ಸಿರಿವಂತಿಕೆ ಗುಟ್ಟು: ಗಳಿಕೆ- ಉಳಿಕೆ- ಹೂಡಿಕೆ ಜೊತೆಗಿಷ್ಟು ನಂಬಿಕೆ

ನಮ್ಮ ಜನರಲ್ಲಿ ಹಣಕಾಸಿಗೆ ಸಂಬಂಧಪಟ್ಟ ಹಲವು ಮಿಥ್ಯೆಗಳಿವೆ. ಜೀವನ ಪೂರ್ತಿ ಅವು ತಪ್ಪು ಎಂದು ತಿಳಿಯದೆ ಆ ಸುಳ್ಳಿನಲ್ಲೇ ಬದುಕಿ ಜೀವನ ಸವೆಸುತ್ತಾರೆ. ಅಪ್ಪನ ಆಸ್ತಿ ಇದ್ದರೆ ಸಿರಿವಂತರಾಗಬಹದು. ಕಷ್ಟ ಪಟ್ಟು ದುಡಿದು ಹಣಗಳಿಸುವುದು ಬಹಳ ಕಷ್ಟ ಎನ್ನವುದು ಅಂತಹ ಮಿಥ್ಯೆಗಳಲ್ಲಿ ಒಂದು. ಹಣಗಳಿಸಲು ಹೆಣಗಬೇಕಾಗಿಲ್ಲ ತಿಣುಕಬೇಕಾಗಿಲ್ಲ. ಇಲ್ಲಿ ಪ್ರಮುಖವಾಗಿ ಬೇಕಾಗಿರುವುದು ಹಣದ ಬಗ್ಗೆ ಅದಮ್ಯ ಪ್ರೀತಿ ಗೌರವ. ಜೊತೆಗೆ ಒಂದಷ್ಟು ಕಷ್ಟಪಟ್ಟು ದುಡಿಯುವ ಮನಸ್ಸು ಮತ್ತು ಒಳ್ಳೆಯ ಸಂಪರ್ಕಗಳ ಜೊತೆಗೆ ನಿಲ್ಲದ ಕೌಶಲ್ಯ ವೃದ್ಧಿ. ಅಮೇರಿಕ, ಯೂರೋಪ್ ಅಥವಾ ಭಾರತ ದೇಶ ಯಾವುದೇ ಇರಲಿ ಸ್ವಂತ ಬಲದಿಂದ ಮಿಲಿಯನೇರ್ ಅಥವಾ ಬಿಲಿಯನೇರ್ ಆದವರನ್ನು ಸೂಕ್ಶ್ಮವಾಗಿ ಗಮನಿಸಿ ನೋಡಿ. ಅವರಲ್ಲಿ ದಣಿವು ಕಾಣುವುದಿಲ್ಲ ತಮ್ಮ ಕೆಲಸದಲ್ಲಿ ಅವರಿಗೆ ಅಪರಿಮಿತ ಆಸಕ್ತಿ. ಮೂರು ತಲೆಮಾರು ಕುಳಿತು ತಿನ್ನುವಷ್ಟು ಆಸ್ತಿಯ ಒಡೆಯರಾಗಿದ್ದು ಅವರು ದುಡಿಯುತ್ತಾರೆ. ದಣಿವಿಲ್ಲದ ದುಡಿಮೆ ಅವರ ಸಿರಿವಂತಿಕೆಯ ಗುಟ್ಟು. ಶನಿವಾರ ಅವರು ಜನ ಸಾಮಾನ್ಯರಂತೆ ರಜಾ ಬಯಸುವುದಿಲ್ಲ. ಅವಶ್ಯಕೆತೆ ಬಿದ್ದಾಗ ಬೇಕಾದ ರಜೆ ಪಡೆಯುತ್ತಾರಷ್ಟೆ. ಅಪ್ಪನಿಂದ ಸಂಪತ್ತು ಪಡೆದ ಜನರ ಬಗ್ಗೆ ಇದೆ ಮಾತು ಹೇಳಲು ಬರುವುದಿಲ್ಲ. ಸ್ವಂತ ಬಲದಿಂದ ಮೇಲೆ ಬಂದ ಜನ ಖರ್ಚು ಮಾಡುವುದಕ್ಕೆ ಮುಂಚೆ ಹತ್ತು ಬಾರಿ ಯೋಚಿಸುತ್ತಾರೆ. ಮಾಡುವ ಖರ್ಚು ಅವಶ್ಯಕವೇ? ಎನ್ನುವ ಪ್ರಶ್ನೆ ಮಾಡಿಕೊಳ್ಳದೆ ಅಳೆದು ತೂಗಿ ನೋಡದೆ ಒಂದು ರುಪಾಯಿ ಕೂಡ ಅವರು ಖರ್ಚು ಮಾಡುವುದಿಲ್ಲ. ನೋಡಿ ನಮ್ಮಲ್ಲಿ ಮುಕ್ಕಾಲು ಪಾಲು ಜನರಿಗೆ ಅಪ್ಪನಿಂದ ಹೆಚ್ಚಿನ ಸಂಪತ್ತು ಸಿಕ್ಕುವುದಿಲ್ಲ ಹಾಗೆಂದ ಮಾತ್ರಕ್ಕೆ ನಾವು ಸಿರಿವಂತರಾಗಲು ಸಾಧ್ಯವೇ ಇಲ್ಲವೇ?  ಇದಕ್ಕೆ ಉತ್ತರ ಸಾಧ್ಯವಿದೆ. ನಮ್ಮಲ್ಲಿ ಯಾರು ಬೇಕಾದರೂ ಸಿರಿವಂತರಾಗಬಹದು ಮೊದಲೇ ಹೇಳಿದಂತೆ ಅದಮ್ಯ ಬಯಕೆ ಇರಬೇಕು ಜೊತೆಗೆ ಕೆಲವೊಂದು ಮೂಲಭೂತ ಸಿದ್ಧಾಂತಗಳನ್ನು ಪಾಲಿಸಬೇಕು. ಇಂತಹ ಆರ್ಥಿಕ ಸಿದ್ಧಾಂತಗಳ ಬಗ್ಗೆ ಇಂದು ಒಂದಷ್ಟು ಗಮನ ಹರಿಸೋಣ.

  • ದಿನ ಒಪ್ಪೊತ್ತಿನಲ್ಲಿ ಸಿರಿವಂತರಾಗುವುದು ಸಾಧ್ಯವಿಲ್ಲದ ಮಾತು. ಎಲ್ಲಕ್ಕೂ ಮೊದಲು ಇದನ್ನು ಮನನ ಮಾಡಿಕೊಳ್ಳಬೇಕು. ಇದು ನೂರು ಮೀಟರ್ ಓಟದ ಪಂದ್ಯವಲ್ಲ ಇದೊಂದು ಮಾರಥಾನ್ ಓಟದ ಪಂದ್ಯ. ಹೀಗಾಗಿ ಸಿದ್ಧತೆ ಬಹಳ ಮುಖ್ಯ. ಸಿದ್ಧತೆ ಜೊತೆಗೆ ಬದ್ಧತೆಯೂ ಸೇರಿದರೆ ಗೆಲುವಿಗೆ ಇಲ್ಲ ಅಡ್ಡಿ.
