ಬಿಹಾರದಲ್ಲಿ ನಿತೀಶ ನಿರ್ಗಮನ, ಮೋದಿಯ ಎನ್ಡಿಎ ಇದೀಗ ಗೆಲ್ಲಲಾಗದ ಕೋಟೆ, ಸೆಕ್ಯುಲರ್ ಮುಸುಕಿನ ದರೋಡೆ ಸಾಮ್ರಾಜ್ಯದ ಪತನ!

ಡಿಜಿಟಲ್ ಕನ್ನಡ ಟೀಮ್

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ತಥಾಕಥಿತ ಸೆಕ್ಯುಲರ್ ಪಾಳೆಯದ ಮಹಾಘಟಬಂಧನ ಮಕಾಡೆ ಬಿದ್ದಿದೆ. ‘ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಒಂದುಗೂಡುತ್ತಿರುವುದಕ್ಕೆ ನಿತೀಶ್ ಕುಮಾರ್ ಅವರಿಗೆ ಸ್ವಾಗತ’ ಅಂತ ಪ್ರಧಾನಿ ಮೋದಿ ಮಾಡಿರುವ ಟ್ವೀಟು ಪ್ರತಿಪಕ್ಷ ಪಾಳೆಯಕ್ಕೆ ಗಹಗಹಿಸಿ ನಕ್ಕಂತೆ ತೋರುತ್ತಿರಬಹುದು. ಇತ್ತ, ಇಂಥದೊಂದು ಸುದ್ದಿ ಸೂರ್ಯ ಮುಳುಗಿದ ನಂತರ ಹೊರಬಿದ್ದಿದ್ದರೂ ದೇಶದುದ್ದಗಲಕ್ಕೂ ‘ಕಮಲ’ವಂತೂ ಹಿರಿ ಹಿರಿ ಹಿಗ್ಗುತ್ತ ಅಪವೇಳೆಯಲ್ಲಾದರೂ ಅರಳಿರುವುದು ನಿಶ್ಚಿತ.

ನಿತೀಶ್ ಕುಮಾರ್ ರಾಜೀನಾಮೆ ಕೊಟ್ಟಿದ್ದು ಏಕೆ ಅಂತ ವಿವರಿಸಿ ಹೇಳಬೇಕಿಲ್ಲ. ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಆಗಿರುವ ಲಾಲು ಪುತ್ರ ತೇಜಸ್ವಿ ಯಾದವ್ ಮೇಲೆ ಅಕ್ರಮ ಆಸ್ತಿ ಸಂಗ್ರಹ ಸಂಬಂಧ ದಾಳಿಗಳಾಗುತ್ತಲೇ ಅವರನ್ನು ಸಂಪುಟದಿಂದ ಕೈಬಿಡಬೇಕೆಂಬ ಒತ್ತಾಯ ರೂಪುಗೊಂಡಿತ್ತು. ಅಲ್ಲದೇ ಲಾಲು ಕುಟುಂಬದವರ ಮೇಲೆಲ್ಲ ಬಿಗಿಗೊಳ್ಳುತ್ತಿರುವ ಅಕ್ರಮ ಆಸ್ತಿ ಸಂಗ್ರಹ ಸಂಬಂಧದ ಕಾನೂನು ಕುಣಿಕೆ ಬಿಗಿಯಾಗುತ್ತಲೇ ಸಾಗಿದೆ. ಹೀಗೆಲ್ಲ ಇರುವಾಗ, ವಯಕ್ತಿಕವಾಗಿ ಭ್ರಷ್ಟಾಚಾರ ಆರೋಪಗಳಿಂದ ಮುಕ್ತವಾಗಿರುವ ನಿತೀಶ್ ಕುಮಾರ್ ಅವರು, ಇನ್ನೂ ತಾನು ಇದೇ ‘ಮಹಾಘಟಬಂಧನ’ದಲ್ಲಿದ್ದರೆ ಇವೆಲ್ಲ ಕೆಸರುಗಳು ತನ್ನ ವರ್ಚಸ್ಸನ್ನು ಹಾಳುಗೆಡವುತ್ತವೆ ಎಂಬ ನಿಲುವಲ್ಲಿ ಈ ನಿರ್ಧಾರಕ್ಕೆ ಬಂದಿರುವುದು ಸ್ಪಷ್ಟ. ಪ್ರಾರಂಭದಲ್ಲಿ ತೇಜಸ್ವಿಯ ರಾಜೀನಾಮೆ ಪಡೆಯುವುದಕ್ಕೆ ಅವರು ತೆರೆಮರೆಯಲ್ಲಿ ಯತ್ನಿಸಿದರು. ಆದರೆ ಲಾಲು ಅದಾಗದು ಎಂದು ಬಹಿರಂಗವಾಗಿಯೇ ಘೋಷಿಸಿದಾಗ ಹೀಗೊಂದು ಹೊಡೆತ ಕೊಟ್ಟಿದ್ದಾರೆ.

