ಜೇಟ್ಲಿ ವಿರುದ್ಧದ ಕೇಜ್ರಿ-ಜೇಠ್ಮಲಾನಿ ಅಲ್ಪಾವಧಿ ಸಮರೋತ್ಸಾಹಕ್ಕೆ ದೆಹಲಿ ತೆರಬೇಕಿದೆ ₹ 2 ಕೋಟಿ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧದ ಕಾನೂನು ಹೋರಾಟದಲ್ಲಿ ಇನ್ನುಮುಂದೆ ಅರವಿಂದ್ ಕೇಜ್ರಿವಾಲ್ ಪರ ವಕಾಲತ್ತು ವಹಿಸುವುದಿಲ್ಲ ಎಂದು ಹಿರಿಯ ವಕೀಲ ರಾಮ್ ಜೇಠ್ಮಲಾನಿ ದೆಹಲಿ ಮುಖ್ಯಮಂತ್ರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ‘ಇನ್ನು ಮುಂದೆ ಅರವಿಂದ್ ಕೇಜ್ರಿವಾಲ್ ಪರ ವಕಾಲತ್ತು ವಹಿಸುವುದಿಲ್ಲ. ತಮ್ಮ ಬಾಕಿ ಸಂಭಾವನೆ ₹ 2 ಕೋಟಿಯನ್ನು ಆದಷ್ಟು ಬೇಗ ನೀಡಬೇಕು’ ಎಂದು ಜೇಠ್ಮಲಾನಿ ಪತ್ರದಲ್ಲಿ ಕೇಳಿದ್ದಾರೆ.

ಅರುಣ್ ಜೇಟ್ಲಿ ಅವರ ವಿರುದ್ಧ ಜಂಟಿಯಾಗಿ ಕಾನೂನು ಸಮರ ಸಾರಿದ್ದ ಅರವಿಂದ್ ಕೇಜ್ರಿವಾಲ್ ಹಾಗೂ ರಾಮ್ ಜೇಠ್ಮಲಾನಿ ನಡುವೆ ಆಗಿದ್ದಾದರೂ ಏನು ಎಂಬುದನ್ನು ನೋಡುವುದಾದರೆ, ನಮಗೆ ಸಿಗುವ ಚಿತ್ರಣ ಹೀಗಿದೆ…

ಅರುಣ್ ಜೇಟ್ಲಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ವಾದಿಸುವಾಗ ಕೇಜ್ರಿವಾಲ್ ಪರ ವಕೀಲರು ಮೇ 17ರಂದು ನಡೆದ ವಿಚಾರಣೆ ವೇಳೆ ‘ಕ್ರಿಮಿನಲ್’ ಎಂಬ ಪದ ಬಳಕೆ ಮಾಡಿದರು. ತಮ್ಮ ವಿರುದ್ಧ ಈ ಪದ ಬಳಕೆ ತಪ್ಪಾಗಿದ್ದು, ಇದು ಮಾನನಷ್ಟಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ಮತ್ತೊಂದು ಮೊಕದ್ದಮೆ ಹೂಡಿದರು. ಈ ಮೊಕದ್ದಮೆಯ ವಿಚಾರಣೆ ವೇಳೆ, ‘ನಾನು ಉದ್ದೇಶಪೂರ್ವಕವಾಗಿ ಆ ಪದ ಬಳಕೆಗೆ ಉತ್ತೇಜನ ನೀಡಿಲ್ಲ. ವಾದ ಮಂಡಿಸುವಾಗ ವಕೀಲರು ಆ ಪದ ಬಳಕೆ ಮಾಡಿದ್ದಾರೆ’ ಎಂದು ಕೇಜ್ರಿವಾಲ್ ಸಮರ್ಥನೆಗೆ ಮುಂದಾದರು. ಆದರೆ ಈ ಸಂದರ್ಭದಲ್ಲಿ ಕೇಜ್ರಿವಾಲರ ಸಮರ್ಥನೆಯನ್ನು ಅಲ್ಲಗೆಳೆದ ರಾಮ್ ಜೇಠ್ಮಲಾನಿ, ‘ನಿಮ್ಮ ಅನುಮತಿಯ ಮೇರೆಗೆ ಆ ಪದ ಬಳಕೆಯಾಗಿದೆ. ಪ್ರಕರಣದ ವಿಷಯವಾಗಿ ನೀವು ನನ್ನ ಜತೆ ಖಾಸಗಿಯಾಗಿ ಮಾತನಾಡುವ ಸಂದರ್ಭದಲ್ಲಿ ಜೇಟ್ಲಿ ಅವರ ವಿರುದ್ಧ ಇನ್ನಷ್ಟು ಕೆಟ್ಟದಾಗಿ ಮಾತನಾಡಿದ್ದೀರಿ’ ಎಂದು ಹೇಳಿದರು. ಈ ವಿಷಯವಾಗಿ ಅರವಿಂದ್ ಕೇಜ್ರಿವಾಲ್ ಹಾಗೂ ರಾಮ್ ಜೇಠ್ಮಲಾನಿ ಅವರ ನಡುವೆ ಬಿರುಕು ಬಿಟ್ಟಿದ್ದು, ಇದರಿಂದಾಗಿಯೇ ರಾಮ್ ಜೇಠ್ಮಲಾನಿ, ಕೇಜ್ರಿವಾಲ್ ಪರ ವಾದ ಮಂಡನೆಯಿಂದ ಹಿಂದೆ ಸರಿದಿದ್ದಾರೆ.

