ಬಸಿರ್ಹಾತ್ ಗಲಭೆ: ಜೈಲಿನಲ್ಲೇ ಕೊಳಿಯುತ್ತಿದ್ದಾನೆ ಬಾಲ ಆರೋಪಿ, ಇವನಿಗೇಕಿಲ್ಲ ಉದಾರವಾದಿಗಳ ಕಣ್ಣೀರು?

ಡಿಜಿಟಲ್ ಕನ್ನಡ ಟೀಮ್:

ಇಸ್ಲಾಂ ಧರ್ಮದ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ ಆರೋಪ ಹೊತ್ತು ಬಂಧನವಾಗಿದ್ದ ಬಾಲಕ ಇನ್ನು ಜೈಲಿನಲ್ಲೇ ಕೊಳೆಯುತ್ತಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಸರಿಯಾಗಿ ದಾಖಲೆಯನ್ನು ಪರಿಶೀಲಿಸದೇ ಈತ 18 ವರ್ಷಕ್ಕಿಂತ ಮೇಲ್ಪಟ್ಟವನು ಎಂದು ನಿರ್ಧರಿಸಿದ್ದಾರೆ. ಆದರೆ ವಾಸ್ತವದಲ್ಲಿ ಈತ 18 ವರ್ಷಕ್ಕಿಂತ ಕಡಿಮೆ ವಯೋಮಾನದವನಾಗಿದ್ದು, ಬಾಲಾಪರಾಧಿಗಳ ವರ್ಗಕ್ಕೆ ಸೇರುತ್ತಾನೆ. ಹೀಗಾಗಿ ಈಗ ಕೆಲವು ಹಿಂದೂಪರ ಸಂಘಟನೆಗಳು ಈತನ ವಯೋಮಾನಕ್ಕೆ ಸಂಬಂಧಿಸಿದ ಕೆಲವು ಸಾಕ್ಷ್ಯಾಧಾರಗಳನ್ನು ಹಿಡಿದು ಆತನ ಬೆನ್ನಿಗೆ ನಿಂತಿದ್ದಾರೆ.

ಇಷ್ಟಕ್ಕೂ ಈತ ಮಾಡಿದ್ದು ಒಂದು ಆಕ್ಷೇಪಾರ್ಹ ಫೇಸ್ಬುಕ್ ಪೋಸ್ಟ್. ‘ಒಂದು ಪ್ರಚೋದಿತ ಹೇಳಿಕೆಯಿಂದ ಹಿಂದು ಧರ್ಮ ಅಲುಗಾಡಿಬಿಡುತ್ತದೆಯೇನ್ರೀ? ಮಾತು ಒಪ್ಪಲಾಗದ್ದಾದರೂ ಆ ಮಾತಾಡುವ ಅವಕಾಶ ಇರಬೇಕಾಗುತ್ತದೆ. ಅದು ಅಭಿವ್ಯಕ್ತಿ ಸ್ವಾತಂತ್ರ್ಯ’ ಅಂತೆಲ್ಲ ಬೇರೆ ಪ್ರಕರಣಗಳಲ್ಲಿ ಓತಪ್ರೋತವಾಗಿ ಸಹಿಷ್ಣುತೆಯ ಪಾಠ ಮಾಡುವ ಉದಾರವಾದಿಗಳ್ಯಾರೂ ಈ ಬಾಲಕನ ಪರ ಧ್ವನಿ ಎತ್ತಿಲ್ಲ. ಏಕೆಂದರೆ ಇಲ್ಲಿ ಆಕ್ಷೇಪ ಎತ್ತಿರುವುದು ಇಸ್ಲಾಂವಾದಿಗಳಲ್ಲವೇ?

