ಗುಜರಾತಿನಲ್ಲಿ ನಡೆಯುತ್ತಿರುವುದು ಸೋನಿಯಾ ಆಪ್ತ ಅಹ್ಮದ್ ಪಟೇಲರ ಅಸ್ತಿತ್ವ ಅಲ್ಲಾಡಿಸುವ ಅಮಿತೋತ್ಸಾಹದ ಸೆಣಸು!

ಡಿಜಿಟಲ್ ಕನ್ನಡ ಟೀಮ್:

ಕಳೆದ ಎರಡು ದಿನಗಳಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಆರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಉಳಿದ 40 ಶಾಸಕರನ್ನು ಬೆಂಗಳೂರಿನ ರೆಸಾರ್ಟ್ ಗೆ ಕರೆದುಕೊಂಡು ಬಂದಿದೆ. ಈ ಎಲ್ಲದರ ಹಿಂದೆ ದೊಡ್ಡ ಮಟ್ಟದ ರಾಜಕೀಯ ಲೆಕ್ಕಾಚಾರವಿದ್ದು, ಅದರ ಮೂಲವಾಗಿರೋದು ಆಗಸ್ಟ್ 8ರಂದು ಗುಜರಾತಿನಲ್ಲಿ ನಡೆಯಲಿರುವ ರಾಜ್ಯಸಭೆ ಚುನಾವಣೆ.

ಹೌದು, ಮುಂಬರುವ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸ್ಪರ್ಧಿಸುತ್ತಿದ್ದಾರೆ. ಇದರ ಬೆನ್ನಲ್ಲೇ ದಿಢೀರನೆ ಆರು ಕಾಂಗ್ರೆಸ್ ನಾಯಕರು ಬಿಜೆಪಿ ತೆಕ್ಕೆಗೆ ಸೇರಿರುವುದು ಪಕ್ಷಕ್ಕೆ ದೊಡ್ಡ ಆಘಾತವುಂಟುಮಾಡಿದೆ. ಗುಜರಾತಿನಲ್ಲಿ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಹುಮತ ಹೊಂದಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಜಯ ಸಾಧಿಸುವುದು ಖಚಿತವಾಗಿದೆ. ಆದರೆ ಉಳಿದಿರುವ ಮತ್ತೊಂದು ಸ್ಥಾನಕ್ಕೆ ಅಹ್ಮದ್ ಪಟೇಲ್ ಅವರು ಆಯ್ಕೆಯಾಗಿ ಮತ್ತೆ ರಾಜ್ಯಸಭೆಗೆ ಕಾಲಿಡಲು ಎದುರುನೋಡುತ್ತಿದ್ದಾರೆ. ಆದರೆ ಅನೇಕ ವರ್ಷಗಳಿಂದಲೂ ಅಹ್ಮದ್ ಪಟೇಲ್ ಅವರ ವಿರುದ್ಧದ ಆಕ್ರೋಶವನ್ನು ಎದೆಯಲ್ಲಿಟ್ಟುಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ, ಈಗ ತಮ್ಮ ಸೇಡನ್ನು ತೀರಿಸಿಕೊಳ್ಳಲು ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ.

