ಅನ್ಯಪಕ್ಷಗಳ ಮಖಾಡೆ ಮಲಗಿಸಿದ ಸಿದ್ರಾಮಯ್ಯ ತಂತ್ರಗಾರಿಕೆ

BANG

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜಕೀಯ ತಂತ್ರಗಾರಿಕೆ ನಿಪುಣಾಗ್ರೇಸರ ಎಂದೇ ಖ್ಯಾತರು. ಆದರೆ ಕಳೆದ ಹದಿನೈದು ದಿನಗಳಲ್ಲಿ ತೆಗೆದುಕೊಂಡ ಮೂರು ಪ್ರಮುಖ ನಿಲುವುಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರಿಗಿಂಥ ತಾವು ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ. ಒಂದು ಕೈ ಮೇಲೇ ಎಂಬುದನ್ನು ನಿರೂಪಿಸಿದ್ದಾರೆ.

ಲಿಂಗಾಯತ ಪ್ರತ್ಯೇತ ಧರ್ಮ ಮಾಡಲು ತಾವು ಕಟಿಬದ್ಧ, ಕರ್ನಾಟಕಕ್ಕೆ ಅದರದೇ ಆದ ಪ್ರತ್ಯೇಕ ನಾಡಧ್ವಜ ರೂಪಿಸಿಯೇ ಸಿದ್ಧ, ಮೆಟ್ರೋದಲ್ಲಿ ತ್ರಿಭಾಷಾ ಸೂತ್ರದ ನೆಪದಲ್ಲಿ ಹಿಂದಿ ಹೇರಿಕೆಗೆ ಅವಕಾಶ ಕೊಡುವುದಿಲ್ಲ ಎಂದು ಸಾರುವ ಮೂಲಕ ಚುನಾವಣೆ ವರ್ಷದಲ್ಲಿ ರಾಜಕೀಯ ವಿರೋಧಿಗಳನ್ನು ತಂತ್ರಗಾರಿಕೆ ಹಗ್ಗದಲ್ಲಿ ಕಟ್ಟಿಹಾಕಿ ಅಖಾಡದಲ್ಲಿ ಮಲಗಿಸಿಟ್ಟಿದ್ದಾರೆ. ಅಷ್ಟೇ ಅಲ್ಲ ಹಾಗೆ ಮಲಗಿದವರ ಮುಂದೆ ಸಾರಿಸಿ, ಗುಡಿಸಿ, ರಾಜಕೀಯ ರಂಗೋಲಿ ಬಿಡಿಸಿಟ್ಟಿದ್ದಾರೆ. ಎದುರಾಳಿಗಳು ಕೆಮ್ಮುವಂತಿಲ್ಲ, ಕೊಸರುವಂತಿಲ್ಲ. ಸುಮ್ಮನೆ ನೋಡಿಕೊಂಡಿರಬೇಕು ಅಷ್ಟೇ. ಹಾಗಿದೆ ಸಿದ್ದರಾಮಯ್ಯನವರ ರಾಜಕೀಯ ಕತ್ತರಿ ಶಾಟ್.