ಹಾಗೆಂದೇ, ನಿರ್ಭಯಾಳನ್ನು ಅಮಾನುಷವಾಗಿ ಅತ್ಯಾಚಾರ ಮಾಡಿದವ ಬಾಲಪರಾಧದ ಕೆಟಗರಿಯಲ್ಲಿ ಅದಾಗಲೇ ಸಮಾಜಕ್ಕೆ ಹಿಂತಿರುಗಿಬಿಟ್ಟಿದ್ದಾನೆ. ಒಂದು ಫೇಸ್ಬುಕ್ ಪೋಸ್ಟಿಗಾಗಿ ಈ ಹುಡುಗ ಕೊಳೆಯುತ್ತಿದ್ದಾನೆ.

ಇದೇ ಜುಲೈ 2ರಂದು ಈ ಯುವಕನ ಫೇಸ್ ಬುಕ್ ಪೋಸ್ಟ್ ಮುಸಲ್ಮಾನರ ಭಾವನೆಯನ್ನು ಕೇರಳಿಸಿತ್ತು. ಪರಿಣಾಮ ಪಶ್ಚಿಮ ಬಂಗಾಳದ ಬಸಿರ್ಹಾತ್ ನಲ್ಲಿ ಕೋಮುಗಲಭೆಯೂ ಆಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದಾಖಲೆಗಳನ್ನು ಪರಿಶೀಲಿಸದೇ ಈತನನ್ನು ಬಾಲಆರೋಪಿಯನ್ನಾಗಿ ಪರಿಗಣಿಸದೇ ಸಾಮಾನ್ಯ ಆರೋಪಿಯನ್ನಾಗಿ ಎಫ್ಐಆರ್ ನಲ್ಲಿ ಸೇರಿಸಿದ್ದಾರೆ. ಕಾನೂನಿನ ಪ್ರಕಾರ ಬಾಲಾಪರಾಧದ ಆರೋಪಿಗಳನ್ನು ಸಾಮಾನ್ಯ ಆರೋಪಿಗಳ ವಿಭಾಗದಲ್ಲಿ ಇರಿಸುವಂತಿಲ್ಲ. ಅಲ್ಲದೆ ಬಾಲಾಪರಾಧಿಗಳಿಗೆ ಇರುವ ಪ್ರತ್ಯೇಕ ನ್ಯಾಯ ಮಂಡಳಿಯಲ್ಲಿ ವಿಚಾರಣೆ ನಡೆಯಬೇಕು. ಆದರೆ ಈ ಪ್ರಕರಣದಲ್ಲಿ ಈತನ ವಯಸ್ಸು 18 ಎಂದು ಪೊಲೀಸರು ದಾಖಲಿಸಿರುವ ಹಿನ್ನೆಲೆಯಲ್ಲಿ ಅಪ್ರಾಪ್ತ ವಯಸ್ಕ ಆರೋಪಿಯನ್ನು ಹಿರಿಯ ಆರೋಪಿಗಳ ಜತೆಯಲ್ಲಿ ಇರಿಸಲಾಗಿದ್ದು, ದೊಡ್ಡ ಮಟ್ಟದಲ್ಲಿ ಕಾನೂನಿನ ಉಲ್ಲಂಘನೆಯಾಗಿದೆ.

ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿಯಾಗಿರುವ ಈತ ಜನಿಸಿದ್ದು 2000ದಲ್ಲಿ. ನಾಲ್ಕು ದಿನಗಳ ಹಿಂದಷ್ಟೇ ಈತನಿಗೆ 17 ವರ್ಷ ತುಂಬಿದೆ. ಸಾಮಾನ್ಯವಾಗಿ ಪ್ರಥಮ ಪಿಯುಸಿಯ ಮಕ್ಕಳ ಪೈಕಿ ಬಹುತೇಕರು, 16 ಅಥವಾ 17 ವರ್ಷದ ಆಸುಪಾಸಿನವರಾಗಿರುತ್ತಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸದೇ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿರುವುದು ಅಚ್ಚರಿಯ ಜತೆಗೆ ಅನುಮಾನವನ್ನು ಹುಟ್ಟುಹಾಕುತ್ತಿದೆ.

Leave a Reply