ಸಿಪಿಎಂ ಗೂಂಡಾಗಳಿಂದ ಬಿಜೆಪಿ ಕಚೇರಿ ಮೇಲೆ ದಾಳಿ, ಸ್ಥಳದಲ್ಲೇ ಇದ್ದರು ಸುಮ್ಮನಿದ್ರು ಪೊಲೀಸರು!

ಡಿಜಿಟಲ್ ಕನ್ನಡ ಟೀಮ್:

ನಿನ್ನೆ ಮಧ್ಯರಾತ್ರಿ ಕೇರಳದ ತಿರುವನಂತಪುರದಲ್ಲಿರುವ ಬಿಜೆಪಿ ಕಚೇರಿ ಹಾಗೂ ಕೆಲವು ನಾಯಕರ ಮನೆಗಳ ಮೇಲೆ ಸಿಪಿಎಂ ಗೂಂಡಾಗಳು ದಾಳಿ ಮಾಡಿದ್ದಾರೆ. ಕೇರಳ ಬಿಜೆಪಿ ಅಧ್ಯಕ್ಷ ರಾಜಶೇಖರನ್ ಇವರ ಪ್ರಮುಖ ಗುರಿ ಎಂಬ ಆರೋಪಗಳು ಕೇಳಿಬಂದಿವೆ. ಈ ಎಲ್ಲದರ ಮಧ್ಯೆ ಬಿಜೆಪಿ ಕಚೇರಿ ಮೇಲಿನ ದಾಳಿಯು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಸ್ಥಳದಲ್ಲೇ ಇದ್ದರೂ ಈ ದಾಳಿಯನ್ನು ಪ್ರೇಕ್ಷಕರಂತೆ ನೋಡುತ್ತಾ ನಿಂತಿರುವುದು ತಿಳಿದು ಬಂದಿದೆ.

ಕೇವಲ ಬಿಜೆಪಿ ನಾಯಕರ ಮನೆ ಮತ್ತು ಕಚೇರಿ ಮೇಲೆ ದಾಳಿಯಷ್ಟೇ ಅಲ್ಲ, ಸಿಪಿಎಂ ನಾಯಕರು ಹಾಗೂ ಕಾರ್ಯಕರ್ತರ ಮನೆ ಮೇಲೂ ದಾಳಿ ನಡೆದಿವೆ. ಶುಕ್ರವಾರ ಬೆಳಗ್ಗೆ ಬಿಜೆಪಿ ನಾಯಕರು ತಮ್ಮ ಕಚೇರಿ ಮೇಲಿನ ದಾಳಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯವನ್ನು ಬಿಡುಗಡೆ ಮಾಡಿದ್ದು, ಈ ಕುರಿತು ಎರಡೂ ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಸಿಸಿಟಿವಿಯ ಮಾಹಿತಿ ಪ್ರಕಾರ, ನಿನ್ನೆ ಮಧ್ಯರಾತ್ರಿ 1.19ರ ಸುಮಾರಿಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಐವರು ಗೂಂಡಾಗಳು ಕೈಯಲ್ಲಿ ದೊಣ್ಣೆ ಹಿಡಿದಿದ್ದರು. ಬಿಜೆಪಿ ಕಚೇರಿಯಿಂದ ಕೆಲವೇ ಮೀಟರ್ ಗಳಷ್ಟು ದೂರದಲ್ಲಿ ಪೋಲಿಸರಿದ್ದರು. ಈ ವೇಳೆ ಈ ಗೂಂಡಾಗಳು ಆಗಮಿಸುವುದನ್ನು ಕಂಡ 3 ಪೊಲೀಸರು ಅಲ್ಲಿಂದ ಪಲಾಯನ ಮಾಡಿ ಅವಿತುಕೊಂಡರೆ, ಒಬ್ಬ ಪೊಲೀಸ್ ಈ ಗೂಂಡಾಗಳ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಆ ಅಧಿಕಾರಿಯ ಮಾತು ಲೆಕ್ಕಿಸದ ಕಿಡಿಗೇಡಿಗಳು ಕಚೇರಿಯ ಮೇಲೆ ಕಲ್ಲು ತೂರಾಟ ಮಾಡಿ, ಒಳಗೆ ನುಗ್ಗಿ ದೊಣ್ಣೆಯಿಂದ ವಸ್ತುಗಳನ್ನು ಹೊಡೆದು ಹಾಕಿದ್ದಾರೆ.

ಸಿಪಿಎಂ ಕೌನ್ಸಿಲರ್ ಐಪಿ.ಬಿನು ಎಂಬಾತ ಈ ದಾಳಿಯಲ್ಲಿ ಭಾಗಿಯಾಗಿರುವುದು ಸಿಸಿಟಿವಿಯಲ್ಲಿನ ದೃಶ್ಯಾವಳಿಗಳಿಂದ ಖಚಿತವಾಗಿದ್ದು, ತಮ್ಮನ್ನು ತಡೆಯಲು ಬಂದ ಪೊಲೀಸರ ವಿರುದ್ಧವೇ ಬಿನು ವಾಗ್ವಾದ ನಡೆಸಿದ್ದ.

ಇತ್ತೀಚೆಗೆ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಯೊಬ್ಬ ಎಸ್ಎಫ್ಐ ಬಾವುಟವನ್ನು ಹಾಳುಮಾಡಿದ ಎಂಬ ಆರೋಪದ ಮೇಲೆ ಪ್ರತೀಕಾರಕ್ಕೆ ಈ ಸರಣಿ ದಾಳಿಗಳು ನಡೆದಿವೆ ಎಂದು ಅಂದಾಜಿಸಲಾಗಿದೆ. ಗುರುವಾರ ಸಂಜೆಯಿಂದ ಶುಕ್ರವಾರ ಬೆಳಗ್ಗೆವರೆಗೂ ಸರಣಿ ದಾಳಿ ನಡೆದಿವೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೇಶ್ ಕೊಡಿಯೇರಿ ಅವರ ಮನೆ ಮೇಲೂ ದಾಳಿ ನಡೆದಿದೆ.

ಸಿಪಿಎಂ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಮ್ ರಾಜಶೇಖರನ್ ಅವರನ್ನು ಗುರಿಯಾಗಿಸಿಯೇ ಈ ದಾಳಿ ಮಾಡಿದ್ದಾರೆ ಎಂಬುದು ಬಿಜೆಪಿ ನಾಯಕರ ಆರೋಪವಾದರೆ, ಈ ದಾಳಿಗಳನ್ನು ಮಾಡಿಸುವ ಮೂಲಕ ಬಿಜೆಪಿ ನಾಯಕರು ಮೆಡಿಕಲ್ ಕಾಲೇಜು ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಎಂಬುದು ಸಿಪಿಎಂ ಪ್ರತ್ಯಾರೋಪ.

ಈ ಸರಣಿ ದಾಳಿಗಳ ಕುರಿತಾಗಿ ಮಾತನಾಡಿರುವ ತಿರುವನಂತಪುರದ ಐಜಿ ಮನೋಜ್ ಅಬ್ರಹಾಂ, ‘ನಗರದ ಎಲ್ಲೆಡೆ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, 450 ಪೊಲೀಸರನ್ನು ನಿಯೋಜಿಸಲಾಗಿದೆ. ಈ ಸರಣಿ ದಾಳಿಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ. ಇನ್ನು ಕರ್ತವ್ಯ ಮರೆತು ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ’ ಎಂದರು.

Leave a Reply