ಸಿದ್ದರಾಮಯ್ಯನವರು ಹೊಡೆದಿರುವ ಮೂರು ಭರ್ಜರಿ ಸಿಕ್ಸರ್‌ಗಳ ಪೈಕಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ನಾಡಿನ ಉದ್ದಗಲಕ್ಕೂ ಧಾರ್ಮಿಕ ಭೂಕಂಪನ ಉಂಟು ಮಾಡಿದೆ. ಲಿಂಗಾಯತ ಪ್ರತ್ಯೇತ ಧರ್ಮ ಆಗಬೇಕೇ, ಬೇಡವೇ ಎಂಬುದು ಬರೀ ಆ ಸಮುದಾಯದಲ್ಲಷ್ಟೇ ಅಲ್ಲ ಇಡೀ ನಾಡಿನಲ್ಲಿ ಧಗಧಗಿಸೋ ಚರ್ಚೆ ಹುಟ್ಟು ಹಾಕಿದೆ. ಶತಮಾನಗಳಷ್ಟು ಹಳೆಯದಾದ ವಿಚಾರ ಧಾರ್ಮಿಕ, ರಾಜಕೀಯ, ಸಾಮಾಜಿಕ ಕಾರಣಗಳಿಂದ ಆಗಾಗ್ಗೆ ಹೊತ್ತಿ, ಉರಿದು, ಆರಿ ಹೋಗುತ್ತಿತ್ತು. ಮಿಂಚು ಹುಳುವಿನಂತೆ ಕತ್ತಲು-ಬೆಳಕಿನ ಕಣ್ಣಾಮುಚ್ಚಾಲೆ ಆಡುತ್ತಿತ್ತು. ಇದೀಗ ಸಿದ್ದರಾಮಯ್ಯನವರು ಹಚ್ಚಿರುವ ಮತಾಪು ಕಡ್ಡಿ ಹಳೇ ವಿಚಾರಕ್ಕೆ ಹೊಸ ವಿವಾದದ ಲೇಪ ಹಚ್ಚಿದೆ. ಸಮುದಾಯದ ಹಲ ಮುಖಂಡರು ಹಾಗೂ ಧರ್ಮ ಗುರುಗಳಿಂದ ಮತ್ತೊಮ್ಮೆ ಬಂದ ಅಥವಾ ತರಿಸಿಕೊಂಡ ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು ಪರಿಗಣಿಸಿಯೇ ಸಿದ್ಧ ಎಂದು ಸಿದ್ದರಾಮಯ್ಯನವರು ಸಾರಿದ ನಂತರ ವಿವಾದ ಮತ್ತೊಮ್ಮೆ ಕೊತಕೊತನೆ ಕುದಿಯುತ್ತಿದೆ. ಪ್ರತ್ಯೇತ ಧರ್ಮ ಆಗಬೇಕು ಎನ್ನುವವರು, ಬೇಡ ಅದು ಹಿಂದು ಧರ್ಮದ ಭಾಗವಾಗಿಯೇ ಇರಲಿ ಎನ್ನುವವರ ವಾದ-ಪ್ರತಿವಾದದಿಂದ ಸಮುದಾಯ ಇಬ್ಭಾಗವಾಗಿದೆ. ಸಮುದಾಯದ ಒಳಗಣ ಮತ್ತು ಹೊರಗಣ ರಾಜಕೀಯ ಮುಖಂಡರು ಆಸಹಾಯಕತೆಯಿಂದ ತಮ್ಮ ಕೈಯನ್ನು ತಾವೇ ಕವರಿಕೊಳ್ಳುತ್ತಿದ್ದಾರೆ. ಆದರೆ ವಿಷಯ ತೀರಾ ಸೂಕ್ಷ್ಮವಾಗಿರುವುದರಿಂದಿ ಗಟ್ಟಿಧ್ವನಿ ಇಲ್ಲ. ಏನೋ ಹೇಳಬೇಕೆಂದು ಮನಸ್ಸು ತುಡಿಯುತ್ತದೆ, ಆದರೆ ಧರ್ಮಸೂಕ್ಷ್ಮ ಕಟ್ಟುಪಾಡುಗಳು, ಹೈಮಾಂಡ್ ಅಣತಿ ಅವರ ಮನಸ್ಸಿನಲ್ಲಿರುವುದು ಹೊರಬರಲು ಬಿಡುತ್ತಿಲ್ಲ. ವಿಚಾರ ಕಾದಸೀಸದಂತೆ ನಾಲಿಗೆ ಮೇಲೆ ಲಾಸ್ಯವಾಡುತ್ತಿದ್ದರೂ ಅರುಹುವಂತಿಲ್ಲ. ಇನ್ನು ಸಾತ್ವಿಕತೆ ಪ್ರತಿರೂಪಿಗಳೆನಿಸಿದ್ದ ಸಮುದಾಯ ಧಾರ್ಮಿಕ ಮುಖಂಡರು ಉಗ್ರಸ್ವರೂಪಿಗಳಾಗಿದ್ದಾರೆ. ಕೆಸರಿನಲ್ಲಿ ಅಜ್ಜೆತ್ತಿದ ನಾಲಿಗೆಯನ್ನೇ ಕತ್ತಿ ಮಾಡಿಕೊಂಡು ಬೀದಿಯಲ್ಲಿ ನಿಂತು ಕಚ್ಚಾಡುತ್ತಿದ್ದಾರೆ. ಬರಬಾರದ ಮಾತುಗಳು ಕಾವಿಧಾರಿಗಳ ಬಾಯಲ್ಲಿ ನಲಿದು, ಕೇಳುಗರ ಕಿವಿಗೆ ಕಾದ ಸೀಸ ಸುರಿಯುತ್ತಿವೆ.

ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕೆಂಬ ಬೇಡಿಕೆ ಮುನ್ನಲೆಗೆ ಬಂದದ್ದು ಇದೇ ಮೊದಲೇನಲ್ಲ. ಕಳೆದ ಮೂರು ದಶಕಗಳಿಂದ ಅನೇಕ ಬಾರಿ ವಿಚಾರ ಪ್ರಸ್ತಾಪವಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆಯೂ ಹೋಗಿದೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ, ವೀರಪ್ಪ ಮೊಯ್ಲಿ ಕೇಂದ್ರದ ಕಾನೂನು ಸಚಿವರಾಗಿದ್ದಾಗ ಈ ಪ್ರಸ್ತಾವನೆಗೆ ಪಕ್ಷಾತೀತವಾಗಿ ಅನೇಕ ರಾಜಕೀಯ ಮುಖಂಡರು ಸಹಿ ಹಾಕಿದ್ದಾರೆ. ಇದರಲ್ಲಿ ಕಾಂಗ್ರೆಸ್ ಮುಖಂಡರಿದ್ದಾರೆ, ಬಿಜೆಪಿ ಮುಖಂಡರಿದ್ದಾರೆ, ಜೆಡಿಎಸ್ ಮುಖಂಡರಿದ್ದಾರೆ, ಮಂತ್ರಿಗಳಾದವರಿದ್ದಾರೆ, ಶಾಸಕರಾದವರಿದ್ದಾರೆ, ಮೇಲ್ಮನೆ ಸದಸ್ಯರಾದವರಿದ್ದಾರೆ, ರಾಜಕೀಯೇತರ ಮುಖಂಡರಿದ್ದಾರೆ, ಧಾರ್ಮಿಕ ಮುಖಂಡರಿದ್ದಾರೆ. ಹಿಂದೆ ಯಡಿಯೂರಪ್ಪನವರ ಸರಕಾರವಿದ್ದಾಗ, ಸದಾನಂದಗೌಡರು, ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಈ ವಿಚಾರ ಚರ್ಚೆಗೆ ಬಂದು ಹೋಗಿದೆ. ಆದರೆ ವಿಷಯ ಈಗಿನಷ್ಟರ ಮಟ್ಟಿಗೆ ಕಾವು ಪಡೆದುಕೊಂಡಿರಲಿಲ್ಲ. ಹಿಂದೆ ಹಲವಾರು ಬಾರಿ ಈ ವಿಚಾರ ಮಂಥನಕ್ಕಷ್ಟೇ ಸೀಮಿತವಾಗಿ ತೆರೆಗೆ ಸರಿದು ಹೋಗಿತ್ತು. ಆದರೆ ಈಗ ಸಿಕ್ಕಾಪಟ್ಟೆ ಕಾವು ಪಡೆದುಕೊಂಡಿದೆ. ಕಾರಣ ಸಮಯ ಮತ್ತು ಸಂದರ್ಭ. ಯಾವುದೇ ಒಂದು ವಿಷಯ ಗಹನ ಮತ್ತು ಗಣನೀಯ ಆಗಲು ಸಂದರ್ಭ ಎನ್ನೋದು ಬಹುಮುಖ್ಯ. ವಿಧಾನಸಭೆ ಚುನಾವಣೆ ವರ್ಷದಲ್ಲಿ ಸಿದ್ದರಾಮಯ್ಯನವರು ಬಿಟ್ಟಿರುವ ಈ ಬಾಣ ಹಿಂದೆಲ್ಲ ಸನ್ನಿವೇಶಗಳನ್ನು ಪಕ್ಕಕ್ಕೆ ಸರಿಸಿ, ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಚಲನಶೀಲತೆಯನ್ನು ಹುಟ್ಟು ಹಾಕಿದೆ. ಸಂಘರ್ಷ ಸ್ವರೂಪವನ್ನು ಕೊಟ್ಟಿದೆ. ಇಂಥ ಇಕ್ಕಟ್ಟಿನ ಸ್ಥಿತಿ ನಿರ್ಮಾತೃ ಸಿದ್ದರಾಮಯ್ಯನವರು ತಮ್ಮನ್ನಾವರಿಸಿಕೊಂಡಿರುವ ಹುಂಬತನ, ಭಂಡತನಕ್ಕೆ ಚತುರತೆಯ ಲೇಪವಚ್ಚಿಕೊಂಡವರಂತೆ ಮನಸ್ಸಲ್ಲೇ ಮಂಡಿಗೆ ಸವಿಯುತ್ತಿದ್ದಾರೆ. ಆದರೆ ವಿರೋಧಿಗಳು ಇದಕ್ಕೆ ‘ರಾಜಕೀಯ ಪಟ್ಟ’ ಕಟ್ಟಿದ್ದಾರೆ. ಸಿದ್ದರಾಮಯ್ಯನವರು ಮತ ರಾಜಕೀಯಕ್ಕಾಗಿ ಸಮುದಾಯ ಇಬ್ಭಾಗ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ನಿಜ, ರಾಜಕಾರಣಿಗಳು ರಾಜಕೀಯ ಮಾಡದೆ ಬಸವನಗುಡಿ ಕಡಲೆಕಾಯಿ ಪರಿಶೆಯಲ್ಲಿ ಕೂತು ಕಡಲೆ ಕಾಯಿ ಮಾರಲು ಆಗುವುದಿಲ್ಲ. ರಾಜಕಾರಣಿಗಳು ರಾಜಕೀಯ ಮಾಡಲೇಬೇಕು. ಅದನ್ನು ಬಿಜೆಪಿಯ ಯಡಿಯೂರಪ್ಪನವರು ಮಾಡಿದ್ದಾರೆ. ಜೆಡಿಎಸ್‌ನ ದೇವೇಗೌಡರು ಮಾಡಿದ್ದಾರೆ, ಕುಮಾರಸ್ವಾಮಿ ಮಾಡಿದ್ದಾರೆ, ಈಗ ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಹಿಂದೆ ಮನಮೋಹನಸಿಂಗ್ ಅವರು ಪ್ರಧಾನಿ ಆಗಿದ್ದಾಗ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಪ್ರಧಾನಿ ಮನಮೋಹನಸಿಂಗ್ ಅವರಿಗೆ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವಾಗಿ ಪರಿಗಣಿಸಿ, ಸ್ಥಾನಮಾನ ನೀಡಬೇಕೆಂದು ಕೊಟ್ಟ ಮನವಿಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಸಹಿ ಹಾಕಿದ್ದಾರೆ. ಅವರ ಸಂಪುಟದಲ್ಲಿದ್ದ ಅನೇಕ ಮಂತ್ರಿಗಳೂ ಸಹಿ ಹಾಕಿದ್ದಾರೆ. ಕುಮಾರಸ್ವಾಮಿ ಪಕ್ಷದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರು ಪ್ರತ್ಯೇಕ ಧರ್ಮ ಅಗಲೇಬೇಕೆಂದು ಗಟ್ಟಿಧ್ವನಿಯಲ್ಲಿ ಹೇಳಿದ್ದಾರೆ. ಇವರೆಲ್ಲರೂ ರಾಜಕೀಯ ಮುಖಂಡರೇ. ರಾಜಕೀಯ ಮುಖಂಡರಾಗಿ, ಸಮುದಾಯದ ಮುಖಂಡರಾಗಿ ಇವರೆಲ್ಲ ಹೇಳುವಾಗ, ಬೇಡಿಕೆ ಇಟ್ಟಾಗ ಕಾಣಿಸಿಕೊಳ್ಳದ ‘ರಾಜಕೀಯ ಕಾರಣ’ ಈಗ ಸಿದ್ದರಾಮಯ್ಯನವರು ಪ್ರಸ್ತಾವನೆಯನ್ನು ಮುನ್ನೆಲೆಗೆ ತಂದಾಗ ಅವಿರ್ಭವಿಸಿದ ಚಮತ್ಕಾರ ಏನೆಂಬುದೇ ಅರ್ಥವಾಗುತ್ತಿಲ್ಲ. ಇವರೆಲ್ಲ ಮಾಡಿದರೆ ಧಾರ್ಮಿಕ ಹೂರಣ, ಸಿದ್ದರಾಮಯ್ಯ ಮಾಡಿದರೆ ರಾಜಕೀಯ ಕಾರಣ ಎಂದರೇ ಹೇಗೆ? ಅರ್ಥವಾಗದ ತರ್ಕವಿದು!

