ಲೋಕಸಭೆಯಲ್ಲಿ ಚರ್ಚೆಯಾಯ್ತು ಗುಂಪು ಥಳಿತದ ವಿಷಯ, ಖರ್ಗೆ- ಹುಕುಂದೇವ್ ನಡುವಣ ವಾದ ಪ್ರತಿವಾದ ಹೇಗಿತ್ತು?

ಡಿಜಿಟಲ್ ಕನ್ನಡ ಟೀಮ್:

ಚಳಿಗಾಲದ ಅಧಿವೇಶನದಲ್ಲಿಂದು ಲೋಕಸಭೆಯಲ್ಲಿ ಹೆಚ್ಚು ಚರ್ಚೆಯಾಗಿದ್ದು, ದೇಶದ ವಿವಿಧೆಡೆಗಳಲ್ಲಿ ನಡೆದಿರುವ ಗುಂಪು ಥಳಿತ ಪ್ರಕರಣಗಳ ವಿಷಯ.

ಈ ವಿಚಾರವಾಗಿ ತಮ್ಮ ವಾದ ಮಂಡಿಸಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಇತ್ತೀಚಿನ ದಿನಗಳಲ್ಲಿ ನಡೆದ ದಲಿತರ ಮೇಲಿನ ಥಳಿತ ಪ್ರಕರಣಗಳನ್ನು ಉದಾಹರಿಸುತ್ತಾ, ಅದಕ್ಕೆ ಕೆಲವು ಬಿಜೆಪಿ ನಾಯಕರ ಸಮರ್ಥನೆಗಳನ್ನು ಉಲ್ಲೇಖಿಸುತ್ತಾ ಈ ಎಲ್ಲ ಪ್ರಕರಣಗಳಿಗೆ ಬಿಜೆಪಿಯ ಪ್ರೋತ್ಸಾಹ ಇದೆ ಎಂದರು. ಇದಕ್ಕೆ ಬಿಜೆಪಿಯಿಂದ ಪ್ರತಿವಾದ ಮಾಡಿದ ಬಿಹಾರದ ಸಂಸದ ಹುಕುಂದೇವ್ ನಾರಾಯಣ್ ಯಾದವ್ ಅವರ ಮಾತುಗಳು ಗಮನ ಸೆಳೆದವು. ವಿರೋಧ ಪಕ್ಷದವರು ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಘಟನೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಗೋಹತ್ಯೆ ಕಾರಣಕ್ಕೆ ಮಾತ್ರ ದೇಶದಲ್ಲಿ ಗುಂಪು ಥಳಿತ ನಡೆಯುತ್ತಿದೆ ಎಂದು ಬಿಂಬಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆ, ಕೇರಳದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯನ್ನು ಗುಂಪು ಥಳಿತದ ಪಟ್ಟಿಗೆ ಏಕೆ ಸೇರಿಸಿಲ್ಲ ಎಂದು ಅವರು ಪ್ರಶ್ನಿಸಿದರು. ಈ ವಿಚಾರದ ಕುರಿತಾಗಿ ಸಂಸತ್ತಿನಲ್ಲಿ ನಡೆದ ಚರ್ಚೆ ಹಿಗಿತ್ತು…

ಈ ಕುರಿತು ಚರ್ಚೆ ಆರಂಭಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದಿಷ್ಟು, ‘ದೇಶದ ಹಲವು ರಾಜ್ಯಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಕಾರಣವಾಗಿರೋದು ಕೆಲವು ಕೋಮುವಾದಿ ಸಂಘಟನೆಗಳು. ಈ ಸಂಘಟನೆಗಳ ಗುಂಪು ಥಲಿತಕ್ಕೆ ನಿಯಂತ್ರಣವೇ ಇಲ್ಲದಂತಾಗಿದೆ. ಇಂತಹ ಪ್ರಕರಣಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.

ಸರ್ಕಾರವೇ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಗೋರಕ್ಷಕದಂತಹ ಗುಂಪುಗಳಿಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದೆ. ಪ್ರಧಾನಮಂತ್ರಿ ಅವರು ಈ ವಿಷಯವಾಗಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾದರೂ ಈವರೆಗೂ ಯಾವ ಕ್ರಮವನ್ನು ಕೈಗೊಂಡಿಲ್ಲ.

