ನಿರೀಕ್ಷೆಯಂತೆ ಭಾರತಕ್ಕೆ ಸಿಕ್ತು ಭರ್ಜರಿ ಜಯ, ಸೊರಗಿರುವ ಲಂಕಾ ಬೇಟೆಯಿಂದ ಶುರುವಾಯ್ತು ಕೊಹ್ಲಿ-ಶಾಸ್ತ್ರಿ ಅಭಿಯಾನ

ಡಿಜಿಟಲ್ ಕನ್ನಡ ಟೀಮ್:

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಯಂತೆ ಟೀಂ ಇಂಡಿಯಾ 304 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಾಬಲ್ಯ ಮೆರೆದ ಭಾರತ ತಂಡ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

ಗಾಲೆಯಲ್ಲಿ ನಡೆದ ಮೊದಲ ಪಂದ್ಯದ ಮೂರನೇ ದಿನದಾಟದಲ್ಲೇ ಆತಿಥೇಯ ತಂಡವನ್ನು ಮಣಿಸುವ ಮೂಲಕ ಕೊಹ್ಲಿ ಪಡೆ ತನ್ನ ಪಾರುಪತ್ಯ ಮೆರೆದಿದೆ. ಈ ಜಯದೊಂದಿಗೆ ಕೊಹ್ಲಿ ಹಾಗೂ ರವಿಶಾಸ್ತ್ರಿ ಜೋಡಿ ಶುಭಾರಂಭ ಮಾಡಿದೆ.

ಮೊದಲ ಇನಿಂಗ್ಸ್ ನಲ್ಲಿ 600 ರನ್ ಗಳ ಬೃಹತ್ ಮೊತ್ತ ಪೇರಿಸಿದ್ದ ಭಾರತ, ಆತಿಥೇಯ ಪಡೆಯನ್ನು 291 ರನ್ ಗಳಿಗೆ ಕಟ್ಟಿಹಾಕಿತ್ತು. ಫಾಲೋ ಆನ್ ಹೇರುವ ಅವಕಾಶ ಇತ್ತಾದರೂ ಕೊಹ್ಲಿ ಎರಡನೇ ಇನಿಂಗ್ಸ್ ಆರಂಭಿಸಲು ನಿರ್ಧರಿಸಿದರು. ಎರಡನೇ ಇನಿಂಗ್ಸ್ ನಲ್ಲಿ ಭರ್ಜರಿ ಸತಕ ಗಳಿಸಿದ ಕೊಹ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ನ 17ನೇ ಶತಕ ಬಾರಿಸಿದರು 3 ವಿಕೆಟ್ ಕಳೆದುಕೊಂಡು 240 ರನ್ ಪೇರಿಸಿದಾಗ ಡಿಕ್ಲೇರ್ ಮಾಡಿಕೊಂಡ ಭಾರತ ಆತಿಥೇಯರಿಗೆ 550 ರನ್ ಗಳ ಬೃಹತ್ ಗುರಿ ನೀಡಿತ್ತು. ಈ ಕಠಿಣ ಸವಾಲು ಬೆನ್ನಟ್ಟಿದ ಲಂಕಾ ಪಡೆ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತದ ಮುಂದೆ ತಲೆ ಬಾಗಿತು. ಭಾರತದ ಪರ ಮೊದಲ ಇನಿಂಗ್ಸ್ ನಲ್ಲಿ ಶಿಖರ್ ಧವನ್ (190), ಪೂಜಾರ (153), ಎರಡನೇ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ (ಅಜೇಯ 103) ಶತಕ ಹಾಗೂ ಬೌಲಿಂಗ್ ನಲ್ಲಿ ಎರಡನೇ ಇನಿಂಗ್ಸ್ ನಲ್ಲಿ ಅಶ್ವಿನ್ ಹಾಗೂ ಜಡೇಜಾ 3 ವಿಕೆಟ್ ಕಬಳಿಸಿದ್ದು ತಂಡದ ಗೆಲುವಿಗೆ ಕಾರಣವಾಯಿತು.

ಈ ಫಲಿತಾಂಶ ಭಾರತದ ಪಾಲಿಗೆ ನಿರೀಕ್ಷಿತವಾಗಿಯೇ ಇತ್ತು. ಸದ್ಯ ಕಳಪೆ ಫಾರ್ಮ್ ನಲ್ಲಿರುವ ಲಂಕಾ ತಂಡ ಪಂದ್ಯದ ಯಾವುದೇ ಹಂತದಲ್ಲೂ ಭಾರತ ತಂಡಕ್ಕೆ ಸವಾಲು ನೀಡಲಿಲ್ಲ. ಲಂಕಾ ಪಡೆಯಲ್ಲಿ ಈ ಹಿಂದೆ ಇದ್ದ ಘಟಾನುಘಟಿ ಮ್ಯಾಚ್ ವಿನ್ನಿಂಗ್ ಆಟಗಾರರ ಕೊರತೆ ಎದ್ದು ಕಾಣುತ್ತಿದೆ. ಕುಮಾರ ಸಂಗಕ್ಕಾರ ಹಾಗೂ ಮಹೆಲಾ ಜಯವರ್ದನೆ ಅವರ ನಿರ್ಗಮನದ ನಂತರ ಅವರ ಸ್ಥಾನವನ್ನು ತುಂಬಲು ಸಾಧ್ಯವಾಗಲೇ ಇಲ್ಲ. ಪರಿಣಾಮ ಒಂದು ಕಾಲದಲ್ಲಿ ತವರಿನಲ್ಲಿ ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದ ಲಂಕಾ ಪಡೆ ಈಗ ಸುಲಭ ತುತ್ತಾಗುವ ಪರಿಸ್ಥಿತಿಗೆ ಬಂದಿದೆ.

ಒಟ್ಟಿನಲ್ಲಿ ಈ ಪಂದ್ಯ ಏಕಪಕ್ಷೀಯವಾಗಿದ್ದು, ಯಾವುದೇ ರೋಚಕತೆ ಹಮಹಣಿ ಎದುರಾಗಲಿಲ್ಲ. ಮುಂದಿನ ಪಂದ್ಯಗಳು ಇದೇ ರೀತಿ ಇರುವ ನೀರೀಕ್ಷೆ ಇದೆ. ಒಂದು ವೇಳೆ ಲಂಕಾ ಆಟಗಾರರಿಂದ ಪ್ರತಿರೋಧ ಎದುರಾದರೆ ಕ್ರೀಡಾಭಿಮಾನಿಗಳಿಗೆ ಪಂದ್ಯದ ಕುತೂಹಲ ಸವಿಯುವ ಅವಕಾಶ ಸಿಗಲಿದೆ.

Leave a Reply