ಶಹಬ್ಬಾಶ್ ಹುಡುಗಿ…! ಇರಾನಿನಲ್ಲಿ ನಿಂತು ತಲೆಗವಸು ಕಡ್ಡಾಯವನ್ನು ವಿರೋಧಿಸಿದವಳೀಕೆ

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಮಹಿಳೆಯರು ತಲೆಗವಸು ಧರಿಸುವುದನ್ನು ಕಡ್ಡಾಯ ಮಾಡಿರುವ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರಲ್ಲೂ ಇರಾನಿನಲ್ಲಿ ಈ ಕುರಿತಾದ ಚರ್ಚೆಯ ತೀವ್ರತೆ ಸ್ವಲ್ಪ ಹೆಚ್ಚಾಗಿಯೇ ಇದೆ. ಈ ಸಂದರ್ಭದಲ್ಲೇ ಇರಾನಿನ ಬಾಲಕಿಯೊಬ್ಬಳು ತಾನು ತಲೆಗವಸನ್ನು ಏಕೆ ಧರಿಸಬಾರದು ಎಂದು ವಾದ ಮಂಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ.

ಇರಾನಿನಲ್ಲಿ ಮಹಿಳೆಯರು ಕಡ್ಡಾಯವಾಗಿ ತಲೆಗವಸು ಧರಿಸಬೇಕೆಂಬ ಕಾನೂನು ಇದ್ದು, ಆ ಮೂಲಕ ಮಹಿಳೆಯರ ಮೇಲೆ ಬಲವಂತವಾಗಿ ಇದನ್ನು ಹೇರಲಾಗುತ್ತಿದೆ. ಇದ ವಿರುದ್ಧ ಹೋರಾಡುತ್ತಿರುವ ಸ್ಟೀಲ್ತಿ ಫ್ರೀಡಂ ಎಂಬ ಸಂಘಟನೆ ಈ ವೀಡಿಯೋ ಅನ್ನು ಪ್ರಕಟಿಸಿದೆ. ಈ ವೀಡಿಯೋದಲ್ಲಿ ಆಯ್ಕೆ ಸ್ವಾತಂತ್ರದ ಬಗ್ಗೆ ವಾದ ಮಂಡನೆಯಾಗಿದ್ದು, ಇರಾನಿನಲ್ಲಿ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ತಲೆ ಹಾಗೂ ದೇಹವನ್ನು ಮುಚ್ಚಿಕೊಳ್ಳುವಂತಹ ಉಡುಪನ್ನೇ ಧರಿಸಬೇಕು ಎಂಬ ಕಾನೂನನ್ನು ಬಲವಂತವಾಗಿ ಹೇರಿ ನೈತಿಕ ಪೊಲೀಸ್ ಗಿರಿ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಹಾಗಾದರೆ ಈ ಬಾಲಕಿ ವೀಡಿಯೋ ಮೂಲಕ ಮಂಡಿಸಿರುವ ವಾದ ಹೀಗಿದೆ…

‘ಎಲ್ಲರೂ ಶಾಂತಿಯುತವಾಗಿ ಬಾಳುವುದು ಮುಖ್ಯ. ಕೆಲವರು ಹಿಜಬ್ (ತಲೆಗವಸು) ಅನ್ನು ಧರಿಸಲು ಇಷ್ಟಪಟ್ಟರೆ ಕೆಲವರು ಇಚ್ಚಿಸುವುದಿಲ್ಲ. ಹಿಜಬ್ ಕಡ್ಡಾಯದಿಂದ ಮುಕ್ತಿ ಸಿಗುವ ದಿನ ಭವಿಷ್ಯದಲ್ಲಿ ಬರಲಿದೆ. ಹಾಗೆಂದ ಮಾತ್ರಕ್ಕೆ ನಾನು ಚದುರ್ ಅನ್ನು ತೆಗೆದು ಹಾಕಿ ಅಥವಾ ಹಿಜಬ್ ಅನ್ನು ಗೌರವಿಸಬೇಡಿ ಎಂದು ಹೇಳುತ್ತಿಲ್ಲ.

ಈ ವಿಷಯದಲ್ಲಿ ಆಯಾ ವ್ಯಕ್ತಿಯ ಆಯ್ಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಲುವ ಸ್ವಾತಂತ್ರ್ಯವಿರಬೇಕು. ಅದರ ಬದಲಾಗಿ ಹಿಜಬ್ ಧರಿಸುವುದನ್ನು ಕಡ್ಡಾಯ ಎಂದು ಘೋಷಿಸಿ ಕಾನೂನಿನ ಮೂಲಕ ಬಲವಂತವಾಗಿ ಹೇರಬಾರದು.’

ಈ ಯುವತಿಯ ಸಂದೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದ್ದು, 3 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದ್ದು, 3 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಈ ವಿಡಿಯೋ ನೋಡಿ ಜನರು ಈಕೆಯ ವಾದವನ್ನು ಮೆಚ್ಚಿಕೊಂಡಿದ್ದು, ಆಕೆಯ ಧೈರ್ಯವನ್ನು ಕೊಂಡಾಡಿ ಬೆಂಬಲ ನೀಡಿದ್ದಾರೆ.

Leave a Reply