ಅಹ್ಮದ್ ಪಟೇಲ್ ವಿರುದ್ಧ ಅಮಿತ್ ಶಾ ಈ ಪರಿಯ ದ್ವೇಷ ಕಾರುತ್ತಿರುವುದೇಕೆ ಎಂಬುದನ್ನು ಗಮನಿಸಿದರೆ, ಈ ಹಿಂದೆ ಅಮಿತ್ ಶಾ ಗುಜರಾತ್ ದಂಗೆ ಪ್ರಕರಣಗಳಲ್ಲಿ ಜೈಲು ಸೇರಿ, ನಂತರ ನಿರ್ದೋಷಿಯಾಗಿ ಹೊರಬಂದರಷ್ಟೆ. ಹೀಗೆ ತರಾತುರಿಯಲ್ಲಿ ಅಮಿತ್ ಶಾರನ್ನು ಜೈಲಿಗಟ್ಟುವ ಕೈಂಕರ್ಯವನ್ನು ಸೋನಿಯಾ ಪರವಾಗಿ ಅಹ್ಮದ್ ಪಟೇಲರೇ ಮುಂಚೂಣಿಯಲ್ಲಿದ್ದುಕೊಂಡು ಮಾಡಿದ್ದರೆಂಬುದು ರಾಜಕೀಯ ವಲಯ ಹೇಳುವ ಕತೆ. ಅಮಿತ್ ಶಾ ಅವರು ಈ ಹಿಂದೆ ಟಿವಿಗೆ ನೀಡಿದ ಸಂದರ್ಶನದಲ್ಲಿ ನಿಮಗೆ ರಾಜಕೀಯ ವಿರೋಧಿಗಳೊಂದಿಗೆ ಮಾತನಾಡಲು ಇಷ್ಟವಿಲ್ಲ ಅಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘ಹೌದು, ನನಗೆ ಸೋನಿಯಾ ಗಾಂಧಿ ಸೇರಿದಂತೆ ಕೆಲವರ ಜತೆ ಮಾತನಾಡಲು ಇಷ್ಟವಿಲ್ಲ. ಅವರೊಂದಿಗೆ ನಾನು ಮಾತನಾಡುವುದೂ ಇಲ್ಲ. ಒಂದು ವೇಳೆ ಮಾತನಾಡುವ ಅಗತ್ಯ ಬಂದರೆ, ಅದಕ್ಕಾಗಿಯೇ ಪಕ್ಷದಲ್ಲಿ ಇತರೆ ನಾಯಕರಿದ್ದಾರೆ. ನಾನು ಅವರೊಂದಿಗೆ ಮಾತನಾಡದಿರಲು ನನ್ನದೇ ಆದ ಕಾರಣಗಳೂ ಇವೆ’ ಎಂದಿದ್ದರು. ಹೀಗೆ ಎಲ್ಲಾ ಹಂತದಲ್ಲೂ ಕಾಂಗ್ರೆಸ್ ಹಾಗೂ ಅಹ್ಮದ್ ಪಟೇಲ್ ವಿರುದ್ಧ ಸೇಡು ಹೊಂದಿರುವ ಅಮಿತ್ ಶಾ ರಾಜ್ಯಸಭೆ ಚುನಾವಣೆಯನ್ನು ಸೇಡು ತೀರಿಸಿಕೊಳ್ಳಲು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

ಅಹ್ಮದ್ ಪಟೇಲ್ ವಿರುದ್ಧ ಬಿಜೆಪಿಯ ಮೂರನೇ ಅಭ್ಯರ್ಥಿ!

