ಜೇಟ್ಲಿ ವಿರುದ್ಧದ ಕಾನೂನು ಸಮರದಲ್ಲಿ ಕೇಜ್ರಿವಾಲರನ್ನು ಚತುರ ಜೇಠ್ಮಲಾನಿ ಹಳ್ಳಕ್ಕೆ ಬೀಳಿಸಿದ್ದು ಹೇಗೆ?

ಡಿಜಿಟಲ್ ಕನ್ನಡ ವಿಶೇಷ:

ಇನ್ನುಮುಂದೆ ಜೇಟ್ಲಿ ವಿರುದ್ಧದ ಕಾನೂನು ಸಮರದಲ್ಲಿ ಅರವಿಂದ ಕೇಜ್ರಿವಾಲ್ ಪರ ವಕಾಲತ್ತು ವಹಿಸುವುದಿಲ್ಲ ಎಂದಿದ್ದ ಹಿರಿಯ ವಕೀಲರಾದ ರಾಮ್ ಜೇಠ್ಮಲಾನಿ, ಈಗ ಕೇಜ್ರಿವಾಲರಿಗೆ ಮತ್ತೊಂದು ಪತ್ರ ಬರೆದಿದ್ದು, ಸಲಹೆಯನ್ನೂ ಕೊಟ್ಟಿದ್ದಾರೆ. ಅದೇನೆಂದರೆ, ‘ಜೇಟ್ಲಿ ವಿರುದ್ಧದ ಕಾನೂನು ಸಮರವನ್ನು ನಿಲ್ಲಿಸಿ, ಸಾಧ್ಯವಾದರೆ ಜೇಟ್ಲಿ ಜತೆ ರಾಜಿ ಮಾಡಿಕೊಳ್ಳಿ’ ಎಂದು.

ಜೇಠ್ಮಲಾನಿ ಅವರು ಕೇಜ್ರಿವಾಲರಿಗೆ ಬರೆದ ಪತ್ರದ ಪ್ರತಿಯನ್ನು ಜೇಟ್ಲಿ ಅವರಿಗೂ ರವಾನಿಸಿದ್ದಾರೆ. ಈ ಪತ್ರದಲ್ಲಿ ಜೇಠ್ಮಲಾನಿ ಅವರು ಕೇಜ್ರಿವಾಲ್ ಅವರಿಗೆ ನೀಡಿರುವ ಸಲಹೆ ಹೀಗಿದೆ…

‘ನೀವು ನನ್ನ ಬಗ್ಗೆ ತಪ್ಪು ತಿಳಿಯಬೇಡಿ. ಜೇಟ್ಲಿ ಅವರ ವಿರುದ್ಧದ ಈ ಕಾನೂನು ಸಮರವನ್ನು ಮುಂದುವರಿಸಿ ಎಂದು ನಾನು ಸಲಹೆ ನೀಡುವುದಿಲ್ಲ. ಒಂದು ವೇಳೆ ನನ್ನ ಈ ಪತ್ರವನ್ನು ಜೇಟ್ಲಿ ಅವರು ನೋಡಿ ಈ ಮೊಕದ್ದಮೆಯನ್ನು ಹಿಂಪಡೆಯಲು ಮನಸ್ಸು ಮಾಡಿದರೆ, ನೀವು ಜೇಟ್ಲಿ ಅವರ ಜತೆ ರಾಜಿಯಾಗುವುದು ಉತ್ತಮ. ಆದರೆ ಒಂದಂತೂ ಸ್ಪಷ್ಟ, ನಾನು ಇನ್ನು ಮುಂದೆ ನಿಮ್ಮ ಪರವಾಗಿ ವಾದ ಮಾಡುವುದಿಲ್ಲ. ನಾನು ವಾದ ಮಂಡಿಸಿದ ಮೊದಲ ಪ್ರಕರಣಕ್ಕೆ ಸಂಬಂಧಿಸಿದ ನನ್ನ ಸಂಭಾವನೆಯನ್ನು ನೀಡಿದರೆ ಸಾಕು, ಎರಡನೇ ಪ್ರಕರಣಕ್ಕೆ ಸಂಭಾವನೆ ಬೇಡ.’

