ಪಾಕ್ ಪ್ರಧಾನಿ ಹುದ್ದೆಯಿಂದ ನವಾಜ್ ಅನರ್ಹ, ಮತ್ತೆ ಮಿಲಿಟರಿ ನೇರ ಹಿಡಿತಕ್ಕೆ ಹೋಗುತ್ತಾ ಪಾಕಿಸ್ತಾನ?

ಡಿಜಿಟಲ್ ಕನ್ನಡ ಟೀಮ್:

ಪನಾಮಾ ದಾಖಲೆಗಳ ಸೋರಿಕೆಯಿಂದಾಗಿ ಹಣ ದುರುಪಯೋಗ ಹಾಗೂ 1990ರಲ್ಲಿ ಲಂಡನ್ ನಲ್ಲಿ ಆಸ್ತಿ ಸಂಪಾದನೆಯ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರನ್ನು ಆ ಹುದ್ದೆಯಿಂದ ಅನರ್ಹಗೊಳಿಸಿ ಪಾಕ್ ಸುಪ್ರೀಂ ಕೋರ್ಟ್ ಮಹತ್ತರ ತೀರ್ಪು ಪ್ರಕಟಿಸಿದೆ.

2016ರಲ್ಲಿ ಪನಾಮಾ ದಾಖಲೆಗಳು ಸೋರಿಕೆಯಾಗಿದ್ದು, ಈ ದಾಖಲೆಗಳ ಮೂಲಕ ಶರೀಫ್, ವಿದೇಶಿ ಕಂಪನಿಗಳ ಮೂಲಕ ತಮ್ಮ ಅಕ್ರಮ ಆಸ್ತಿಯನ್ನು ಹೊಂದಿದ್ದು, ಈ ಕಂಪನಿಗಳನ್ನು ಶರೀಫ್ ಪುತ್ರರೇ ನಿಭಾಯಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಪೀಠ, ನವಾಜ್ ಶರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸುವುದರ ಜತೆಗೆ, ನ್ಯಾಷನಲ್ ಅಕೌಂಟಬಲಿಟಿ ಬ್ಯೂರೊ ಇವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ. ಈ ಕುರಿತು ಪೀಠದ ಅಭಿಪ್ರಾಯವನ್ನು ತಿಳಿಸಿದ ನ್ಯಾಯಮೂರ್ತಿ ಎಜಾಜ್ ಅಫ್ಜಲ್ ಖಾನ್ ಹೇಳಿದಿಷ್ಟು…

‘ಜಂಟಿ ತನಿಖಾ ತಂಡ ಸಂಗ್ರಹಿಸಿದ ಎಲ್ಲಾ ಸಾಕ್ಷ್ಯಾಧಾರಗಳನ್ನು 6 ತಿಂಗಳ ಒಳಗಾಗಿ ಅಕೌಂಟಬಲಿಟಿ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗುವುದು. ಈ ನ್ಯಾಯಾಲಯದಲ್ಲಿ ನವಾಜ್ ಶರೀಫ್ ಜತೆಗೆ ಕ್ಯಾಪ್ಟನ್ ಮುಹಮದ್ ಸಫ್ದಾರ್, ಮರ್ಯಾಮ್, ಹಸನ್ ಮತ್ತು ಹುಸೇನ್ ನವಾಜ್ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಪ್ರಕರಣ ದಾಖಲಾದ ನಂತರ 30 ದಿನಗಳ ಒಳಗಾಗಿ ತೀರ್ಪು ಪ್ರಕಟಿಸಲಾಗುವುದು.’

ಈ ತೀರ್ಪಿನಿಂದ ಮುಂದಿನ ದಿನಗಳಲ್ಲಿ ನವಾಜ್ ಶರೀಫ್ ಅವರ ಬಂಧನವಾಗುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಶರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಸಾಕಷ್ಟು ಬಾರಿ ಮಿಲಿಟರಿ ಆಡಳಿತವನ್ನು ಕಂಡಿರುವ ಪಾಕಿಸ್ತಾನ, ಈ ಬೆಳವಣಿಗೆಯಿಂದ ಮತ್ತೆ ಅದೇ ಪರಿಸ್ಥಿತಿಗೆ ಸಿಲುಕುವುದೇ ಎಂಬ ಪ್ರಶ್ನೆ ಉದ್ಭವಿಸಿದೆ.

ಇದುವರೆಗೂ ಪಾಕಿಸ್ತಾನದ ಯಾವುದೇ ಪ್ರಧಾನಿ ಪೂರ್ಣಾವಧಿಯವರೆಗೂ ತಮ್ಮ ಅಧಿಕಾರವನ್ನು ನಿರ್ವಹಿಸಲು ಸಾಧ್ಯವಾಗಿಲ್ಲ. ಸದ್ಯ ಮೂರನೇ ಬಾರಿಗೆ ಪ್ರಧಾನಿಯಾಗಿರುವ ನವಾಜ್ ಶರೀಫ್, ಇನ್ನೊಂದು ವರ್ಷ ಪ್ರಧಾನಿಯಾಗಿ ಮುಂದುವರಿದಿದ್ದರೆ, ಈ ಇತಿಹಾಸ ನಿರ್ಮಾಣವಾಗುತ್ತಿತ್ತು. ಆದರೆ ಈಗ ಅದಕ್ಕೆ ಅಡ್ಡಿಯುಂಟಾಗಿದ್ದು, ಮುಂದಿನ ದಿನಗಳಲ್ಲಿನ ಪ್ರತಿಯೊಂದು ವಿದ್ಯಮಾನವೂ ಸಾಕಷ್ಟು ಕುತೂಹಲವಾಗಿರುವುದಂತೂ ಸ್ಪಷ್ಟ.

Leave a Reply