ಗೋ ರಕ್ಷಕರ ದಾಳಿಗೆ ಹಲವರು ಬಲಿಯಾಗಿದ್ದು, ಆ ಪೈಕಿ ಪೆಹ್ಲು ಖಾನ್ ಸಹ ಒಬ್ಬಾತ. ಈತನ ಸಾವಿನ ನಂತರ ಬಿಜೆಪಿ ನಾಯಕರೊಬ್ಬರು, ಪೆಹ್ಲು ಖಾನ್ ಒಬ್ಬ ಗೋ ಕಳ್ಳಸಾಗಾಣೆಗಾರ. ಹೀಗಾಗಿ ಆತನ ಸಾವಿಗೆ ಮರುಗುವ ಅವಶ್ಯಕತೆ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಈ ಸರ್ಕಾರ ಒಬ್ಬ ವ್ಯಕ್ತಿ ಏನನ್ನು ತಿನ್ನಬೇಕು ಹಾಗೂ ಏನನ್ನು ಇಚ್ಛಿಸಬೇಕು ಎಂಬುದರ ಮೇಲೆ ಬಲವಂತ ಹೇರುತ್ತಿದೆ.

ಶಾಂತಿ ಹಾಗೂ ಸಹಬಾಳ್ವೆಯಿಂದ ಬಾಳೋಣ ಎಂಬುದೇ ವಿಶ್ವದೆಲ್ಲೆಡೆಯ ಕೂಗಾಗಿದ್ದು, ನಮ್ಮ ದೇಶವನ್ನು ಹಿಂದೂಸ್ಥಾನವಾಗಿಯೇ ಉಳಿಸಿಕೊಳ್ಳೋಣ, ಲಿಂಚಿಸ್ಥಾನವನ್ನಾಗಿ (ಥಳಿತ ರಾಷ್ಟ್ರ) ಮಾಡುವುದು ಬೇಡ..’

ಖರ್ಗೆ ಅವರು ತಮ್ಮ ವಾದ ಮಂಡಿಸುತ್ತಿರುವಾಗ ಸಾಕಷ್ಟು ಬಾರಿ ಸರ್ಕಾರದ ಪರ ಸಂಸದರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈ ವೇಳೆ ಕೇಂದ್ರ ಸಚಿವ ಅನಂತ ಕುಮಾರ್, ‘ಖರ್ಗೆ ಅವರು ನೀಡುತ್ತಿರುವ ಮಾಹಿತಿಗೆ ಸೂಕ್ತ ದಾಖಲೆ ಒದಗಿಸಬೇಕು. ಅಲ್ಲದೆ ಅವರು ಪಟ್ಟಿ ಮಾಡಿರುವ ಎಲ್ಲಾ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆಯಾ ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿವೆ. ಆದರೂ ಖರ್ಗೆ ಅವರು ತಮ್ಮ ಮಾಹಿತಿ ನೀಡುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.

ನಂತರ ಖರ್ಗೆ ಅವರಿಗೆ ಪ್ರತಿಯಾಗಿ ವಾದ ಮಂಡಿಸಿದ ಹುಕುಂದೇವ್ ಯಾದವ್, ‘ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದ್ದರೂ, ವಿರೋಧ ಪಕ್ಷದವರು ಏಕೆ ಸರ್ಕಾರದ ನಿಲುವನ್ನು ಪ್ರಶ್ನಿಸುತ್ತಿದ್ದಾರೆ. ಗುಂಪು ಥಳಿತದ ಪ್ರಕರಣಗಳನ್ನು ಪ್ರಧಾನ ಮಂತ್ರಿಗಳೇ ಸಾರ್ವಜನಿಖವಾಗಿ ಖಂಡಿಸಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರ. ಪ್ರಧಾನಿಗಳು ಏಕಾಏಕಿ ರಾಜ್ಯಗಳಿಗೆ ಪ್ಯಾರಾ ಮಿಲಿಟರಿ ಪಡೆಗಳನ್ನು ಕಳಿಸಲು ಸಾಧ್ಯವಿಲ್ಲ.