ಈ ಪ್ರಕರಣವನ್ನು ಒಟ್ಟಾರೆಯಾಗಿ ನೋಡುವುದಾದರೆ ನಮಗೆ ಸ್ಪಷ್ಟವಾಗಿ ಗೋಚರಿಸುವುದು, ಜೇಠ್ಮಲಾನಿ ಯಾವ ರೀತಿಯಲ್ಲಿ ಅರವಿಂದ್ ಕೇಜ್ರಿವಾಲರನ್ನು ಮೂರ್ಖರನ್ನಾಗಿಸಿದರು ಎಂದು.

ಸಾಕಷ್ಟು ಹಿರಿಯ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ವಕೀಲರಲ್ಲಿ ಒಬ್ಬರಾದ ಜೇಠ್ಮಲಾನಿ ಅವರು ಯಾವ ಧೈರ್ಯದ ಮೇಲೆ ನ್ಯಾಯಾಲಯದ ವಿಚಾರಣೆ ವೇಳೆ ಜೇಟ್ಲಿ ಅವರ ವಿರುದ್ಧ ನಿಂದನಾತ್ಮಕ ಪದ ಬಳಕೆ ಮಾಡಿದರು? ಜೇಠ್ಮಲಾನಿ ಅವರ ವಾದದಂತೆ ಅರವಿಂದ್ ಕೇಜ್ರಿವಾಲ್ ಅವರೇ ಈ ಪದ ಬಳಕೆಗೆ ಅನುಮತಿ ನೀಡಿದ್ದರೂ, ಈ ಪದ ಬಳಕೆಯಿಂದ ಆಗುವ ಪರಿಣಾಮಗಳ ಬಗ್ಗೆ ಜೇಠ್ಮಲಾನಿಗೆ ಅರಿವಿರಲಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

ನಿಂದನಾತ್ಮಕ ಪದ ಪ್ರಯೋಗದ ನಂತರ ಜೇಟ್ಲಿ ಅವರು ನೇರವಾಗಿ ಜೇಠ್ಮಲಾನಿ ಅವರ ವಿರುದ್ಧ ಒಂದು ಪ್ರಶ್ನೆ ಇಟ್ಟರು. ತಮ್ಮ ವಿರುದ್ಧದ ನಿಂದನಾತ್ಮಕ ಪ್ರಯೋಗವನ್ನು ತಾವಾಗಿಯೇ ಬಳಸಿದ್ದೀರಾ ಅಥವಾ ಅರವಿಂದ ಕೇಜ್ರಿವಾಲ್ ಅವರ ಸೂಚನೆಯಂತೆ ಪದ ಬಳಕೆ ಮಾಡಿದ್ದೀರಾ? ಎಂದು. ಇದಕ್ಕೆ ಉತ್ತರಿಸಿದ ಜೇಠ್ಮಲಾನಿ ಇದರ ಹೊಣೆಯನ್ನು ಕೇಜ್ರಿವಾಲ್ ಮೇಲೆ ಹಾಕಿದರು. ಹೀಗಾಗಿ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಒಂದು ವೇಳೆ ಈ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದರೆ ಮಾನನಷ್ಟ ಮೊಕದ್ದಮೆ ತಮ್ಮ ವಿರುದ್ಧ ತಿರುಗುತ್ತದೆ ಎಂಬುದರ ಕುರಿತು ಜೇಠ್ಮಲಾನಿ ಅವರಿಗೆ ಖಚಿತವಾಗಿ ತಿಳಿದಿತ್ತು.

