ಭಾರತದ ವಿರುದ್ಧ ಎಗರಾಡುತ್ತಿದ್ದ ಚೀನಾ ಮೃದುವಾಯಿತಾ? ಯುದ್ಧ ಬೇಡ ಎಂದು ಎಚ್ಚರಿಕೆ ನೀಡುತ್ತಾ ಚೀನಾ ಮಾಧ್ಯಮ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

‘ಗಡಿ ವಿಚಾರವಾಗಿ ಭಾರತ ಹಾಗೂ ಚೀನಾ ನಡುವಣ ಸಂಬಂಧ ದಿನೇ ದಿನೆ ಹದಗೆಡುತ್ತಿದೆ. ಇಂತಹ ಸಂದರ್ಭದಲ್ಲಿ ಯುದ್ಧ ನಡೆದದ್ದೇ ಆದರೆ ಯುದ್ಧದ ಪರಿಣಾಮ ಕೇವಲ ಭಾರತ ಮತ್ತು ಚೀನಾ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಿಗೆ ಇತರೆ ಹಲವು ದೇಶಗಳ ಮೇಲೂ ಋಣಾತ್ಮಕ ಪರಿಣಾಮ ಬೀರಲಿದೆ…’ ಇದು ಚೀನಾ ಸರ್ಕಾರದ ಸುದ್ದಿ ಸಂಸ್ಥೆಯೊಂದು ಯುದ್ಧದ ಕುರಿತಾಗಿ ನೀಡಿರುವ ಎಚ್ಚರಿಕೆ.

ದೊಕಲಂ ಗಡಿ ವಿಚಾರವಾಗಿ ಭಾರತ ಹಾಗೂ ಚೀನಾ ನಡುವೆ ತಿಕ್ಕಾಟ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಉಭಯ ದೇಶಗಳ ಉನ್ನತ ಅಧಿಕಾರಿಗಳು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಹಾಗೂ ಚೀನಾ ವಿದೇಶಾಂಗ ಸಚಿವಾಲಯದ ಕೌನ್ಸಿಲರ್ ಯಾಂಗ್ ಜೈಚಿ ಬ್ರಿಕ್ಸ್ ಸಭೆಯ ವೇಳೆ ಮಾತುಕತೆ ನಡೆಸಿದ್ದು, ಎರಡು ದೇಶಗಳ ನಡುವಣ ಬಿಕ್ಕಟ್ಟು ಬಗೆಹರಿಸಲು ರಾಜತಾಂತ್ರಿಕ ಪ್ರಯತ್ನ ನಡೆಸಲಾಗಿದೆ.

ಗುರುವಾರ ಈ ಇಬ್ಬರು ಅಧಿಕಾರಿಗಳ ನಡುವಣ ಸಭೆ ಆರಂಭವಾಗುವ ಮುನ್ನ ಈ ಸಭೆಯ ಮಹತ್ವದ ಕುರಿತು ಚೀನಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಕ್ಸಿನ್ಹುವಾ ವಿಶ್ಲೇಷಣೆ ಮಾಡಿದ್ದು, ಯುದ್ಧದಿಂದಾಗಲಿರುವ ಅನಾಹುತದ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಅಲ್ಲದೆ ಶುಕ್ರವಾರ ಅಜಿತ್ ದೊವಲ್ ಅವರು ಚೀನಾ ಅಧ್ಯಕ್ಷ ಜಿನ್ ಪಿಂಗ್ ಅವರನ್ನು ಭೇಟಿಯಾಗುವ ಮುನ್ನ ಉದ್ದೇಶಪೂರ್ವಕವಾಗಿ ಯುದ್ಧದ ಕುರಿತು ಎಚ್ಚರಿಕೆ ರವಾನಿಸುವ ಪ್ರಯತ್ನ ನಡೆದಿದೆ. ಈ ಸುದ್ದಿ ಸಂಸ್ಧೆ ತನ್ನ ವರದಿಯಲ್ಲಿ ಹೇಳಿರೋದಿಷ್ಟು…

‘ಭಾರತ ಹಾಗೂ ಚೀನಾ ದೇಶಗಳು ಸಾಂಪ್ರದಾಯಿಕ ಎದುರಾಳಿಗಳಲ್ಲ. ಇವು ಹುಟ್ಟಿನಿಂದಲೇ ದ್ವೇಷವನ್ನು ಬೆಳೆಸಿಕೊಂಡಿಲ್ಲ. ಉಭಯ ದೇಶಗಳು ಪರಸ್ಪರ ನಂಬಿಕೆ ವಿಶ್ವಾಸವನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಆಮೂಲಕ ಯುದ್ಧವನ್ನು ತಡೆಯುವ ನಿಟ್ಟಿನಲ್ಲಿ ಸಕಲ ಪ್ರಯತ್ನಗಳು ನಡೆಯಬೇಕು.

