ಅಮೆರಿಕ ಸೇನೆಯಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ, ಬರಾಕ್ ಒಬಾಮರ ನಿರ್ಧಾರವನ್ನು ಟ್ರಂಪ್ ಬದಲಿಸಲು ಮುಂದಾಗಿದ್ದು ಏಕೆ?

ಡಿಜಿಟಲ್ ಕನ್ನಡ ಟೀಮ್:

ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅಮೆರಿಕ ಸೇನೆಯಿಂದ ತೃತೀಯ ಲಿಂಗಿಗಳನ್ನು ನಿಷೇಧಿಸಲಾಗುವುದು’ ಎಂಬ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರ ಈ ನಿರ್ಧಾರದ ಹಿಂದೆ ರಾಜಕೀಯ ಲೆಕ್ಕಾಚಾರಗಳಿದ್ದರೂ ಇದರಿಂದ ಈಗಾಗಲೇ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ತೃತೀಯ ಲಿಂಗಿಗಳ ಭವಿಷ್ಯದ ಮೇಲೆ ಅನಿಶ್ಚಿತತೆ ಆವರಿಸುವಂತೆ ಮಾಡಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಸಲಿಂಗಿಗಳ, ತೃತೀಯ ಲಿಂಗಿಗಳ ಪರವಾಗಿ ಹೋರಾಟ ನಡೆಸುವ ಭರವಸೆ ನೀಡಿದ್ದ ಟ್ರಂಪ್, ದಿಢೀರನೆ ಈ ನಿರ್ಧಾರದ ಬಗ್ಗೆ ಹೇಳಿಕೆ ನೀಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಸುದೀರ್ಘ ವರ್ಷಗಳ ಪ್ರಯತ್ನಗಳ ನಂತರ ಅಮೆರಿಕ ಸೇನೆಯಲ್ಲಿ ಲಿಂಗ ತಾರತಮ್ಯವನ್ನು ಅಳಿಸುವ ಸಲುವಾಗಿ ಬರಾಕ್ ಒಬಾಮ ಸರ್ಕಾರ ತೃತೀಯ ಲಿಂಗಿಗಳು ಸೇನೆಗೆ ಸೇರಲು ಅವಕಾಶ ನೀಡಿತ್ತು. ಆದರೆ ಈ ನಿರ್ಧಾರವನ್ನು ಬದಲಿಸಲು ಟ್ರಂಪ್ ಮುಂದಾಗಿರುವುದೇಕೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಅದಕ್ಕೆ ಟ್ರಂಪ್ ಟ್ವೀಟರ್ ಮೂಲಕ ನೀಡಿರುವ ಸಮರ್ಥನೆ ಹೀಗಿದೆ…

‘ಈ ವಿಷಯದ ಕುರಿತಾಗಿ ಈಗಾಗಲೇ ಸೇನೆಯ ಜೆನರಲ್ ಗಳು ಹಾಗೂ ಸೇನಾ ತಜ್ಞರ ಸಲಹೆಯನ್ನು ಪಡೆಯಲಾಗಿದ್ದು, ಅದರಂತೆ ಅಮೆರಿಕ ಸರ್ಕಾರ ಸೇನೆಯಿಂದ ತೃತೀಯ ಲಿಂಗಿಗಳನ್ನು ನಿಷೇಧಿಸಲು ಮುಂದಾಗಿದೆ. ಅಮೆರಿಕ ಸೇನೆಯು ಸದಾ ಗೆಲುವಿನ ಕಡೆಗೆ ಮಾತ್ರ ಗಮನಹರಿಸಬೇಕಿದ್ದು, ತೃತೀಯ ಲಿಂಗಿಗಳು ಸೇನೆಯಲ್ಲಿರುವುದರಿಂದ ವೈದ್ಯಕೀಯ ವೆಚ್ಚ ಹೆಚ್ಚಳದ ಜತೆಗೆ ಅನಗತ್ಯ ತೊಂದರೆಗಳನ್ನು ದೂರವಿರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.’

‘ಸದ್ಯ ಸೇನೆಯಲ್ಲಿರುವ ತೃತೀಯ ಲಿಂಗಿಗಳನ್ನು ತಕ್ಷಣವೇ ಸೇವೆಯಿಂದ ಕಿತ್ತು ಹಾಕಬೇಕೆ ಅಥವಾ ಬೇಡವೇ ಎಂಬುದರ ಕುರಿತಾಗಿ ಇನ್ನು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಶ್ವೇತಭವನ ಹಾಗೂ ಪೆಂಟಗನ್ ಈ ಕುರಿತು ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ. ’ ಎಂದು ಮಾಹಿತಿ ನೀಡಿದ್ದಾರೆ ಟ್ರಂಪ್ ವಕ್ತಾರರಾದ ಸಾರಾ ಸ್ಯಾಂಡರ್ಸ್.

Leave a Reply