ರಾಜಕಾರಣವೆಂಬುದೇ ಹಾಗೆ. ಅದೊಂದು ರಣನೀತಿಯೂ ಹೌದು, ರಣತಂತ್ರವೂ ಹೌದು. ವ್ಯೂಹ, ಪ್ರತಿವ್ಯೂಹ ರಚನೆ ಮಾಡದಿದ್ದರೆ ರಾಜಕೀಯ ಮಾಡಲಾಗದು. ಹಾಗೆ ಮಾಡಲಾಗದವ ಯಶಸ್ವಿ ರಾಜಕಾರಣಿಯೂ ಆಗಲಾರ. ಹೀಗಾಗಿ ರಾಜಕೀಯ ಅಸ್ತ್ರಗಳು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಕೆ ಆಗುತ್ತಾ ಹೋಗುತ್ತವೆ, ಬದಲಾಗುತ್ತಾ ಹೋಗುತ್ತವೆ. ಇಲ್ಲಿ ಸರಿ, ತಪ್ಪುಗಳ ಪ್ರಶ್ನೆಯೇ ಬರುವುದಿಲ್ಲ. ಪಾಪ, ಪುಣ್ಯಗಳ ಲೆಕ್ಕವೂ ಇಲ್ಲ. All is fair in love and war (ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸರಿಯೇ) ಎನ್ನುವ ಹಾಗೆ ಪ್ರತಿ ರಾಜಕಾರಣಿಯೂ ರಾಜಕೀಯ ಸಮರದಲ್ಲಿ ತನ್ನ ಅನುಕೂಲಕ್ಕೆ ತಕ್ಕಂತೆ ತಂತ್ರಗಳನ್ನು, ಅಸ್ತ್ರಗಳನ್ನು ಪ್ರಯೋಗ ಮಾಡುತ್ತಾ ಹೋಗುತ್ತಾನೆ. ರಾಜಕೀಯ ಪಕ್ಷಗಳೂ ಹಾಗೇ. ಸಿದ್ದರಾಮಯ್ಯನವರು ಈಗ ತಮ್ಮ ಹಾಗೂ ತಮ್ಮ ಪಕ್ಷಕ್ಕೆ ಚುನಾವಣೆ ವರ್ಷದಲ್ಲಿ ಏನು ಅನುಕೂಲ ತರುತ್ತದೆ ಎಂದೆನಿಸಿದೆಯೋ ಅದನ್ನು ಪ್ರಯೋಗ ಮಾಡಿದ್ದಾರೆ. ಈಗ ಯಡಿಯೂರಪ್ಪನವರಿಗೆ ಹಿಂದೆ ಇದ್ದಂತೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗಬೇಕೆಂಬ ಆಕಾಂಕ್ಷೆ ಇದೆ. ಅಷ್ಟಿಲ್ಲದೆ ಹೋಗಿದ್ದರೆ ಅವತ್ತು ಆ ಪತ್ರಕ್ಕೆ ಸಹಿ ಹಾಕುತ್ತಿದ್ದರೇ? ಈಗಲೂ ಅದರ ಪರವಾಗಿಯೇ ಮಾತಾಡಬೇಕೆಂಬ ಆಸೆ ಯಡಿಯೂರಪ್ಪನವರಿಗೆ ಇದೆ. ಆದರೆ ಹೈಕಮಾಂಡ್ ಅವರ ಬಾಯಿ ಕಟ್ಟಿ ಹಾಕಿದೆ. ಪರವಾಗಿಯೂ ಮಾತಾಡುವಂತಿಲ್ಲ. ವಿರುದ್ಧವೂ ಮಾತಾಡುವಂತಿಲ್ಲ. ಹಾಗೆಂದು ಸುಮ್ಮನೆಯೂ ಇರುವಂತಿಲ್ಲ. ಹೀಗಾಗಿ ಇದೀಗ ಮಾಧ್ಯಮದವರು ಏನೇ ಪ್ರಶ್ನೆ ಕೇಳಲಿ ಯಡಿಯೂರಪ್ಪನವರ ಸಿಡಿಮಿಡಿಯೇ ಉತ್ತರವಾಗಿರುತ್ತದೆ. ಆ ಉತ್ತರದಲ್ಲಿ ಯಡಿಯೂರಪ್ಪನವರ ಅಸಹಾಯಕತೆ ಕುಣಿಯುತ್ತಿರುತ್ತದೆ.

