ಪಕ್ಷ ಸಂಘಟನೆ ನಂತರ ಸರ್ಕಾರದ ಹುದ್ದೆಗೂ ಅಮಿತ್ ಶಾ ತಯಾರು, ಗುಜರಾತ್ ನಿಂದ ರಾಜ್ಯಸಭೆಗೆ

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡಲು ಸಕಲ ಸಿದ್ಧತೆ ನಡೆಸಿದ್ದಾರೆ. ಇಷ್ಟು ದಿನಗಳ ಕಾಲ ಬಿಜೆಪಿ ಸಂಘಟನೆ ಹಾಗೂ ಚುನಾವಣಾ ತಂತ್ರಗಾರಿಕೆಯಲ್ಲಿ ಹೆಚ್ಚು ನಿರತರಾಗಿದ್ದ ಅಮಿತ್ ಶಾ, ಇದೇ ಮೊದಲ ಬಾರಿಗೆ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಬುಧವಾರ ನಡೆದ ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ಅಮಿತ್ ಶಾ ಅವರು ಸಂಸತ್ತಿನಲ್ಲೂ ಕಾರ್ಯ ನಿರ್ವಹಿಸುವ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡಿತು. ಅದರೊಂದಿಗೆ ಅಮಿತ್ ಶಾ, ಮುಂಬರುವ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಈ ನಿರ್ಧಾರ ಹಾಗೂ ಅದರ ಹಿಂದಿರುವ ರಾಜಕೀಯ ಲೆಕ್ಕಾಚಾರದ ಬಗ್ಗೆ ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿರುವುದಿಷ್ಟು…

‘ಸದ್ಯ ಅಮಿತ್ ಶಾ ಅವರು ಗುಜರಾತ್ ವಿಧಾನ ಸಭೆಯ ಸದಸ್ಯರಾಗಿದ್ದಾರೆ. ಪ್ರಸ್ತುತ ದೇಶದಾದ್ಯಂತ ಬಿಜೆಪಿ ಭರ್ಜರಿ ಜಯಭೇರಿ ಬಾರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೇವಲ ವಿಧಾನ ಸಭೆಗೆ ಮಾತ್ರ ಸೀಮಿತವಾಗದೇ, ಸಂಸತ್ತಿನ ಹೊರಗೆ ಹಾಗೂ ಒಳಗೆ ಪಕ್ಷವನ್ನು ಮುನ್ನಡೆಸಬೇಕಿದೆ. ಅಮಿತ್ ಶಾ ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವುದಕ್ಕಿಂತ ರಾಷ್ಟ್ರ ರಾಜಕಾರಣಕ್ಕೆ ಕಾಲಿಡುವುದು ಸೂಕ್ತ ಎಂದು ಸಂಸದೀಯ ಸಮಿತಿ ನಿರ್ಧರಿಸಿದೆ. ಹೀಗಾಗಿಯೇ ಅಮಿತ್ ಶಾ ಅವರನ್ನು ರಾಜ್ಯ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಳಿಕೊಳ್ಳಲಾಗಿದೆ.

ಅಮಿತ್ ಶಾ ಅವರು ರಾಜ್ಯಸಭೆಗೆ ಆಯ್ಕೆಯಾದರೆ, ಕೇವಲ ರಾಷ್ಟ್ರ ರಾಜಕಾರಣ ಹಾಗೂ ಪಕ್ಷವನ್ನು ನಿಭಾಯಿಸುವುದು ಮಾತ್ರವಲ್ಲ. ಇದರ ಜತೆಗೆ ಪ್ರಮುಖ ನಿರ್ಧಾರ ರೂಪಿಸುವ ವೇಳೆ ಅಮಿತ್ ಶಾ ಸರ್ಕಾರದ ಜತೆ ಭಾಗಿಯಾಗಿ ಕೆಲಸ ಮಾಡಬಹುದು. ಇನ್ನು ಒಂದು ರಾಜ್ಯವನ್ನು ಪ್ರತಿನಿಧಿಸುವ ಮೂಲಕ ಜನರ ಕುಂದುಕೊರತೆಗಳನ್ನು ಆಲಿಸುವ ಅವಕಾಶ ಸಿಗಲಿದೆ.

ಸದ್ಯ ರಾಜ್ಯಸಭೆಯಲ್ಲಿ ಎನ್ಡಿಎ ಮೈತ್ರಿಕೂಟ ಬಹುಮತದ ಕೊರತೆ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವೆಂಕಯ್ಯ ನಾಯ್ಡು ಅವರನ್ನು ಉಪರಾಷ್ಟ್ರಪತಿಯನ್ನಾಗಿ ಮಾಡಿ, ಅವರ ಜತೆ ಅಮಿತ್ ಶಾ ಅವರನ್ನು ರಾಜ್ಯಸಭೆಗೆ ಕಳುಹಿಸಿದರೆ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ.’

Leave a Reply