ನಿಜ. ನಿತೀಶ್ ಕುಮಾರ್ ಅವರಿಗೆ ಮಹಾಘಟಬಂಧನಕ್ಕೆ ಕೈ ಇಡುವಾಗ ಲಾಲು ಭ್ರಷ್ಟ ಎಂದು ಗೊತ್ತಿರಲಿಲ್ಲವೇ ಎಂಬ ಪ್ರಶ್ನೆಗಳೆದ್ದಿವೆ. ಅಷ್ಟರಮಟ್ಟಿಗಿನ ರಾಜಿಗಳಾಗಿದ್ದು ನಿಜ. ಆದರೆ ಯಾವಾಗ ಲಾಲು ಕುಟುಂಬ ಸಹ ಮತ್ತದೇ ದಾರಿಯಲ್ಲಿ ಸಾಗಿ ತನ್ನ ವರ್ಚಸ್ಸನ್ನು ಕಸಿಯುತ್ತದೆಂದು ಗೊತ್ತಾಯಿತೋ ಆಗ ನಿತೀಶ್ ಎಚ್ಚರಗೊಂಡರೆಂದು ವಿಶ್ಲೇಷಿಸಬಹುದು. ಈ ನಿಟ್ಟಿನಲ್ಲಿ ಒತ್ತಡಗಳನ್ನು ರೂಪಿಸುವುದಕ್ಕೆ ಬಿಜೆಪಿಯ ತಂತ್ರಗಳೂ ಫಲ ನೀಡಿವೆ. ತನಿಖಾ ದಳಗಳನ್ನು ಚುರುಕುಗೊಳಿಸಿದ್ದು ತೆರೆಮರೆಯ ಕೆಲಸವಾದರೆ, ರಿಪಬ್ಲಿಕ್ ಟಿವಿಯ ಮೂಲಕ ಲಾಲು ಭ್ರಷ್ಟಾಚಾರದ ವಿರುದ್ಧ ಆಕ್ರೋಶ ಏಳುವಂತೆ ನೋಡಿಕೊಂಡಿರುವ ತಂತ್ರವೂ ಗುಟ್ಟಿನದ್ದೇನಲ್ಲ. ಇವೆಲ್ಲ ತಂತ್ರಗಾರಿಕೆ ಹಾಗೂ ರಾಜಕೀಯ ಒತ್ತಡಗಳೆಲ್ಲ ಕೆಲಸ ಮಾಡಿರುವುದನ್ನು ತಳ್ಳಿ ಹಾಕಲಿಕ್ಕಾಗುವುದಿಲ್ಲವಾದರೂ ಅದನ್ನಿಟ್ಟುಕೊಂಡು ಲಾಲು ಪರ ಅಳುವುದಕ್ಕೇನೂ ಜನರು ಸಿದ್ಧರಿಲ್ಲ. ಬಹಳಷ್ಟು ಪತ್ರಕರ್ತರು, ಅಭಿಪ್ರಾಯ ನಿರೂಪಕರೆನಿಸಿಕೊಂಡವರು ಲಾಲು ಪರ ಲೊಚಗುಡುತ್ತಾರೆಂಬುದು ಅಪೇಕ್ಷಣೀಯ. ರಾಜಿನಾಮೆ ವಿಚಾರ ವಿವರಿಸುವ ಪತ್ರಿಕಾಗೋಷ್ಟಿಯಲ್ಲಿ ಇದುವರೆಗಿನ ಸ್ನೇಹಿತರನ್ನು ಹೆಚ್ಚಾಗಿ ದೂಷಿಸುವ ಗೊಡವೆಗೆ ಹೋಗದೇ, ‘ಯಾರದ್ದಾದರೂ ಅವಶ್ಯಗಳನ್ನು ಪೂರೈಸಬಹುದು. ಆದರೆ ದುರಾಸೆಯನ್ನಲ್ಲ. ಮಹಾಘಟಬಂಧನ ಸಫಲವಾಗುವುದಕ್ಕೆ ಪ್ರಯತ್ನಿಸಿದೆ, ಆಗದೇಹೋಯಿತು’ ಅಂತ ಮಾರ್ಮಿಕವಾಗಿ ಮಾತನಾಡಿದ್ದಾರೆ.