ರಾಜಕೀಯದಲ್ಲಿ ಪರಿಸರ ಅನ್ನೋದು ಬಹಳ ಮುಖ್ಯ. ಅದು ವಾತಾವರಣಕ್ಕೆ ಹೊಂದಿಕೊಳ್ಳುವ ಹೆಸರು. ಸಾಹಿತ್ಯ ರಾಜಕೀಯ, ಸಾಂಸ್ಕೃತಿಕ ರಾಜಕೀಯ, ಧಾರ್ಮಿಕ ರಾಜಕೀಯ- ಹೀಗೆ ನಾನಾ ಬಗೆಗಳಿಂದ ಕರೆಸಿಕೊಳ್ಳುವ ಈ ರಾಜಕೀಯ ವರ್ತಮಾನದಲ್ಲಿ ನಮ್ಮ ಸುತ್ತಮುತ್ತ ಏನು ನಡೆಯುತ್ತಿರುತ್ತದೆ ಅನ್ನೋದನ್ನು ಗಮನದಲ್ಲಿರಿಸಿಕೊಂಡು ಅದಕ್ಕೆ ತಕ್ಕಂತೆ ತಂತ್ರ, ಪ್ರತಿತಂತ್ರ, ಕುತಂತ್ರಗಳನ್ನು ಜೋಡಿಸುತ್ತಾ ಹೋಗುತ್ತದೆ. ರಾಜಕೀಯದ ಮೂಲಗುಣ, ರಕ್ತಗುಣವೇ ಅದು. ಮನುಷ್ಯ ಸಾಮಾಜಿಕ ಪ್ರಾಣಿ, ಅದೇ ರೀತಿ ರಾಜಕೀಯ ಪ್ರಾಣಿ ಅಂತ ಗ್ರೀಕ್ ತತ್ವಜ್ಞಾನಿಗಳು ಕರೆದಿದ್ದಾರೆ. ಹೀಗಾಗಿ ಆತನ ಮಿದುಳು ತನಗೇ ಅರಿವಿಲ್ಲದೆ ರಾಜಕೀಯ ಅಂಶಗಳ ಜತೆ ಸಂಯೋಜನೆಗೊಂಡಿರುತ್ತದೆ. ಅವತ್ತು ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮವಾಗಬೇಕು ಎನ್ನುವಾಗ ಯಡಿಯೂರಪ್ಪನವರಿಗೆ ಅದರಿಂದ ತಮಗೇನೋ ಲಾಭ ಆಗುತ್ತದೆ ಎಂದೆನಿಸಿತ್ತು. ಅದು ರಾಜಕೀಯ ಲಾಭವಿರಬಹುದು ಅಥವಾ ತಮಗೆ ಅಧಿಕಾರ ತಂದುಕೊಟ್ಟ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸುವ ಅವಕಾಶ ಎಂದು ಅವರು ಬಗೆದಿರಬಹುದು. ಒಟ್ಟಿನಲ್ಲಿ ಅನುಕೂಲ ಎಂಬ ಶಬ್ದ ಅಲ್ಲಿ ಕೆಲಸ ಮಾಡಿದೆ. ಇವತ್ತು ಸಿದ್ದರಾಮಯ್ಯನವರೂ ಅದೇ ಕೆಲಸ ಮಾಡಲು ಹೊರಟಿದ್ದಾರೆ. ಹಿಂದೆ ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡದೇ ಹೋದಾಗ ಯಡಿಯೂರಪ್ಪನವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ಪ್ರಮುಖವಾಗಿ ಕೆಲಸ ಮಾಡಿದ್ದು ಲಿಂಗಾಯತ ಸಮುದಾಯದ ಒಕ್ಕೊರಲ ಬೆಂಬಲವೇ. ಬೇರೆ ಸಮುದಾಯಗಳು ಸಹಾಯ ಮಾಡಿದ್ದರೂ ಗಣನೀಯ ಎನಿಸಿದ್ದು ಯಡಿಯೂರಪ್ಪ ಪ್ರತಿನಿಧಿಸುವ ಸಮುದಾಯದವೇ.

