲಿ ಈಗ ಆಗುತ್ತಿರುವುದು ಅದೇ. ಪಕ್ಷದ ಅಧಿಕಾರಕ್ಕೆ ಬರದಿದ್ದರೆ ಸಿಎಂ ಯಾರಾಗಬೇಕೆಂಬ ವಿಚಾರವೇ ಇರುವುದಿಲ್ಲವಲ್ಲ. ಹೀಗಾಗಿ ಅವರ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಪರಮೇಶ್ವರ ಸಮೇತ.

ಇಲ್ಲಿ ಇನ್ನೂ ಒಂದು ವಿಚಾರವಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮಾಡಿಸಿರುವ ಆಂತರಿಕ ಸಮೀಕ್ಷೆ ಪ್ರಕಾರ ಪ್ರಸ್ತುತ ಸನ್ನಿವೇಶದಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಕಾಂಗ್ರೆಸ್ ಮುಂದಿದೆ. ಕಾಂಗ್ರೆಸ್ ಮೂರು ತಿಂಗಳಿಗೊಮ್ಮೆ ಮಾಡಿಸುತ್ತಿರುವ ಸಮೀಕ್ಷೆ ಸ್ವಂತ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ದೃಢಪಡಿಸುತ್ತಿದೆ. ಜೆಡಿಎಸ್ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲಿದೆ. ಆದರೆ ಕಾಂಗ್ರೆಸ್ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ವಿಚಾರದಲ್ಲಿ ಇವತ್ತಿನ ಸ್ಥಿತಿಗಿಟ್ಟು ನೋಡಿದಾಗ ಯಾರಿಗೂ ಅನುಮಾನಗಳಿಲ್ಲ. ಆದರೆ ಚುನಾವಣೆಗೆ ವರ್ಷದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಚುನಾವಣೆ ಸನ್ನಿವೇಶ ಬದಲಾಗುತ್ತಾ ಹೋಗುತ್ತಿರುತ್ತದೆ. ಇವತ್ತು ಇದ್ದದ್ದೂ ಇನ್ನು ಮೂರು ತಿಂಗಳಿಗೆ ಇರುವುದಿಲ್ಲ. ಇನ್ನು ಮೂರು ತಿಂಗಳಿಗೆ ಇದ್ದದ್ದು ಆರು ತಿಂಗಳಿಗೆ ಇರುವುದಿಲ್ಲ. ಬಿಜೆಪಿ ಪಾಲಿನ ಚುನಾವಣೆ ತಂತ್ರ ಚಾಣಕ್ಯ ಅಮಿತ್ ಶಾ ಇನ್ನೂ ಕರ್ನಾಟಕಕ್ಕೆ ಕಾಲಿಟ್ಟಿಲ್ಲ. ಅವರು ಬಂದ ನಂತರ ಏನೋ ಗೊತ್ತಿಲ್ಲ. ಹೀಗಾಗಿ ಚುನಾವಣೆ ಪರಿಸ್ಥಿತಿ ಎಂಬುದು ಒಂದು ರೀತಿ ಮರೀಚಿಕೆ, ಲೆಕ್ಕಾಚಾರಕ್ಕೆ ನಿಲುಕದ್ದು. ಆದರೆ ಇವತ್ತಿಗೆ ಕಾಂಗ್ರೆಸ್ಸಿಗೆ ಇರುವ ಸಕಾರಾತ್ಮಕ ಸನ್ನಿವೇಶ ಆ ಪಕ್ಷದಲ್ಲಿ ಸಿಎಂ ಗಾದಿ ಆಕಾಂಕ್ಷಿಗಳ ಪಟ್ಟಿ ಬೆಳೆಯುವಂತೆ ಮಾಡಿರುವುದು ಸುಳ್ಳಲ್ಲ.

ಸಿದ್ದರಾಮಯ್ಯನವರಿಗೆ ನಿಜ ಅರ್ಥದಲ್ಲಿ ಪೈಪೋಟಿ ನೀಡುವ ಮುಖಂಡ ಎಂದೇನಾದರೂ ಇದ್ದರೆ ಅದು ಮಲ್ಲಿಕಾರ್ಜುನ ಖರ್ಗೆ ಅವರು ಮಾತ್ರ. ಸಿದ್ದರಾಮಯ್ಯನವರ ಭಯ ಮತ್ತು ಸಾಧ್ಯತೆ ಎರಡೂ ಖರ್ಗೆ ಅವರೇ. ಅದು ಸಿದ್ದರಾಮಯ್ಯನವರಿಗೂ ಚೆನ್ನಾಗಿ ಗೊತ್ತು. ಕರ್ನಾಟಕ ಕಾಂಗ್ರೆಸ್‌ನಲ್ಲಿ ಸುಮಾರು ನಾಲ್ಕೂವರೇ ದಶಕಗಳಿಗೂ ಹೆಚ್ಚು ಕಾಲ ನಿಷ್ಠರಾಗಿ ದುಡಿದಿರುವ ಖರ್ಗೆಗೆ ಒಮ್ಮೆ ಸಿಎಂ ಆಗಬೇಕೆಂಬ ಬಯಕೆ ಉಳಿದುಬಿಟ್ಟಿದೆ. ಅದು ರಾಜಕಾರಣದ ಅವರ ಕೊನೆಯ ಆಸೆಯೂ ಹೌದು. ಅವರೇನಾದರೂ ತಮ್ಮ ಬಯಕೆಯನ್ನು ಬಲವಾಗಿ ಭನ್ನವಿಸಿದರೆ ಇಲ್ಲ ಎನ್ನಲು ಹೈಕಮಾಂಡ್‌ಗೂ ಕಷ್ಟವಾಗಬಹುದು. ಈ ಹುದ್ದೆಯನ್ನು ಕೇಳಿ ಪಡೆವ ಸ್ಥಾನದಲ್ಲಿ ಖರ್ಗೆ ಇರುವಂತೆಯೇ, ಸಿದ್ದರಾಮಯ್ಯನವರನ್ನೂ ಮನವೊಲಿಸಿ ಕೇಳಿ ಪಡೆವ ಜಾಗದಲ್ಲಿ ಹೈಕಮಾಂಡ್ ಕೂಡ ಇದೆ.

