ತಸ್ಲೀಮಾ ಔರಂಗಾಬಾದ್ ಪ್ರವೇಶ ನಿರ್ಬಂಧಿಸಿ ಗಹಗಹಿಸಿದ ಮತಾಂಧರು, ನಾವೇನು ಮಾಡೋಣ ಎನ್ನುತ್ತಿದ್ದಾರೆ ಸಿದ್ಧಾಂತ ಮರೆತ ನಾಚಿಕೆಗೇಡಿ ಬಿಜೆಪಿಗರು!

ಡಿಜಿಟಲ್ ಕನ್ನಡ ಟೀಮ್:

ವಿಶ್ವದ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಾಗಳಾದ ಅಜಂತಾ ಎಲ್ಲೋರಕ್ಕೆ ಭೇಟಿ ನೀಡುವ ಸಲುವಾಗಿ ಔರಂಗಬಾದಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್, ತೀವ್ರ ಪ್ರತಿಭಟನೆ ಎದುರಾದ ಹಿನ್ನೆಲೆಯಲ್ಲಿ ತಮ್ಮ ಭೇಟಿಯನ್ನು ಮೊಟಕುಗೊಳಿಸಿ ಹಿಂದಿರುಗಿದ ಘಟನೆ ಶನಿವಾರ ನಡೆದಿದೆ. ಈಕೆಯ ಭೇಟಿಯನ್ನು ವಿರೋಧಿಸಿದ ಎಐಎಂಐಎಂ ಶಾಸಕ ಇಮ್ತಿಯಾಜ್ ಜಲೀಲ್ ನೇತೃತ್ವದಲ್ಲಿ ಇಸ್ಲಾಂ ಸಂಘಟನೆಗಳು ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆಸಿದವು.

ಬಿಡಿ, ತಸ್ಲೀಮಾ ನಸ್ರೀನ್ ವಿರುದ್ಧ ಮುಸ್ಲಿಂ ಪಕ್ಷ ಮತ್ತು ಸಂಘಟನೆಗಳ ಗೂಂಡಾಗಿರಿ ಗೊತ್ತಿರುವಂಥದ್ದೇ. ಅವರಿಂದ ಇನ್ನೇನು ಅಪೇಕ್ಷಿಸುವುದಕ್ಕೆ ಸಾಧ್ಯ? ಆದರೆ ಇಂಥ ಗೂಂಡಾಗಳಿಗೆ ಮಣಿಯದೇ ಕಾನೂನು ಪಾಲನೆ ಮಾಡಬೇಕಾದ ಹೊಣೆಗಾರಿಕೆ ರಾಜ್ಯ ಸರ್ಕಾರದ್ದಲ್ಲವೇ? ಇಸ್ಲಾಂ ಧರ್ಮ ಟೀಕಿಸಿದ್ದಾರೆ ಎನ್ನುವ ಕಾರಣಕ್ಕೆ ತಸ್ಲೀಮಾರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದು ಮುಸ್ಲಿಂ ತುಷ್ಟೀಕರಣದ ಸಂಕೇತ ಅಂತ ಇದೇ ಬಿಜೆಪಿಗರು ಬೊಬ್ಬೆ ಹಾಕಿದ್ದರು. ಈಗ ಮಹಾರಾಷ್ಟ್ರದಲ್ಲಿರುವುದು ಬಿಜೆಪಿ ಸರ್ಕಾರವೇ. ಅಷ್ಟಾಗಿಯೂ ತಸ್ಲೀಮಾರಿಗೆ ಔರಂಗಾಬಾದಿನಲ್ಲಿ ಉಳಿದುಕೊಳ್ಳುವುದಕ್ಕೆ ಮತಾಂಧರು ಅಡ್ಡಿಪಡಿಸಿದರೆ, ರಕ್ಷಣೆಯ ಹೊಣೆ ಹೊತ್ತು ತನ್ನ ಸಿದ್ಧಾಂತಬದ್ಧತೆ ಪ್ರದರ್ಶಿಸಬೇಕಿದ್ದ ಬಿಜೆಪಿ ಈಗಲೂ ಸಾಮಾಜಿಕ ತಾಣಗಳಲ್ಲಿ ಈ ಪ್ರಕರಣವನ್ನು ಇಸ್ಲಾಂ ತೀವ್ರವಾದದ ಉದಾಹರಣೆಯಾಗಿಸಿ ಖಂಡನೆ-ಬೊಬ್ಬೆಗಳಲ್ಲೇ ಮುಳುಗಿರುವುದು ನಾಚಿಕೆಗೇಡಿನ ವಿಷಯ.