ಈಗಲೂ ಯಡಿಯೂರಪ್ಪನವರು ಹಾಗೂ ಅವರು ಪ್ರತಿನಿಧಿಸುವ ಬಿಜೆಪಿ ನೆಚ್ಚಿಕೊಂಡಿರುವುದು ಪ್ರಮುಖವಾಗಿ ಈ ಸಮುದಾಯದ ಬೆಂಬಲವನ್ನೇ. ಆದರೆ ಹಿಂದೆ ಯಡಿಯೂರಪ್ಪವರ ಕೈಯಲ್ಲಿ ಮಾಡಲು ಆಗದ ಕೆಲಸವನ್ನು ಈಗ ಸಿದ್ದರಾಮಯ್ಯನವರು ಮಾಡಲು ಹೊರಟಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಪ್ರಸ್ತಾವನೆ ಮುಂದೆ ಮಾಡಿದ್ದಾರೆ. ಅವರು ಮಾಡುತ್ತಿರುವುದು ಮುಂದೆ ಬರಲಿರುವ ಚುನಾವಣೆಯಲ್ಲಿನ ಲಾಭಕ್ಕಾಗಿಯೇ. ಇದರ ಹಿಂದಿರುವುದು ಮತ ರಾಜಕೀಯವೇ. ಯಡಿಯೂರಪ್ಪನವರಿಗೆ ಸಂಕಟ ತಂದಿರುವುದು ಇದೇ ಸಂಗತಿ. ಬಿಜೆಪಿ ನೆಚ್ಚಿಕೊಂಡಿರುವ ಲಿಂಗಾಯತ ಸಮುದಾಯದ ಮತದ ಬುಟ್ಟಿಗೆ ಸಿದ್ದರಾಮಯ್ಯನವರು ಕೈ ಹಾಕುತ್ತಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗೆಂದು ವಿರೋಧಿಸಿ ಮಾತಾಡಿದರೆ ತಮ್ಮದೇ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಆರಂಭದಲ್ಲಿ ಯಡಿಯೂರಪ್ಪನವರು ಅಲ್ಲಲ್ಲಿ ಧ್ವನಿ ಎತ್ತಿದ್ದರು. ಆದರೆ ಈ ವಿಚಾರದಲ್ಲಿ ಬಾಯಿಬಿಟ್ಟರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಯಾವಾಗ ಹೈಕಮಾಂಡ್ ಎಚ್ಚರಿಕೆ ನೀಡಿತೋ ಅವತ್ತಿಂದ ಅವರು ಸುಮ್ಮನಾಗಿದ್ದಾರೆ. ಅವರೊಬ್ಬರೇ ಅಲ್ಲ, ಅವರ ಪಕ್ಷದವರೆಲ್ಲ ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರೆ. ಹಾಗೆ ನೋಡಿದರೆ ಮೌನವಾಗಿರುವುದು ಕೂಡ ರಾಜಕೀಯ ತಂತ್ರಗಾರಿಕೆಯ ಒಂದು ಭಾಗವೇ. ಏಕೆಂದರೆ ಬಾಯಿಬಿಟ್ಟರೆ ಚುನಾವಣೆಯಲ್ಲಿ ಮತಗಳು ಪಕ್ಕಕ್ಕೆ ಸರಿದು ಹೋಗುತ್ತವೆ. ಹೀಗಾಗಿ ಹೈಕಮಾಂಡ್ ಸೂಚನೆಯೂ ತರ್ಕಬದ್ಧವೇ. ಒಂದೆಡೆ ಹೈಕಮಾಂಡ್ ಹಾಗೂ ಇನ್ನೊಂದೆಡೆ ರಾಜ್ಯ ಮುಖಂಡರನ್ನು ‘ಮಾಘಮೌನಿ’ಗಳಾಗಿ ಮಾಡಿದ ಹೆಗ್ಗಳಿಕೆ ಸಿದ್ದರಾಮಯ್ಯನವರದು. ಹೀಗಾಗಿಯೇ ಹೇಳಿದ್ದು ಅವರು ಈ ವಿಚಾರದಲ್ಲಿ ಅಮಿತ್ ಶಾ ಅವರನ್ನೂ ಮೀರಿಸಿದ್ದಾರೆ ಎಂದು.