ಜುನೈದ್ ಪ್ರಕರಣ ರೈಲಿನಲ್ಲಿ ಸೀಟಿಗಾಗಿ ನಡೆದ ಜಗಳದಿಂದ ಆದ ಅನಾಹುತ. ಅದಕ್ಕೆ ಧಾರ್ಮಿಕ ಬಣ್ಣ ಹಚ್ಚುತ್ತಿರುವುದೇಕೆ? ಜಮ್ಮು ಕಾಶ್ಮೀರದಲ್ಲಿ ಗುಂಪು ಥಳಿತಕ್ಕೆ ಡಿಎಸ್ಪಿ ಆಯುಬ್ ಪಂಡಿತ್ ಬಲಿಯಾದ ಪ್ರಕರಣ ಸಂಸತ್ತಿನಲ್ಲಿ ಉಲ್ಲೇಖಿಸಲು ಯೋಗ್ಯವಲ್ಲವೇ? ಇನ್ನು ಕೇರಳದಲ್ಲಿ ನಡೆಯುತ್ತಿರುವ ದಾಳಿ ಹಾಗೂ ಹತ್ಯೆಗಳೇನು? ಇವರಾರು ಮನುಷ್ಯರಲ್ಲವೆ? ಈ ಪ್ರಕರಣಗಳಲ್ಲಿ ಸತ್ತವರು ಮುಸಲ್ಮಾನರಲ್ಲ ಎಂಬ ಕಾರಣಕ್ಕೆ ಇವುಗಳನ್ನು ಗುಂಪು ಥಳಿತದ ಪಟ್ಟಿಗೆ ಸೇರಿಸುವುದಿಲ್ಲವೆ?

ನೀವು ಈವರೆಗೂ ಧಾರ್ಮಿಕ ಅತ್ಯಾಚಾರ, ಸಾಮಾಜಿಕ ಅತ್ಯಾಚಾರ, ಮಾನಸಿಕ ಅತ್ಯಾಚಾರ, ಆರ್ಥಿಕ ಅತ್ಯಾಚಾರದ ಮೂಲಕ ದೇಶವನ್ನೇ ಹಾಳುಗೆಡವಿದ್ದೀರಿ. ವಂದೇ ಮಾತರಂ ಹೇಳುವುದರಲ್ಲಿ ತಪ್ಪೇನಿದೆ. ಇದನ್ನು ವಿರೋಧಿಸುತ್ತಿರುವುದು ದಬ್ಬಾಳಿಕೆಯಲ್ಲವೇ?’ ಎಂದು ಪ್ರಶ್ನಿಸಿದರು.

ನಂತರ ಈ ವಿಚಾರವಾಗಿ ಮಾತನಾಡಿದ ಟಿಎಂಸಿ ಪಕ್ಷದ ಸಂಸದ ಸುಗತ ರಾಯ್, ‘ಈ ವಿಷಯದಲ್ಲಿ ನಾನು ಹಿಂದೂ, ಮುಸಲ್ಮಾನರ ವಿಷಯವನ್ನು ಎಳೆಯುವುದಿಲ್ಲ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಶೇ.97 ರಷ್ಟು ಹತ್ಯೆ ಪ್ರಕರಣಗಳು ಹೆಚ್ಚಿವೆ. ಆ ಪೈಕಿ ಶೇ.86 ರಷ್ಟು ಮುಸಲ್ಮಾನರ ಹತ್ಯೆ ಹೆಚ್ಚಾಗಿದೆ. ಈ ಹತ್ಯೆಗಳ ಹಿಂದಿರುವುದು ಬಿಜೆಪಿಯ ಕೋತಿಗಳು. ಹೀಗಾಗಿ ನಾನು ಆಡಳಿತ ಪಕ್ಷದ ಸದಸ್ಯರನ್ನು ಪ್ರಶ್ನಿಸುವುದೇನೆಂದರೆ, ನೀಮಗೆ ಕಾಂಗ್ರೆಸ್ ಮುಕ್ತ ಭಾರತ ಬೇಕೋ ಅಥವಾ ಮುಸಲ್ಮಾನರ ಮುಕ್ತ ಭಾರತ ಬೇಕೊ? ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಶೇ.52 ರಷ್ಟು ಗುಂಪು ಥಲಿತ ಪ್ರಕರಣಗಳು ಹಾಗೂ ಹತ್ಯೆಗಳು ನಡೆದಿವೆ’ ಎಂದು ಅಂಕಿಅಂಶವನ್ನು ನೀಡಿದರು. ಈ ವೇಳೆ ಇದನ್ನು ಆಕ್ಷೇಪಿಸಿದ ಬಿಜೆಪಿ ಸದಸ್ಯರು ಇದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ನಂತರ ಗದ್ದಲ ಜೋರಾಯಿತು.

3 COMMENTS

  1. INDINA NADE KENDRA SARKARada vishaya, rajya sarkarada vishay… samyukta pattiya parikalpane namma M.P GALIGE RAKTAGATAVAGILAVENISITU> TREASURY BENCH VIRODHI PAKSHADANTE VIVARANE /SPASTANE KELIDU YESTU SAMAJASA! YARU YARA KARYAKARTARU YENDU GOTTAGUVADE ILA!! WONDERFUL LABLING I FEEL! THANKS.

Leave a Reply