ಇನ್ನು ಉಳಿದಂತೆ ಕಾಂಗ್ರೆಸ್ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ವಿಚಾರ. ಅವರ ಸಾಮರ್ಥ್ಯವೇ ಅವರ ಬಗಲಿನ ಮುಳ್ಳಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ದೂರ ಇರಿಸಿದ್ದು ಕೂಡ ಅವರ ತಾಕತ್ತೇ. ಕೆಪಿಸಿಸಿ ಅಧ್ಯಕ್ಷ ಗಾದಿಗೆ ಶಿವಕುಮಾರ್ ಹೆಸರು ಪ್ರಸ್ತಾಪವಾದಾಗ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್ ಅವರಿಂದ ಹಿಡಿದು ಸಂಪುಟದ ಬಹುತೇಕ ಸಚಿವರು, ಕಾಂಗ್ರೆಸ್ ಸಂಸದರು ವಿರೋಧ ವ್ಯಕ್ತಪಡಿಸಿದರು. ಕಾರಣ ಟಿಕೆಟ್ ಹಂಚಿಕೆಯಿಂದ ಹಿಡಿದು ಅಧಿಕಾರ ಹಂಚಿಕೆವರೆಗೂ ಶಿವಕುಮಾರ್ ಅವರನ್ನು ಹಿಡಿಯಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು. ಹೈಕಮಾಂಡ್ ಮಟ್ಟದಲ್ಲಿ ಉತ್ತಮ ಸಂಪರ್ಕವಿರಿಸಿಕೊಂಡಿದ್ದ, ಕೇರಳ, ಛತ್ತೀಸಗಡ ಚುನಾವಣೆಯಲ್ಲಿ ತನು, ಮನ, ಧನ ಧಾರೆ ಎರೆದಿದ್ದ ಶಿವಕುಮಾರ್ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡೇ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಗಾಳ ಹಾಕಿದ್ದರು. ಆದರೆ ಅದು ಕೈಗೆಟುಕದಿರಲು ಕಾರಣ ಅವರ ತಾಕತ್ತೇ. ಆದರೆ ಇವತ್ತು ಮುಳುವಾಗಿರುವ ತಾಕತ್ತು ನಾಳೆ ಚುನಾವಣೆ ನಂತರ ಯಾವ ರೀತಿ ಬಳಕೆ ಆಗುತ್ತದೆ ಎಂಬುದನ್ನು ಹೇಳಲು ಬರುವುದಿಲ್ಲ. ಏಕೆಂದರೆ ರಾಜಕೀಯ ನಿಂತ ನೀರಿನಂಥಲ್ಲ. ಅದು ಹರಿಯುವ ನೀರಿದ್ದಂತೆ. ಇದೆಲ್ಲಕ್ಕಿಂಥ ದೊಡ್ಡದು ಸಿಎಂ ಪಟ್ಟ!

ಇದೆಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದ ಮಾತು. ಬರೀ ಲೆಕ್ಕಾಚಾರಕ್ಕಷ್ಟೇ ಸೀಮಿತ. ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್ಸಿಗೆ ಇದ್ದಂತೆ ಬಿಜೆಪಿಗೂ ಅದರದೇ ಆದ ಲೆಕ್ಕಾಚಾರಗಳಿರುತ್ತವೆ. ಮೈತ್ರಿ ಸರಕಾರದಲ್ಲಿ ಅಧಿಕಾರ ಹಾಸೊದೆಯುವ ಜೆಡಿಎಸ್ ಕನಸು ಬೇರೆಯೇ ಇದೆ. ಹೀಗಾಗಿ ಕಾಂಗ್ರೆಸ್ ಈಗ ಸವಿಯುತ್ತಿರುವ ಮಂಡಿಗೆ ಮನಸಿಗೆ ಮಾತ್ರ ಸೀಮಿತ. ಅದಕ್ಕೇನೂ ಕಾಸಿಲ್ಲ, ಕರಿಮಣಿ ಇಲ್ಲ. ಮನಸೋ ಇಚ್ಚೆ ಸವಿಯಬಹುದು!

ಲಗೋರಿ: ಒಂದೇ ಹೂವು ಏಕಕಾಲಕ್ಕೆ ಎಲ್ಲರ ಮುಡಿಗೇರಲು ಸಾಧ್ಯವಿಲ್ಲ.

2 COMMENTS

Leave a Reply