ಅದೇ ರೀತಿ ಜೆಡಿಎಸ್ ವಿಚಾರಕ್ಕೆ ಬಂದಾಗ ಅಲ್ಲೂ ಗೊಂದಲದ ಪರಿಸ್ಥಿತಿಯೇ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯನವರ ಲಿಂಗಾಯತ ಪ್ರತ್ಯೇಕ ಧರ್ಮ ತಂತ್ರಗಾರಿಕೆ ವಿರುದ್ಧ ಬಲವಾಗಿ ಧ್ವನಿ ಎತ್ತುವ ಹಂಬಲ. ಆದರೆ ಆಗುತ್ತಿಲ್ಲ. ಕುಮಾರಸ್ವಾಮಿ ಆರಂಭದಲ್ಲಿ ಅಪಸ್ವರ ಎತ್ತಿದ್ದರು. ನಾಳೆ ಒಕ್ಕಲಿಗರು, ಕುರುಬರು ಪ್ರತ್ಯೇಕ ಧರ್ಮ ಕೇಳಿದರೆ ಕೊಡಲು ಆಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದರು. ಆದರೆ ಗೌಡರು ಇದಕ್ಕೆ ವ್ಯತಿರಿಕ್ತವಾಗಿ ಒಂದೇ ದೇಶ, ಒಂದೇ ಧರ್ಮ ಮಾಡಲು ಯಾರು ಹೇಳಿದ್ದಾರೆ ಎಂದು ಕೇಳಿದ್ದರು. ಆದರೆ ಅವರದೇ ಪಕ್ಷದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಆಗಲೇಬೇಕು. ಈ ವಿಚಾರದಲ್ಲಿ ಕುಮಾರಸ್ವಾಮಿ ಹೇಳಿರೋದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ್ದಲ್ಲ ಎಂದಿದ್ದರು. ಅಲ್ಲಿಂದಾಚೆಗೆ ಕುಮಾರಸ್ವಾಮಿ ಕೂಡ ಮೌನಿ. ಇಲ್ಲಿ ಸಿದ್ದರಾಮಯ್ಯನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆ ಸಂಬಂಧ ಆ ಸಮುದಾಯದ ಎಲ್ಲ ಸ್ವಾಮೀಜಿಗಳ ಸಭೆಯನ್ನು ಆಗಸ್ಟ್‌‌ನಲ್ಲಿ ಕರೆದಿದ್ದು, ಅದರ ಹೊಣೆಗಾರಿಕೆಯನ್ನು ಬಸವರಾಜ ಹೊರಟ್ಟಿ ಅವರಿಗೇ ವಹಿಸಿದ್ದಾರೆ. ಸಿದ್ದರಾಮಯ್ಯ ರಣತಂತ್ರಕ್ಕೆ ಜೆಡಿಎಸ್‌ನ ಹೊರಟ್ಟಿ ಅವರೇ ಸಾರಥಿ. ತಂತ್ರದೊಳಗೊಂದು ತಂತ್ರ ಅಂದರೆ ಇದೇ ಅಲ್ಲವೇ? ಇಲ್ಲಿ ಇನ್ನೂ ಒಂದು ವಿಚಾರ. ದೇವೇಗೌಡರು ಮೊದಲಿಂದಲೂ ಈ ಬಗ್ಗೆ ಅಪಸ್ವರ ಎತ್ತಲಿಲ್ಲ. ಬದಲಿಗೆ ಸಮುದಾಯದ ಸ್ವಾಮೀಜಿಗಳು ತೆಗೆದುಕೊಳ್ಳುವ ತೀರ್ಮಾನವನ್ನು ಎಲ್ಲರೂ ಒಪ್ಪೋಣ ಎಂದು ಹೇಳಿದ್ದಾರೆ. ಬಹುಶಃ ಬಿಜೆಪಿ ಮತ ವಿಭಜನೆ ಲಾಭ ಪಡೆದುಕೊಳ್ಳಲು ಅವರೂ ಉತ್ಸುಕರಾಗಿರಬಹುದು. ಏಕೆಂದರೆ ಬಿಜೆಪಿಗೆ ಹೊಡೆತ ಬಿದ್ದಷ್ಟು ಮೈತ್ರಿ ಸರಕಾರದ ಅವಕಾಶಗಳು ತೆರೆದುಕೊಂಡು ಅದರಿಂದ ತಮ್ಮ ಪಕ್ಷಕ್ಕೆ ಅನುಕೂಲ ಆಗಬಹುದು ಎಂಬ ಒಳಲೆಕ್ಕಾಚಾರ ಅವರದೂ ಇರಬಹುದು. ತಂತ್ರದೊಳಗಿನ ತಂತ್ರಕ್ಕೆ ಪ್ರತಿತಂತ್ರ ಅಂದರೆ ಇದೇ ಇರಬೇಕು. ತಮ್ಮ ಗರಡಿಯಲ್ಲಿ ಸಾಮು ಮಾಡಿದ ಸಿದ್ದರಾಮಯ್ಯನವರ ಪಟ್ಟುಗಳು ದೇವೇಗೌಡರಿಗೆ ಗೊತ್ತಿರುವುದಿಲ್ಲವೇ?

