ಭಾರತದ ಜತೆ ಗಡಿ ತಿಕ್ಕಾಟ ನಡೆಸುತ್ತಿರೋ ಚೀನಾ ವಿರುದ್ಧ ಬುಸುಗುಟ್ಟಿದ ಡೊನಾಲ್ಡ್ ಟ್ರಂಪ್, ಅಮೆರಿಕ ಕಣ್ಣು ಕೆಂಪಾಗಿರೋದು ಏಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಗಡಿ ವಿಚಾರವಾಗಿ ಭಾರತದೊಂದಿಗೆ ತಿಕ್ಕಾಟ ನಡೆಸುತ್ತಿರುವ ಚೀನಾ ಈಗ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಅದಕ್ಕೆ ಕಾರಣ ಉತ್ತರ ಕೊರಿಯಾದ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ.

ಹೌದು, ಸದ್ಯ ಉತ್ತರ ಕೊರಿಯಾ ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕಕ್ಕೆ ತೊಡೆ ತಟ್ಟುತ್ತಾ ಒಂದರ ಮೇಲೊಂದರಂತೆ ಕ್ಷಿಪಣಿ ಪರೀಕ್ಷೆಗಳನ್ನು ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಉತ್ತರ ಕೊರಿಯಾ ಅಂತಾರಾಷ್ಟ್ರೀಯ ಖಂಡಾಂತರ ಕ್ಷಿಪಣಿ ಪ್ರಯೋಗ ನಡೆಸಿದ್ದು, ಇದು ಅಮೆರಿಕವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಉತ್ತರ ಕೋರಿಯಾ ಕ್ಷಿಪಣಿ ಪ್ರಯೋಗಕ್ಕೂ ಅಮೆರಿಕ ಚೀನಾ ವಿರುದ್ಧ ಬುಸುಗುಡಲು ಏನು ಸಂಬಂಧ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಅದಕ್ಕೆ ಕಾರಣ ಇದೆ ಅದೇನೆಂದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ವಿರೋಧವಿದ್ದರೂ ಅವುಗಳನ್ನು ಲೆಕ್ಕಿಸದೇ ಉತ್ತರ ಕೊರಿಯಾ ತನ್ನ ಕ್ಷಿಪಣಿ ಪ್ರಯೋಗ ಮಾಡುತ್ತಿದ್ದು, ಆ ಮೂಲಕ ತೊಡೆ ತಟ್ಟು ನಿಂತಿದೆ.

ಉತ್ತರ ಕೊರಿಯಾದ ಈ ಪ್ರಯತ್ನವನ್ನು ನಿಲ್ಲಿಸುವ ಎಲ್ಲಾ ಸಾಮರ್ಥ್ಯ ಚೀನಾಗೆ ಇದ್ದರೂ ಸಹ ಚೀನಾ ಈ ವಿಷಯವಾಗಿ ಯಾವುದೇ ಪ್ರಯತ್ನಗಳು ನಡೆದಿಲ್ಲ. ಬದಲಾಗಿ ಕಳೆದ ವರ್ಷ ಚೀನಾ, ಉತ್ತರ ಕೊರಿಯಾ ಜತೆ 309 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಮೊತ್ತದ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಬೇಸತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ವಿರುದ್ಧ ಕಿಡಿ ಕಾರುತ್ತಲೇ ಉತ್ತರ ಕೊರಿಯಾದ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ರವಾನಿಸಿದ್ದಾರೆ. ಟ್ರಂಪ್ ಅವರು ಟ್ವಿಟರ್ ನಲ್ಲಿ ಚೀನಾ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು ಹೀಗೆ…

‘ಉತ್ತರ ಕೊರಿಯಾ ಉದ್ಧಟತನ ಪ್ರದರ್ಶಿಸುತ್ತಾ ಕ್ಷಿಪಣಿ ಪರಿಕ್ಷೆ ನಡೆಸುತ್ತಲೇ ಇದೆ. ಇದನ್ನು ಚೀನಾ ಸುಲಭವಾಗಿ ತಡೆಯುವ ಅವಕಾಶವಿದ್ದರೂ ಈ ಬಗ್ಗೆ ಚೀನಾ ಮಾನವಹಿಸಿದೆ. ಈ ಹಿಂದೆ ನಮ್ಮನ್ನು ಆಳಿದ ಮೂರ್ಖ ನಾಯಕರು ಅವರ ನಡುವೆ ವರ್ಷಕ್ಕೆ ನೂರಾರು ಬಿಲಿಯನ್ ಡಾಲರ್ ನಷ್ಟು ವ್ಯಾಪಾರ ನಡೆಸಲು ಅವಕಾಶ ಮಾಡಿಕೊಟ್ಟರು. ಆದರೂ ಸಹ ಅವರು ನಮ್ಮ ಪರವಾಗಿ ನಿಲ್ಲುತ್ತಿಲ್ಲ. ಉತ್ತರ ಕೊರಿಯಾವನ್ನು ತಡೆಯುವ ನಿಟ್ಟಿನಲ್ಲಿ ಚೀನಾ ಯಾವುದೇ ಪ್ರಯತ್ನವನ್ನೂ ಮಾಡಿಲ್ಲ. ಇನ್ನು ಮುಂದೆ ಇದೇ ಪರಿಸ್ಥಿತಿ ಮುಂದುವರಿಯಲು ನಾವು ಅವಕಾಶ ನೀಡುವುದಿಲ್ಲ.’

ಸದ್ಯ ದೊಡ್ಡ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾ, ಆ ಮೂಲಕ ಅಮೆರಿಕಕ್ಕೆ ಎಚ್ಚರಿಕೆ ರವಾನಿಸಿದ್ದು, ಈ ಕ್ಷಿಪಣಿಯನ್ನು ಯಾವಾಗಬೇಕಾದರೂ ಯಾವುದೇ ಸ್ಥಳದಿಂದಲೂ ನಾವೂ ಅಮೆರಿಕಕ್ಕೆ ಗುರಿಯಾಗಸಿ ಉಡಾಯಿಸಬಲ್ಲೆವು ಎಂಬ ಸಂದೇಶವನ್ನು ರವಾನಿಸಿದೆ. ಈ ಕ್ಷಿಪಣಿ ಪರೀಕ್ಷೆ ನಂತರ ಮಾತನಾಡಿದ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್, ‘ಈ ಕ್ಷಿಪಣಿ ಪರೀಕ್ಷೆ ಯಶಸ್ವಿಯ ನಂತರ ಅಮೆರಿಕದ ಬಹುತೇಕ ನಗರಗಳು ನಮ್ಮ ಕ್ಷಿಪಣಿಯ ಸ್ಫೋಟದ ವ್ಯಾಪ್ತಿಗೆ ಒಳಪಟ್ಟಿವೆ’ ಎಂದು ಹೇಳಿಕೆಯನ್ನು ಕೊಟ್ಟಿದ್ದರು. ಹೀಗೆ ಉತ್ತರ ಕೊರಿಯಾ ಸೆಡ್ಡು ಹೊಡೆಯುತ್ತಿರುವಾಗ ತನ್ನ ಪರವಾಗಿ ನಿಲ್ಲುತ್ತಿಲ್ಲ ಎಂಬ ಕಾರಣಕ್ಕೆ ಅಮೆರಿಕ, ಚೀನಾ ವಿರುದ್ಧ ಟೀಕಾಪ್ರಹಾರ ನಡೆಸಿದೆ.

1 COMMENT

Leave a Reply