ಅಲ್ಲದೇ ಕೋಮುವಾದ, ಸೆಕ್ಯುಲರಿಸಂ ಹೆಸರಲ್ಲಿ ಬಿಜೆಪಿಯನ್ನು ವಿರೋಧಕ್ಕಾಗಿ ವಿರೋಧಿಸಿಕೊಂಡಿರುವುದರಿಂದ ಏನೂ ಗೀಟುವುದಿಲ್ಲ ಎಂಬುದು ಬುದ್ಧಿವಂತ ನಿತೀಶರಿಗೆ ಮನವರಿಕೆ ಆಗಿದೆ. ಇದಕ್ಕೆ ಸರಿಯಾಗಿ, ವರ್ಷಗಳ ಹಿಂದಿನಿಂದ ಪ್ರಧಾನಿ ನರೇಂದ್ರ ಮೋದಿ ಸಹ ನಿತೀಶರನ್ನು ಆಪ್ತತೆಯ ವಲಯಕ್ಕೆಳೆದುಕೊಳ್ಳುವ ಯಾವ ಅವಕಾಶಗಳನ್ನೂ ಬಿಟ್ಟುಕೊಡಲಿಲ್ಲ. ನೋಟು ಅಮಾನ್ಯವನ್ನು ಪ್ರತಿಪಕ್ಷಗಳೆಲ್ಲ ಟೀಕಿಸಿದಾಗಲೂ ನಿತೀಶ್ ಅವರು ಕೇಂದ್ರದ ಪರ ನಿಂತರು. ನಿತೀಶರ ಸಾರಾಯಿ ನಿಷೇಧವನ್ನು ಮೋದಿ ಕೊಂಡಾಡಿದರು. ರಾಶ್ಟ್ರಪತಿ ಚುನಾವಣೆಯಲ್ಲಿ ಕೋವಿಂದರನ್ನು ಬೆಂಬಲಿಸುವ ಮೂಲಕ ನಿತೀಶ್, ಪ್ರಸ್ತುತ ಕಾಲಘಟ್ಟದಲ್ಲಿ ಎನ್ಡಿಎ ಜತೆ ಮತ್ತೆ ಹೊಂದಾಣಿಕೆ ಮಾಡಿಕೊಳ್ಳುವ ಮಾರ್ಗವನ್ನು ಶ್ರೀಮಂತಗೊಳಿಸಿದರು.

2013ರಲ್ಲಿ ಎನ್ಡಿಎ ಕೂಟ ತೊರೆದಾಗ ನಿತೀಶ್ ಕುಮಾರ್ ಅವರಿಗೆ ಮನದ ಮೂಲೆಯಲ್ಲೆಲ್ಲೋ ತಾವು ಮೋದಿ ಬ್ರಾಂಡಿಗೆ ಪ್ರತಿಯಾಗಿ ಬಿಂಬಿಸಿಕೊಳ್ಳಬಹುದೆಂಬ ಆಸೆ ಇತ್ತು. ಅದಾಗಿ ಮೋದಿ ಪರ್ವದ ಮೂರು ವರ್ಷಗಳನ್ನು ಹಾಗೂ ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷದ ಆಲೋಚನೆಗಳೇ ಖಾಲಿಯಾಗಿರುವ ಪಾಳೆಯವನ್ನೂ ತೂಗಿ ನೋಡಿರುವ ನಿತೀಶ್ ಅದೆಲ್ಲ ಆಗುವ-ಹೋಗುವ ಕೆಲಸವಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಬಿಹಾರದಲ್ಲಿ ಜೆಡಿಯುವನ್ನು ಬೇಷರತ್ತಾಗಿ ಬಿಜೆಪಿ ಬೆಂಬಲಿಸುವ ಸೂಚನೆಗಳೆಲ್ಲ ಹೊರಬಿದ್ದಿವೆ. ಉತ್ತರ ಪ್ರದೇಶ ರಾಜಕಾರಣದಲ್ಲಿ ಮುಲಾಯಂ- ಮಾಯಾವತಿಯವರನ್ನು ಹೆಚ್ಚು ಕಡಿಮೆ ನೇಪಥ್ಯಕ್ಕೆ ಸರಿಸಿ ಬುಡ ಗಟ್ಟಿಮಾಡಿಕೊಂಡಿದೆ ಬಿಜೆಪಿ. ಉತ್ತರದ ಪ್ರಮುಖ ರಾಜ್ಯ ಬಿಹಾರದಲ್ಲೂ ಈಗ ಮತ್ತೆ ಮರು ಸಮೀಕರಣ ತನ್ನದಾಗಿಸಿಕೊಳ್ಳುವ ಮೂಲಕ, ಪರ್ಯಾಯಗಳಿಲ್ಲದ ರಾಜಕೀಯ ನಕಾಶೆಯಲ್ಲಿ ಅದಾಗಲೇ ಗಟ್ಟಿಗೊಳಿಸಿಕೊಂಡಿದ್ದ 2019ನ್ನು ಮತ್ತಷ್ಟು ದೃಢಪಡಿಸಿಕೊಂಡಿದೆ.

Leave a Reply