ಇನ್ನು ಹಿಂದೂ ಧರ್ಮದ ಪ್ರಬಲ ಪ್ರತಿಪಾದಕರು, ವಿಶ್ವ ಹಿಂದೂ ಪರಿಷತ್ ಸ್ಥಾಪನೆ ರೂವರಿಗಳೂ ಆದ ಪೇಜಾವರ ಶ್ರೀ ವಿಶ್ವೇಶ ತೀರ್ಥರು ಲಿಂಗಾಯತ ಪ್ರತ್ಯೇಕ ಧರ್ಮ ಆಗುವುದು ಬೇಡ ಎಂದಿದ್ದಾರೆ. ಇಲ್ಲಿರುವುದು ಧಾರ್ಮಿಕ ರಾಜಕೀಯವೇ ಹೊರತು ಬೇರೇನೂ ಅಲ್ಲ. ಕರ್ನಾಟಕದಲ್ಲಿ ಶೇಕಡಾ 21 ರಷ್ಟಿರುವ ಲಿಂಗಾಯತ ಸಮುದಾಯದ ಈವರೆಗೂ ಹಿಂದೂ ಧರ್ಮದ ಭಾಗವಾಗಿಯೇ ಇದೆ. ಒಂದೊಮ್ಮೆ ಅದು ಪ್ರತ್ಯೇಕ ಧರ್ಮವಾದರೆ ಹಿಂದೂ ಸಮುದಾಯದಿಂದ ಕಳಚಿಕೊಂಡಂತೆ. ಅಷ್ಟರ ಮಟ್ಟಿಗೆ ಹಿಂದೂ ಧರ್ಮಕ್ಕೆ ನಷ್ಟ. ನಾಳೆ ಲಿಂಗಾಯತ ಸಮುದಾಯವನ್ನೇ ಆದರ್ಶವಾಗಿಟ್ಟುಕೊಂಡು ಎಲ್ಲ ಸಮುದಾಯದವರು ಪ್ರತ್ಯೇಕ ಧರ್ಮ ಕೇಳುತ್ತಾ ಹೋದರೆ ಹಿಂದೂ ಧರ್ಮದ ಕತೆ ಏನಾಗಬೇಕು ಎನ್ನುವುದು ಅವರ ಪ್ರಾಮಾಣಿಕ ಕಾಳಜಿ. ಒಟ್ಟಾರೆ ಸಮುದಾಯ, ಸಮಾಜ, ಧರ್ಮ ಎಲ್ಲವನ್ನೂ ಆವರಿಸಿಕೊಂಡಿರುವುದು ಬರೀ ರಾಜಕೀಯವೇ. ಹೀಗಾಗಿ ರಾಜಕೀಯಕ್ಕೆ ರಾಜಕೀಯವೇ ಸಾಟಿ!

ಲಗೋರಿ: ಅಧಿಕಾರ ರಾಜಕೀಯ ತಂತ್ರಗಾರಿಕೆ ಯಾರಪ್ಪನ ಸ್ವತ್ತೂ ಅಲ್ಲ.

(ವಿಶ್ವವಾಣಿಯಲ್ಲಿ ಪ್ರಕಟಿತ)

1 COMMENT

  1. NOT THROUGH WORK, NOT THROUGH PROGONY, NOT THROUGH WEALTH, BUT THROUGH RENUNCIATION ALONE immortality is obtained. MAKE THE BEST OF EARTHLY LIFE, BUT LET IT BE ONLY A MEANS TO SPIRITUAL END>>> WHEEL OF LIFE… be between life and death to do some good cause!!

Leave a Reply