ತಸ್ಲಿಮಾ ಅವರ ಭೇಟಿಯನ್ನು ವಿರೋಧಿಸಿದ ಜಲೀಲ್, ‘ಕಳೆದ ವಾರವಷ್ಟೇ ಹಲವಾರು ಧಾರ್ಮಿಕ ಕಟ್ಟಡಗಳನ್ನು ಕೆಡವಿರುವ ಹಿನ್ನೆಲೆಯಲ್ಲಿ ನಗರದ ಪರಿಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಲ್ಲಿ ಅನೇಕ ಪೊಲೀಸರನ್ನು ನಿಯೋಜಿಸಲಾಗಿದೆ. ಇಂತಹ ಸಂದರ್ಭದಲ್ಲಿ ತಸ್ಲಿಮಾ ಅವರು ಭೇಟಿ ನೀಡಿದರೆ ಕಾನೂನು ಸುವ್ಯವಸ್ಥೆ ಹದಗೆಡಲಿದೆ. ಹೀಗಾಗಿ ನಾನು ಪೊಲೀಸರು ಹಾಗೂ ಅಧಿಕಾರಿಗಳ ಜತೆ ಮಾತನಾಡಿ ಆಕೆ ನಗರವನ್ನು ಪ್ರವೇಶಿಸದಂತೆ ತಡೆಯಲು ಹೇಳಿದೆ. ಒಂದು ವೇಳೆ ತಸ್ಲಿಮಾ ಅವರು ನಗರವನ್ನು ಪ್ರವೇಶಿಸಲು ನಿರ್ಧರಿಸಿದ್ದರೆ, ಪ್ರತಿಭಟನೆ ಮತ್ತಷ್ಟು ತೀವ್ರವಾಗುತ್ತಿತ್ತು. ಒಂದು ವೇಳೆ ಅವರು ವಿಮಾನ ನಿಲ್ದಾಣದಿಂದ ತಾವು ತಂಗಬೇಕಿದ್ದ ಹೊಟೇಲ್ ಗೆ ಆಗಮಿಸಿದ್ದರೆ, ಪ್ರತಿಭಟನಾಕಾರರು ಮೊಟ್ಟೆ ಹಾಗೂ ಟೊಮೊಟೊ ಎಸೆದು ಸ್ವಾಗತ ಕೋರುತ್ತಿದ್ದರು. ಪ್ರವಾದಿಗಳು ಹಾಗೂ ಇಸ್ಲಾಂ ವಿರುದ್ಧ ಬರೆದಿರುವ ತಸ್ಲಿಮಾ ಅವರನ್ನು ವಿರೋಧಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ನಮಗಿದೆ. ಯುವಕರು ಆಕೆ ಆಗಮಿಸುವುದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ನಾನು ಆಕೆ ವಾಪಸ್ ಹೋಗುವಂತೆ ನೋಡಿಕೊಂಡೆ’ ಎಂದಿದ್ದಾರೆ.

ತಸ್ಲಿಮಾ ಅವರು ಹಿಂದಿರುಗಿದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಉಪ ಆಯುಕ್ತ ರಾಹುಲ್ ಶ್ರೀರಾಮೆ, ‘ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಸ್ಲಿಮಾ ಅವರನ್ನು ವಾಪಸ್ ಕಳುಹಿಸಲಾಗಿದೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ಬಿಜೆಪಿಯ ಮಹಿಳಾ ಮೋರ್ಚಾದ ಸದಸ್ಯೆ ಪ್ರೀತಿ ಗಾಂಧಿ ಅವರು ಟ್ವಿಟರ್ ನಲ್ಲಿ ನೀಡಿರುವ ಸ್ಪಷ್ಟನೆ ಹೀಗಿದೆ…

