ಪಾಕಿಸ್ತಾನದಲ್ಲಿ ಮಿಲಿಟರಿಯ ಕೈ ಮೇಲಾಗುತ್ತಿರೋದಕ್ಕೆ ಭಾರತದಲ್ಲೇಕೆ ಆತಂಕ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಹಣ ಅವ್ಯವಹಾರ ಮತ್ತು ವಿದೇಶದಲ್ಲಿ ಅಕ್ರಮ ಆಸ್ತಿ ಸಂಪಾದನೆಯ ಪ್ರಕರಣದಲ್ಲಿ ಸಿಲುಕಿ ನವಾಜ್ ಶರೀಫ್ ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ಅನರ್ಹಗೊಂಡಿರುವುದು ತಿಳಿದಿರುವ ವಿಷಯ. ಆದರೆ ಪಾಕಿಸ್ತಾನದಲ್ಲಿನ ಈ ರಾಜಕೀಯ ಬೆಳವಣಿಗೆಗಳು ಭಾರತದಲ್ಲಿ ಆತಂಕ ಮೂಡಿಸಿದೆ. ಕಾರಣ, ಪಾಕಿಸ್ತಾನದಲ್ಲಿ ಮಿಲಿಟರಿ ಪಡೆಯ ಕೈ ಮೇಲಾಗುತ್ತಿರುವುದು.

ಭ್ರಷ್ಟಾಚಾರದ ಆರೋಪ ಹೊತ್ತು ನಾಯಕರ ಬದಲಾವಣೆಯಾಗುವುದು ಪಾಕಿಸ್ತಾನಕ್ಕೆ ಹೊಸ ಬೆಳವಣಿಗೆಯಲ್ಲ. ಆದರೆ ಗಡಿಯಲ್ಲಿನ ತಕರಾರಿನಿಂದ ಕುಲಭೂಷಣ್ ಜಾಧವ್ ಪ್ರಕರಣದವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧ ತೀವ್ರ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಮಿಲಿಟರಿ ಪಡೆಯ ನಿಯಂತ್ರಣ ಹೆಚ್ಚಾದರೆ, ಸಹಜವಾಗಿ ಅದು ಭಾರತದ ಮೇಲೆ ಪರಿಣಾಮ ಬೀರಲಿದೆ. ಪಾಕಿಸ್ತಾನದಲ್ಲಿ ನಿನ್ನೆಯಿಂದ ನಡೆಯುತ್ತಿರುವ ಈ ಎಲ್ಲ ವಿದ್ಯಮಾನಗಳನ್ನು ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿದ್ದಾರೆ. ಈ ಬೆಳವಣಿಗೆ ಕುರಿತಾದ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ನೀಡಲಿದ್ದಾರೆ.

ಮೂಲಗಳ ಪ್ರಕಾರ, ‘ಸದ್ಯ ಪಾಕಿಸ್ತಾನದಲ್ಲಿನ ಎಲ್ಲಾ ಬೆಳವಣಿಗೆಗಳಿಂದಾಗಿ ಮಿಲಿಟರಿ ಪಡೆ ಇಸ್ಲಾಮಾಬಾದ್ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸುತ್ತಿದೆ. ಈ ಹಿಂದೆ ಪಾಕಿಸ್ತಾನದಲ್ಲಿ ಸರ್ಕಾರ ರಚನೆಯಾಗಿ ಅಧಿಕಾರ ನಡೆಸುತ್ತಿತ್ತಾದರೂ ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನ ಮಿಲಿಟರಿಯು ನವಾಜ್ ಶರೀಫ್ ಅವರ ಸರ್ಕಾರವನ್ನು ದುರ್ಬಲಗೊಳಿಸಿ ತನ್ನ ಒತ್ತಡ ಹೇರುತ್ತಿತ್ತು. ಈಗ ಶರೀಫ್ ಅವರ ನಿರ್ಗಮನದ ನಂತರ ಸರ್ಕಾರದ ಅಸ್ಥಿತ್ವ ಇಲ್ಲವಾದರೆ, ಪಾಕಿಸ್ತಾನದ ಸಂಪೂರ್ಣ ನಿಯಂತ್ರಣ ಮಿಲಿಟರಿ ಪಡೆಯ ಕೈ ಸೇರಲಿದೆ. ಇದರಿಂದಾಗಿ ಪಾಕ್ ಮಿಲಿಟರಿ ಪಡೆ ಭಾರತಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ತನ್ನ ಉದ್ಧಟತನ ಪ್ರದರ್ಶಿಸುವ ಸಾಧ್ಯತೆ ಹೆಚ್ಚಿದೆ. ಸದ್ಯ ಪಾಕಿಸ್ತಾನದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಬಳಸಿಕೊಂಡು ಭಾರತ ವಿರೋಧಿ ಉಗ್ರಸಂಘಟನೆಗಳು ಗಡಿಯಲ್ಲಿ ತಮ್ಮ ಅಟ್ಟಹಾಸ ಮೆರೆಯುವ ಸಾಧ್ಯತೆಯೂ ಇದೆ. ಈ ಎಲ್ಲಾ ಅಂಶಗಳು ಭಾರತದ ಆತಂಕಕ್ಕೆ ಕಾರಣವಾಗಿದೆ.’

ನಿನ್ನೆ ಪ್ರಕಟವಾದ ಸುಪ್ರೀಂ ಕೋರ್ಟಿನ ತೀರ್ಪಿನಿಂದ ಪಾಕಿಸ್ತಾನ ರಾಜಕೀಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಆದರೆ ನವಾಜ್ ಶರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲಾಗಿದೆಯೇ ಹೊರತು, ಶರೀಫ್ ವಿದೇಶಾಂಗ ವ್ಯವಹಾರಗಳ ಸಚಿವ ಹುದ್ದೆಗೆ ಅವರು ಅಧಿಕೃತ ರಾಜಿನಾಮೆ ನೀಡಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ಶಕ್ತಿಶಾಲಿ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿರುವ ಶರೀಫ್ ಮುಂದಿನ ದಿನಗಳಲ್ಲಿ ಈ ಸವಾಲನ್ನು ಮೆಟ್ಟಿನಿಂತು ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಶರೀಫ್ ಅನರ್ಹಗೊಂಡರೂ ಪಾಕಿಸ್ತಾನ ಸಂಸತ್ತಿನಲ್ಲಿ ಪಕ್ಷದ ಸಾಮರ್ಥ್ಯವೇನು ಕುಸಿದಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಹಾಗೂ ಅಸಿಫ್ ಅಲಿ ಜರ್ದಾರಿ ಮತ್ತು ಬಿಲವಾಲ್ ಬುಟ್ಟೊ ಅವರ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯು ಮಿಲಿಟರಿಗೆ ಬೆಂಬಲ ನೀಡುವ ಸ್ಥಿತಿಯಲಿಲ್ಲ.

ಹೀಗಾಗಿ ಪಾಕಿಸ್ತಾನದ ನಿಯಂತ್ರಣ ಸಾಧಿಸಲು ರಾಜಕೀಯ ಪಕ್ಷಗಳು ಹಾಗೂ ಮಿಲಿಟರಿ ನಡುವೆ ಪೈಪೋಟಿ ಏರ್ಪಟ್ಟಿದೆ. ಪಾಕಿಸ್ತಾನದಲ್ಲಿ ಯಾವುದೇ ಬದಲಾವಣೆಯಾದರೂ ಅದು ಭಾರತದ ಮೇಲೆ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಪರಿಣಾಮ ಬೀರಲಿದೆ. ಹೀಗಾಗಿ ಭಾರತ ಸಹ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.

Leave a Reply