ಇಸ್ರೋ ಮಾಜಿ ಮುಖ್ಯಸ್ಥ ಯುಆರ್ ರಾವ್ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಇಸ್ರೋನ ಮಾಜಿ ಮುಖ್ಯಸ್ಥ ಹಾಗೂ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಬಾಹ್ಯಾಕಾಶ ವಿಜ್ಞಾನಿ ಯುಆರ್ ರಾವ್ ಅವರು ಸೋಮವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ.

85 ವರ್ಷದ ರಾವ್ ಅವರು ಸುಮಾರು ತಿಂಗಳಿನಿಂದ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ 2.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅವರ ಸಾವಿನಿಂದ ಇಸ್ರೋಗೆ ಮುಂದಿನ ದಿನಗಳಲ್ಲಿ ರಾವ್ ಅವರ ಅನುಭವದ ಕೊರತೆ ಕಾಡಲಿದೆ.

ಕರ್ನಾಟಕದ ಉಡುಪಿ ಜಿಲ್ಲೆಯ ಅದಂಪುರ ಹಳ್ಳಿಯಲ್ಲಿ ಜನಿಸಿದ ಯುಆರ್ ರಾವ್, ಇಸ್ರೋದಲ್ಲಿ ಎಂಜಿಕೆ ಮೆನನ್, ಸತೀಶ್ ಧವನ್, ವಿಕ್ರಂ ಸರಾಭಾಯಿ ಅವರಂತಹ ಖ್ಯಾತ ವಿಜ್ಞಾನಿಗಳ ಜತೆ ಕೆಲಸ ಮಾಡಿದರು. ನಂತರ 1984 ರಲ್ಲಿ ಸತೀಶ್ ಧವನ್ ಅವರ ನಿರ್ಗಮನದ ನಂತರ ಇಸ್ರೋನ ಮುಖ್ಯಸ್ಥರಾಗಿ ನೇಮಕವಾದರು. ನಂತರ ದಶಕಗಳ ಕಾಲ ಅಂದರೆ 1994ರ ವರೆಗೂ ಈ ಸಂಸ್ಥೆಯನ್ನು ಮುನ್ನಡೆಸಿದರು. ಆರ್ಯಭಟನಿಂದ ಮಂಗಳಯಾನದವರೆಗೂ ರಾವ್ ಅವರು ಇಸ್ರೋದ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ತಮ್ಮ ಸೇವೆ ನೀಡಿದ್ದಾರೆ.

ರಾವ್ ಅವರು ಸದ್ಯ ತಿರುವನಂತಪುರಂನಲ್ಲಿರುವ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಕುಲಪತಿಗಳು ಹಾಗೂ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯದ ಮುಖ್ಯಸ್ಥರೂ ಆಗಿ ಸೇವೆ ಸಲ್ಲಿಸುತ್ತಿದ್ದರು. ಹೀಗೆ ಹಲವಾರು ಅತ್ಯುತ್ತಮ ಹುದ್ದೆಗಳನ್ನು ಅಲಂಕರಿಸಿದ್ದ ರಾವ್ ಅವರು, ಈ ವರೆಗೂ 10 ಅಂತಾರಾಷ್ಟ್ರೀಯ ಹಾಗೂ ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Leave a Reply