ಅಬ್ದುಲ್ ಕಲಾಂ ಸ್ಮಾರಕ ವಿಚಾರದಲ್ಲಿ ಬೇಕಿತ್ತೇ ಈ ಅನಗತ್ಯ ಧಾರ್ಮಿಕ ವಿವಾದ?

ಡಿಜಿಟಲ್ ಕನ್ನಡ ಟೀಮ್:

ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ರಾಮೇಶ್ವರಂನಲ್ಲಿ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿಯ ಸ್ಮಾರಕವನ್ನು ಅನಾವರಣಗೊಳಿಸಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವ ವ್ಯಕ್ತಿಯ ಈ ಸ್ಮಾರಕ ಈಗ ಧಾರ್ಮಿಕ ವಿವಾದದ ಕೇಂದ್ರ ಬಿಂದುವಾಗಿರುವುದು ಶೋಚನೀಯ ಸಂಗತಿ.

ರಾಮೇಶ್ವರದಲ್ಲಿ ₹ 15 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಈ ಸ್ಮಾರಕದಲ್ಲಿ ಅಬ್ದುಲ್ ಕಲಾಂ ಅವರು ವೀಣೆಯನ್ನು ನುಡಿಸುತ್ತಿರುವ ಭಂಗಿಯಲ್ಲಿದ್ದು, ಅವರ ಮುಂದೆ ಭಗವದ್ ಗೀತಾ ಪುಸ್ತಕದ ಮಾದರಿಯನ್ನು ಇರಿಸಲಾಗಿದೆ. ಹೀಗೆ ಕಲಾಂ ಅವರ ಸ್ಮಾರಕದ ಮುಂದೆ ಭಗವದ್ ಗೀತಾ ಇಟ್ಟಿರುವುದನ್ನು ವಿವಿಧ ವರ್ಗಗಳು ಖಂಡಿಸಿವೆ. ಎಂಡಿಎಂಕೆ, ಪಿಎಂಕೆ ಪಕ್ಷದ ನಾಯಕರು ಭಗವದ್ ಗೀತಾ ಮಾದರಿಯನ್ನು ಕಲಾಂ ಅವರ ಮುಂದಿಟ್ಟಿರುವುದನ್ನು ಪ್ರಶ್ನಿಸಿದ್ದಾರೆ. ಅದರಲ್ಲೂ ಎಂಡಿಎಂಕೆ ಸಂಸ್ಥಾಪಕ ವೈಕೊ ಅವರು ಕಲಾಂ ಅವರ ಸ್ಮಾರಕದ ಮುಂದೆ ಭಗವದ್ ಗೀತಾ ಮಾದರಿ ಇಟ್ಟಿರುವುದನ್ನು ಪ್ರಶ್ನಿಸುತ್ತಲೇ ‘ ಅಬ್ದುಲ್ ಕಲಾಂ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮಿಳಿನ ಕೃತಿ ತಿರುಕ್ಕೂರಲ್ ಕೃತಿಯ ಭಾಗವನ್ನು ಹೆಚ್ಚಾಗಿ ಉಲ್ಲೇಖಿಸುತ್ತಿದ್ದರು’ ಎಂದು ಹೇಳಿದ್ದಾರೆ. ಆ ಮೂಲಕ ಕಲಾಂ ಅವರ ಸ್ಮಾರಕದ ಮುಂದೆ ಭಗವದ್ ಗೀತಾ ಮಾದರಿ ಬದಲಿಗೆ ತಿರುಕ್ಕೂರಲ್ ನ ಮಾದರಿ ಇಡಬೇಕು ಎಂದು ಹೇಳಿದ್ದಾರೆ.

ಈ ವಿವಾದಕ್ಕೆ ಅಂತ್ಯವಾಡುವ ನಿಟ್ಟಿನಲ್ಲಿ ಕಲಾಂ ಅವರ ಸಂಬಂಧಿಗಳು ಈ ಸ್ಮಾರಕದ ಬಳಿ ಕುರಾನ್ ಹಾಗೂ ಬೈಬಲ್ ಗಳ ಪ್ರತಿಯನ್ನು ಇರಿಸಿದ್ದಾರೆ. ಅಲ್ಲದೆ ಕಲಾಂ ಅವರ ಸಂಬಂಧಿಗಳಾದ ಶೇಖ್ ದಾವುದ್ ಹಾಗೂ ಸಲೀಂ, ‘ಕಲಾಂ ಅವರ ಸ್ಮಾರಕದ ವಿಚಾರದಲ್ಲಿ ಕೆಲವರು ಅನಗತ್ಯ ವಿವಾದ ಹುಟ್ಟುಹಾಕುತ್ತಿದ್ದಾರೆ. ಡಿಆರ್ ಡಿಒ ಅಧಿಕಾರಿಗಳು ಕಲಾಂ ಅವರ ಸ್ಮಾರಕಕ್ಕಾಗಿ ಸಾಕಷ್ಟು ಶ್ರಮಿಸಿದ್ದು, ಭಗವದ್ ಗೀತಾ ಮಾದರಿ ಇಡುವ ಹಿಂದೆ ಯಾವುದೇ ದುರುದ್ದೇಶವಿಲ್ಲ. ಈ ವಿವಾದಕ್ಕೆ ಅಂತ್ಯವಾಡುವ ನಿಟ್ಟಿನಲ್ಲಿ ನಾವು ಕುರಾನ್ ಹಾಗೂ ಬೈಬಲ್ ಪ್ರತಿಯನ್ನು ಇಟ್ಟಿದ್ದೇವೆ’ ಎಂದಿದ್ದಾರೆ.

ಕಲಾಂ ಅವರ ಸಂಬಂಧಿಕರೇ ಈ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರೂ, ವಿವಾದ ಇಲ್ಲಿಗೆ ನಿಲ್ಲಲಿಲ್ಲ. ಕಲಾಂ ಅವರ ಸ್ಮಾರಕದ ಬಳಿ ಕುರಾನ್ ಹಾಗೂ ಬೈಬಲ್ ಅನ್ನು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೇ ಇರಿಸಲಾಗಿದೆ ಎಂದು ಕೆಲವು ಹಿಂದೂಪರ ಸಂಘಟನೆಗಳ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬದುಕಿದ್ದಾಗ ಧರ್ಮದ ಭೇದಭಾವವಿಲ್ಲದೇ ಒಬ್ಬ ಹೆಮ್ಮೆಯ ಭಾರತೀಯನಾಗಿ ದೇಶಕ್ಕೆ ಅತ್ಯಮೂಲ್ಯ ಕೊಡುಗೆ ಕೊಟ್ಟ ಅಬ್ದುಲ್ ಕಲಾಂ ಅವರ ಸ್ಮಾರಕದ ವಿಚಾರದಲ್ಲಿ ಈಗ ಧಾರ್ಮಿಕ ವಿವಾದ ಮೆತ್ತಿಕೊಂಡಿರುವುದು ದುರಂತವೇ ಸರಿ.

2 COMMENTS

Leave a Reply