  • ಸಂಪರ್ಕ ಕಟ್ಟಿಕೊಳ್ಳುವುದು ಇನ್ನೊಂದು ಮುಖ್ಯವಾಗಿ ಮಾಡಲೇಬೇಕಾದ ಕೆಲಸ. ಒಮ್ಮೆ ನಿಮ್ಮ ಅಕ್ಕ ಪಕ್ಕ ತಿರುಗಿ ನೋಡಿ ಪರವಾಗಿಲ್ಲ ಎನ್ನುವ ಮಟ್ಟದಲ್ಲಿ ಇರುವ ಜನರ ನೆಟ್ವರ್ಕ್ ಚೆನ್ನಾಗಿರುತ್ತದೆ. ಇಂದಿನ ಯುಗದಲ್ಲಿ ಬಹಳಷ್ಟು ವ್ಯಾಪಾರ ವಹಿವಾಟು ನೆಡೆಯುವುದು ಇಂತಹ ನೆಟ್ವರ್ಕ್ ಗಳ ಮೂಲಕವೇ. ಯಾರೋ ಗೊತ್ತು ಗುರಿಯಿಲ್ಲದ ಜನರನ್ನು ಬೇಕಾದ ಕೆಲಸಕ್ಕೆ ನೇಮಿಸಿಕೊಳ್ಳುವ ಬದಲು ತಮಗೆ ತಿಳಿದ ಸಂಪರ್ಕಗಳ ಮೂಲಕ ಬೇಕಾದ ಕೆಲಸ ಸಾಧಿಸಿಕೊಳ್ಳಲು ಯತ್ನಿಸುವುದು ಉತ್ತಮ ಮಾರ್ಗ.

  • ಬಜೆಟ್ ಅತ್ಯಂತ ಮುಖ್ಯವಾಗಿ ಗಮನ ಕೊಡಲೇಬೇಕಾದ ಇನ್ನೊಂದು ಅಂಶ. ಕೆಲಸ ಯಾವುದೇ ಇರಲಿ ಅದಕ್ಕೆ ಬೇಕಾದ ಹಣವೆಷ್ಟು, ನಾವು ಅದಕ್ಕೆ ಎಷ್ಟು ವೆಚ್ಚ ಮಾಡಲು ಸಿದ್ಧವಿದ್ದೇವೆ? ಎನ್ನುವುದು ಬಹಳ ಮುಖ್ಯ. ಯಾವುದೊ ವಸ್ತು ಬೇಕು ಅದನ್ನು ಮಾರುಕಟ್ಟೆಗೆ ಹೋಗಿ ತರುವುದು ಜನ ಸಾಮಾನ್ಯರು ಮಾಡುವ ಕೆಲಸ. ಯಶಸ್ವಿ ಜನ ಆ ವಸ್ತುವಿನ ಬೆಲೆ, ಗುಣಮಟ್ಟ ಮೊದಲು ತಿಳಿದುಕೊಳ್ಳುತ್ತಾರೆ ಅದಕ್ಕೆ ನಾನೆಷ್ಟು ಹಣ ವ್ಯಯಿಸಬಹದು ಎನ್ನುವ ನಿಖರತೆ ಅವರಿಗಿರುತ್ತದೆ. ಆ ವಸ್ತುವನ್ನು ಈ ತಿಂಗಳೇ ಕೊಳ್ಳಬೇಕೆ ಅಥವಾ ಮುಂದಿನ ತಿಂಗಳೇ ? ಯಾವ ತಿಂಗಳ ಬಜೆಟ್ನಲ್ಲಿ ಅದನ್ನು ಕೊಳ್ಳಬೇಕು? ಇವು ಮುಖ್ಯವಾಗುತ್ತವೆ. ಅಷ್ಟೇ ಅಲ್ಲದೆ ಒಮ್ಮೆ ಬಜೆಟ್ನಲ್ಲಿ ಇದಕ್ಕೆ ಎಂದು ಒಂದಷ್ಟು ಹಣವನ್ನು ನಿಗದಿಪಡಿಸಿದ ಮೇಲೆ ಅದಕ್ಕಿಂತ ಹೆಚ್ಚಿನ ಹಣವನ್ನು ವ್ಯಯಿಸಬಾರದು.