‘ತಸ್ಲಿಮಾ ಅವರು ಔರಂಗಾಬಾದಿಗೆ ಭೇಟಿ ನೀಡುವ ಬಗ್ಗೆ ಮುಂಚಿತವಾಗಿ ಪೊಲೀಸರಿಗಾಗಲಿ ಅಥವಾ ಅಧಿಕಾರಿಗಳಿಗಾಗಲಿ ಮಾಹಿತಿ ನೀಡಿರಲಿಲ್ಲ. ಅದಾಗ್ಯೂ ಸಹ ತಸ್ಲಿಮಾ ಅವರಿಗೆ ವೈಪ್ಲಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ತಸ್ಲಿಮಾ ಅವರು ಔರಂಗಬಾದ್ ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ವಿಮಾನ ನಿಲ್ದಾಣದಾಚೆ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಈ ಪ್ರತಿಭಟನೆಯ ನಡುವೆ ತಸ್ಲಿಮಾ ಅವರ ಸುರಕ್ಷಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲು 30 ನಿಮಿಷ ಸಮಯಬೇಕಿದೆ ಎಂದು ಪೊಲೀಸರು ತಸ್ಲಿಮಾ ಅವರಿಗೆ ಮಾಹಿತಿ ನೀಡಿದರು. ನಂತರ ಪರಿಸ್ಥಿತಿಯನ್ನು ನೋಡಿ ತಾವಾಗಿಯೇ ಅಜಂತಾ ಎಲ್ಲೋರದ ಪ್ರವಾಸ ರದ್ದು ಮಾಡಿದರು. ಪೊಲೀಸರಿಂದ ತಸ್ಲಿಮಾ ಅವರು ವಾಪಸ್ ತೆರಳುವಂತೆ ಪೊಲೀಸರಿಂದ ಯಾವುದೇ ಸೂಚನೆ ಹೋಗಿಲ್ಲ. ಈ ಕುರಿತು ವರದಿ ಸಲ್ಲಿಸುವಂತೆ ಸರ್ಕಾರ ಔರಂಗಬಾದ್ ಪೊಲೀಸರಿಗೆ ಸೂಚನೆ ನೀಡಿದೆ. ಎಲ್ಲದಕ್ಕಿಂತ ಮುಖ್ಯವಾಗಿ ತಸ್ಲಿಮಾ ಅವರು ಮಹಾರಾಷ್ಟ್ರದ ಯಾವುದೇ ಭಾಗದಲ್ಲಿ ಮುಕ್ತವಾಗಿ ಓಡಾಡಲು ಸ್ವತಂತ್ರರು.’

ಆದರೆ, ಸಾಮಾಜಿಕ ತಾಣಗಳನ್ನೇ ಗಮನಿಸಿದರೂ ಒಂದಂತೂ ಸ್ಪಷ್ಟ. ಮಮತಾರ ಪಶ್ಚಿಮ ಬಂಗಾಳದೊಳಗೆ ತಸ್ಲೀಮಾರಿಗೆ ಸಿಗದ ಪ್ರವೇಶದ ಸ್ಥಿತಿ ಮಹಾರಾಷ್ಟ್ರದಲ್ಲೂ ಆಗುವುದಾದರೆ, ಕೇರಳದಲ್ಲಿ ಸಾಲು-ಸಾಲಾಗಿ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರು ಕೊಲೆಯಾಗುತ್ತಿದ್ದಾಗಲೂ ಕಡು ನಿಂದನೆಯಲ್ಲಷ್ಟೇ ತನ್ನ ಕರ್ತವ್ಯ ಮೆರೆಯುತ್ತಿರುವ ಬಿಜೆಪಿ ಬಗ್ಗೆ ಅದರ ಬೆಂಬಲಿಗರಲ್ಲೇ ಆಕ್ರೋಶ ಮಡುಗಟ್ಟುತ್ತಿದೆ.

Leave a Reply