ತಮಿಳುನಾಡಿನಲ್ಲಿ ಇನ್ಮುಂದೆ ‘ವಂದೇ ಮಾತರಂ’ ಹಾಡುವುದು ಕಡ್ಡಾಯ, ಮದ್ರಾಸ್ ಹೈಕೋರ್ಟ್ ನೀಡಿದ ಮಹತ್ತರ ತೀರ್ಪು ಏನು?

ಡಿಜಿಟಲ್ ಕನ್ನಡ ಟೀಮ್:

ಮದ್ರಾಸ್ ಹೈ ಕೋರ್ಟ್ ಮಂಗಳವಾರ ಮಹತ್ತರ ತೀರ್ಪನ್ನು ಪ್ರಕಟಿಸಿದೆ. ಅದೇನೆಂದರೆ, ‘ತಮಿಳುನಾಡಿನ ಪ್ರತಿ ಶಾಲೆ, ಕೆಲಸದ ಕಚೇರಿಗಳಲ್ಲಿ ಇನ್ನು ಮುಂದೆ ವಂದೇ ಮಾತರಂ ಹಾಡನ್ನು ಕಡ್ಡಾಯವಾಗಿ ಹಾಡಬೇಕು’ ಎಂದು.

ತಮಿಳುನಾಡಿನಲ್ಲಿ ಶಿಕ್ಷಕ ಹುದ್ದೆಯೊಂದಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿ ಪರೀಕ್ಷೆ ವೇಳೆ ವಂದೇ ಮಾತರಂ ಅನ್ನು ಮೊದಲು ಯಾವ ಭಾಷೆಯಲ್ಲಿ ಬರೆಯಲಾಯಿತು ಎಂಬ ಪ್ರಶ್ನೆಗೆ ‘ಬಂಗಾಳಿ’ಯಲ್ಲಿ ಎಂದು ಉತ್ತರಿಸಿದ್ದರು. ಇದು ತಪ್ಪು ಎಂದು ಹೇಳಿ ಆ ಅಭ್ಯರ್ಥಿಯನ್ನು ಅನುತ್ತೀರ್ಣಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆ ವ್ಯಕ್ತಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ಅಲ್ಲದೆ ಆ ಅಭ್ಯರ್ಥಿ ಬರೆದಿರುವ ಉತ್ತರವನ್ನು ಸರಿ ಎಂದು ಪರಿಗಣಿಸಿ, ಮುಂದೆ ಆ ಹುದ್ದೆ ಖಾಲಿಯಾದಾಗ ಅದಕ್ಕೆ ಈ ಅಭ್ಯರ್ಥಿಯನ್ನು ಮೊದಲು ಪರಿಗಣಿಸಬೇಕು ಎಂದು ಸೂಚನೆ ನೀಡಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ವಿ ಮುರಳಿಧರನ್ ಅವರ ತೀರ್ಪಿನ ಪ್ರಮುಖ ಅಂಶ ಹೀಗಿದೆ…

‘ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿ ದೇಶಭಕ್ತಿ ಇರುವುದು ಪ್ರಮುಖ. ಈ ದೇಶ ನಮ್ಮ ತಾಯಿನಾಡು ಎಂಬುದನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಂಡಿರಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತಮ್ಮ ಪ್ರಾಣ ಹಾಗೂ ಕುಟುಂಬವನ್ನು ತ್ಯಾಗ ಮಾಡಿದ್ದಾರೆ. ಅನೇಕ ದಶಕಗಳ ಕಾಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳು ವಂದೇ ಮಾತರಂ ಅನ್ನೇ ರಾಷ್ಟ್ರಗೀತೆಯನ್ನಾಗಿ ಪರಿಗಣಿಸಿದ್ದರು. ಹೀಗಾಗಿ ವಿವಿಧ ಕ್ಷೇತ್ರಗಳಾದ ಶೈಕ್ಷಣಿಕ ಸಂಸ್ಥೆ, ಕಚೇರಿಗಳು, ಕ್ರೀಡಾಂಗಣ ಹಾಗೂ ಕೆಲಸದ ಸ್ಥಳಗಳಲ್ಲಿ ನಿರಂತರವಾಗಿ ಈ ಹಾಡನ್ನು ಹಾಡುವ ಮೂಲಕ ಗೌರವ ಸಲ್ಲಿಸಬೇಕು. ಇಂದಿನ ಯುವಕರೇ ದೇಶದ ಭವಿಷ್ಯವಾಗಿದ್ದು, ಈ ಆದೇಶವನ್ನು ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಸ್ವೀಕರಿಸಬೇಕಿದೆ.

ಕೆಲವು ಸಂದರ್ಭಗಳಲ್ಲಿ ಕೆಲವರಿಗೆ ಈ ಹಾಡನ್ನು ಹಾಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಬಲವಂತ ಹೇರಬಾರದು. ಆದರೆ ಇದಕ್ಕೆ ಉತ್ತಮ ಕಾರಣ ನೀಡಬೇಕು.

ಈ ಆದೇಶದನ್ವಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ವಾರಕ್ಕೊಮ್ಮೆಯಾದರೂ, ಕೆಲಸದ ಸ್ಥಳ ಹಾಗೂ ಕಚೇರಿಗಳಲ್ಲಿ ತಿಂಗಳಿಗೊಮ್ಮೆಯಾದರೂ ವಂದೇ ಮಾತರಂ ಹಾಡನ್ನು ಕಡ್ಡಾಯವಾಗಿ ಹಾಡಬೇಕು. ವಂದೇ ಮಾತರಂ ಅನ್ನು ಬೆಂಗಾಲಿ ಅಥವಾ ಸಂಸ್ಕೃತದಲ್ಲಿ ಹಾಡಲು ಸಾಧ್ಯವಾಗದವರಿಗೆ ನೆರವಾಗಲು ಸರ್ಕಾರ ಈ ಹಾಡನ್ನು ತಮಿಳಿಗೆ ಅನುವಾದಿಸಿ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕಿದೆ.’

Leave a Reply