  • ಕೌಶಲ್ಯ ವೃದ್ಧಿ ( ಸ್ಕಿಲ್ ಡೆವಲಪ್ಮೆಂಟ್ ) ಸತತವಾಗಿ ಮಾಡಿಕೊಳ್ಳುತ್ತಿರಬೇಕು. ಜಗತ್ತಿಗೆ ನಾವು ಇಂದು ಪ್ರಸ್ತುತರಾಗಿರದೆ ಹೋದರೆ ನಮ್ಮನ್ನು ಯಾರೊ ಗೌರವಿಸುವುದಿಲ್ಲ. ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮತ್ತು ವೇಗಕ್ಕೆ ತಕ್ಕಂತೆ ನಮ್ಮನ್ನು ಬದಲಾಯಿಸಿಕೊಳ್ಳುವ ಶಕ್ತಿ ಮತ್ತು ಬದಲಾವಣೆಗೆ ಒಗ್ಗಿ ಕೊಳ್ಳುವ ಮನಸ್ಸು ಅತಿ ಮುಖ್ಯ.
  • ವಾರ್ಷಿಕ ಹಣಕಾಸು ಗುರಿಗಳನ್ನು ಹಾಕಿಕೊಳ್ಳಬೇಕು. ಗುರಿಯಿಲ್ಲದ ಬದುಕು ನಾವಿಕನಿಲ್ಲದ ನಾವೆಯಂತೆ. ಈ ವರ್ಷ ಇಷ್ಟು ಹಣ ಉಳಿಸಬೇಕು, ಇಷು ಲಾಭ ಮಾಡಬೇಕು, ಇಂತಹ ವಸ್ತು ಖರೀದಿಸಬೇಕು, ಕಂಪನಿಯ ಅಥವಾ ವ್ಯಕ್ತಿಗತವಾಗಿ ಮೌಲ್ಯ ಇಷ್ಟು ವೃದ್ಧಿಸಬೇಕು ಎನ್ನುವ ನೀಲಿನಕ್ಷೆ ತಯಾರಿಸಿ ಕೊಳ್ಳಬೇಕು. ಸಮಯ ಸಮಯಕ್ಕೆ ನೀಲಿನಕ್ಷೆಯೊಂದಿಗೆ ನಿಜವಾಗಿ ಏನಾಗುತ್ತಿದೆ ಎನ್ನವುದನ್ನು ಹೋಲಿಸಿನೋಡಬೇಕು. ಗುರಿಯಿಂದ ದೂರ ಸಾಗುತ್ತಿರುವ ಚಿತ್ರಣ ಕಂಡು ಬಂದರೆ ತಕ್ಷಣ ಮತ್ತೆ ದಾರಿಗೆ ತರಲು ಶ್ರಮಿಸಬೇಕು.
  • ಸಾಲದ ಮೇಲಿರಲಿ ನಿಗಾ. ಸಾಲವನ್ನು ಮಾಡುವಾಗ ನೋವು ಕಾಣುವುದಿಲ್ಲ, ಪಡೆದ ಸಾಲವನ್ನು ಮರಳಿ ಕೊಡುವಾಗ ಅತೀವ ನೋವು ದುಃಖ ಎಲ್ಲಾ ಆಗುತ್ತದೆ. ಅವಶ್ಯಕತೆ ಇದ್ದರೆ ಮಾತ್ರ ಸಾಲ ಮಾಡಬೇಕು. ಸಾಲ ಪಡೆದ ಉದ್ದೇಶಕ್ಕೆ ಮಾತ್ರ ಆ ಹಣದ ಬಳಕೆ ಆಗಬೇಕು. ಸಾಲ ಮರಳಿ ಕೊಡುವ ಸಮಯ ನಿಗದಿಪಡಿಸಿಕೊಂಡು ಅದರತ್ತ ಸದಾ ಗಮನ ನೀಡಬೇಕು.
