ಲಂಕಾದ ಹಂಬಂಟೊಟ ಚೀನಾ ಹಿಡಿತಕ್ಕೆ ಬಂದರೂ ಮಿಲಿಟರಿ ನೌಕೆಗಳಿಗಿಲ್ಲ ಅವಕಾಶ, ಭಾರತಕ್ಕೆ ಆತಂಕದ ನಡುವೆ ಸಣ್ಣ ಸಮಾಧಾನ

ಡಿಜಿಟಲ್ ಕನ್ನಡ ಟೀಮ್:

ಚೀನಾ ಜತೆಗಿನ ಒಪ್ಪಂದದಂತೆ ಶ್ರೀಲಂಕಾದ ಹಂಬಂಟೊಟಾದ ದಕ್ಷಿಣ ಬಂದರಿನ ಅಭಿವೃದ್ಧಿ ಕಾರ್ಯ ಮುಕ್ತಾಯಗೊಂಡಿದ್ದು, ಅದರೊಂದಿಗೆ ಈ ಬಂದರು ಹಾಗೂ ಅದರ ಸುತ್ತಮುತ್ತಲ ಕೈಗಾರಿಕ ಪ್ರದೇಶ ಚೀನಾದ ತೆಕ್ಕೆಗೆ ಬಿದ್ದಂತಾಗಿದೆ. ಇದು ಭಾರತದ ಪಾಲಿಗೆ ಆತಂಕಕಾರಿ ಬೆಳವಣಿಗೆ.

ಈಗಾಗಲೇ ಚೀನಾ ಭಾರತದ ಸುತ್ತಲು ಇರುವ ದೇಶಗಳ ಕರಾವಳಿ ಪ್ರದೇಶಗಳಲ್ಲಿ ಇಂತಹ ಅಭಿವೃದ್ಧಿ ಒಪ್ಪಂದದ ಮೂಲಕ ಆಯಾ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ನಿರತವಾಗಿದ್ದು, ಆ ಪೈಕಿ ಇದು ಮೊದಲನೆ ಹಂತವಾಗಿದೆ. ಈ ಆತಂಕದ ಬೆಳವಣಿಗೆಯ ನಡುವೆಯೂ ಭಾರತಕ್ಕೆ ಸಮಾಧಾನ ತಂದಿರುವ ಒಂದು ಪ್ರಮುಖ ಅಂಶ ಏನೆಂದರೆ, ಶ್ರೀಲಂಕಾ ಸರ್ಕಾರ ‘ಚೀನಾ ಮಿಲಿಟರಿ ನೌಕೆಗಳಿಗೆ ಉಪಯೋಗಿಸುವಂತಿಲ್ಲ. ಕೇವಲ ವ್ಯಾಪಾರ ನೌಕೆಗಳಿಗೆ ಮಾತ್ರ ಈ ಬಂದರನ್ನು ಉಪಯೋಗಿಸಿಕೊಳ್ಳಬಹುದು’ ಎಂದು ಹೇಳಿದೆ.

ವಾಸ್ತವವಾಗಿ ಈ ಬಂದರು ಮತ್ತು ಒಪ್ಪಂದದ ಭಾಗವಾಗಿ ಚೀನಾದ ಹಿಡಿತಕ್ಕೆ ಸಿಕ್ಕಿರುವ ಕೈಗಾರಿಕಾ ಅಭಿವೃದ್ಧಿಗಾಗಿನ ಭೂಮಿ ಇವು ಶ್ರೀಲಂಕಾದಲ್ಲೇ ಅಸಮಾಧಾನಗಳನ್ನು ಹಬ್ಬಿಸಿತ್ತು. ಶ್ರೀಲಂಕಾ ಸರ್ಕಾರ ಹಂಬಂಟೊಟ ಬಂದರಿನ ಅಭಿವೃದ್ಧಿಗೆ ಚೀನಾಗೆ ಅವಕಾಶ ಮಾಡಿಕೊಡುವುದರ ಜತೆಗೆ, ಶೇ.80 ರಷ್ಟು ಪಾಲುದಾರಿಕೆಯನ್ನು ಚೀನಾಗೆ ನೀಡಿದೆ. ಇದಕ್ಕೆ ಪೂರಕವಾಗಿ ಬಂದರಿನ ಸುತ್ತಮುತ್ತಲ ಕೈಗಾರಿಕ ಪ್ರದೇಶಗಳು ಚೀನಾ ನಿಯಂತ್ರಣಕ್ಕೆ ಹೋಗಲಿವೆ. ಸರ್ಕಾರದ ಈ ನಿರ್ಧಾರದಿಂದ ನಮ್ಮ ದೇಶದ ಸಾರ್ವಭೌಮತ್ವವನ್ನು ಒತ್ತೆಯಿಟ್ಟಂತಾಗಿಲ್ಲವೇ? ಎಂದು ಪ್ರಶ್ನಿಸಿ ಬಹಳಷ್ಟು ಪ್ರತಿಭಟನೆಗಳು ನಡೆದಿವೆ.

ಈ ಎಲ್ಲ ಒತ್ತಡಗಳಿಗೆ ಮಣಿದಿರುವ ಶ್ರೀಲಂಕಾ ಸರ್ಕಾರ, ಈ ಬಂದರನ್ನು ಚೀನಾ ತನ್ನ ವ್ಯಾಪಾರಕ್ಕೆ ಬಳಸಿಕೊಳ್ಳಬಹುದೇ ಹೊರತು, ಮಿಲಿಟರಿ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವಂತಿಲ್ಲ ಎಂದು ಹೇಳುವಂತೆ ಮಾಡಿದೆ. ಒಟ್ಟಾರೆಯಾಗಿ ಚೀನಾ ಭಾರತದ ಸುತ್ತಲು ತನ್ನ ಪಾರಾಮ್ಯ ಸಾಧಿಸುತ್ತಿರುವ ಅಂಶವನ್ನು ತಳ್ಳಿಹಾಕಲು ಸಾಧ್ಯವಾಗದಿದ್ದರೂ, ಕಡೇ ಪಕ್ಷ ಮಿಲಿಟರಿ ನೌಕೆಗೆ ಅವಕಾಶ ನಿರಾಕರಿಸಿರುವುದನ್ನು ಸಮಾಧಾನಕರ ಅಂಶವಾಗಿ ಪರಿಗಣಿಸಬಹುದಾಗಿದೆ.

Leave a Reply