ಜಮ್ಮು ಕಾಶ್ಮೀರದಲ್ಲಿ ರೊಹಿಂಗ್ಯ ಮುಸಲ್ಮಾನರ ಉಪಸ್ಥಿತಿ ಬಗ್ಗೆ ಸಂಸದ ಕೊಟ್ಟ ಎಚ್ಚರಿಕೆ ಏನು?

ಡಿಜಿಟಲ್ ಕನ್ನಡ ಟೀಮ್:

‘ಮಯನ್ಮಾರಿನಲ್ಲಿ ನಿರಾಶ್ರಿತರಾದ ರೊಹಿಂಗ್ಯ ಮುಸಲ್ಮಾನರು ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದು, ಇದು ಭವಿಷ್ಯದಲ್ಲಿ ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿದೆ…’ ಎಂದು ಹಿರಿಯ ಪತ್ರಕರ್ತ ಹಾಗೂ ರಾಜ್ಯಸಭಾ ನಾಮನಿರ್ದೇಶಿತ ಸಂಸದ ಸ್ವಪನ್ ದಾಸ್ ಗುಪ್ತಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಚಳಿಗಾಲದ ಅಧಿವೇಶನದ ರಾಜ್ಯಸಭೆಯ ಶೂನ್ಯ ಅವಧಿ ವೇಳೆಯಲ್ಲಿ ಈ ವಿಷಯದ ಪ್ರಸ್ತಾಪ ಮಾಡಿದ ಸ್ವಪನ್ ಅವರು, ರೊಹಿಂಗ್ಯ ಮುಸಲ್ಮಾನರು ಜಮ್ಮು ಕಾಶ್ಮೀರಕ್ಕೆ ವಲಸೆ ಹೋಗುತ್ತಿರುವ ಬಗ್ಗೆ ನೀಡಿದ ಎಚ್ಚರಿಕೆ ಹೀಗಿದೆ…

‘ಸದ್ಯ ಮಯನ್ಮಾರ್ ನಲ್ಲಿ ನಾಗರೀಕ ಯುದ್ಧ ಹಾಗೂ ನೈತಿಕ ಸಂಘರ್ಷ ಉದ್ಭವಿಸಿದೆ. ಮಯಾನ್ಮಾರ್ ನಮ್ಮ ಸ್ನೇಹ ನೆರೆ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ ಆ ದೇಶದ ಆಂತರಿಕ ವಿಷಯದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಆದರೆ ಮಯನ್ಮಾರ್ ನಿಂದ ಸಾವಿರಾರು ಸಂಖ್ಯೆಯಲ್ಲಿ ರೊಹಿಂಗ್ಯ ಮುಸಲ್ಮಾನರು ಜಮ್ಮು ಕಾಶ್ಮೀರಕ್ಕೆ ಏಕೆ ವಲಸೆ ಹೋಗಿದ್ದಾರೆ ಎಂಬ ಅಂಶ ಕುತೂಹಲ ಮೂಡಿಸುತ್ತಿದೆ. ಇವರು ಮಯನ್ಮಾರಿನ ಬುಡಕಟ್ಟು ಜನರಾಗಿದ್ದು, ಇವರನ್ನು ಬೋಟ್ ಪೀಪಲ್ ಅಂತಲೂ ಕರೆಯಲಾಗುತ್ತದೆ.

ಜಮ್ಮು ಕಾಶ್ಮೀರದ ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಜಮ್ಮುವಿನಲ್ಲಿ 5,700 ಹಾಗೂ ಲಡಾಕ್ ನಲ್ಲಿ 7,664 ರೊಹಿಂಗ್ಯರು ವಲಸೆ ಬಂದಿದ್ದಾರೆ. ಇನ್ನು ವಿಶ್ವಸಂಸ್ಥೆ ನಿರಾಶ್ರಿತ ರಾಷ್ಟ್ರಗಳ ಸಮಿತಿಯ ಮಾಹಿತಿ ಪ್ರಕಾರ ಭಾರತದಲ್ಲಿ ಸುಮಾರು 14 ಸಾವಿರಕ್ಕಿಂತಲೂ ಹೆಚ್ಚು ರೊಹಿಂಗ್ಯ ಜನರು ನೆಲೆಸಿದ್ದಾರೆ. ಗೃಹ ಇಲಾಖೆ ನೀಡಿರುವ ವರದಿ ಪ್ರಕಾರ ಇವರ ಸಂಖ್ಯೆ 40 ಸಾವಿರಕ್ಕೂ ಹೆಚ್ಚಿದೆ.

ಈ ಅಂಶಗಳನ್ನು ಗಮನಿಸಿದಾಗ ಅನೇಕ ನನ್ನಲ್ಲಿ ಅನೇಕ ಸಂದೇಹಗಳು ಹುಟ್ಟುಕೊಳ್ಳುತ್ತಿವೆ. ಇಲ್ಲಿ ಮಾನವೀಯ ಅಂಶ ಉದ್ಭವಿಸುತ್ತದೆಯಾದರೂ, ಇದನ್ನು ಹೊರತಾಗಿ ಈ ವಿಷಯವನ್ನು ಪರಿಗಣಿಸಬೇಕಿದೆ. ಕಾರಣ, ಬಾಂಗ್ಲಾದೇಶ ಸರ್ಕಾರ ನೀಡಿರುವ ವರದಿ ಪ್ರಕಾರ ರೊಹಿಂಗ್ಯ ಸಮುದಾಯದಲ್ಲಿ ಒಟ್ಟು ಮೂರು ಉಗ್ರ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆಘಾತಕಾರಿ ಅಂಶ ಹೊರಹಾಕಿದೆ. ಅಷ್ಟೇ ಅಲ್ಲದೆ, 2016ರ ಬೋದ್ ಗಯಾದಲ್ಲಿ ನಡೆದ ದಾಳಿಯಲ್ಲಿ ಈ ರೊಹಿಂಗ್ಯ ಉಗ್ರರ ಕೈವಾಡ ವಿರುವ ಬಗ್ಗೆ ಸಾಕ್ಷ್ಯಾಧಾರಗಳೂ ಇವೆ. ಇನ್ನು ಜಮ್ಮು ಕಾಶ್ಮೀರದಲ್ಲಿ ಹತ್ಯೆಯಾದ ಇಬ್ಬರು ಉಗ್ರರ ಪೈಕಿ ಓರ್ವ ಉಗ್ರ ಮಯನ್ಮಾರ್ ಮೂಲದವನಾಗಿದ್ದಾನೆ.

ಈ ಎಲ್ಲ ಅಂಶಗಳಿಂದಾಗಿ ಜಮ್ಮು ಕಾಶ್ಮೀರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ರೊಹಿಂಗ್ಯ ಸಮುದಾಯದವರು ವಲಸೆ ಬಂದಿರುವುದರ ಬಗ್ಗೆ ಸಾಕಷ್ಟು ಅನುಮಾನ ಹುಟ್ಟುತ್ತಿವೆ. ಇವೆಲ್ಲವುದರ ಜತೆಗೆ ಈ ರೊಹಿಂಗ್ಯ ಸಮುದಾಯದವರಿಗೆ ಈಗಾಗಲೇ ಮತದಾರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಅನ್ನು ನೀಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲವಾದರೆ ಭವಿಷ್ಯದಲ್ಲಿ ರಾಷ್ಟ್ರೀಯ ಭದ್ರತೆಗೆ ದೊಡ್ಡ ಸವಾಲು ಎದುರಾಗಲಿದೆ.’

Leave a Reply