ಭಾರತದ ಸಾಮರಸ್ಯ ಏನು ಎಂಬ ಸಂದೇಶ ಸಾರುತ್ತಿದೆ ಭಾರತೀಯ ಸೇನೆಯ ಈ ಚಿತ್ರ

ಡಿಜಿಟಲ್ ಕನ್ನಡ ಟೀಮ್:

‘ವಿವಿಧತೆಯಲ್ಲಿ ಏಕತೆ’ ಎಂಬುದು ಭಾರತದ ಧ್ಯೇಯ. ದೇಶದಲ್ಲಿ ವಿವಿಧ ಧರ್ಮ, ಜಾತಿ, ಭಾಷೆ, ಬಣ್ಣ, ಸಂಸ್ಕೃತಿ ಇದ್ದರೂ ಸಾಮರಸ್ಯದಿಂದ ಬದುಕುವ ಮೂಲಕ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿನ ರಾಜಕೀಯ ಉದ್ದೇಶದಿಂದ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಧರ್ಮಗಳ ನಡುವಣ ಅಂತರವನ್ನು ಹೆಚ್ಚುವಂತೆ ಮಾಡಿರುವುದು ಆತಂಕ ಹುಟ್ಟಿಸಿದೆ. ಈ ಹೊತ್ತಲ್ಲೇ ಭಾರತೀಯ ಸೇನೆ ನಮ್ಮ ದೇಶದ ಸಾಮರಸ್ಯ ಎಂತಹದು ಎಂಬುದನ್ನು ಬಿಂಬಿಸುವ ಸಿಆರ್ ಪಿಎಫ್ ಯೊಧರ ಚಿತ್ರವೊಂದನ್ನು ಪ್ರಕಟಿಸಿದೆ.

ಈ ಚಿತ್ರದಲ್ಲಿ ಶ್ರೀನಗರದ ಸಿಆರ್ ಪಿಎಫ್ ಪಡೆಯಲ್ಲಿನ ಮುಸಲ್ಮಾನ್ ಯೋಧ ತನ್ನ ‘ನಮಾಜ್’ ವೇಳೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಮತ್ತೊಬ್ಬ ಸೈನಿಕ ಆತನಿಗೆ ಕಾವಲು ಕಾಯುತ್ತಾ ರಕ್ಷಣೆಗೆ ನಿಂತಿದ್ದಾರೆ. ಈ ಚಿತ್ರ ದೇಶದ ಪ್ರತಿಯೊಬ್ಬರಿಗೂ ಸಾಮರಸ್ಯ ಸಂದೇಶ ರವಾನಿಸುತ್ತಿದೆ. ಭಾರತೀಯ ಸೇನೆ ಟ್ವಿಟರ್ ನಲ್ಲಿ ಈ ಚಿತ್ರವನ್ನು ಪ್ರಕಟಿಸಿದ್ದು, ‘ಶಾಂತಿಗಾಗಿ ಶಸ್ತ್ರಾಸ್ತ್ರ ಹಿಡಿದಿರುವ ಸಹೋದರರು’ ಶೀರ್ಷಿಕೆಯನ್ನು ನೀಡಿದೆ.

ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ನೋಡಿದ ಜನರು ‘ನಿಜವಾದ ಭಾರತ ಎಂದರೆ ಇದು’ ಎಂದು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿದ್ದಾರೆ.

Leave a Reply