ಇದೆಲ್ಲಕ್ಕಿಂತ ಮುಖ್ಯವಾಗಿ ಜೇಟ್ಲಿ ಅವರು ವಿರುದ್ಧದ ಕಾನೂನು ಸಮರ ಆರಂಭವಾದಾಗ ಜೇಠ್ಮಲಾನಿ ಎಷ್ಟರ ಮಟ್ಟಿಗೆ ಪ್ರಚಾರ ಪಡೆದಿದ್ದರೆಂದರೆ, ಈ ಪ್ರಕರಣದಲ್ಲಿ ಕೇಜ್ರಿವಾಲರ ಪರ ಪುಕ್ಕಟೆಯಾಗಿ ವಾದ ಮಾಡುತ್ತೇನೆ ಎಂದು ಹೇಳಿದ್ದರು. ಇದಾದ ಕೆಲವು ದಿನಗಳ ನಂತರವಷ್ಟೇ ಜೇಠ್ಮಲಾನಿ ಅವರಿಗೆ ದೆಹಲಿ ಸರ್ಕಾರದ ಬೊಕ್ಕಸದಿಂದ ಕೋಟಿಗಟ್ಟಲೆ ಹಣ ಸಂಭಾವನೆ ರೂಪದಲ್ಲಿ ಹೋಗುತ್ತಿದೆ ಎಂದು ಬಹಿರಂಗವಾಯಿತು. ಈ ಸಂದರ್ಭದಲ್ಲೂ ಜೇಠ್ಮಲಾನಿ ತಮಗೆ ಈ ಬಗ್ಗೆ ತಿಳಿದೇ ಇಲ್ಲ ಎಂದು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದರು.

ಜೇಠ್ಮಲಾನಿ ಅವರು ಈ ಹಿಂದೆ ಹರ್ಷದ್ ಮೆಹ್ತಾ ಹಾಗೂ ಕೆತಾನ್ ಪರೆಖ್ ಅವರ ಷೇರು ಮಾರುಕಟ್ಟೆ ಹಗರಣ, ಭೂಗತ ದೊರೆ ಹಜಿ ಮಸ್ತಾನ್ ಪರ, ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದ ಆರೋಪಿ ಮನು ಶರ್ಮಾ ಪರವಾಗಿ, 2ಜಿ ಹಗರಣದ ಆರೋಪಿ ಕನಿಮೋಳಿ ಅವರ ಪರವಾಗಿ ವಕಾಲತ್ತು ವಹಿಸಿದ್ದರು. ಹೀಗೆ ಜೇಠ್ಮಲಾನಿ ಅವರು ತೆಗೆದುಕೊಂಡ ಬಹುತೇಕ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ಶ್ರೀಮಂತರ ಪರವಾಗಿಯೇ ವಾದ ಮಾಡಿದ್ದಾರೆ.

ಈಗ ಜೇಠ್ಮಲಾನಿ ಅವರು ಬಾಕಿ ಸಂಭಾವನೆಯನ್ನು ಕೇಳುತ್ತಲೇ ಕೇಜ್ರಿವಾಲ್ ಅವರಿಗೆ ರಾಜಿಯ ಸಲಹೆ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಜೇಠ್ಮಲಾನಿ ಅವರ ಚತುರತನದಿಂದ ಕೇಜ್ರಿವಾಲ್ ಅವರು ಎಲ್ಲರ ಕಣ್ಣಿಗೆ ಇಂಗು ತಿಂದ ಮಂಗನಂತೆ ಬಿಂಬಿತವಾಗುತ್ತಿದ್ದಾರೆ. ಇನ್ನು ಪ್ರತಿಯೊಂದು ವಿಷಯದಲ್ಲೂ ಹುಚ್ಚಾಟ ಮಾಡುತ್ತಲೇ ಇರುವ ಅರವಿಂದ್ ಕೇಜ್ರಿವಾಲ್, ಈ ಬಾರಿ ಜೇಠ್ಮಲಾನಿ ಅವರ ಕೈಗೆ ಸಿಕ್ಕು ತಕ್ಕ ಪಾಠ ಕಲಿಯುವಂತಾಗಿದೆ.

Leave a Reply