ಬಿಜೆಪಿ ಮೂರನೇ ಸ್ಥಾನಕ್ಕೆ ಅಹ್ಮದ್ ಪಟೇಲ್ ವಿರುದ್ಧ ವಾಘೆಲಾ ಅವರ ಆಪ್ತ ನಾಯಕ ಬಲ್ವಂತಸಿಂಗ್ ರಜಪೂತ್ ಅವರನ್ನು ಕಣಕ್ಕಿಳಿಸಿದೆ. ಬಲ್ವಂತಸಿಂಗ್ ಅವರಿಗೆ ಈಗಾಗಲೇ ಬಿಜೆಪಿಯ 31 ನಾಯಕರ ಮತಗಳು ಖಚಿತವಾಗಿದ್ದು, ಕಾಂಗ್ರೆಸ್ ಪಕ್ಷದ ಕೆಲವು ಶಾಸಕರಿಂದ ಅಡ್ಡಮತದಾನವಾಗುವ ನಿರೀಕ್ಷೆಯೂ ಇದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಎನ್ ಸಿಪಿಯ ಇಬ್ಬರು, ಜೆಡಿಯು ಒಬ್ಬ ಶಾಸಕರ ಬೆಂಬಲವನ್ನು ಪಡೆದುಕೊಂಡಿದೆ. ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 125 ಶಾಸಕರನ್ನು ಹೊಂದಿದ್ದರೆ, ಮೂವರು ಶಾಸಕರು ಪಕ್ಷ ತೊರೆದ ನಂತರ ಕಾಂಗ್ರೆಸ್ ನ ಸಂಖ್ಯಾಬಲ 54ಕ್ಕೆ ಕುಸಿದಿದೆ. ಅಹ್ಮದ್ ಪಟೇಲ್ ಅವರ ಆಯ್ಕೆಗೆ 47 ಶಾಸಕರ ಮತ ಬೇಕಿದೆ. ಈ ಹಂತದಲ್ಲಿ ಬಿಜೆಪಿ ಮತ್ತಷ್ಟು ಕಾಂಗ್ರೆಸ್ ಶಾಸಕರನ್ನು ತನ್ನೆಡೆಗೆ ಸೆಳೆದು ಗುಜರಾತಿನ ವಿಧಾನಸಭೆ ಸಂಖ್ಯಾಬಲ ಕುಸಿಯುವಂತೆ ಮಾಡಿ ಅಹ್ಮದ್ ಪಟೇಲ್ ಆಯ್ಕೆಯನ್ನು ತಡೆಯಲು ನೋಡುತ್ತಿದೆ. ಇತ್ತೀಚೆಗೆ ನಡೆದ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲೂ ವಾಘೆಲಾ ಅವರ ಬೆಂಬಲಿತ 11 ಶಾಸಕರು ಕೋವಿಂದ್ ಅವರ ಪರ ಅಡ್ಡಮತ ಹಾಕಿರುವುದಾಗಿ ವರದಿ ಬಂದಿದ್ದು, ರಾಜ್ಯಸಭಾ ಚುನಾವಣೆಯಲ್ಲೂ ಅಡ್ಡಮತದಾನವಾಗುವ ಸಾಧ್ಯತೆ ಹೆಚ್ಚಾಗಿದೆ. ಬಿಜೆಪಿಯ ಈ ತಂತ್ರಕ್ಕೆ ಪ್ರತಿಯಾಗಿ ಈಗ ಕಾಂಗ್ರೆಸ್ ತನ್ನ ಬಂಡಾಯ ಶಾಸಕರನ್ನು ಬೆಂಗಳೂರಿಗೆ ಕರೆತಂದು ಬಿಜೆಪಿ ಹಾಗೂ ವಾಘೆಲಾ ಜತೆಗಿನ ಸಂಪರ್ಕ ಕಡಿತಗೊಳಿಸುವ ಪ್ರಯತ್ನ ಮಾಡಿದೆ.

ಈ ಮಧ್ಯೆ ಚುನಾವಣೆ ದಿನ ಕಾಂಗ್ರೆಸ್ ಶಾಸಕರು ಅಹ್ಮದ್ ಪಟೇಲ್ ವಿರುದ್ಧ ಮತದಾನ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ದಟ್ಟವಾಗುತ್ತಿವೆ. ಅಹ್ಮದ್ ಪಟೇಲ್ ಅವರನ್ನು ಹಣಿಯಲು ಬಿಜೆಪಿ ನಡೆಸುತ್ತಿರುವ ಈ ಪ್ರಯತ್ನಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೋ ಬಿಡುತ್ತದೊ. ಆದರೆ ಅಹ್ಮದ್ ಪಟೇಲ್ ಅವರ ಆಯ್ಕೆ ಸಾಧ್ಯತೆಯನ್ನು ಬಿಜೆಪಿ ಅಲುಗಾಡಿಸುತ್ತಿರುವುದು ಸ್ಪಷ್ಟವಾಗಿದೆ.

2 COMMENTS

Leave a Reply