ನೋಟು ಅಮಾನ್ಯದ ನಂತರ ತೆರಿಗೆ ಮರುಪಾವತಿ ಅರ್ಜಿ ಪರಿಶೀಲನೆ, ಐಟಿ ತನಿಖೆ ನಡೆಸಲಿರುವ ಪ್ರಕರಣಗಳ ಸಂಖ್ಯೆ ಎಷ್ಟು?

ಡಿಜಿಟಲ್ ಕನ್ನಡ ಟೀಮ್:

ಕಳೆದ ವರ್ಷ ನವೆಂಬರ್ 8ರಂದು ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿದ ನಂತರ ಸಲ್ಲಿಕೆಯಾದ ತೆರಿಗೆ ಮರುಪಾವತಿ ಅರ್ಜಿಯನ್ನು ತೆರಿಗೆ ಇಲಾಖೆ ಪರಿಶೀಲನೆ ನಡೆಸಿದೆ. ಆ ಪೈಕಿ ಸಾವಿರಾರು ಜನರ ತೆರಿಗೆ ಮಾಹಿತಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಒಟ್ಟು 30 ಸಾವಿರ ಪ್ರಕರಣಗಳ ತನಿಖೆ ನಡೆಸಲು ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ನಿನ್ನೆ ನಡೆದ 157ನೇ ಆದಾಯ ತೆರಿಗೆ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮುಖ್ಯಸ್ಥ ಸುಶೀಲ್ ಚಂದ್ರ, ಈ ಕುರಿತು ಮಾಹಿತಿ ನೀಡಿದರು. ‘ನವೆಂಬರ್ 8ರ ನಂತರ ಸಲ್ಲಿಕೆಯಾದ ತೆರಿಗೆ ಮರುಪಾವತಿ ಅರ್ಜಿಗಳನ್ನು ಪರಿಶೀಲಿಸಲಾಯಿತು. ಅದರ ಪ್ರಕಾರ ಅನೇಕರು ತಮ್ಮ ಹಿಂದಿನ ವರ್ಷಗಳಲ್ಲಿ ನೀಡಿದ ಆದಾಯ ಮಾಹಿತಿ ಹಾಗೂ ಕಳೆದ ವರ್ಷ ನೀಡಿದ ಆದಾಯ ಮಾಹಿತಿಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ’ ಎಂಬ ಅಂಶವನ್ನು ತಿಳಿಸಿದರು. ಈ ವೇಳೆ ಸುಶೀಲ್ ಚಂದ್ರ ಅವರು ಹೇಳಿದಿಷ್ಟು…

‘ಮೊದಲ ಹಂತದ ನಗದು ಸ್ವಚ್ಛ ಕಾರ್ಯದಲ್ಲಿ ಇಷ್ಟು ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಅನೇಕರು ತಮ್ಮ ಆಸ್ತಿ ಹಾಗೂ ಆದಾಯದ ಮತ್ತು ಎಲ್ಲಾ ಬ್ಯಾಂಕುಗಳ ವಿವರವನ್ನು ತೆರಿಗೆ ಇಲಾಖೆಗೆ ತಿಳಿಸಿರಲಿಲ್ಲ. ನೋಟು ನಿಷೇಧದ ನಂತರ ಅನುಮಾನಾಸ್ಪದವಾಗಿ ವಹಿವಾಟು ನಡೆದಿರುವ ಬ್ಯಾಂಕುಗಳ ಖಾತೆಗಳ ಮೇಲೂ ಕಣ್ಣಿಡಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಅನೇಕ ಮಂದಿ ಹೆಚ್ಚಿನ ಬ್ಯಾಂಕು ಖಾತೆಗಳನ್ನು ಹೊಂದಿದ್ದರೂ ಆ ಬಗ್ಗೆ ತೆರಿಗೆ ಇಲಾಖೆಗೆ ಮಾಹಿತಿಯನ್ನು ನೀಡಿರಲಿಲ್ಲ. ಅಂತಹವರಿಗೆ ಇ ಮೇಲ್ ಮೂಲಕ ನೋಟೀಸ್ ಜಾರಿ ಮಾಡಿ, ಈ ಕುರಿತು ಉತ್ತರವನ್ನು ನಮ್ಮ ವೆಬ್ ಸೈಟಿನಲ್ಲಿ ನೀಡುವಂತೆ ತಿಳಿಸಲಾಗಿದೆ.

ಬೇನಾಮಿ ಆಸ್ತಿಯ ಕುರಿತಾಗಿಯೂ ತೆರಿಗೆ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದು, ಈ ವರೆಗೂ 233 ಪ್ರಕರಣಗಳಲ್ಲಿ 840 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಪತ್ತೆ ಮಾಡಲಾಗಿದೆ. ಕೆಲವು ಕಂಪನಿಗಳು ಇಂತಹ ಬೇನಮಿ ಆಸ್ತಿಗಳನ್ನು ಹೊಂದಿರುವುದು ಪತ್ತೆಯಾಗಿದ್ದು, ಅವುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.’

Leave a Reply