  • ಆಪತ್ಕಾಲಕ್ಕೆ ಅಂತ ಒಂದಷ್ಟು ಹಣ ತೆಗೆದಿಡಬೇಕು. ಇಂದಿನ ವೇಗದ ಬದುಕಿನಲ್ಲಿ ಯಾವಾಗ ಏನಾಗುತ್ತೆ ಹೇಳಲು ಬಾರದು. ಕಂಪೆನಿಯಿರಲಿ ವ್ಯಕ್ತಿಯೇ ಇರಲಿ ಎಮರ್ಜೆನ್ಸಿ ಫಂಡ್ ಎನ್ನುವುದು ಅವಶ್ಯಕವಾಗಿ ತೆಗೆದಿಡಬೇಕು.
  • ಭವಿಷ್ಯ ನಿಧಿ ಅಥವಾ ರಿಟೈರ್ಮೆಂಟ್ ಫಂಡ್ ಮತ್ತೊಂದು ನಮಗೆ ನಾವೇ ಸೃಷ್ಟಿಸಿ ಇಟ್ಟುಕೊಳ್ಳಬೇಕಾದ ಹಣ. ಕಳೆದ ಒಂದು ಅಥವಾ ಎರಡು ದಶಕದ ಹಿಂದೆ ಈ ರೀತಿಯ ವ್ಯವಸ್ಥೆ ಅಥವಾ ಇದರ ಬಗ್ಗೆ ಜನರ ಮಾತುಕತೆ ಇರಲಿಲ್ಲ. ಆದರೆ ಇಂದು ನಾಳಿನ ವೃದ್ಧಾಪ್ಯಕ್ಕೆ ಹಣ ಉಳಿಸಲು ಬೇಕಾದ ಅವಶ್ಯಕತೆ ಅತಿ ಹೆಚ್ಚು.

ಹಣವಂತ ಅಥವಾ ಸಿರಿವಂತರು ಯಾರು ಬೇಕಾದರೂ ಆಗಬಹದು. ಇದಕ್ಕೆ ಮೊದಲೇ ಹೇಳಿದಂತೆ ಹೆಣಗಬೇಕಾಗಿಲ್ಲ, ತಿಣುಕಬೇಕಾಗಿಲ್ಲ ಸರಳ ರೇಖೆಯಲ್ಲಿ ನಡಿಗೆ, ಗಳಿಕೆ- ಉಳಿಕೆ- ಹೂಡಿಕೆ ಎಂತವರನ್ನೂ ಸಿರಿವಂತರನ್ನಾಗಿಸಬಲ್ಲದು.

1 COMMENT

  1. ಅರ್ಥಪೂರ್ಣಸಾಲು, ಸಾಲ ಪಡೆದವರು, ಪಡೆಯಲು ಬಯಸುವವರೂ ಕಡ್ಡಾಯವಾಗಿ ಪಾಲಿಸಲೇಬೇಕಾದ ಸೂತ್ರ.?

    “”ಸಾಲದ ಮೇಲಿರಲಿ ನಿಗಾ. ಸಾಲವನ್ನು ಮಾಡುವಾಗ ನೋವು ಕಾಣುವುದಿಲ್ಲ, ಪಡೆದ ಸಾಲವನ್ನು ಮರಳಿ ಕೊಡುವಾಗ ಅತೀವ ನೋವು ದುಃಖ ಎಲ್ಲಾ ಆಗುತ್ತದೆ. ಅವಶ್ಯಕತೆ ಇದ್ದರೆ ಮಾತ್ರ ಸಾಲ ಮಾಡಬೇಕು. ಸಾಲ ಪಡೆದ ಉದ್ದೇಶಕ್ಕೆ ಮಾತ್ರ ಆ ಹಣದ ಬಳಕೆ ಆಗಬೇಕು. ಸಾಲ ಮರಳಿ ಕೊಡುವ ಸಮಯ ನಿಗದಿಪಡಿಸಿಕೊಂಡು ಅದರತ್ತ ಸದಾ ಗಮನ ನೀಡಬೇಕು.””

Leave a Reply