ಜಾಗತಿಕವಾಗಿ ಎಲ್ಲಾ ದೇಶಗಳು ಪರಸ್ಪರ ಅವಲಂಬಿತವಾಗಿರುವ ಸಂದರ್ಭದಲ್ಲಿ ಭಾರತ ಹಾಗೂ ಚೀನಾ ದೇಶಗಳ ನಡುವೆ ಯುದ್ಧ ನಡೆದದ್ದೇ ಆದರೆ, ಅದು ಇತರೆ ರಾಷ್ಟ್ರಗಳಮೇಲೂ ಪರಿಣಾಮ ಬೀರಲಿದೆ. ಪಾಶ್ಚಿಮಾತ್ಯ ರಾಷ್ಟ್ರಗಳೂ ಇದರಿಂದ ಹೊರತಾಗಿಲ್ಲ.

ಇತ್ತೀಚೆಗೆ ಉದ್ಭವಿಸಿರುವ ಗಡಿ ಸಮಸ್ಯೆ, ಭಾರತ ಯಾ ಮಟ್ಟದಲ್ಲಿ ಚೀನಾ ಮೇಲೆ ಅಪನಂಬಿಕೆಯನ್ನು ಹೊಂದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಚೀನಾ ದೇಶ ಭಾರತೀಯರ ಹಿತಾಸಕ್ತಿಯನ್ನು ಬಯಸುತ್ತದೆ ಎಂಬುದನ್ನು ಭಾರತ ಅರ್ಥ ಮಾಡಿಕೊಳ್ಳಬೇಕಿದೆ. ಅಭಿವೃದ್ಧಿಯ ಪಥದಲ್ಲಿ ಭಾರತ ಚೀನಾದ ಹೆಗಲಿಗೆ ಹೆಗಲು ಕೊಟ್ಟು ಸಾಗಬೇಕು. ಭಾರತ ಹಾಗೂ ಚೀನಾ ನಡುವೆ ಸಾಕಷ್ಟು ಸಾಮ್ಯತೆಗಳಿದ್ದು, ಈ ದೇಶಗಳು ವೈರಿ ರಾಷ್ಟ್ರಗಳಾಗಿರುವುದರ ಬದಲಿಗೆ ಸ್ನೇಹಿತ ರಾಷ್ಟ್ರಗಳಾಗಿ, ಜಾಗತಿಕವಾಗಿ ಕಾಡುತ್ತಿರುವ ಪರಿಸರ ಮಾಲೀನ್ಯದಂತಹ ವಿಷಯಗಳಲ್ಲಿ ಒಗ್ಗಟ್ಟಿನಿಂದ ಹೋರಾಡಬೇಕು.

ದೋವಲ್ ಅವರು ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಲು ಚೀನಾಗೆ ಆಗಮಿಸಿದ್ದು, ಎರಡು ದೇಶಗಳು ಮಾತುಕತೆಯ ಮೂಲಕ ತಮ್ಮ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ಭರವಸೆ ಇದೆ.’

ಕಳೆದ ಒಂದು ತಿಂಗಳಿನಿಂದ ‘ಭಾರತ ತನ್ನ ಸೇನೆಯನ್ನು ಹಿಂಪಡೆಯಬೇಕು’ ಎಂದು ಗಟ್ಟಿ ಧ್ವನಿಯಲ್ಲಿ ಆದೇಶ ನೀಡುತ್ತಿದ್ದ ಚೀನಾ ಅಧಿಕಾರಿಗಳು ಹಾಗೂ ಚೀನಾ ಸರ್ಕಾರದ ಮಾಧ್ಯಮಗಳು, ಇದೇ ಮೊದಲ ಬಾರಿಗೆ ಆ ವಿಷಯ ಪ್ರಸ್ತಾಪಿಸದೇ ಯುದ್ಧದ ಬದಲಿಗೆ ಶಾಂತಿಯ ಮಂತ್ರ ಜಪಿಸಿದೆ. ಇದರೊಂದಿಗೆ ಚೀನಾ ತನ್ನ ನಿಲುವನ್ನು ಮೃದುವಾಗಿಸಿಕೊಂಡಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಇಂದು ದೊವಲ್ ಹಾಗೂ ಚೀನಾ ಅಧ್ಯಕ್ಷರ ಭೇಟಿ ನಂತರ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ಕಡೆಗೆ ತಿರುಗಲಿದೆ ಎಂಬುದರ ಕುರಿತು ಸ್ಪಷ್ಟ ಚಿತ್ರಣ ದೊರಕಲಿದೆ.

Leave a Reply