ಜೇಟ್ಲಿ ಅವರ ವಿರುದ್ಧದ ಹಲವು ಕಾನೂನು ಸಮರಗಳಲ್ಲಿ ತಮ್ಮ ಪರ ವಾದ ಮಂಡಿಸಲು ಕೇಜ್ರಿವಾಲ್ ಅವರು ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರನ್ನು ನೇಮಿಸಿದ್ದರು. ಇದಕ್ಕಾಗಿಯೇ ದೆಹಲಿ ಸರ್ಕಾರದ ಬೊಕ್ಕಸದಿಂದ ಕೋಟ್ಯಾಂತರ ಹಣವನ್ನು ಖರ್ಚು ಮಾಡಲಾಗುತ್ತಿತ್ತು. ಈ ವಿಷಯದ ಕುರಿತಾಗಿ ಡಿಜಿಟಲ್ ಕನ್ನಡ ಈ ಹಿಂದೆ ವರದಿ ಪ್ರಕಟಿಸಿತ್ತು. ನಂತರ ಸರ್ಕಾರದ ಬೊಕ್ಕಸದಿಂದ ತಾವು ಸಂಭಾವನೆ ನೀಡಲಾಗುತ್ತಿದೆ ಎಂಬ ಆರೋಪದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ರಾಮ್ ಜೇಠ್ಮಲಾನಿ, ‘ನಾನು ಆರಂಭದಲ್ಲಿ ಯಾವುದೇ ಸಂಭಾವನೆ ಪಡೆಯಲು ನಿರ್ಧರಿಸಿರಲಿಲ್ಲ. ಆದರೆ, ಕೇಜ್ರಿವಾಲ್ ಅವರೇ ಈ ಬಗ್ಗೆ ಪ್ರಸ್ತಾವ ಮುಂದಿಟ್ಟಾಗ ನಾನು ಸಂಭಾವನೆ ಪಡೆದೆ. ಆದರೆ ಸರ್ಕಾರಿ ಬೊಕ್ಕಸದಿಂದ ನನಗೆ ಹಣ ನೀಡಲಾಗುತ್ತಿದೆ ಎಂದು ತಿಳಿದಿರಲಿಲ್ಲ’ ಎಂದು ವಾದಿಸಿದ್ದರು.

ಆದರೆ ಈಗ ತಮ್ಮ ಬಾಕಿ ಸಂಭಾವನೆ ₹ 2 ಕೋಟಿಯನ್ನು ನೀಡುವಂತೆ ಜೇಠ್ಮಲಾನಿ ಕೇಳಿದ್ದು, ಈ ಮೊತ್ತವನ್ನು ಕೇಜ್ರಿವಾಲ್ ತಮ್ಮ ಜೇಬಿನಿಂದ ಭರಿಸುವುದಿಲ್ಲ. ಹೀಗಾಗಿ ಈ ಇಬ್ಬರ ಜಗಳದಲ್ಲಿ ದೆಹಲಿ ಬೊಕ್ಕಸಕ್ಕೆ ಹೊರೆ ಬೀಳುತ್ತಿದೆ

Leave a Reply