ರಾಜ್ಯಸಭೆಗೆ ಗೈರಾದ 30 ಸಂಸದರ ವಿರುದ್ಧ ಅಮಿತ್ ಶಾ ಗರಂ, ಗೈರಿಂದ ಆಡಳಿತ ಪಕ್ಷಕ್ಕಾದ ನಷ್ಟ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಈಗಾಗಲೇ ರಾಜ್ಯ ಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲೇ ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟದ 30 ಸಂಸದರು ಚಳಿಗಾಲದ ಅಧಿವೇಶನದ ವೇಳೆ ಗೈರಾಗಿದ್ದಾರೆ. ಇದು ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯುಂಟಾಗಿದೆ. ಹೀಗಾಗಿ ಗೈರಾದ ಸಂಸದರ ವಿರುದ್ಧ ಗರಂ ಆಗಿರುವ ಅಮಿತ್ ಶಾ, ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಬಾರದು ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಸೋಮವಾರದ ಅಧಿವೇಶನದ ವೇಳೆಯಲ್ಲಿ ಸರ್ಕಾರದ ಮಹತ್ವಕಾಂಕ್ಷಿ ಹಿಂದುಳಿದ ವರ್ಗಗಳ ಬಿಲ್ ಅನುಮೋದನೆಯಾಗದೇ ವಾಪಸ್ ಲೋಕಸಭೆಗೆ ಕಳುಹಿಸಲಾಗಿದೆ. ಈಗಾಗಲೇ ಈ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ರಾಜ್ಯಸಭೆಯಲ್ಲಿನ ಅನುಮೋದನೆ ಮಾತ್ರ ಬಾಕಿ ಉಳಿದಿತ್ತು. ಆದರೆ ಆಡಳಿತ ಪಕ್ಷದ ಸಂಸದರ ಅನುಪಸ್ಥಿತಿಯಲ್ಲಿ ವಿರೋಧ ಪಕ್ಷಗಳ ಸಂಸದರು ಕೆಲವು ತಿದ್ದುಪಡಿ ತರಬೇಕೆಂಬ ಪಟ್ಟು ಹಿಡಿದು, ಅದನ್ನು ಸೆಲೆಕ್ಟ್ ಕಮಿಟಿಗೆ ರವಾನಿಸಲಾಗಿದೆ. ಹೀಗಾಗಿ ಈ ಮಸೂದೆ ಮತ್ತೊಮ್ಮೆ ಲೋಕಸಭೆಯಲ್ಲಿ ಹೊಸದಾಗಿ ಅನುಮೋದನೆ ಪಡೆದು, ರಾಜ್ಯಸಭೆಗೆ ಬರುವಂತಾಗಿದೆ. ಇದರಿಂದ ಸಹಜವಾಗಿಯೇ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಸಂಸದರು ಇಷ್ಟು ದೊಡ್ಡ ಪ್ರಮಾಣದಲ್ಲಿ ಗೈರಾಗದೇ ಇದ್ದಿದ್ದರೆ, ಸರ್ಕಾರ ಈ ಮಸೂದೆಗೆ ಅನುಮೋದನೆ ನೀಡುವ ಹಾದಿ ಸುಗಮವಾಗುತ್ತಿತ್ತು.

‘ಜನರು ಸಂಸತ್ತಿನಲ್ಲಿ ತಮ್ಮನ್ನು ಪ್ರತಿನಿಧಿಸಲಿ ಎಂದು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿರುತ್ತಾರೆ. ಇವರೇ ಹೀಗೆ ಅಧಿವೇಶನಕ್ಕೆ ಗೈರಾದರೆ, ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಇನ್ನುಮುಂದೆ ಈ ರೀತಿ ಗೈರಾಗುವ ಘಟನೆ ನಡೆಯಬಾರದು’ ಎಂದು ಅಮಿತ್ ಶಾ ಸಂಸದರಿಗೆ ಎಚ್ಚರಿಕೆ ನೀಡಿರುವುದಾಗಿ ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದ್ದಾರೆ.

ಇನ್ನು ಪ್ರಧಾನಿ ಮೋದಿ ಅವರು ಸಹ ಸಂಸದರ ಗೈರು ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಭೋಜನ ವಿರಾಮದ ನಂತರ ಸಂಸದರ ಗೈರಿನ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸದರಿಗೆ ಈ ಕುರಿತಾಗಿ ಎಚ್ಚರಿಕೆ ನೀಡಿದ್ದಾರೆ.

1 COMMENT

  1. The frequency of responsibility is very high. THE GOVERNMENT HAS TO THINK SERIOUSLY ABOUT THIS DEFECTS! they are popular also but in what respect! ONE OF THE MINISTER IS elected from KARNATAKA STATE AS M.P. but her appearance of her to Karnataka is very rare! IT MUST NOT NHAPPEN SO I FEEL. P.M. is expected to take stern step for this cause I feel! thanks.

Leave a Reply